ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಪಕ್ಷದ ಮೂರೂ ಅಭ್ಯರ್ಥಿಗಳು ಗೆಲ್ಲುತ್ತಾರೆ: ಸಿದ್ದರಾಮಯ್ಯ

3 years ago

ಬೆಂಗಳೂರು: ವಿಧಾನಪರಿಷತ್ತಿನ ತೆರವಾದ ಮೂರು ಸ್ಥಾನಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಆಯ್ಕೆ ಬಯಸಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವ ಎನ್.ಎಸ್.ಬೋಸರಾಜು, ತಿಪ್ಪಣ್ಣಪ್ಪ ಕಮಕನೂರು ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸುವ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರು ಹಾಜರಿದ್ದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಮಪತ್ರ ಸಲ್ಲಿಸಿರುವ ಕಾಂಗ್ರೆಸ್ ಪಕ್ಷದ ಈ ಮೂರು ಸದಸ್ಯರು ಚುನಾವಣೆಯಲ್ಲಿ ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ. ಇವರು ಚುನಾವಣೆಯಾದರೂ ಗೆಲ್ಲುತ್ತಾರೆ, ಆಗದಿದ್ದರೂ ಗೆಲ್ಲುತ್ತಾರೆ ಎಂದು  ವಿಶ್ವಾಸ ವ್ಯಕ್ತಪಡಿಸಿದರು.
ನಾಳೆ ದೆಹಲಿಯಲ್ಲಿ ರಾಷ್ಟ್ರಪತಿ ಹಾಗೂ  ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ  ಮಾಡುತ್ತಿದ್ದು, ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಕೇಂದ್ರ ಆಹಾರ ಸಚಿವರನ್ನು ಭೇಟಿ ಮಾಡಿ ಅಕ್ಕಿ ನೀಡುವಂತೆ  ಮನವಿ ಮಾಡಲಿದ್ದಾರೆ ಎಂದರು. 

ಮುಖ್ಯಮಂತ್ರಿಯಾದ ನಂತರ ಕೇಂದ್ರ ಸಚಿವರೊಂದಿಗೆ ಸೌಜನ್ಯದ ಭೇಟಿ ಮಾಡಲಿರುವುದಾಗಿ  ತಿಳಿಸಿದರು.
ಅಕ್ಕಿ ಖರೀದಿ ಯತ್ನ: ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ ಛತ್ತೀಸಗಢ ರಾಜ್ಯದೊಂದಿಗೆ ಅಕ್ಕಿ ಖರೀದಿ ಬಗ್ಗೆ ಚರ್ಚಿಸಲಾಗಿದೆ. ರಾಜ್ಯಕ್ಕೆ 2,28,000 ಮೆಟ್ರಿಕ್ ಟನ್ ಅಕ್ಕಿ ದಾಸ್ತಾನು ಬೇಕಾಗಿದೆ. ಛತ್ತೀಸಗಢ ದಿಂದ ಅಕ್ಕಿ ಖರೀದಿಸಿದರೆ ಸಾಗಾಣಿಕೆಯೂ ಸೇರಿ, ಎಫ್ ಸಿ ಐ ಗಿಂತ  ದರ ಹೆಚ್ಚಾಗುತ್ತದೆ. ತೆಲಂಗಾಣದಲ್ಲಿ ಅಕ್ಕಿ ದಾಸ್ತಾನು ಲಭ್ಯವಿಲ್ಲವೆಂದು ತಿಳಿಸಿದ್ದು, ಆಂಧ್ರಪ್ರದೇಶದೊಂದಿಗೆ ನಮ್ಮ ರಾಜ್ಯದ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ ಎಂದು ಹೇಳಿದರು.

ಭಾರತ ಸರ್ಕಾರದ ಮೂರು ಸಂಸ್ಥೆಗಳಾದ ಎನ್ ಸಿ ಸಿಎಫ್, ನಾಫೆಡ್ ಹಾಗೂ ಕೇಂದ್ರೀಯ ಭಂಡಾರಗಳಿಂದ ಅಕ್ಕಿ ಖರೀದಿಗೆ ದರಪಟ್ಟಿ ಕರೆಯಲಾಗಿದೆ.  ಅಕ್ಕಿ ಖರೀದಿ ಬಗ್ಗೆ ಎಫ್ ಸಿ ಐ ಗೆ ಜೂನ್ 9 ರಂದು ಪತ್ರ ಬರೆಯಲಾಗಿದ್ದು, ಎಫ್ ಸಿ ಐ ಅವರು ತಮ್ಮಲ್ಲಿ  7 ಲಕ್ಷ ಮೆಟ್ರಿ ಟನ್ ಅಕ್ಕಿ ದಾಸ್ತಾನು ಇದ್ದು, ರಾಜ್ಯಕ್ಕೆ ಸರಬರಾಜು ಮಾಡಲಾಗುವುದು ಎಂದು ಜೂನ್ 12 ರಂದು ತಿಳಿಸಿದ್ದಾರೆ ಎಂದರು.

ಎಫ್.ಸಿ.ಐ ಉಪ ವ್ಯವಸ್ಥಾಪಕರೊಂದಿಗೂ ಮಾತನಾಡಿದ್ದು, ಅವರೂ ಅಕ್ಕಿ ನೀಡುವುದಾಗಿ ಹೇಳಿದ್ದರು. ಇದಾದ ನಂತರ ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಯವರು ಹಸ್ತಕ್ಷೇಪ ಮಾಡಿ ಜೂನ್ 13 ರಂದು  ಎಫ್.ಸಿ.ಐ ಅಧ್ಯಕ್ಷರು  ಹಾಗೂ ವ್ಯವಸ್ಥಾಪಕ ನಿರ್ದೇಶಕರು  ಪತ್ರ ಬರೆದು ರಾಜ್ಯಗಳಿಗೆ ಅಕ್ಕಿ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ನಂತರ ನಮಗೆ ಪತ್ರ ಬರೆದು ಅಕ್ಕಿ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇದು ದ್ವೇಷದ ರಾಜಕಾರಣ, ಬಡವರ ವಿರೋಧಿ  ಕ್ರಮವಲ್ಲವೇ ಎಂದು ಪ್ರಶ್ನಿಸಿದರು.

Leave a Reply