ಸ್ಪೀಕರ್, ಸಚಿವರು-ಶಾಸಕರಿಗೆ ಕಟ್ಟಡ ಕಾರ್ಮಿಕರಿಂದ ಮನವಿ ಸಲ್ಲಿಕೆ
ಬೆಂಗಳೂರು: ರಾಜ್ಯದಲ್ಲಿರುವ ಲಕ್ಷಾಂತರ ಕಟ್ಟಡ ನಿರ್ಮಾಣ ಕಾರ್ಮಿಕರು ಎದುರಿಸುತ್ತಿರುವ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಾಗೂ ಹೊಸದಾಗಿ ಆಯ್ಕೆಯಾದ ಸಚಿವರು ಹಾಗೂ ಶಾಸಕರುಗಳಿಗೆ ಸಮಸ್ಯೆಗಳನ್ನು ಮನವರಿಕೆ ಮಾಡಲು ಇಂದು ರಾಜ್ಯಾದ್ಯಂತ ಕಾರ್ಮಿಕರು ಆಯಾ ಕ್ಷೇತ್ರದ ಶಾಸಕರುಗಳ ಮೂಲಕ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(ಸಿಐಟಿಯು) ಕಾರ್ಯಕ್ರಮಕ್ಕೆ ಕರೆ ನೀಡಿತ್ತು. ಅದರ ಭಾಗವಾಗಿ ದ.ಕನ್ನಡ ಜಿಲ್ಲೆಯ ಉಳ್ಳಾಲ ಕ್ಷೇತ್ರದಲ್ಲಿ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್, ಸ್ವತಃ ಹಾಜರಿದ್ದು ಮನವಿ ಸ್ವೀಕರಿಸಿ ಬೆಂಗಳೂರಿನಲ್ಲಿ ಫೆಡರೇಶನ್ ರಾಜ್ಯ ನಾಯಕತ್ವದ ಜತೆ ನೀವು ಸಲ್ಲಿಸುವ ಬೇಡಿಕೆಗಳ ಕುರಿತು ಸಮಾಲೋಚಿಸಿ ಸರ್ಕಾರಕ್ಕೆ ಮತ್ತು ಕಾರ್ಮಿಕ ಸಚಿವರಿಗೆ ಅವುಗಳ ಬಗ್ಗೆ ಈಡೇರಿಸಲು ಅಗತ್ಯ ಕ್ರಮವಹಿಸಲು ಸೂಚನೆ ನೀಡುತ್ತೇನೆ ಎಂಬ ಭರವಸೆ ನೀಡಿದರು.

ಚಿತ್ರದುರ್ಗದಲ್ಲಿ ಸಚಿವ ಡಿ.ಸುಧಾಕರ್, ಸ್ಥಳೀಯ ಶಾಸಕರಾದ ವಿರೇಂದ್ರಕುಮಾರ್, ಸುಳ್ಯ ದಲ್ಲಿ ಭಾಗೀರಥಿ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ ಪಾಲ್ ಸುವರ್ಣ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಶ್ರೀ ಗುರುರಾಜ್ ಗಂಟಿಹೊಳೆ, ಕೋಲಾರದಲ್ಲಿ ಶಾಸಕ ಕೊತ್ನೂರು ಮಂಜುನಾಥ್, ಮಾಲೂರು ಶಾಸಕ ಕೆ.ವೈ ನಂಜೇಗೌಡ ವಿಜಯನಗರ ಕ್ಷೇತ್ರದಲ್ಲಿ ಗವಿಯಪ್ಪ, ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಅವರು ಮನವಿಗಳನ್ನು ಸ್ವೀಕರಿಸಿ ಮುಖ್ಯಮಂತ್ರಿಗಳಿಗೆ ಹಾಗೂ ಕಾರ್ಮಿಕ ಸಚಿವರಿಗೆ ಕಟ್ಟಡ ನಿರ್ಮಾಣ ಕಾರ್ಮಿಕರ ಕುರಿತ ಬೇಡಿಕೆಗಳನ್ನು ಈಡೇರಿಸುವ ಕುರಿತು ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.

ರಾಜ್ಯಾದ್ಯಂತ ಇನ್ನೂ ಹತ್ತಾರು ಕೇಂದ್ರಗಳಲ್ಲಿ ಶಾಸಕರ ಕಚೇರಿಗಳಿಗೆ ಹಾಗೂ ಜಿಲ್ಲಾಧಿಕಾರಿ ಹಾಗೂ ತಹಶಿಲ್ದಾರರ ಮೂಲಕ ಮನವಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು. ಇದೇ ಮನವಿಯನ್ನು ಈಗಾಗಲೇ ರಾಜ್ಯ ಮಟ್ಟದ ಮುಖಂಡರು ಜೂನ್ 7 ರಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಕಲ್ಯಾಣ ಮಂಡಳಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ್ದರು.
ಬೇಡಿಕೆಗಳು

- 2021-2022 ಸಾಲಿನಲ್ಲಿ ಎಸ್ ಎಸ್ ಪಿ ಪೋರ್ಟಲ್ ನಲ್ಲಿ ಸಲ್ಲಿಸಿರುವ ಬಾಕಿ ಇರುವ ಅರ್ಜಿಗಳ ವಿಲೇವಾರಿ ಮಾಡಬೇಕು
- ಮನೆಕಟ್ಟಲು 5 ಲಕ್ಷ ಸಹಾಯಧನ ನೀಡಬೇಕು.
- ವೈದ್ಯಕೀಯ ವೆಚ್ಚ ಆರೋಗ್ಯ ಸಂಜೀವಿನಿ ಅಡಿಯಲ್ಲಿ ನೀಡಬೇಕು. ವೈದ್ಯಕೀಯ ವೆಚ್ಚ ಮಂಜೂರು ಮಾಡುವಾಗ ವಿಳಂಬ ಮಾಡಬಾರದು.
4.ಪಿಂಚಣಿ, ನವೀಕರಣ ಅರ್ಜಿಗಳನ್ನು ಸಲ್ಲಿಸುವ ಅವಧಿ ವಿಸ್ತರಣೆ ಮಾಡಬೇಕು.
5.ರಾಜ್ಯಾದ್ಯಂತ ಖಾಲಿ ಇರುವ ನಿರೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು.
6.ಕಲ್ಯಾಣ ಮಂಡಳಿಯಲ್ಲಿ ಸಿಐಟಿಯು ಪ್ರಾತಿನಿಧ್ಯ ನೀಡಬೇಕು. - ಸ್ಲಂ ಬೋರ್ಡ್ ಗೆ ಮಂಡಳಿಯಿಂದ ನೀಡಿದ ಹಣ ಮರುಪಾವತಿ ಮಾಡಬೇಕು.
- ಈ ಹಿಂದಿನ ಸರಕಾರದ ಅವಧಿಯಲ್ಲಿ ನಡೆದ ಕಿಟ್ ಹಗರಣ ಸೇರಿ ಎಲ್ಲ ಖರೀದಿಗಳ ತನಿಖೆ ನಡೆಸಬೇಕು.
- ಕೊರೋನ ಸಂಕಷ್ಟ ಸಮಯದಲ್ಲಿ ತಿರಸ್ಕರಿಸಿದ ಅರ್ಜಿಗಳನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮಂಜೂರು ಮಾಡಬೇಕು.
- ಕಲ್ಯಾಣ ಮಂಡಳಿಯಿಂದ ಘೋಷಿಸಲ್ಪಟ್ಟ ಎಲ್ಲ ಕಾರ್ಯಕ್ರಮಗಳ ಧನಸಹಾಯ DBT ಮೂಲಕ ತ್ವರಿತಗತಿಯಲ್ಲಿ ಆಗಬೇಕು
- ನಕಲಿ ಕಾರ್ಡುಗಳನ್ನು ಹಾಗೂ ಬ್ರೋಕರ್ ಗಳ ಹಾವಳಿ ತಡೆಗಟ್ಟಬೇಕು.
- ಕಾರ್ಮಿಕ ಇಲಾಖೆಯಲ್ಲಿ ಫಲಾನುಭವಿಗಳಿಂದ ಲಂಚ ವಸೂಲಿ ಮಾಡುವ ಅಧಿಕಾರಿಗಳನ್ನು ವಜಾಗೊಳಿಸಬೇಕು



