ಅಕ್ರಮ ದಂಧೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸಿಗರ ಸಮಾನ ಪಾಲು ಇದೆ: ವಸಂತ ಆಚಾರಿ

9 months ago

ಕಟ್ಟಡ ನಿರ್ಮಾಣಕ್ಕೆ ಪೂರಕವಾಗಿ ಕರಾವಳಿ ಮರಳು ನೀತಿ ಜಾರಿಗೆ ಬರಲಿ

ಮಂಗಳೂರು: ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಕಳೆದ ಒಂದು ತಿಂಗಳಿಂದ ಕೆಂಪು ಕಲ್ಲು ಮತ್ತು ಮರಳು ಪೂರೈಕೆಯಾಗದೆ ನಿರ್ಮಾಣ ವಲಯ ಸ್ಥಬ್ಧವಾಗಿದೆ. ಕಾರ್ಮಿಕರು ಕೆಲಸವಿಲ್ಲದೆ ಜೀವನ  ನಿರ್ವಹಿಸಲಾಗದೆ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಜಿಲ್ಲೆಯಾದ್ಯಂತ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು.

ಉಳ್ಳಾಲ ತಾಲೂಕಿನ ದೇರಳಕಟ್ಟ ಸಮೀಪದಿಂದ ನೂರಾರು ಕಾರ್ಮಿಕರು, ಜಿಲ್ಲಾಡಳಿತದ ಈ ದಿಡೀರ್ ಕ್ರಮವನ್ನ ಖಂಡಿಸಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಬಳಿಕ ನಾಟೆಕಲ್ ನಲ್ಲಿರುವ ತಾಲೂಕು ಕಚೇರಿ ಎದುರು ಪ್ರತಿಭಟನಾ ಸಭೆಯನ್ನು ನಡೆಸಲಾಯಿತು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಶನ್ ನ  ಜಿಲ್ಲಾಧ್ಯಕ್ಷ ವಸಂತ ಆಚಾರಿ, ಕಳೆದ ಒಂದು ತಿಂಗಳಿಂದ ಮರಳು ಮತ್ತು ಕೆಂಪು ಕಲ್ಲು ನಿಷೇಧದಿಂದ ಜಿಲ್ಲೆಯ ಯಾವುದೇ ನಿರ್ಮಾಣ ಯೋಜನೆಗಳು ನಡೆಯದೆ ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ ಎಂದರು.

ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಇಂತಹ ಅಕ್ರಮ ಮರಳುಗಾರಿಕೆಗೆ ಮತ್ತು ಅಕ್ರಮ ಚಟುವಟಿಕೆಗಳಿಗೆ ಆರಂಭ ದೊರೆಯಿತು. ಅಕ್ರಮ ದಂಧೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸಿಗರ ಸಮಾನ ಪಾಲು ಇದೆ. ಜಿಲ್ಲೆಯಲ್ಲಿ ಕೆಂಪುಕಲ್ಲು ಮತ್ತು ಮರಳು ಅಭಾವದ ಈ ಪರಿಸ್ಥಿತಿಗೆ ಇಲ್ಲಿನ ಬಿಜೆಪಿಯ ಸಂಸದರು ಮತ್ತು ಶಾಸಕರು ನೇರ ಹೊಣೆಯಾಗಿದ್ದಾರೆ ಎಂದರು.

ಕಳೆದ ಮೂರು ದಶಕಗಳಿಂದ ಜಿಲ್ಲೆಯಿಂದ ಗೆದ್ದು ಹೋದಂತಹ ಸಂಸದರು ಎಂಎಲ್ಎಗಳು ಇದರ ಬಗ್ಗೆ ಇಷ್ಟರವರೆಗೆ ಚಕಾರವೆತ್ತುತ್ತಿಲ್ಲ. ಆದ್ದರಿಂದ ಅವರಿಗೆ ಇದನ್ನು ಪ್ರತಿಭಟಿಸುವ ಯಾವುದೇ ನೈತಿಕತೆ ಇಲ್ಲ ಎಂದರು.

ಇಂತಹ ಬೆಳವಣಿಗೆಗಳಿಂದ ಜಿಲ್ಲೆಯ ಲಕ್ಷಕ್ಕೂ ಮಿಕ್ಕಿದ ಕಾರ್ಮಿಕರು ಕೆಲಸವಿಲ್ಲದೆ ಪರಿತಪಿಸುತ್ತಿದ್ದಾರೆ. ಅಂತಹ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ರೂಪಾಯಿ 10,000 ಪರಿಹಾರ ಧನ ನೀಡಬೇಕೆಂದು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸುನಿಲ್ ಕುಮಾರ್ ಬಜಾರ್ ಮಾತನಾಡಿ, ಜಿಲ್ಲೆಯಲ್ಲಿ ಅವ್ಯಾಹತವಾಗಿ ಅಡೆತಡೆ ಇಲ್ಲದೆ ನಡೆಯುತ್ತಿದ್ದ ಅಕ್ರಮ ದಂಧೆಗಳಿಗೆ ಈಗ ಅಧಿಕಾರ ವಹಿಸಿಕೊಂಡಿರುವ ದಕ್ಷ ಮತ್ತು ನಿಷ್ಠಾವಂತ ಪೊಲೀಸ್ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಿರುವ ಕಾರಣ ಮರಳು ಮತ್ತು ಕೆಂಪು ಕಲ್ಲು ಅಭಾವ ಉಂಟಾಗಿದೆ ಎಂದರು. 

ಮರಳು ಮತ್ತು ಕೆಂಪು ಕಲ್ಲು ಗಣಿಗಾರಿಕೆಯೂ ಅಕ್ರಮವಾಗಿ ಅನೇಕ ವರ್ಷಗಳಿಂದ ನಡೆಯುತ್ತಲೇ ಇದೆ. ಇದೊಂದು ಪ್ರಬಲ ಮಾಫಿಯಾವಾಗಿದೆ. ಇದರ ನಿಯಂತ್ರಣ ಅಗತ್ಯವಾಗಿ ಆಗಬೇಕಿದೆ. ಆದರೆ ಇಂತಹ ದಿಡೀರ್ ಕ್ರಮಗಳನ್ನು ಕೈಗೊಳ್ಳುವಾಗ ದೂರದೃಷ್ಟಿಯ ಯೋಜನೆಯನ್ನು ಹಮ್ಮಿಕೊಂಡಿದ್ದರೆ ಒಳ್ಳೆಯದು ಎಂದರು.

ಕೆಂಪು ಕಲ್ಲು ಮತ್ತು ಮರಳು ಕಾಳಸಂತೆಯಲ್ಲಿ ದುಬಾರಿ ಬೆಲೆಗಳಿಗೆ ಬಿಕರಿಯಾಗುತ್ತಿವೆ. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಕಾಮಗಾರಿಗಳು ಸರಾಗವಾಗಿ ನಡೆಯುವಂತೆ ಕಾರ್ಮಿಕರ ಉದ್ಯೋಗ ನಷ್ಟವಾಗದಂತೆ ಸರಳವಾಗಿ ಕಚ್ಚಾ ವಸ್ತುಗಳನ್ನು ಪೂರೈಕೆ ಮಾಡಲು ಸಾಧ್ಯವಾಗಬೇಕು ಎಂದರು.

CWFI ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಮಾತನಾಡಿ,  ಕಳೆದ ಕೆಲವು ವರ್ಷಗಳಿಂದ ಇಲ್ಲಿನ ಅಕ್ರಮ ದಂಧೆಗಳ ವಿರುದ್ಧ ಹೋರಾಟ ನಡೆಸಿ ಮನವಿಗಳನ್ನು ಅರ್ಪಿಸುತ್ತಾ ಬಂದರು ಪ್ರಯೋಜನವಾಗಿಲ್ಲ ಎಂದರು.

ಈ ಮೊದಲಿನ ಕಮಿಷನರ್ ಅನುಪಮ ಅಗ್ರವಾಲ್ ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಎಲ್ಲಾ ರೀತಿಯ ಅಕ್ರಮಗಳನ್ನು ಬೆಳೆಸಲು ಪ್ರತ್ಯಕ್ಷವಾಗಿ ದಂಧೆಕೋರರ ಬೆನ್ನಿಗೆ ನಿಂತರು ಎಂದು ಆರೋಪಿಸಿದರು.

ಗಣಿ ಇಲಾಖೆಯು ಭ್ರಷ್ಟಾಚಾರದ ಕೂಪವಾಗಿದೆ. ಆದ್ದರಿಂದ ಇಂತಹ ಅಧಿಕಾರಿಗಳ ವಿರುದ್ಧ ಕಠಿಣವಾದ ಕ್ರಮಗಳನ್ನು ಜರುಗಿಸಿದರೆ ಮಾತ್ರ ಅಕ್ರಮಗಳಿಗೆ ಕಡಿವಾಣ ಹಾಕಬಹುದು. ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳದ ಹೊರತು ಏಕಾಏಕಿಯಾಗಿ ಮರಳು ಮತ್ತು ಕೆಂಪು ಕಲ್ಲು ತೆಗೆಯುವುದನ್ನು ನಿಷೇಧಿಸುವುದು ಸರಿಯಾದ ಕ್ರಮ ಅಲ್ಲ. ಆದ್ದರಿಂದ ಜಿಲ್ಲಾಡಳಿತ ಈ ಕೂಡಲೇ ಮಧ್ಯಪ್ರವೇಶಿಸಿ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಮರಳು ಮತ್ತು ಕಲ್ಲು ಪೂರೈಕೆ ಆಗುವಂತೆ ಅಗತ್ಯ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಸಭೆಯನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಸುಕುಮಾರ್ ತೊಕ್ಕೊಟ್ಟು, ಕಟ್ಟಡ ಕಾರ್ಮಿಕರ ಸಂಘಟನೆಯ ಉಳ್ಳಾಲ ತಾಲೂಕು ಅಧ್ಯಕ್ಷ ಜನಾರ್ಧನ ಕುತ್ತಾರು ಮಾತನಾಡಿದರು.

ಸಭೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್ , ಶೇಕರ್ ಕುಂದರ್,  ತಾಲೂಕು ಕಾರ್ಯದರ್ಶಿ ರಿಜ್ವಾನ್ ಹರೇಕಳ, ಇದ್ದರು. ಸಭೆಯ ನೇತೃತ್ವವನ್ನು ಇಬ್ರಾಹಿಂ ಮದಕ,  ಜಯಂತ ನಾಯಕ್, ನವೀನ್ ಗಿರಿಯ ಮೂಲೆ, ಪೆನ್ಸನ್ ದಾರರ ಅಧ್ಯಕ್ಷ ಸುಧಾಕರ್ ಆಳ್ವಾ, ರೋಹಿದಾಸ್ ಭಟ್ನಗರ, ರಾಮಚಂದ್ರ ಪಜೀರ್ ಮುಂತಾದವರು ವಹಿಸಿದ್ದರು.

Leave a Reply