ಕಟ್ಟಡ ನಿರ್ಮಾಣ ಕಾರ್ಮಿಕರ ರಾಜ್ಯವ್ಯಾಪಿ ಯಶಸ್ವಿ ಹೋರಾಟ: CWFI ಅಭಿನಂದನೆ

4 years ago

ಬೆಂಗಳೂರು: ರಾಜ್ಯದ ಹಲವು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿರುವ ಕಾರ್ಮಿಕ ಅಧಿಕಾರಿಗಳ ಕಚೇರಿಗಳ ಎದುರು ಕಟ್ಟಡ ನಿರ್ಮಾಣ ಕಾರ್ಮಿಕರು ಯಶಸ್ವಿ ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಿ ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿದವು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಮಂಡಳಿಯ ನೇರ ಹಣ ಸೌಲಭ್ಯಗಳ ಜಾರಿ ಮಾಡಬೇಕು, ಖರೀದಿಗಳಲ್ಲಿ ಆಗಿರುವ ಭ್ರಷ್ಟಾಚಾರ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಬಾಕಿ ಇರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು ಮೊದಲಾದ ಬೇಡಿಕೆಗಳಿಗಾಗಿ ಎಲ್ಲ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಕಟ್ಟಡ ಕಾರ್ಮಿಕರ ಪ್ರತಿಭಟನೆಗೆ ಕರೆ ನೀಡಲಾಗಿತ್ತು.

ರಾಜ್ಯದ ಉತ್ತರಕನ್ನಡ, ರಾಯಚೂರು, ಬಳ್ಳಾರಿ, ವಿಜಯನಗರ, ಉಡುಪಿ, ದ.ಕನ್ನಡ, ಕೊಡಗು, ಮಂಡ್ಯ, ಮೈಸೂರು, ಕೋಲಾರ, ತುಮಕೂರು, ಚಿತ್ರದುರ್ಗ ಸೇರಿದಂತೆ ಹಲವಾರು ಜಿಲ್ಲಾ‌ ಹಾಗೂ ತಾಲೂಕು ಕೇಂದ್ರಗಳಲ್ಲಿ ಇರುವ ಕಾರ್ಮಿಕಾಧಿಕಾರಿ ಹಾಗೂ ಕಾರ್ಮಿಕ‌ ನಿರೀಕ್ಷಕರು ಮತ್ತು ಜಿಲ್ಲಾಧಿಕಾರಿ ಕಚೇರಿಗಳ ಎದುರು ಸುರಿಯುವ ಮಳೆಯನ್ನೂ‌ ಲೆಕ್ಕಿಸದೆ ಸಾವಿರಾರು ಕಟ್ಟಡ ನಿರ್ಮಾಣ‌ ಕಾರ್ಮಿಕರು ಇಂದಿನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನೆ ಯಶಸ್ವಿಗೊಳಿಸಿದ ನಿರ್ಮಾಣ ವಲಯದ ಕಾರ್ಮಿಕರಿಗೆ ಮತ್ತು ಯಶಸ್ವಿಯಾಗಿ ಸಂಘಟಿಸಿದ ಎಲ್ಲ ಸಮಿತಿಗಳಿಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ) ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ‌ಸಮಿತಿ ಅಭಿನಂದನೆ ಸಲ್ಲಿಸಿದೆ.

ರಾಜ್ಯ ಸರ್ಕಾರದ ಮೇಲೆ‌ ಒತ್ತಡ ಹೇರಲು ಇದೇ ಬೇಡಿಕೆಗಳಿಗಾಗಿ ಆಗ್ರಹಿಸಿ ಬೆಂಗಳೂರಿನಲ್ಲಿ ಜುಲೈ 14 ರಂದು ಮಂಡಳಿ ಮುಂದೆ  ನೂರಾರು ಕಾರ್ಮಿಕರು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆಗಳನ್ನು  ಜಾರಿಗೊಳಿಸಲು ಮುಂದಾಗಿದೆ ಇವುಗಳು ಜಾರಿಗೊಂಡರೆ ಈಗ ಇರುವ ಕಲ್ಯಾಣ ಮಂಡಳಿ‌ ಹಾಗೂ‌ ನಿಧಿಯ ನಿಯಂತ್ರಣ ಕೇಂದ್ರ ಸರ್ಕಾರ‌ ಕೈಯಲ್ಲಿ ಸೇರಲಿದೆ ಆಗ ರಾಜ್ಯದ ಕಲ್ಯಾಣ ಮಂಡಳಿಗಳು ಅಳಿವು ಉಳಿವಿನ‌ ಪ್ರಶ್ನೆ ಎದುರಿಸುತ್ತಿವೆ.

ಈ ಹಿನ್ನೆಲೆಯಲ್ಲಿ ಆಗಸ್ಟ್‌ನಲ್ಲಿ ಈ ಸಂಹಿತೆಯಿಂದ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕರ ಸೌಲಭ್ಯಗಳ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ವಿವಿಧ ಕಾನೂನು ತಜ್ಞರನ್ನು ಒಳಗೊಂಡು ದುಂಡು ಮೇಜಿನ ಸಭೆ ನಡೆಸಲು ನಿರ್ಧರಿಸಲಾಗಿದೆ ಮತ್ತು ಕಾರ್ಮಿಕರ ಬೇಡಿಕೆಗಳಿಗಾಗಿ ಮತ್ತು ಕಲ್ಯಾಣ ‌ಮಂಡಳಿ ಹಾಗೂ ನಿಧಿಯ ಉಳಿವಿಗಾಗಿ ಇದೇ ಸೆಪ್ಟೆಂಬರ್ 20 ವಿಧಾನಸೌಧ ಚಲೋ ನಡೆಸಲು ನಿರ್ಧರಿಸಲಾಗಿದೆ ಎಂದು CWFI ಹೇಳಿದೆ.

One Response

Leave a Reply