ಬೆಂಗಳೂರು: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ನೇತೃತ್ವದಲ್ಲಿ ಎರಡನೇ ದಿನವಾದ ಇಂದು ಕೂಡ ಅಖಿಲ ಭಾರತ ಮುಷ್ಕರದ ಅಂಗವಾಗಿ ರಾಜ್ಯದಾದ್ಯಂತ ನಿರ್ಮಾಣ ಕಾರ್ಮಿಕರು ಪ್ರತಿಭಟನೆಗಳನ್ನು ಯಶಸ್ವಿಯಾಗಿ ನಡೆಸಿದರು.
ಎರೆಡು ದಿನಗಳ ಹೋರಾಟದಲ್ಲಿ ಸಾವಿರಾರು ಕಾರ್ಮಿಕರು ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸುವ ಮೂಲಕ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಬಯಲುಗೊಳಿಸಿದ್ದಾರೆ ಮತ್ತು ಕೊವೀಡ್ ಮತ್ತು ಕೊವಿಡೋತ್ತರ ಕಾಲಾವಧಿಯಲ್ಲಿ ಕಾರ್ಮಿಕರಿಗೆ ನೆರವು ನೀಡುವ ನೆಪದಲ್ಲಿ ನೂರಾರು ಕೋಟಿ ಹಣ ಲೂಟಿ ಮಾಡಿರುವ ಕಾರ್ಮಿಕ ಸಚಿವರ, ಅಧಿಕಾರಿಗಳ ಭ್ರಷ್ಟತೆಯನ್ನು ವ್ಯಾಪಕ ಪ್ರಚಾರ ಮಾಡಿದರು.
1996ರ ಕಟ್ಟಡ ಕಾರ್ಮಿಕ ಕಾನೂನು, ಸೆಸ್ ಕಾನೂನು ಹಾಗೂ ಅಂತರಾಜ್ಯ ವಲಸೆ ಕಾರ್ಮಿಕ ಕಾನೂನು1979 ಉಳಿಯಬೇಕು, ಕಟ್ಟಡ ಸಾಮಾಗ್ರಿಗಳ ಮೇಲೆ ವಿಧಿಲಾಗುವ ಜಿ.ಎಸ್.ಟಿ ರದ್ದು ಮಾಡಬೇಕು, ತೈಲೋತ್ಪನ್ನಗಳ ಬೆಲೆ ನಿಯಂತ್ರಿಸಬೇಕು ಹಾಗೂ ಕೊವೀಡ್ ಸಮಯದಲ್ಲಿ ಆಗಿರುವ ಮಂಡಳಿಯ ಎಲ್ಲ ಖರೀದಿಗಳು ತನಿಖೆಯಾಗಬೇಕು ಹಾಗೂ ಮಂಡಳಿ ಘೋಷಿಸಿರುವ ಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂಬ ಬೇಡಿಕೆಗಳ ಈಡೇರಿಕೆಗಾಗಿ Construction workers federation of India (CWFI) ಮುಷ್ಕರಕ್ಕೆ ಕರೆ ನೀಡಿತ್ತು.
ಬೆಂಗಳೂರಿನ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಮುಂದೆ ಬೆಂಗಳೂರು ದಕ್ಷಿಣ ಮತ್ರು ಉತ್ತರ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ನೂರಾರು ಕಾರ್ಮಿಕರು ಪ್ರತಿಭಟನೆ ನಡೆಸಿ ನೂತನವಾಗಿ ಕಾರ್ಯದರ್ಶಿ ಆಗಿ ನೇಮಕಗೊಂಡಿರುವ ಗುರುಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಂಡಳಿ ಜಂಟಿ ಕಾರ್ಯದರ್ಶಿ ಡಾ.ಶಿವಪುತ್ರ ಬಾಬುರಾವ್, ಹಿರಿಯ ಅಧಿಕಾರಿಗಳಾದ ಜಾನ್ ಸನ್, ಆಂಜಿನಪ್ಪ ಉಪಸ್ಥಿತರಿದ್ದರು.
ಸಂಘಟನೆ ಮುಖಂಡ ರಾಜ್ಯ ಅಧ್ಯಕ್ಷ ವೀರಸ್ವಾಮಿ, ದಕ್ಷಿಣ ಜಿಲ್ಲಾ ಅಧ್ಯಕ್ಷರಾದ ಕೆ.ಎಲ್.ಲಕ್ಷ್ಮೀ, ಕಾರ್ಯದರ್ಶಿ ಲಿಂಗರಾಜ್, ಉತ್ತರ ಜಿಲ್ಲಾ ಕಾರ್ಯದರ್ಶಿ ಹರೀಶ ಕುಮಾರ್, ಖಜಾಂಚಿ ಹನುಮಂತ ರಾವ್ ಹವಾಲ್ದಾರ್, ಉಪಾಧ್ಯಕ್ಷ ರಮೇಶ್ ಮೊದಲಾದವರು ಹಾಜರಿದ್ದರು.
ಕಲಬುರಗಿ: ಕಲುಬರಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿರ್ಮಾಣ ಕಾರ್ಮಿಕರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಶ್ರೀಮಂತ ಬಿರಾದಾರ, ಪ್ರಧಾನ ಕಾರ್ಯದರ್ಶಿ ನಾಗಯ್ಯಸ್ವಾಮಿ, ಜಂಟಿ ಕಾರ್ಯದರ್ಶಿ ಹನುಮಂತ ಪೂಜಾರಿ, ಯಶವಂತ ಪಾಟೀಲ ಬಾಬು ಹೊನ್ನಳ್ಳಿ ಭಾಗವಹಿಸಿದ್ದರು.
ವಿಜಯನಗರ: ವಿಜಯನಗರ ಜಿಲ್ಲಾಧಿಕಾರಿಗಳ ಚಲೋ ಹೋರಾಟದಲ್ಲಿ ನೂರಾರು ಕಾರ್ಮಿಕರು ಭಾಗವಹಿಸಿ ಕಾರ್ಮಿಕ ನಿರೀಕ್ಷಕ ಭೂಪಾಲ್ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಯಲ್ಲಾಲಿಂಗ, ತಾಲೂಕು ಅಧ್ಯಕ್ಷ ಗೋಪಾಲ್, ಕಾರ್ಯದರ್ಶಿ ರಾಮಾಂಜಿ ದಲಿತ ಹಕ್ಕುಗಳ ಸಮಿತಿಯ ನಾಯಕ ಜಂಭಯ್ಯ ನಾಯಕ, ಡಿವೈಎಫ್.ಐ ನಾಯಕ ರಮೇಶ್, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಮೊದಲಾದವರು ಮಾತನಾಡಿದರು. ಕೊಪ್ಪಳ ಜಿಲ್ಲೆಯಲ್ಲಿ ನೂರಾರು ಕಾರ್ಮಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ರಾಜ್ಯ ಸಹ ಕಾರ್ಯದರ್ಶಿ ಕಾಶಿಂಸಾಬ್ ಸರ್ದಾರ್ ಸೇರಿ ಹಲವಾರು ಭಾಗವಹಿಸಿದ್ದರು.
ರಾಯಚೂರು ಜಿಲ್ಲೆ ಸಿಂಧನೂರು, ದಾವಣಗೆರೆ, ಉತ್ತರಕನ್ನಡ ಜಿಲ್ಲೆಯ ಹಳಿಯಾಳ, ಅಂಕೋಲ, ಉಡುಪಿಯ ಬ್ರಹ್ಮಾವರ ಸೇರಿ ಹಲವೆಡೆ ನೂರಾರು ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಎರಡು ದಿನಗಳ ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸಿದ ಎಲ್ಲ ಕಾರ್ಮಿಕರಿಗೂ ಸಿಐಟಿಯು ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ ಅಭಿನಂದನೆ ಸಲ್ಲಿಸಿದೆ.




