ನಿನ್ನೆ ಬಿಡುಗಡೆ ಆಗಿರುವ “ಬಿಸಿಲು ಕುದುರೆ” ಕನ್ನಡದ ಮತ್ತೊಂದು ತಬರನ ಕಥೆಯೇ ಸರಿ.
ರೌಡಿಸಂ ಹಾಗೂ ಮರ ಸುತ್ತುವ ನಗರಗಳ ಕಥೆಗಳ ಮೂಲಕ ಜನರನ್ನು ರಂಜಿಸಿ ಅವರ ಜೇಬಿಗೆ ಕತ್ತರಿ ಹಾಕುವ ಸುಳ್ಳು ಮತ್ತು ಅವಾಸ್ತವದ ಚಿತ್ರಗಳೇ ಪ್ರಧಾನವಾಗಿರುವ ಕಾಲವಿದು.
ಹೊಡಿ-ಬಡಿ ಕಥೆಯ ಮೂಲಕ ಕೋಟಿ ಕೋಟಿ ಕಬಳಿಸುವ ಚಿತ್ರಗಳೂ ಇವೆ. ಹಳ್ಳಿ ಜನರಿಗೂ ಪ್ಯಾಟೆ ಕಥೆಯ ಸಿನಿಮಾನೇ ಮೋಹಕವಾಗಿ ಕಾಣುವ ಪರಿಸ್ಥಿತಿ ಇದೆ. ಹೀಗಾದರೆ ಗ್ತಾಮೀಣ ಜನರ ಬದುಕು, ಬವಣೆ, ಸಂಸ್ಕೃತಿಗಳ ಅಗತ್ಯವೇ ಇಲ್ಲವೇ?
ಅನ್ನ ಬೆಳೆಯುವ ರೈತ, ಮಡಿಕೆ ಮಾಡುವ ಕುಂಬಾರ, ಚರ್ಮಗಾರ ಚಮ್ಮಾರ, ಕಮ್ಮಾರ ಇತ್ಯಾದಿ ಶ್ರಮಿಕರ ಬದುಕಿಗೆ ಅರ್ಥವೇ ಇಲ್ಲವೇ?
ಭ್ರಷ್ಟಾಚಾರ, ಈ ಮುಗ್ಧ ಜನರ ಜೀವಗಳನ್ನು ಹೇಗೆ ಸದ್ದಿಲ್ಲದೆ ನುಂಗಿ ನೊಣೆಯುತ್ತದೆ ಎಂಬುದನ್ನು ಹೃದಯ ಶಿವ ತಮ್ಮ ಚೊಚ್ಚಲ ಸಿನಿಮಾದಲ್ಲೇ ತುಂಬಾ ವಾಸ್ತವದ ನೆಲೆಗಟ್ಟಿನಲ್ಲಿ ಚಿತ್ರಿಸಿದ್ದಾರೆ. ಇನ್ನು ಸಂಪತ್ ಮೈತ್ರೇಯ, ಕರಿಸುಬ್ಬು ಇತ್ಯಾದಿ ನಟರು ಕಥೆಗೆ ಶೇ.100ರಷ್ಟೂ ನ್ಯಾಯ ಒದಗಿಸಿದ್ದಾರೆ.
ಭ್ರಷ್ಟಾಚಾರ ಎಂಬ ಪಿಡುಗು ಕಾಲಾನುಕಾಲದಿಂದ ಹೇಗೆ ಸಮಾಜದ ಬಡ ವರ್ಗಗಳನ್ನು ಪೀಡಿಸುತ್ತದೆ? ಅದರ ಬಲಿಪಶುಗಳು ಸಿನಿಮಾ ನೋಡುವ ಮೂಲಕ ಭ್ರಷ್ಟ ಕಮಿಷನ್ ಸರ್ಕಾರಗಳಿಗೆ ಬುದ್ಧಿ ಕಲಿಸಲು ಇದು ಅತ್ಯಂತ ಸೂಕ್ತ ಸಮಯ. ಹೋಗಿ ನೋಡಿ ಸಿನಿಮಾವನ್ನು ಗೆಲ್ಲಿಸಿ.
– ಗೋವಿಂದರಾಜ್ ಬೈಚಕುಪ್ಪೆ


