ಹಿಂದೂ ಮಹಿಳಾ ವಿರೋಧಿ ದಿ ಕೇರಳ ಸ್ಟೋರಿ ! ನಿರ್ದೇಶಕರ ಮುಸ್ಲಿಂ ದ್ವೇಷಕ್ಕೆ ಬಲಿಯಾದ ಹಿಂದೂ ಯುವತಿಯರು!
“ಸರ್, ನನ್ನ ಮಗಳನ್ನು ಮಂಗಳೂರಿನ ಕಾಲೇಜಿಗೆ ಸೇರಿಸಬಹುದಾ? ಏನೂ ತೊಂದರೆ ಆಗಲ್ಲ ತಾನೆ ?” ಅಂತ ಬೆಂಗಳೂರಿನ ಪೋಷಕರೊಬ್ಬರು ಕೇಳಿದರು.
“ಸೇರಿಸಿ. ಏನ್ ಸಮಸ್ಯೆ ?” ಎಂದು ಪ್ರಶ್ನಿಸಿದೆ.
“ಅದೇ ಸಾರ್, ನಿಮ್ ಕಡೆ ಲವ್ ಜಿಹಾದ್ ಜಾಸ್ತಿಯಂತೆ. ದಿ ಕೇರಳ ಸ್ಟೋರಿ ನೋಡಿದ್ವಿ. ನಮ್ಮನೆ ಯಜಮಾನರಂತು ಮಗಳನ್ನು ಮಂಗಳೂರಿಗೆ ಕಳಿಸೋಕೆ ರೆಡಿ ಇಲ್ಲ” ಎಂದು ಆತಂಕದಲ್ಲಿ ಹೇಳಿದರು.
“ದಿ ಕೇರಳ ಸ್ಟೋರಿ ನೋಡಿದಂದಿನಿಂದ ನಮ್ಮನೆ ಪರಿಸ್ಥಿತಿಯೇ ಬದಲಾಗಿದೆ. ನನ್ನ ಮಗಳು ಫ್ಯಾಶನ್ ಡ್ರೆಸ್ ಹಾಕುವ ಹಾಗೆ ಇಲ್ಲ. ಎಲ್ಲಿ ಹೋಗುವಾಗಲೂ ಕೇರಳ ಸ್ಟೋರಿ ನೆನಪಿಸಿ ಹಂಗಿಸಲಾಗ್ತಿದೆ” ಎಂದರು.
ಮುಸ್ಲೀಮರ ವಿರುದ್ಧ ಎನ್ನಲಾಗುವ ದಿ ಕೇರಳ ಸ್ಟೋರಿ ಎಂಬ ಸಿನೇಮ ವಾಸ್ತವವಾಗಿ ಹಿಂದೂ ಯುವತಿಯರ ವಿರುದ್ದವಾಗಿರುವಂತದ್ದು. ಹಿಂದೂ ಯುವತಿಯರ ಶಿಕ್ಷಣ, ಉದ್ಯೋಗ, ಅ್ಯಕ್ಟಿವಿಟೀಸ್ ಗಳಿಗೆ ತಡೆ ನೀಡಲು ದಿ ಕೇರಳ ಸ್ಟೋರಿಯನ್ನು ಗುಮ್ಮವನ್ನಾಗಿ ಬಳಸಲಾಗಿದೆ.
ಧಾರ್ಮಿಕತೆ- ಆಂತರಿಕ ಕೋಮುವಾದ-ಉಗ್ರವಾದಗಳಿಗೆ ವ್ಯತ್ಯಾಸವೂ ಗೊತ್ತಿಲ್ಲದ, ವಾಸ್ತವಿಕತೆಗಳ ಅರಿವೂ ಇಲ್ಲದ, ಎದೆಯೊಳಗೆ ಪ್ರೀತಿಯ ಒರತೆಯೇ ಇಲ್ಲದ ವ್ಯಕ್ತಿಯೇನಾದರೂ ನಿರ್ದೇಶಕನಾದರೆ ದಿ ಕೇರಳ ಸ್ಟೋರಿಯಂತಹ ಸಿನೇಮಾ ಹುಟ್ಟಿಕೊಳ್ಳುತ್ತದೆ.
ಹಿಂದೂ ಸಂಪ್ರದಾಯಸ್ಥ ಕುಟುಂಬದ ಇಬ್ಬರು ಹುಡುಗಿಯರನ್ನು ಮತಾಂತರ ಮಾಡಿ ಐಸಿಸ್ ಎಂಬ ಭಯೋತ್ಪಾದಕ ಸಂಘಟನೆಗೆ ಸೇರಿಸಲು ಪ್ಲ್ಯಾನ್ ನಡೆಯುತ್ತದೆ. ಅದಕ್ಕಾಗಿ ಇಬ್ಬರು ಕಟ್ಟರ್ ಮುಸ್ಲಿಂ ಹುಡುಗ ಮತ್ತೊಬ್ಬಳು ಮುಸ್ಲಿಂ ಹುಡುಗಿಯನ್ನು ನಿಯೋಜಿಸಲಾಗುತ್ತದೆ. ಇಬ್ಬರು ಮುಸ್ಲಿಂ ಹುಡುಗರು ಒರ್ವ ಮುಸ್ಲಿಂ ಹುಡುಗಿಯ ಮೂಲಕ ಇಬ್ಬರು ಹಿಂದೂ ಹುಡುಗಿಯರನ್ನು ಪರಿಚಯ ಮಾಡಿಕೊಂಡು ಪ್ರೀತಿಸಲು ಶುರು ಮಾಡುತ್ತಾರೆ. ಪ್ರೀತಿ ಮಾಡುವ ಸಂದರ್ಭದಲ್ಲಿ ಮುಸ್ಲಿಂ ಹುಡುಗರೇ ಆ ಹಿಂದೂ ಹುಡುಗಿಯರನ್ನು ಪಬ್ ಗೆ ಕರೆದುಕೊಂಡು ಹೋಗುತ್ತಾರೆ. ಕರ್ಮಠ ದಾರ್ಮಿಕವಾದಿ ಮುಸ್ಲಿಂ ಹುಡುಗರು ಪಬ್ ಗೆ ಹೋಗಲು ಸಾಧ್ಯವೇ ಇಲ್ಲ. ಮುಸ್ಲಿಂ ಹುಡುಗರೇನಾದರೂ ಪಬ್, ಬಾರ್, ಸಿನೇಮಾ, ಪ್ರೀತಿ ಪ್ರೇಮ ಎಂದು ಓಡಾಡುತ್ತಿದ್ದರೆ ಅವರು ಪ್ರಗತಿಪರ ಮುಸ್ಲಿಮರು ಎಂದರ್ಥ. ಅವರು ಇಸ್ಲಾಂ ಸಂಪ್ರದಾಯಗಳಿಗೆ ಜೋತು ಬಿದ್ದಿಲ್ಲ ಎಂಬುದರ ಸೂಚನೆ. ಇಂತಹ ಜೀವನ ಶೈಲಿ ಮುಸ್ಲೀಮರ ಪಾಲಿಗೆ ಹರಾಮ್ ಆಗಿರುತ್ತದೆ. ಹುಡುಗಿಯರಿಗೆ ಟ್ಯಾಬ್ಲೆಟ್ ನ ನೆಪದಲ್ಲಿ ಮುಸ್ಲಿಂ ಹುಡುಗರು ಡ್ರಗ್ಸ್ ನೀಡುತ್ತಾರೆ. ಡ್ರಗ್ಸ್, ಪಬ್, ಬಾರ್ ಎಂದು ತೆರಳುವ ಮುಸ್ಲಿಂ ಹುಡುಗರು ಹೆಚ್ಚೆಂದರೆ ಪ್ರೀತಿಯ ನಾಟಕವಾಡಿ (ಅದಕ್ಕೆ ಧರ್ಮದ ಹಂಗಿರುವುದಿಲ್ಲ) ಕೈಕೊಡಬಹುದೇ ಹೊರತು ಇಸ್ಲಾಂ ಧರ್ಮಕ್ಕಾಗಿ ಕರ್ಮಠ ಧಾರ್ಮಿಕವಾದಿಯೊಬ್ಬ ಪಬ್, ಡ್ರಗ್ಸ್ ಮೊರೆ ಹೋಗಲು ಸಾಧ್ಯವೇ ಇಲ್ಲ.
ಇಸ್ಲಾಂ ಜಾರಿಗಾಗಿ ತೊಡಗಿಸಿಕೊಂಡ ಮುಸ್ಲಿಂ ಸಂಘಟನೆಗಳು, ಪಂಥಗಳ ಬಗ್ಗೆ ದಿ ಕೇರಳ ಸ್ಟೋರಿ ಸಿನೇಮಾದ ನಿರ್ದೇಶಕನಿಗೆ ಪ್ರಾಥಮಿಕ ಮಾಹಿತಿಯೇ ಇಲ್ಲ. ಮುಸ್ಲಿಂ ದ್ವೇಷವನ್ನು ಹರಡಬೇಕು ಎಂಬ ಏಕೈಕ ಉದ್ದೇಶದಿಂದ ಕೇರಳ ಸ್ಟೋರಿ ಸಿನೇಮಾವನ್ನು ಹೆಣೆಯಲಾಗಿದೆ. ಕರ್ನಾಟಕದ ಚುನಾವಣೆಯ ಹೊತ್ತಲ್ಲೇ ಕರಾವಳಿ ಕರ್ನಾಟಕಕ್ಕೆ ಹತ್ತಿರವಾಗಿರುವ, ಕರ್ನಾಟಕದೊಂದಿಗೆ ಸಂಬಂಧ ಹೊಂದಿರುವ ಕಾಸರಗೋಡನ್ನು ಉದ್ದೇಶಪೂರ್ವಕವಾಗಿ ಎಳೆದು ತರಲಾಗಿದೆ.
ಹಿಂದೂ ಯುವತಿಯರು ಪಿಜಿಯಲ್ಲಿದ್ದುಕೊಂಡು ಓದಬಾರದು/ದುಡಿಯಬಾರದು, ಹಿಂದೂಯೇತರ ಯುವತಿಯರ ಗೆಳೆತನ ಮಾಡಬಾರದು, ಆಧುನಿಕ ಉಡುಪುಗಳನ್ನು ಧರಿಸಬಾರದು, ಹೊಟೇಲು, ಪಬ್ ಎಂದು ಸ್ವತಂತ್ರವಾಗಿರಬಾರದು ಎಂದು ಹುನ್ನಾರವನ್ನು ಈ ಸಿನೇಮಾ ಹೊಂದಿದೆ. ದಿ ಕೇರಳ ಸ್ಟೋರಿ ಸಿನೇಮಾವನ್ನು ನೋಡಿದ ಯಾವುದೇ ಸಾಮಾನ್ಯ ಪೋಷಕರು “ನಮ್ ಮನೆ ಹುಡುಗಿಯರನ್ನು ನಾವೇ ಕಾಪಾಡ್ಕೋಬೇಕಪ್ಪ” ಎಂದು ನಿಟ್ಟುಸಿರು ಬಿಡದೇ ಇರುವುದಿಲ್ಲ. ಇಲ್ಲಿ ಕಾಪಾಡ್ಕೋಬೇಕು ಎನ್ನುವುದು ಸಂಕೋಲೆಯಾಗಿರುತ್ತದೆ. ಮುಸ್ಲೀಮರ ಗುಮ್ಮವನ್ನು ತೋರಿಸಿ ಹಿಂದೂ ಸಮಾಜದೊಳಗೆ ಮನುವಾದವನ್ನು ಜಾರಿಯಲ್ಲಿಡುವ ವ್ಯವಸ್ಥಿತ ಕುತಂತ್ರ ಇದಾಗಿದೆ.
- ನವೀನ್ ಸೂರಿಂಜೆ, ಹಿರಿಯ ಪತ್ರಕರ್ತರು




