ಭಾರತ ದೇಶ ವಿಶ್ವದಲ್ಲೇ ವಿಶಿಷ್ಟವಾದ ನೈಸರ್ಗಿಕ ಸಂಪತ್ತು ಹೊಂದಿದೆ. 32,87,263 ಚದರ ಕಿ.ಮೀ ಭೂ ವ್ಯಾಪ್ತಿ ಇದೆ. ವಿಶಿಷ್ಟ ಸಂಸ್ಕೃತಿ, ನಂಬಿಕೆಗಳು, ವಿಶ್ವಾಸ, ಭಿನ್ನ ಭಾಷೆಯಲ್ಲೂ ಏಕ ನಾಗರೀಕತೆಯನ್ನು ಬೋಧಿಸಿದ ಈ ಭಾರತದಲ್ಲಿ 7 ಧರ್ಮಗಳು, 8000ಕ್ಕೂ ಹೆಚ್ಚು ಜಾತಿಗಳು, 25000 ಕ್ಕೂ ಹೆಚ್ಚು ಉಪ ಜಾತಿಗಳು, 613ಕ್ಕೂ ಹೆಚ್ಚು ಬುಡಕಟ್ಟುಗಳಿವೆ, 19500 ಕ್ಕೂ ಹೆಚ್ಚು ಮಾತೃ ಭಾಷೆಗಳು, 330 ಮಿಲಿಯನ್ ದೇವಾನುದೇವತೆಗಳನ್ನುಹೊಂದಿಯೂ ಭಾರತ ವಿವಿಧತೆಯಲ್ಲೂ ಏಕತೆ ಸಾರಿದ ದೇಶ. ಅಲೆಮಾರಿ ಹಾಗೂ ಬುಡಕಟ್ಟು, ಲಕ್ಷಣವುಳ್ಳ ಶೂರರು ಹಾಗೂ ಸತ್ಯವಾದಿ ಬಂಜಾರ (ಲಂಬಾಣಿ) ಸಮುದಾಯವೂ ಇವುಗಳಲ್ಲಿ ಒಂದಾಗಿದೆ.
ಬಂಜಾರರ ಮೂಲದವರಾದ ‘ದಾದಾ ಮೋಲ’ ಮತ್ತು ‘ರಾಧಿದಾದಿ’ಯರು ಮೂರು ಭಿನ್ನ ಸ್ಥಳಗಳಿಂದ 3 ಜನರನ್ನು ದತ್ತು ಪಡೆದು ಮಕ್ಕಳನ್ನು ಸಾಕುತ್ತಾರೆ. ಅವರೇ ರಾಠೋಡ್, ಪೊಮ್ಮಾರ್, ಚವಾಣ್ ಆಗಿದ್ದಾರೆ. ಮುಂದೆ ಇವರೆ ಮೂರು ಪ್ರತ್ಯೇಕ ಬಂಜಾರ ಗೋತ್ರಗಳ ಮೂಲ ಪುರುಷರಾಗುತ್ತಾರೆ. ಇವರಲ್ಲೂ ಹತ್ತಾರು ಒಳಗೋತ್ರಗಳು ಇರುವುದನ್ನು ಕಾಣಬಹುದು.
ಸಂತ ಗುರು ಶ್ರೀ ಸೇವಾಲಾಲ್ ಮಹಾರಾಜ್: ಭಾರತದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಅನೇಕ ಮಹಾಪುರುಷರನ್ನು, ಸಂತರು, ಕವಿಗಳು, ರಾಜರು, ಗುರುಗಳು, ವೀರರು, ಸುಧಾರಕರು, ತ್ಯಾಗಿಗಳು ಸೇವೆಗೆ ತಮ್ಮನ್ನು ಅರ್ಪಿಸಿಕೊಂಡವರು ಸಿಗುತ್ತಾರೆ. ಬಂಜಾರರು ಹಿಂದೂವಲ್ಲ ಆರ್ಯರು ಅಲ್ಲ. ಪರಿಸರ ಆರಾಧಕರು, ಮೂಲ ನಿವಾಸಿಗಳಾದ ಬಂಜಾರರಲ್ಲಿನ ಪಂಗಡಗಳಾದ ರಾಥೋಡರು, ಚವ್ಹಾಣರು, ಗಹದ್ವಾಲರು, ಪರಮಾರರು ಮುಂತಾದ ಐತಿಹಾಸಿಕ ಹಾಗೂ ಚಾರಿತ್ರಿಕವಾದ ಗೋತ್ರದ 64ಕ್ಕೂ ಹೆಚ್ಚಿನ ನಾಯಕರು ಇದ್ದಾರೆ. ಆದರೆ ಬಂಜಾರ (ಲಂಬಾಣಿ)ರ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಚಾರಿತ್ರಿಕ ನೆಲ ಮೂಲದ ನಾಟಿ ವೈದ್ಯ, ಧಾರ್ಮಿಕ ಪುರುಷ ಸೂಕ್ತ ಮಾರ್ಗದರ್ಶಕ, ಚಾರಣಿಗ ಸಮುದಾಯದ ನೈತಿಕ ವ್ಯಕ್ತಿ, ಅಲೌಕಿಕ ಶಕ್ತಿಯ ಪ್ರತೀಕವಾದ ಸಂತ, ವೀರಸೇನಾನಿ ಸೇವಾಲಾಲರು ಆರಾಧ್ಯದೈವವಾಗಿ, ಇತರರ ಸೇವೆ ಮಾಡುವ ಧಾರ್ಮಿಕ ನಾಯಕರಾಗಿ, ಸಾಂಸ್ಕೃತಿಕ ವೀರ, ಶೂರ, ಬ್ರಹ್ಮಚಾರಿ, ಭಾವಜೀವಿ, ಚಾರಣಿಗ, ಸಮಾಜಸುಧಾರಕ, ಹೀಗೆ ಬಹು ಆಯಾಯಿಯಾಗಿದ್ದವರು.
ಸೇವಾಲಾಲ್ ಒಬ್ಬ ಮಾನವನಾಗಿ ಹುಟ್ಟಿ ದೈವದ ಸ್ಥಾನ ಪಡೆದ ಪ್ರಥಮ ವೀರ ಸೇನಾನಿ, ಬಂಜಾರರು ಸೇವಾ ಭಾಯ(ಅಣ್ಣ)ರಿಗೆತಮ್ಮ ತಾಂಡಗಳಲ್ಲಿ ವಿಶೇಷ ಸ್ಥಾನ ನೀಡಿದ್ದಾರೆ. ಬಂಜಾರರು 300 ಕ್ಕೂ ಹೆಚ್ಚಿನ ಸಂಸ್ಥಾನಗಳ ರಾಜ ಮಹಾರಾಜರಿಗೆ ಆಹಾರ ಧ್ಯಾನ, ಯುದ್ದ ಸಾಮಾಗ್ರಿಗಳ ಜೊತೆಗೆ ಉಪ್ಪು, ಕೊಬ್ಬರಿ, ಬೆಳ್ಳಿ, ಬಂಗಾರ, ಖರ್ಜೂರ ಅಲ್ಲದೆ ನೈಸರ್ಗಿಕ ಸಂಪನ್ಮೂಲಗಳನ್ನು ಮಾರಿ ಬದುಕುವುದನ್ನು ಸೇವಾಲಾಲರು ಉತ್ತೇಜಿಸಿದ್ದರು. 1813ರ laman marg ಕೃತಿಯಲ್ಲಿ ಏಷ್ಯಾ ಖಂಡದ ಉದ್ದಕ್ಕೂ ವ್ಯಾಪಾರದ ದಾಖಲೆ ಇದೆ.
ಭಾರತೀಯ ಸಂಸ್ಕೃತಿಗೆ ದ್ರಾವಿಡ ಪರಂಪರೆ ನೀಡಿದ ಅಮೋಘ ಕೊಡುಗೆ ಗುರು ಸಂಪ್ರದಾಯ, ಸೇವಾಲಾಲರು ಮುನಿ ಸಂಪ್ರದಾಯಕ್ಕೆ ಹೊರತಾಗಿ ದ್ರಾವಿಡರ ಗುರು ಸಂಸ್ಕೃತಿ, ಸಂಪ್ರದಾಯದವರಾಗಿದ್ದಾರೆ. ಗುರು ಸಂಪ್ರದಾಯದಲ್ಲಿ ಹೆಣ್ಣು ಗಂಡು ಎಂಬ ಲಿಂಗಭೇದಕ್ಕೆ ಅವಕಾಶವೇ ಇಲ್ಲ. ಭಿನ್ನ ಆಚಾರ, ಉಡುಗೆ-ತೊಡುಗೆ, ರೂಢಿ-ಪದ್ದತಿಗಳು ಹಾಗೂ ಭಿನ್ನ ಧರ್ಮ ಬಂಜಾರರದ್ದಾಗಿದೆ.
ಸೇವಾಲಾಲರ ಜನನ-ಮರಣ: ಕ್ರಿ.ಶ 1739 ಫೆಬ್ರವರಿ 15ರ ಸೋಮವಾರ ಬೆಳಗ್ಗೆ 9 ಗಂಟೆಗೆ ಜನಿಸಿದರು ಎಂದು ಹೇಳಲಾಗುತ್ತದೆ. ಇವರು ಮೂಲತಹ ಅಲೆಮಾರಿ ವ್ಯಾಪಾರಿಗಳಾಗಿದ್ದುದರಿಂದ ದೇಶದ ಪ್ರತಿಯೊಂದು ಪ್ರಾಂತಗಳಲ್ಲೂ ಸಂಚರಿಸುತ್ತಿದ್ದವರು, ಹೀಗಾಗಿ ಇವರು ಕರ್ನಾಟಕದ ಇಂದಿನ ದಾವಣಗೆರೆ ಜಿಲ್ಲೆಯ ಹೊನ್ನಾಳ್ಳಿ ತಾಲ್ಲೂಕಿನ ಬೆಳಗುತ್ತಿಯ ಸೂರಗೊಂಡನ ಕೊಪ್ಪ (ಭಾಯಘಡ)ದಲ್ಲಿ ಜನಿಸಿದರು ಎನ್ನಲಾಗುತ್ತದೆ. ಹೀಗೆ ಭಿನ್ನ ಭಿನ್ನ ಪ್ರದೇಶಗಳಲ್ಲೂ ಹುಟ್ಟಿದರು, ಅಸುನೀಗಿದರು ಎಂಬ ಐತಿಹ್ಯಗಳಿವೆ ಹೆಚ್ಚಿನ ಸಂಶೋಧನೆ ಅಗತ್ಯ ಇದೆ.
ಜಿ.ಎ.ಗ್ರಿಯರ್ಸನ್ ಬಂಜಾರರನ್ನು ಕುರಿತು ಇವರು ‘ಲಭಾನಿ” ಬುಡಕಟ್ಟು ಜನರು ಎಂದು ತಮ್ಮ ಕೃತಿಯಲ್ಲಿ ದಾಖಲಿದ್ದಾರೆ. ಬುಡಕಟ್ಟು, ಅಲೆಮಾರಿ ಬಂಜಾರರು ವಣಜಾರ (ಉತ್ಪತ್ತಿ) ಅಂದರೆ ಅಂದರೆ ವಾಣಿಜ್ಯಕಾರರು. ಇವರು ಅಲೆಮಾರಿಗಳಾಗಿದ್ದಾಗ, ಗುಂಪು ಗುಂಪಾಗಿ ವಲಸೆ ಹೋದರೆ ಮದುವೆಯಾದ ಹೆಣ್ಣು ಮಕ್ಕಳು ಹಾಗೂ ಇತರರ ಕುಟುಂಬಗಳು ಒಂದೆಡೆ ಸೇರುವ ಅವಕಾಶವೇ ಇಲ್ಲದಾಗ, ಸೇವಾಲಾಲರು ಪ್ರತಿ ರಾಜ್ಯದಲ್ಲೂ ಒಂದೊಂದು ಪ್ರದೇಶಗಳನ್ನು ಗುರುತಿಸಿ, ಹಬ್ಬ ಹರಿದಿನಗಳಲ್ಲಿ ಎಲ್ಲರೂ ಅಲ್ಲಿ ಬಂದು ಸೇರಿ ಹಬ್ಬ ಆಚರಿಸಿ, ಸಂಭ್ರಮಿಸುವ, ಬಾಂಧ್ಯವ ಬೆಸೆಯುವ ಪ್ರೀತಿ ಹಂಚುವ, ಹೊಸ ಆಲೋಚನೆ ಕೊಟ್ಟ ಕಾಲ ಜ್ಞಾನಿಗಳು. ಅಂತಹ ಪ್ರದೇಶಗಳಲ್ಲಿ ರಾಜ್ಯದ ಸೂರಗೊಂಡನ ಕೊಪ್ಪ ಸಹ ಒಂದಾಗಿದೆ. ಇಂದಿಗೂ ವರ್ಷಕ್ಕೊಮ್ಮೆ ಲಕ್ಷಾಂತರ ಜನ ಇಲ್ಲಿ ಭೇಟಿ ನೀಡುತ್ತಿದ್ದಾರೆ. ಬಂಜಾರರ ಇತಿಹಾಸವನ್ನು ಕುಲಶಾಸ್ತ್ರಜ್ಞರು, ಇತಿಹಾಸಕಾರರಾದ ಟೀವರ್ನಿಯರ್, ಮಹಮ್ಮದ ಕಾಸಿಂ, ವಿಲಿಯಂ ಕ್ರೂಕ್, ಬುಕಾಸನ್, ಜಾನ್‌ಮಾಲ್ಕ, ಮ, ಎ, ಥೋವೆನ್ ಮುಂತಾದವರು ದಾಖಲಿಸಿದ್ದಾರೆ.
ಚಿತ್ರದುರ್ಗದ ಗೆಝಿಟೇರಿಯನ್‌ನಂತೆ ಈ ಜನಾಂಗವು, ‘ಕಾಕೇಶಾಯಡ್’ ಜನಾಂಗದ ಲಕ್ಷಣ ಹೊಂದಿದ ಗುಂಪಿಗೆ ಹೋಲುತ್ತಾರೆ. ಆದ್ದರಿಂದ ‘ಬಂಜಾರ’ ಅಥವಾ ‘ಲಂಬಾಣಿ’ ಎಂದು ಕರೆಯುವ ಈ ಜನಾಂಗವು ಮನುಕುಲಕ್ಕೆ ಸೇರುತ್ತಾರೆ ಎಂದು ಹೇಳಲಾಗಿದೆ. ಇನ್ನಷ್ಟು ಅಧ್ಯಯನಗಳು ಈ ಜನಾಂಗದ ಮೂಲಕವೇ ಮೂಲದ ಬಗ್ಗೆ ಬೆಳಕು ಚೆಲ್ಲಬೇಕಾಗಿದೆ.
‘ಬಂಜಾರ’ ಪದದ ನಿಷ್ಪತ್ತಿಯು ಸಂಸ್ಕೃತದ ‘ವಣಿಕ್’ ಹಾಗೂ ಹಿಂದಿಯ ‘ವನಚರ’ ಅಲ್ಲದೆ ಪರ್ಷಿಯಾ ಮೂಲದ ‘ಬಂಜಾರೂ’ ಅಲ್ಲದೆ ಪಂಜಾಬ್ ಮೂಲದ ‘ಬಹಜ್ನಾ’ ಪದ ಮೂಲದಿಂದ ಹುಟ್ಟಿರಬಹುದು. ಸಂಸ್ಕೃತದ ‘ವಾಣಿಜ್ಯಕಾರ’ ಪದವು ಇದರ ಮೂಲಕ್ಕೆ ಸನಿಹ ಇದ್ದಂತೆ ಇದೆ.
“ಕ್ರಿ.ಶ 1628ರಲ್ಲಿ ಬುರಾನ್‌ಪುರ ದಾರಿಯಲ್ಲಿ ಬಣ್ಣಜಾರರರನ್ನು ಕಂಡೆವು, ಒಂದು ತಾಂಡದಲ್ಲಿ 14,000 ಎತ್ತುಗಳ ಮೇಲೆ (Herdsmen) ಗೋಧಿ, ಅಕ್ಕಿ ಹೇರಿಕೊಂಡು ‘ಆಗ್ರಾ’ಕ್ಕೆ ಹೋಗುತ್ತಿದ್ದರು” ಎಂದು ಹೇಳಿದ್ದಾರೆ.
ಸೇವಾಲಾಲರು ಹೇಳುವಂತೆ, ಬಂಜಾರರಲ್ಲಿ ಹಸುವನ್ನು ‘ಹತಾದಿಯಾ’ ಎಂದು ಅಂದರೆ ಕೊಲ್ಲುವುದು ಮಹಾಪಾಪ. ಇದು ಶ್ರೀನಿವಾಸನ ಸೇವೆಗೆ ಮೀಸಲಾದ ಪ್ರಾಣಿ ಎಂದು ಭಾವಿಸಿ ಅದಕ್ಕೆ ಕೆಂಪುರೇಷ್ಮೆ, ಗೆಜ್ಜೆ, ಕಂಚಿನಸರಪಣಿ, ಕೊರಳು ಮತ್ತು ಪಾದಗಳ ಮೇಲೆ ಉಂಗುರ ಕವಡೆಸರ ಹಾಕಿ ಶೃಂಗರಿಸಿ ಅದನ್ನು ನಡೆಸಿಕೊಂಡು ಹೋಗಿ ಅದು ನಿಲ್ಲುವ/ ಮಲಗುವ ಜಾಗದಲ್ಲಿ ತಮ್ಮ ದಿನದ ವಸತಿ ಸ್ಥಳ ಗುರುತಿಸುತ್ತಿದ್ದರು.
1850ರಲ್ಲಿ ಅರಣ್ಯ ಕಾನೂನು ಹಾಗೂ 1871ರ ಕ್ರಿಮಿನಲ್ ಆಕ್ಟ್ ಬಂದಿತು. ಇದು ಈ ಸಮುದಾಯಕ್ಕೆ ಮಾರಕವಾವಾಯಿತು. ಇವರು 56 ದೇಶಗಳಿಗೂ ಜಿಪ್ಸಿ, ರೋಮಾನೋ, ಸಿಂಧಿ, ಕ್ಯಾರ್‌ವಾನ್‌ಗಳಾಗಿ ಚೆಲ್ಲಾಪಿಲ್ಲಿಯಾಗಿ, ಕ್ರಿ.ಶ 14ನೇ ಶತಮಾನಕ್ಕೆ ಬಿಡಾರಗಳನ್ನು ತೊರೆದು ಗುಂಪು ಗುಂಪಾಗಿ ಕಾಡಿನ ಇಕ್ಕೆಲಗಳಲ್ಲಿ ವನಚರರಾಗಿ ರೈತರಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಮಾರಿ ಬದುಕು ಕಾಣವಂತಾಯಿತು.1901 ರ ಸುಮಾರಿಗೆ ಉಳುಮೆಗೆ ತೆಗೆದುಕೊಂಡರು. ನಂತರ 1894ರ Land Acquisition Act ಜಾರಿಗೆ ಬಂತು.
ಮನುಕುಲಕ್ಕೆ ಸೇವಾಲಾಲರು ಬೋಧಿಸಿದ ಕೆಲವು ಹಿತ ವಚನಗಳು-ಉಪದೇಶಗಳು ಹೀಗಿವೆ:
3000ಕ್ಕೂ ಹೆಚ್ಚಿನ ಸಂಸ್ಥಾನಗಳಿಗೆ ಆಹಾರ ಸಾಮಗ್ರಿ, ಯುದ್ದ ಸಾಮಗ್ರಿಗಳ ಸಾಗಾಟ, ಸೋತ ರಾಜರ ವಜ್ರ ವೈಡೂರ್ಯ (1500 ರಿಂದ 2000) ಸಾಗಿಸುತ್ತಿದ್ದ ದಿನಗಳಲ್ಲಿ, ಸೇವಾಭಾಯರು ಸಂದೇಶ ನೀಡಿ ನಾವು ಹೆಚ್ಚು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು, ಪ್ರಾಮಾಣೀಕರಾಗಬೇಕು, ಎಲ್ಲರ ನಂಬಿಕೆಗೆ ಅರ್ಹರಾಗಬೇಕು, ಸುಳ್ಳುಹೇಳಬಾರದು, ಕಳ್ಳತನ ಮಾಡಬಾರದು. ವೆಚ್ಚಕ್ಕೆ ಕಡಿವಾಣ ಹಾಕಬೇಕು, ಮೌಢ್ಯಗಳಿಂದ ಹೊರಬರಬೇಕು ಎಂದು ಹೇಳಿ, ಪರ್ಯಾಯ ಕಾನೂನು ವ್ಯವಸ್ಥೆ (ಪಂಚಾಯತ) ರೂಪಿಸಿದ್ದರು. ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಹೇಳಿ ಸ್ವಾಭಿಮಾನ ಅರುಳುವಂತೆ ಮಾಡುತ್ತಿದ್ದರು.
- “ಅಪಣ್ ಬ್ರಹ್ಮೇರ್ ಲಕಣಿ ಲಕೇವಾಳ್ ವೇಣು”(ನಾವು ಬ್ರಹ್ಮನ ಬರಹ ಬರೆಯುವವರಾಗಬೇಕು).
ಸೀಕ್ ಸೀಕೋ ಸೀಕನ್ ಸೀಕಾವೋ ಸೀಕೋಜಕೋ ಸೇನಿಭಲಾನ್ ಆಂಗ್ ಚಾಲಚ್ “ಅಂದರೆ, ಶಿಕ್ಷಣ ಕಲಿಯಿರಿ, ಕಲಿತು ಕಲಿಸಿರಿ, ಕಲಿತವನು ಸರ್ವರನ್ನು ಒಗ್ಗೂಡಿಸಿ ಮುಂದೆ ಸಾಗುತ್ತಾನೆ” ಎಂದ ಈ ಮಾತು ಇಂದಿಗೂ ಹೆಚ್ಚು ಪ್ರಸ್ತುತವಾಗಿದೆ ಇದರ ಪಾಲನೆ ಆಗಬೇಕು. - ನಾನೇ ಎಂಬ ಅಹಂಬೇಡ, ಇನ್ನೊಬ್ಬರ ಜೀವತೆಗೆದು ಲಾಭ ಪಡೆಯಬೇಡ, ಮನುಷ್ಯ ಮನುಷ್ಯರಲ್ಲಿ ವ್ಯತ್ಯಾಸಬೇಡ.
- ಎಲ್ಲಾ ಧರ್ಮಗಳನ್ನು ಆಚರಿಸಿ, ತಮ್ಮ ವಿಶ್ವ ಮಾನವ ಧರ್ಮ ಎನಿಸಿದ ಪರಿಸರ ಆರಾಧನಾ ಧರ್ಮ ಪಾಲಿಸಿ. ಕಲ್ಲೆ (ಪರಿಸರ) ನಮಗೆ ದೇವರು ಎಂದರು.
- ಹೀಗಾಗಿ ಪ್ರಕೃತಿ ಆರಾಧಕ (Animists)ರಾಗಿ ಪ್ರತಿ ತಾಂಡ(ಬ್ರಿಂಜರೀಸ ಸಮಾಜ)ದಲ್ಲಿ ಒಬ್ಬ ಸರ್ವೋನ್ನತ ಅರ್ಚರನನ್ನು ಹೊಂದಿರುತ್ತದೆ, ದೇವಾಲಯದ ಹಾಗೂ ಸೇವಾಲಾಲರ ಗುಡಿಯ ಕಂಬವು ಸಹ ಬಿಳಿ(ಶಾಂತಿ)ಧ್ವಜ ಹೊಂದಿರುತ್ತದೆ.
- ದೇಶಸುತ್ತಿ, ಕೋಶ ಓದಿ ಜ್ಞಾನ ಸಂಪಾದಿಸಿರಿ. ಶ್ರಮ ಜೀವಿಗಳಾಗಿ, ದುಶ್ಚಟ ಬಿಡಿ, ಅಭಿಮಾನವಂತರಾಗಿ.
- ಅರಣ್ಯ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಲಿ.
- ಪರಿಸರದೊಂದಿಗೆ ಹೊಂದಿಕೊಂಡು ನಿಸರ್ಗಕ್ಕೆ ಪೂರಕ ಜೀವನವನ್ನು ನಡೆಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು.
- ಯಾರು ಯಾರೊಬ್ಬರ ವಿರುದ್ದವೂ ಕೆಟ್ಟದ್ದನ್ನು ಯಾವ ರೀತಿಯಿಂದಲೂ ಯೋಚಿಸಬಾರದು ಮತ್ತು ಮಾಡಬಾರದು.
- ಮಾನವನಾಗಿ ಹುಟ್ಟಿದ ಮೇಲೆ ಘನತೆಯಿಂದ ಬದುಕುವುದನ್ನು ಕಲಿಯಬೇಕು.
- ಸುಳ್ಳು ಹೇಳಬಾರದು, ಪ್ರಾಮಾಣಿಕವಾಗಿರಬೇಕು ಹಾಗೂ ಇತರರ ವಸ್ತುಗಳನ್ನು ಕದಿಯಬಾರದು.
- ಯಾರ ವಿರುದ್ದವೂ ಕೆಟ್ಟದ್ದನ್ನು ಆಡಬಾರದು ಮತ್ತು ಮಾಡಬಾರದು.
- ಹೆಣ್ಣುಮಕ್ಕಳನ್ನು ದೇವಿಸ್ವರೂಪರೆಂದು ತಿಳಿದು ಸಮಾನವಾಗಿ ಗೌರವಿಸಬೇಕು.
- ಸದಾ ಚಿಂತಿಸುತ್ತಾ ಇರಬಾರದು, ಆತ್ಮವಿಶ್ವಾಸದಿಂದ ಕೂಡಿದ ಜೀವನವನ್ನು ಜೀವಿಸಬೇಕು.
- ಭೋಗಭಾಗ್ಯಗಳನ್ನು ತ್ಯಜಿಸಬೇಕು. ಭಯರಹಿತವಾದ ಜೀವನವನ್ನು ಜೀವಿಸಬೇಕು.
- ಮೂಢನಂಬಿಕೆಗಳನ್ನು ತೊರೆದು ಜ್ಞಾನ ಸಂಪಾದನೆ ಮಾಡುತ್ತಾ ಬಾಳಬೇಕು ಎಂದು ಸೇವಾಲಾಲ ಅವರು ಹೇಳಿದ್ದಾರೆ.
- ನಾವು ನಮ್ಮ ಪ್ರಗತಿಗೆ ಉತ್ತಮ ಸಂಸ್ಕೃತಿ ಅಳವಡಿಸಿಕೊಳ್ಳಬೇಕು.
ಇಂತಹ ನೂರಾರು ಉದಾತ್ತ ಚಿಂತನೆಗಳ ಮೂಲಕ ಸಮ ಸಮಾಜದ ಸಾಕಾರಕ್ಕೆ ಮುನ್ನುಡಿಯನ್ನು ಬರೆದಿದ್ದ ಆ ಮಹಾತ್ಮರ ಆದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ತನ್ಮೂಲಕ ಸದಾ ಸತ್ಕರ್ಮಗಳನ್ನು ಮಾಡುತ್ತಾ ನಮ್ಮ ಜೀವನಗಳನ್ನು ಸಾರ್ಥಕಪಡಿಸಿಕೊಳ್ಳೋಣ.
ಬೃಹ್ಮಚಾರಿಯಾಗಿದ್ದ ಸೇವಾಲಾಲರು ಬಂಜಾರರಿಗೆ ಮಾತ್ರ ಸುಧಾಕಾರರಾಗಿರಲಿಲ್ಲ ಇತರರಿಗೂ ಸಹಾಯ ಮಾಡಿದ ಉದಾಹರಣೆಗಳು ಸಾಕಷ್ಟು ಇವೆ. ಉದಾ: ಒಮ್ಮೆ ರತ್ನ ವ್ಯಾಪಾರಿಗಳ ಹಡಗು ಬಿರುಗಾಳಿಗೆ ಸಿಲುಕಿ ಮುಳುಗುವಾಗ ಸಹಾಯ ಮಾಡಿರುವ ದಾಖಲೆ ಇದೆ.
ಇವರ ಕಥೆ-ಐತಿಹಾಸಿಕವಾಗಿ ಫೆಬ್ರವರಿ 15, 1739 ರಿಂದ ಡಿಸೆಂಬರ್ 1806 ರವರೆಗೆ ಬೆಳೆದುಬಂದಿದೆ. ಸಾವಿರಾರು ಲಾವಣೆಗಳಲ್ಲಿ, ಜಾನಪದ ಕಥಾನಕಗಳಲ್ಲಿ, ಹಾಡುಗಳಲ್ಲಿ, ಹರಿಕಥೆಗಳಲ್ಲಿ ಇವರ ಕಥೆ ಇರುವುದನ್ನು ಇಂದಿಗೂ ಕಾಣಬಹುದಾಗಿದೆ.
ಬಂಜಾರ ವಸ್ತ್ರ: ಬಂಜಾರರ ವಸ್ತ್ರ ಬಣ್ಣಬಣ್ಣದ ಕಸೂತಿ ಹೊಂದಿರುತ್ತದೆ.
ಲಂಗ (ಫೇಟ್ಯಾ). ಕುಪ್ಪಸ (ಕಾಂಚಳಿ)
ಬೆನ್ನಿಗೆ ರವಿಕೆ & ಕುಪ್ಪಸ (ಘೊಂಗಟೋ) ಬಳಸುತ್ತಾರೆ, ಕಾಸಿನ ಹಾರಗಳು, ಉಂಗುರ ಟೋಪಲಿ (ಹಣೆಬಟ್ಟು) ಇತ್ಯಾದಿ.
ಬಂಜಾರ ಭಾಷೆ: ಕನ್ನಡದ ಉಪಭಾಷೆಗಳೆಂದು ಕರೆಯುವ ತುಳು, ಕೊಂಕಣಿ, ಕೊಡವ, ಮುಂತಾದ ಭಾಷೆಗಳಂತೆ ತುಳು ಭಾಷೆಯಂತೆ ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ. ಇಲ್ಲಿ ಕನ್ನಡ, ತೆಲುಗು, ಅರಬ್ಬಿ, ಪಾರ್ಸಿ, ಒರಿಯಾ, ಮಾರವಾಡಿ, ಮರಾಠಿ, ಗುಜರಾತಿ, ಇಂಗ್ಲೀಷ್‌ನ ಭಿನ್ನ ಭಿನ್ನ ರೂಪಗಳು ಈ ಭಾಷೆಯಲ್ಲಿ ಕಾಣಬಹುದು.
ಬಂಜಾರರು ಲಂಬಾಣಿ ಭಾಷೆ (ಗೋರಬೋಲಿ) ಎಂಬ ಪ್ರತ್ಯೇಕ ಕನ್ನಡದ ಉಪ ಭಾಷೆಯಲ್ಲಿ ಬಹುಜನ ಮಾತನಾಡುತ್ತಾರೆ. ಇವರ ಭಾಷೆಗೆ ಮೂಲ ‘ಗೋರಬೋಲಿ’ ಎಂದು ಕರೆಯಲಾಗಿದೆ. ಇದನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಪ್ರಸಕ್ತ ಒತ್ತಾಯಿಸಲಾಗಿದೆ.
ಬಂಜಾರ ಸಮುದಾಯದವರು ತಮ್ಮದೇ ಆದ ಮಾತೃಭಾಷೆಯನ್ನು ಹೊಂದಿದ್ದು, ತಾವು ಮಾತಾಡುವ ಭಾಷೆಗೆ ‘ಲಮಾಣಿ’ ಭಾಷೆ, ‘ಲಂಬಾಡಿ. ಭಾಷೆ’ ಗೋರಬೋಲಿ ಭಾಷೆ ಎಂದು ಹೇಳುತ್ತಾರೆ. ಬಂಜಾರರ ಭಾಷೆಯು ಇಂಡೋ-ಆರ್ಯಾನ್ ವರ್ಗಕ್ಕೆ ಸೇರಿದ ಭಾಷೆಯಾಗಿದೆ. ಪ್ರತಿನಿತ್ಯ ಬಳಸುವ ಪದಗಳೆಲ್ಲ ಇಂಡೋ-ಆರ್ಯ್ನ್ ಪದಗಳೇ ಆಗಿವೆ. ಈ ಭಾಷಾ ವರ್ಗಕ್ಕೆ ಸೇರುವ ಹಿಂದಿ, ಸಂಸ್ಕೃತ ಭಾಷೆಗಳೇ ಇದಕ್ಕೆ ಪ್ರೇರಣೆಯಾಗಿವೆ. ಉತ್ತರ ಭಾಗದಿಂದ ಅಂದರೆ ಧೋಲಪುರದಿಂದ ದಕ್ಷಿಣಕ್ಕೆ ವಲಸೆ ಬಂದಾಗಿನಿಂದಲೇ ಅಲ್ಲಿಯ ಮಾರವಾಡಿ, ನಿಮ್ರಾನ್, ಮಾಲವಿಯ, ಪಂಜಾಬಿ, ಭಾಷೆಗಳು ಬಂಜಾರರ ಭಾಷೆಯ ಮೇಲೆ ಪ್ರಭಾವ ಬೀರುತ್ತಲೇ ಬಂದವು.
ಪ್ರಾದೇಶಿಕವಾಗಿ ಬಂಜಾರರನ್ನು ಉದಾಹರಣೆಗೆ: ಮರಾಠಿಯಲ್ಲಿ ‘ಬಂಜಾರಿ’ ಕನ್ನಡದಲ್ಲಿ ಲಂಬಾಣಿಯಾಗಿ, ‘ಬನ್ ಜಾರಾ’ ಗುಜರಾತಿನಲ್ಲಿ, ‘ವನಜಾರ’ ಉರ್ದುಭಾಷೆಯಲ್ಲಿ ಕರೆಯುತ್ತಾರೆ.
ಬಂಜಾರಧರ್ಮ:- ಸೇವಾಲಾಲರು ಹೆಚ್ಚಾಗಿ ಎಲ್ಲಾ ಧರ್ಮಗಳನ್ನು ಪರಿಪಾಲನೆ ಮಾಡುತ್ತಲೇ ತಮ್ಮದೇ ವಿಶ್ವಮಾನವ ಧರ್ಮಕ್ಕೆ ಹೋಲುವಂತ ಪರಿಸರ ಆರಾಧನಾ ಧರ್ಮ ಪ್ರತಿಪಾದಿಸಿದ್ದಾರೆ. ಅದು ನಿಸರ್ಗದ ಉಳಿವನ್ನು ಭದ್ರಪಡಿಸುವಧರ್ಮ. ಇವರು ಕನ್ನಡದ ಸಾಂಸ್ಕೃತಿಕ ನಾಯಕರಾದ ಕನಕದಾಸರು, ಮಾದೇಶ್ವರ, ಸಿದ್ದಪಾಜಿ, ಜುಂಜಪ್ಪ, ಎತ್ತಪ್ಪ, ಮಂಟೇಸ್ವಾಮಿಯವರ ಹಾಗೆ ಪವಾಡ ಪುರುಷ ಎನಿಸಿದ್ದಾರೆ. ಇವರು ದನ ಮೇಯಿಸುವುದು, ಕುದುರೆಕಾಯುವುದು, ವ್ಯಾಪಾರ, ವಲಸೆ ವೃತ್ತಿಯಿಂದ ಗೌರವಯುತ ಜೀವನ ಮಾಡಿ ಎಲ್ಲರಿಗೂ ಪ್ರೇರಣೆಯಾದವರು.
“ಸೇವಾಲಾಲರಿಗೆ ಕಾಡೆದೇಗುಲ, ಕಾಡಿನಗೆಣಸೆ ಹಿಟ್ಟು, ಕಾಡಿನ ಜೇನು ಸಾರು, ಕಾಡಿನ ಕಲ್ಲೆ ದೇವರು, ಕಾಡಿನ ಗುಹೆಗಳೆ ವಾಸದ ಅರಮನೆಯಾಗಿತ್ತು.”
ಪರ್ಶಿಯಾದ ಮಹಮ್ಮದ್ ಖಾಸಿಂ ಫಾರಿಸ್ತಾ 1589ರಲ್ಲಿ ಬಿಜಾಪುರಕ್ಕೆ ಬಂದಾಗ ಲಂಬಾಣಿಗರನ್ನು ಹಿಂದೂ ಬಂಜಾರರು ಎಂದು ದಾಖಲಿಸಿದ್ದನು. ನಂತರ 1829ರಲ್ಲಿ ಜಾನ್‌ಬ್ರಿಗ್ಸ್ ಮತ್ತು ಇದೇ ಫೆರಿಸ್ತಾ ರವರೆ ಇವರು ಹಿಂದೂಗಳಲ್ಲ ಎಂದು ಹಿಂದು ಪದ ತೆಗೆದು ಬರಿ ‘ಬಂಜಾರರು’ ಎಂದು ಬರೆದಿದ್ದಾರೆ. ಬಂಜಾರರಲ್ಲಿಯೇ ಧಾಡಿ (ಮುಸ್ಲಿಂ ಪರಂಪರೆ), ಸನಾರ (ವಿಶ್ವಕರ್ಮ), ನಾವಿ (ನಾಯಿಂದ), ಢಾಲಿಯ, ಸಿಗಾಡಿಯಾ, ಬಾಗೋರಾ, ಡಿಗೋರಾ,ಬಾಮಣೀಯ (ಬ್ರಾಹ್ಮಣ), ಮಾರು, ಜೋಗಿ, ಭಾಬ, ಚಾರಣ, ರೋಹಿದಾಸ, ಮರ್ಧು ಹೀಗೆ ನಾನ ಧರ್ಮಿಯರು ಈ ಸಮುದಾಯಲ್ಲಿದ್ದು ಒಗ್ಗಟ್ಟಿನಿಂದ ಒಂದಾಗಿ ತಮ್ಮ ತಮ್ಮ ಕೆಲಸ ನಿರ್ವಹಿಸಕೊಂಡು ಬಾಳುತ್ತಾರೆ. ಪ್ರಾದೇಶಿಕ ಭಾಷೆಯ ಮಿಶ್ರಣದೊಂದಿಗೆ ಮಿಶ್ರ ಸಮಾಜವಾದಿಯಾಗಿ ಮಾತನಾಡುತ್ತಾರೆ.
- ಸೇವಾಲಾಲರ ಪವಾಡದ ಹಾಡಿಗೆ ಒಂದು ಉದಾಹರಣೆ ಇಂತಿದೆ.
ಸೇವಾಲಾಲರ, ಭೀಮಾರೋ ಛೋರಾ/
ಮಾರೆ, ಗೋರುರೋ ನಿರ್ಯಾರಯೋ ತಾರಾ/
ಬಾಪು ಆಜೋರ ತಾರೆ ನಾಮೇರಿಘೊರ ನಂಗಾರರ //ಪ//
ಸೇವಾಲಾಲರ ಪ್ಯಾರೋ/ ಗುರುಮ ನಾಮಚಲಾರೋ
ಧ್ಯಾಮಕರು ನಾಮೇರೋ/ ಬಾಪು ಆಜೋ ಪೌರಾರೋ//
ಧೋಳೋ ಧ್ವಜಾರೋ ತಾರೆ/ ನಂಗ ರೇಮ ಝಲಾಖರೋ //1//
ಸಾರಾಂಶ:
ಸೇವಾಲಾಲನ್ನು ಭೀಮನ ಮಗನು
ನನ್ನ ಕುಲದ ತಾರೆಯೂ ಬೆಳಗಿತು
ತಂದೆ ಬಾರೋ ನಿನ್ನ ಹೆಸರು ಕುಲದ ನಗಾರಿಯೋ //ಪ//
ಪ್ರೀತಿಯ ಸೇವಾಲಾಲನು ಗುರುಗಳಲ್ಲೇ ಹೆಸರುವಾಸಿ,
ಧ್ಯಾನ ಮಾಡುವೆ ನಿನ್ನ ನಾಮ, ತಂದೆ ಬಾರೋ ಪೌರಾ ಊರಿನವನೇ
ಬಿಳಿ ಧ್ವಜವು ನಿನ್ನ ಊರಲ್ಲಿ ಹೊಳೆಯುತ್ತಿದೆ.
ಅಣ್ಣ ಬಣಜಾರ ಕುಲವೆ. ನಿನ್ನ ದಾರಿ ಕಾಯುವರೇ,
ತಂದೆ ಬಾ ಜಗದಲಿ ಹೆಸರುವಾಸಿಯಾಗುತ್ತಿರುವೆ.
- ಸೇವಾಲಾಲ್‌ರ ಓಲೈಸುವ ಹಾಡು
ನಿನಗೆ ಗಂಜಲದಿಂದ ಜಾಗ ಸಾರಿಸುತ್ತೇನೆ ಹೊರಗೆ ಬಾ
ನಿನಗೆ ಬೇವಿನ ಸೊಪ್ಪು ತರುಸುತ್ತೇನೆ ಹೊರಗೆ ಬಾ
ನಿನಗೆ ಚಂದ್ರಾಯುಧ ತಂದಿದ್ದೇನೆ ಹೊರಗೆ ಬಾ
ನಿನಗೆ ಛಾಟಿ ತರಿಸುತ್ತೇನೆ ಹೊರಗೆ ಬಾ
ನಿನಗಾಗಿ ಪೂಜಾರಿ ಕರೆಸುವೆ ಹೊರಗೆ ಬಾ
ನಿನಗೆ ವಾಜ (ತಾಳಿ), ಕಂಚಿನತಟ್ಟೆ ತರಿಸುವೆ ಹೊರಗೆ ಬಾ
ನಿನಗೆ ಲಿಂಬೆ ತರುಸುತ್ತೇನೆ ಹೊರಗೆ ಬಾ
ಹಾಗೆಯೇ ಕುಂಕುಮ, ಬಲಿಯ ಕುರಿ ತರಿಸಿದ್ದೇನೆ ಬಾ
ನಿನ್ನ ಪೂಜೆಗೆ ಗ್ರಾಮಸ್ಥರನ್ನು ಸೇರಿಸಿದ್ದೇನೆ ಹೊರಗೆ ಬಾ
ಜನ ನಿನ್ನ ಗುಡಿ ಪ್ರದಕ್ಷಿಣೆ ಹಾಕುತ್ತಿದ್ದಾರೆ ಹೊರಗೆ ಬಾ
ನನಗೂ ನಿನಗು ಯುದ್ಧವಾಗಲಿ ಹೊರಗೆ ಬಾ
ಮುಂತಾಗಿ ಹಾಡು ಸಾಗುತ್ತದೆ. - ಹಾತೇಮಾಯಿ ಕಾಟಿರೆ ಝಲನರ
ಗೋರೂರ ತಾಂಡೇನ ಜಾರೋ ಫೆರಿನರ
ತಾಂಡೋ ತಾಂಡೆಮ ಸೀಕವಾಡಿ ದೇನರ
ಅರ್ಥ:“ ಕೈಯಲ್ಲಿ ಝಂಡ ಹಿಡಿದು
ಬಂಜಾರರ ತಾಂಡಕ್ಕೆ ಹೋಗುವ
ತಾಂಡಾತಾಂಡಗಳಲ್ಲಿ ಶಾಲೆ ನೀಡಲು”
ಸೇವಾಲಾಲ ಜಲಮಲೀದೊ ಸಿಕೇರೊ ಅವತಾರ
ಜಲಮೋಚಿ ಅವತಾರಿರೆ ಗೋರವಟೇರ ಮಾಯಿ
ಚಕ್ರ ಪದ್ಮ ಸೋಳ ತಾರೇ ಹಾತೇಮಾಯಿ
ತೀನ ತಾಲೇಮ ಚಕ್ರ ಫೇರಾಯೊ, ಸೇವಲಾಲಾರ
ಅಂತರ ಜಮಿಮಾಳ ಜಪಗೋರ ಆಯಿವಾಳೊ||
ಅನುವಾದ: ಸೇವಾಲಾಲ ಸೀಖ ಧರ್ಮದಲ್ಲಿ ಜನಿಸಿರುವಿ. ಬಂಜಾರಗಳಲ್ಲಿ ಅವತಾರಿ ಪುರುಷ ನೀವು. ನಿಮ್ಮ ಕೈಯಲ್ಲಿ ಹದಿನಾರು ಚಕ್ರ ಪದ್ಮಗಳಿವೆ. ಮೂರು ಲೋಕದಲ್ಲಿ ಚಕ್ರ ತಿರುಗಿಸಿದೆ ಸೇವಾಲಾಲ. ಎಲ್ಲಿ ಅಡಗಿರುವಿಯೋ ನಿಮ್ಮ ಲೀಲೆ ಯಾರಿಗೂ ತಿಳಿಯದಾಗಿದೆ.(ಪಂಜಾಬ್‌ನ ಗೀತೆ).
- ವಡತೊ ಪಂಕಿಯಾರ ಛೇನಿ ಈ ದರಬಾರ
ನವ ಖಿಡಕಿರೋ ಬಣೊ ಪಿಂಜರೊ, ಕುಲಪ ವಡ ದರವಾಜ
ಆಯೇನ ಕಠೀಣ ಲಾಗೋ, ಜಾಯೇನ ದರವಾಜ ಸರಳ
ರೋಜ ಭೋಜನ ಖರಾಂವು, ಪರಾಂವು ಸಣಗಾರರ ಮಲಮಲ
ಅಂತರಫೂಲ ಲಗಾಂವು ಮಾನೇನು ಉಪಕಾರರ
ಕೋಟೆ ಭಂದಾಯೋ ಕಿಲ್ಲಾ ಭಂದಾಯೊ ಭಂದಾವ ಹಜಾರರ
ಸೇವಾಲಾಲಾ ಕೆಗೋಜೇನ ಭುಲಗೋ ಭಗವಾನರ ||
ಅನುವಾದ: ಹಾರಾಡುವ ಪಕ್ಷಿಗಳ ದರ್ಬಾರಲ್ಲ, ಒಂಬತ್ತು ಕಿಟಕಿಗಳಿಂದ ಕೂಡಿದ ಪಂಜರ: ಅದಕ್ಕೆ ಬೀಗ ಹಾಕಿದೆ. ಬರುವ ದಾರಿ ಸುಲಭವಲ್ಲ: ಹೋಗುವ ದಾರಿ ಸುಲಭ. ನಿತ್ಯವೂ ಒಳ್ಳೆಯ ಆಹಾರ-ಪಾನೀಯಗಳನ್ನು ಶರೀರಕ್ಕೆ ಶೃಂಗಾರ. ಮನಸ್ಸಿಗೆ ಆನಂದ ಹಲವಾರು ಕೋಟೆ ಕೊತ್ತಲಗಳನ್ನು ಕಟ್ಟಿಸಿದೆ. ಸೇವಾಲಾಲರು ಹೇಳಿದ ಹಿತನುಡಿಗಳನ್ನು ಮರೆತಿದ್ದಾರೆ ಭಗವಂತನೆ !
ಸೇವಾಲಾಲರನ್ನು ಮೋತಿವಾಳೋ (ಮುತ್ತಿನವನು), ಝಾರಿವಾಳೋ (ಜನಜಂಗುಳಿಯವ), ಧೋಳೋ ಘೋಡೆವಾಳೋ (ಬಿಳಿ ಕುದುರೆಯವನು), ಹೀಗೆ ಬಿಳಿ ಪಗಡಿಯ, ಬಿಳೀ ಝಂಡಾ, ಗರಸ್ಯಾ ಎಂಬ 7 ಎತ್ತಿನವನು, ವೀರ, ಲಗ್ಗಿವಾಳೋ ಅಂತೆಲ್ಲ ಕರೆಯಲಾಗುತ್ತದೆ.
ವಿದ್ವಾಂಸರು ಗುರುತಿಸುವಂತೆ ಕ್ರಿ.ಪೂ 3ನೇ ಶತಮಾನದಿಂದಲೇ ಬಂಜಾರರು ವ್ಯಾಪಾರ ವೃತ್ತಿ ಮಾಡುತ್ತಿದ್ದರು. ಈ ಜನಾಂಗವು ಕ್ರಿ.ಶ 324 ರಲ್ಲಿ ಮೌರ್ಯ ಚಕ್ರಾದಿಪತ್ಯದಲ್ಲಿ ಔರಂಗಜೇಬನ ಸಾಮ್ರಾಜ್ಯದಲ್ಲಿ ಹೈದರಬಾದಿನ ನಿಜಾಮರ ಆಳ್ವಿಕೆ, ಬ್ರಿಟಿಷರ ಆಳ್ವಿಕೆ ಅಲ್ಲದೆ 1799ರಲ್ಲಿ ಮೈಸೂರು ಸಂಸ್ಥಾನದಲ್ಲಿ ಸಾರಿಗೆ ಸೌಲಭ್ಯವಿಲ್ಲದಿದ್ದರಿಂದ ಇವರು ತಮ್ಮ ಎತ್ತು, ಕುದುರೆ, ಕೋಣಗಳ ಮೇಲೆ ಆಹಾರ ಧಾನ್ಯಗಳನ್ನು ಹೇರಿಕೊಂಡು ಸೈನಿಕರಿಗೆ ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದರು. ಜೊತೆಗೆ ದೊಂಬರಾಟದಂತಹ ಹಲವಾರು ಪ್ರದರ್ಶನದ ಕಲೆಗಳನ್ನು ಮೈಗೂಡಿಸಿಕೊಂಡಿದ್ದರು. ಅಲ್ಲದೆ ಪಶುಪಾಲನೆ ಮಾಡುತ್ತಿದ್ದರು ಎಂಬುದಕ್ಕೆ ಪುರಾವೆಗಳಿವೆ. ಸೇವಾಲಾಲರ ಮರಣದ ಕಾಲಕ್ಕೆ (1806) ಸುಮಾರಿಗೆ ವೀಠುಭುಕ್ಯಾ ಬಂಜಾರರ ದೈವಿ ಪುರುಷ, ಸಮುದಾಯವು ಆರ್ಥಿಕವಾಗಿ ಶೋಚನೀಯ ಸ್ಥಿತಿಯಲ್ಲಿದ್ದಾಗ, ಉಳ್ಳವರಿಂದ ಕಸಿದು ಹಸಿವಿನಿಂದ, ರೋಗಗಳಿಂದ ನರಳುವವರಿಗೆ ಕೊಟ್ಟು ಸಹಾಯ ಮಾಡುತ್ತಿದ್ದ, ಇವರೇ ಸೇವಾಲಾಲರು ಇರಬೇಕು ಎಂಬ ಅನುಮಾನ ಸಹ ಕೆಲವರು ವ್ಯಕ್ತ ಪಡಿಸುತ್ತಾರೆ. ಈ ಮಾತು ಒಪ್ಪಲಾಗದಿದ್ದರು ಹೆಚ್ಚಿನ ಸಂಶೋಧನೆಯ ಅಗತ್ಯ ಇದೆ.
ಕ್ರಿ.ಶ 1825ರಲ್ಲಿ ಭಾರತಕ್ಕೆ ಬಂದಿದ್ದ ‘ಬ್ರಿಷಫ್’ರಲ್ಲಿ ಒಬ್ಬರು ಉಲ್ಲೇಖಿಸಿರುವುದು ಹೀಗಿದೆ, “ತಾವು ಕೂಡ ಬಂಜಾರರ ಗುಂಪೊಂದು ಉಪ್ಪಿನ ವ್ಯಾಪಾರಿಗಳಾಗಿದ್ದು, ಬಿಲ್ಲು, ಬಾಣ, ಖಡ್ಗ, ಗುರಾಣಿಗಳೊಂದಿಗೆ ಸನ್ನದ್ದರಾಗಿರುತ್ತಿದ್ದರು. ಹಿರಿಯರು ಕಿರಿಯರು ಸಹ ಆಯುಧ ಧರಿಸುತ್ತಾರೆ ಎಂದು ವರ್ಣಿಸಲಾಗಿದೆ. ಇದನ್ನು ಕಂಡು ಭಯಪಟ್ಟ ಬ್ರಿಟಿಷರು ಬಹುಷಃ ಮುಂದೆ ಇವರನ್ನು ‘ಕ್ರಿಮಿನಲ್ ಆಕ್ಟ್’ಗೆ ಬಳಪಡಿಸಿದ್ದಕ್ಕೆ ಕಾರಣ ಇರಬಹುದು ಎನಿಸುತ್ತದೆ.
ಜಾಗತೀಕರಣದ ಪ್ರಭಾವದಲ್ಲಿ ರಸ್ತೆ, ಸಾರಿಗೆ, ರೈಲು ಬಂದು ತಮ್ಮ ವ್ಯಾಪಾರಕ್ಕೆ ಧಕ್ಕೆಯಾಗಿ ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದ ದುಃಸ್ಥಿತಿಯಲ್ಲಿ ಶ್ರೀಮಂತರ ಹೊಲ-ಗದ್ದೆಗಳಲ್ಲಿ ಆಹಾರ ಧಾನ್ಯವನ್ನು ಆಹಾರಕ್ಕಾಗಿ ಆಯ್ದುಕೊಂಡಾಗ ಇವರು ಅಪರಾಧಿ ಜನಾಂಗ ಎಂದು ಹಣೆಪಟ್ಟಿ ಕಟ್ಟಿ ಕ್ರಿಮಿನಲ್ ಟ್ರೈಬ್ಸ್ ಎಂಬ ಆಕ್ಟ್ ಅನ್ನು ಜಾರಿಗೆ ತಂದು ಶತಶತಮಾನಗಳ ಕಾಲ ಇವರನ್ನು ತುಳಿದು, ದಮನಕಾರಿ ಧೋರಣೆ ಅನುಸರಿಸಲಾಯಿತು. ಬರದ ಸಮಯದಲ್ಲಿ ಇವರ ಮೇಲೆ ಬ್ರಿಟಿಷರು ಹೇರಿದ ಒತ್ತಡದಿಂದ ಹೈದಾರಬಾದ್ ನಿಜಾಮರು 1871ರಲ್ಲಿ “ಲಂಬಾಡಾದಸ್ತೂರ್ ಉಲ್ ಅಮಲ್ “ ಎಂಬ ಕಾನೂನು ಜಾರಿಗೆ ತಂದು ಹಿಂಸಿಸಿತು.
ಈ ಎಲ್ಲಾ ಕಾರಣಗಳಿಂದಾಗಿ ಬಂಜಾರರು ಬಡತನ, ಅನಕ್ಷರತೆ, ಮೂಢ ನಂಬಿಕೆ, ಅಜ್ಞಾನ, ವಿಶಿಷ್ಟ ಆಚರಣೆ, ಹಬ್ಬ-ಹರಿದಿನ, ವಿಶಿಷ್ಟ ಭಾಷೆ, ನ್ಯಾಯ ಪಂಚಾಯಿತಿ, ಪೂಜಾ ವಿಧಿ, ಧರ್ಮ, ನೃತ್ಯ, ಗಾಯನ, ನುಡಿಗಟ್ಟು, ರಂಗೋಲಿ, ಹಚ್ಚೆ, ಕಸೂತಿಯಂತಹ ಶ್ರೇಷ್ಠ ಕಲೆಗಳನ್ನು ಮೈಗೂಡಿಸಿಕೊಂಡರು. ಹೊಟ್ಟೆಗೆ ಆಹಾರ ಇಲ್ಲದಿದ್ದರೂ ಸೌಂದರ್ಯದ ಖನಿಗಳಾದ ಇವರು ಸಾಂಸ್ಕೃತಿಕವಾಗಿ ಶ್ರೀಮಂತವಾಗಿಯೇ ಬದುಕುವುದನ್ನು ಕಲಿತರು. ಈಗಲೂ ನಮ್ಮ ಜನ ಒಂದು ಹೊತ್ತಿನ ಊಟಕ್ಕಾಗಿ ಹೆತ್ತ ಮಕ್ಕಳನ್ನೇ ಮಾರಿಕೊಂಡು ಜೀವನ ನಡೆಸುತ್ತಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಖ್ಯ ವಾಹಿನಿಯಿಂದ ಬಹುದೂರವೇ ಉಳಿದಿದ್ದಾರೆ. ಇಂದಿಗೂ ಜೀತ, ಕೂಲಿ, ವಲಸೆ-ಗೂಳೆ ಹೋಗುವುದು, ಮಕ್ಕಳನ್ನು ದುಡಿಸಿ ಬದುಕುವುದು, ಸರ್ಕಾರದ ಯಾವುದೇ ಯೋಜನೆ ಇವರಿಗೆ ತಲುಪದಿರುವುದು. ಅದು ಸ್ವಾತಂತ್ರ್ಯ ಬಂದೂ ಆರು ದಶಕಗಳೆ ಕಳೆದಿರುವಾಗ ಎಂದಾಗ, ನಮ್ಮನ್ನು ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯವಿದೆ.
ಲಂಬಾಣಿ ಜನರ ಮೂಲವನ್ನು ಕುರಿತು ಇತಿಹಾಸ ಮೌನ ತಾಳಿದೆ. ಅಲ್ಲಲ್ಲಿ ಸಿಗುವ ಕೆಲವು ಲಿಖಿತ ಹಾಗೂ ಮೌಖಿಕ ಆಧಾರಗಳ ಹಿನ್ನೆಲೆಯಲ್ಲಿ ಅವರ ಮೂಲವನ್ನು ಕಂಡುಕೊಳ್ಳಬೇಕಾಗಿದೆ. ಅನೇಕ ವಿದ್ವಾಂಸರು ಆ ದಿಶೆಯಲ್ಲಿ ಪ್ರಯತ್ನಿಸಿದ್ದಾರೆ.
ಇವರ ‘ಪ್ರದರ್ಶನ ಕಲೆ’ಗಳು ಅತ್ಯಂತ ಹಳೆ ರೂಪಗಳಾಗಿವೆ. ಇವರು “ನಡೆದಾಡುವ ಕಲಾವಿದರು”ಗಳಾಗಿದ್ದಾರೆ. ಲಂಬಾಣಿ ಸ್ತ್ರೀಯರು ರಸ್ತೆಯಲ್ಲಿ ಸಾಗುತ್ತಿದ್ದರೆ, ನೂರಾರು ಜನರನ್ನು ತಮಗರಿಸವಿಲ್ಲದೇ ತಮ್ಮತ್ತ ಆಕರ್ಷಿಸುವ ಸಹಜ (ಹುಟ್ಟು) ಪ್ರತಿಭೆಗಳಾಗಿದ್ದಾರೆ.
ರಾಜ್ಯವಾರು ಭಿನ್ನ ಹೆಸರು: ಉತ್ತರ ಭಾರತದಲ್ಲಿ ಬಂಜಾರ, ಬಂಜಾರಾ, ವನಜಾರಾ, ಬಂಜಾರಿ, ಬಂಜರಿ, ಬ್ರಂಜಾರಿ, ಬ್ರಜವಾಸಿ, ಗೋರ್, ಮಥುರಿ, ಢಾಡಿ, ರಬಾಬ್, ಸನಾರ್, ನಾನಿ, ಢಾಲಿಯಾ, ಶಿಂಗಾಡಿಯಾ, ಬಾಮಣಿಯಾ, ಬಗೋರಾ, ಡಿಗೋರಾ ಅಥವಾ ಜಗೋರ್, ಚರಣ, ಓಸರಿಯಾ, ಜೋಗಿ ಅಥವಾ ಭರವಾ, ಧನ್‌ಕೋಟ್ ಮುಂತಾಗಿ ಬಳಕೆಯಾಗಿದೆ.
ಕರ್ನಾಟಕದಲ್ಲಿ – ಲಮಾಣಿ, ಲಂಬಾಣಿ, ಲಂಬಾಡಾ, ಲಮಾಣ್ಯಾ, ಲವಾಣ್ಯಾ ಎಂದೂ, ಆಂಧ್ರ ಪ್ರದೇಶದಲ್ಲಿ- ಲಂಬಾಡಾ, ಲಂಬಾಡಿ, ಲಭಾನ್, ಲಂಬಾನ್, ಲಬಾನ, ಲಭನಿ, ಲಭಾಣ ಅಥವಾ ಲುಭಾನ, ಲಬಡಿ, ಉದೇನಿಯಾ, ಸುಗಾಲಿ ಎಂದೂ, ಕೇರಳದಲ್ಲಿ-ಗುಹರ್, ಗೌರಿಯಾ ಎಂದು, ರಾಜಸ್ಥಾನದಲ್ಲಿ-ಗವಾರಿಯಾ, ರಬಾಡಿ ಎಂದೂ, ಪಂಜಾಬದಲ್ಲಿ ಗವಾರಿಯಾ ಅಥವಾ ಗಮಾಲಿಯಾ, ಲಭಾನ, ಗವರೆ ಎಂದೂ, ಶಿಂಗಡಿ, ವನಚಾರಿ, ಕಂಗ ಅಥವಾ ಕಂಗಸಿಯಾ ಎಂದೂ, ದಿಲ್ಲಿ, ಹರಿಯಾಣ ಪ್ರಾಂತ್ಯಗಳಲ್ಲಿ ಗವಾರಾ, ಸಿರಿಕಿಬಾಂಡು, ಹೀಗೆ ಅನೇಕ ಹೆಸರುಗಳಿಂದ ಕರೆಯುವುದು ಕಂಡುಬರುತ್ತದೆ. ಇವು ಬಂಜಾರರ ಪ್ರಮುಖ ನಾಮಗಳು.
ಬಂಜಾರ ಸಾಂಸ್ಕೃತಿಕ ಹಾಗೂ ಚಾರಿತ್ರಿಕ ನಾಯಕರು ಮತ್ತು ಲಾವಣಿಗಳು: ರಾಠೋಡರು, ಚವ್ಹಾಣರು, ಗಹದ್ವಾಲರು, ಪರಮಾರರು ಮುಂತಾದ ಬಂಜಾರರ ಐತಿಹಾಸಿಕ ಅಥವಾ ಚಾರಿತ್ರಿಕ ನಾಯಕರ ಕುರಿತು ಜಗನಾಯಕನು (ಜಗನಿಕ) ಮುಂತಾದವರು ಸಾಕಷ್ಟು ಚಾರಣ ಗೀತೆಗಳನ್ನು ಬರೆದಿದ್ದಾರೆ.
ಡಾ. ಪಂಡಿತ ಕೆ ರಾಠೋಡ್ ಹಾಗೂ ಡಾ.ಎ.ಆರ್ ಗೋವಿಂದಸ್ವಾಮಿ ಅವರು ಹೇಳುವಂತೆ “13ನೇಯ ಶತಮಾನದ ಪೂರ್ವಾರ್ಧದಲ್ಲಿ ಇದ್ದರೆಂದು ಹೇಳಲಾದ ಅಲ್ಹಾ-ಊದರ್‌ರೆಂಬ ವೀರರ ಕತೆಯು ಚಾರಣ ಕವಿ ಜಗನಾಯಕನಿಂದ ರಚಿಸಲ್ಪಟ್ಟಿದೆ. ಮೂಲ ಕಾವ್ಯ ಲಿಖಿತ ರೂಪದಲ್ಲಿ ಸಿಗುವುದಿಲ್ಲ. ಸುಮಾರು 58 ವರ್ಷಗಳ ಹಿಂದೆ ಫರೂಕಾಬಾದಿನ ಕಲೆಕ್ಟರನಾಗಿದ್ದ ಚಾರ್ಲ್ಸ್ ಈಲಿಯಟ್ ಎಂಬುವನು ಈ ಕಾವ್ಯವನ್ನು ಸಂಗ್ರಹಿಸಿ ಮೊದಲ ಬಾರಿಗೆ ಪ್ರಕಟಿಸಿದ್ದಾರೆ. ಈ ಹಾಡೇ ಇಂದು ಬಂಜಾರ ಗಾಯಕರಲ್ಲಿ 153 ನುಡಿಗಳಲ್ಲಿ ಉಪಲಬ್ಧವಿದೆ. ಇಂಥದ್ದೆ ಐತಿಹಾಸಿಕ ಚಾರಣ ಗೀತೆಯ ಪ್ರಕಾರಕ್ಕೆ ಸೇರುವ ಬಂಜಾರರ ಲಾವಣಿಗಳೆಂದರೆ ಕ್ರಿ.ಶ. 1567 ರಲ್ಲಿ ರಾಣಾ ಉದಯಸಿಂಗ್ ರಾಠೋಡ ಮತ್ತು ಬಿಹಾರಿಮಲ್ಲ ಇಬ್ಬರೂ ಅಕ್ಬರನಿಗೆ ಸೋತು ಶರಣಾಗತರಾದ ಮೇಲೆ ಮೇವಾರದ ಕೋಟೆಯ ರಕ್ಷಣೆ ಜೈಮಲ್ಲ ಮತ್ತು ಘಟ್ಟಾ ಅವರು ವಹಿಸಿಕೊಂಡಿರುವ ಇವರು ಅಕ್ಬರನ ಜೊತೆ ತೀವ್ರವಾದ ಹೋರಾಟ ಮಾಡಿದರು. ಇಂತಹ ಶ್ರೇಷ್ಠ ವೀರರ ಹಾಗೂ ಸೇವಾಲಾಲರ ಕುರಿತ ಲಾವಣಿ 26 ನುಡಿಗಳಲ್ಲಿ ಲಭ್ಯ ಇವೆ. ಹಾಗೆ ಲಾಲಿಯಾ ರಜಪೂತನೆಂಬ ವೀರನ ಕುರಿತ 57 ನುಡಿಗಳ ಹಾಡುಗಳು ದೊರಕಿವೆ. ನೂರಾರು ಬಂಜಾರ ಗೀತೆಗಳನ್ನು ಡಾ.ಎ.ಆರ್ ಗೋವಿಂದಸ್ವಾಮಿ ಸಹ ಸಂಗ್ರಹಿಸಿ ಕೊಟ್ಟಿದ್ದಾರೆ.
ಇದೇ ರೀತಿ ಮಂಟೆಸ್ವಾಮಿ, ಮಲೆ ಮಾದೇಶ್ವರ, ಸಿದ್ದಾಪ್ಪಾಜಿ, ಜುಂಜಪ್ಪ, ಚೌಡಿಕೆ ಎಲ್ಲಮ್ಮ, ಮೈಲಾರಲಿಂಗ ಮೊದಲಾದ ಜಾನಪದ ಮಹಾಕಾವ್ಯಗಳು ಇವೆ, ಇದೇ ರೀತಿ ಬುಡಕಟ್ಟು ಜನಾಂಗಗಳಲ್ಲೂ ಕನ್ನಡದ ಜನಪದ “ಮಾರಿಹಬ್ಬವೆಂದರೆ ಬಲಿಕೊಡುವುದು ಇದೆ. ಮಾಂಸಹಾರಿಗಳಾದ ಬಂಜಾರರು ದೀಪಾವಳಿ, ಹೋಳಿ ಹೆಚ್ಚಾಗಿ ಆಚರಿಸುತ್ತಾ ಬಂದಿದ್ದಾರೆ.
ಸೇವಾಲಾಲರಂತೆ ತಿರುಪತಿ ದೇಗುಲದ ಈಶಾನ್ಯ ದಿಕ್ಕಿನಲ್ಲಿ ಹಾತಿರಾಂ ಭಾವಾಜಿಯವರ ಮಠ ಇದ್ದು, ಇವರು ವೆಂಕಟೇಶನಿಗೆ ಜೊತೆಗಾರರಾಗಿದ್ದರು. ಹಾತಿರಾಂ ಭಾವಾಜಿಯವರು ಬಂಜಾರರಲ್ಲಿ ಮತ್ತೊಬ್ಬ ಧಾರ್ಮಿಕ ಪರುಷರು. ಹೀಗೆ ಸಾಮಸಂಗಭುಕ್ಯ, ಲಚ್ಛಭೂಕ್ಯಾ, ರಣಜತ ಭೂಕ್ಯಾ ಇದ್ದಾರೆ.
ಸೇವಾಲಾಲರ ಜಯಂತಿ ಸಂಧರ್ಭದಲ್ಲಿ ಪ್ರಮುಖ ಬೇಡಿಕೆಗಳು ಇಂತಿವೆ.
- ಸೇವಾಲಾಲರ ಜಯಂತಿಯ ಸಂಧರ್ಭದಲ್ಲಿ ದೇಶದಲ್ಲಿ ಬಹುಜನ ಆಡುವ ಬಂಜಾರ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕಾದ ಅಗತ್ಯ ಇದೆ.
- ಬಂಜಾರ ತಾಂಡಗಳಿಗೆ ಮೂಲ ಭೂತ ಸೌಕರ್ಯಗಳಾದ ಬಗರ್ ಹುಕುಂ ಜಮೀನು ಸಾಗುವಳಿ, ವಾಸಿಸುವನೆ ಒಡೆಯ ಕಾನೂನು ಜಾರಿ (ಉಚಿತ ಮನೆಗಳು), ಶುದ್ದ ಕುಡಿಯುವ ನೀರು, ಅಂಗನವಾಡಿ ಕೇಂದ್ರಗಳು, ಬ್ಯಾಂಕ್ ವ್ಯವಸ್ಥೆ ವೈದ್ಯಕೀಯ ಸೇವೆ (ಮಾನವ ಹಾಗೂ ಜಾನುವಾರುಗಳಿಗೆ), ಗ್ರಂಥಾಲಯ, ಸೈಬರ್ ಸೆಂಟರ್, (ಇ-ಕೇಂದ್ರ), ಬೊರ್‌ವೆಲ್ ಸೌಕರ್ಯ, ಹಾಲಿನ ಡೈರಿ ವ್ಯವಸ್ಥೆ, ಸಹಕಾರ ಸಂಘಗಳ ಚಾಲನೆ, ಕಸೂತಿಕೇಂದ್ರ ಉನ್ನತ ಶಿಕ್ಷಣ ತರಬೇತಿ ಕೇಂದ್ರ, ಸಾಂಸ್ಕೃತಿಕ ತರಬೇತಿ ಕೇಂದ್ರ, ಕನಿಷ್ಠವೇತನ ಸೇರಿದಂತೆ ಜನರಿಗೆ ಬೇಕಾದ ಸಕಲ ಕನಿಷ್ಠ ಸೌಲಭ್ಯ ಒದಗಿಸಬೇಕೆಂದು ಸಮಸ್ತ ಬಂಜಾರರ ಪರವಾಗಿ ಕೋರುತ್ತೇನೆ. ಅಲ್ಲದೆ ಸ್ಪೃಶ್ಯ-ಅಸ್ಪೃಶ್ಯ ದೊಂಬಿಯಲ್ಲಿ ಕಳೆದು ಹೋಗಬಹುದಾದ ಈ ಬಡ ಬಂಜಾರರ ಮೀಸಲಾತಿಗೆ ಚ್ಯುತಿ ಬಾರದಿರಲಿ ಎಂಬ ಆಶಯದೊಂದಿಗೆ ಸೇವಾಲಾಲರ ಜಯಂತಿಯನ್ನು ಆಚರಿಸೋಣ.
ಜೈ ಸೇವಾಲಾಲ್, ಜೈ ಕರ್ನಾಟಕ.
- ಡಾ.ಗೋವಿಂದಸ್ವಾಮಿ ಎ.ಆರ್., ಸಂಸ್ಕೃತಿ ಚಿಂತಕರು




