ನಿತೀಶ್ ಕುಮಾರ್ ಅವರಿಗೆ ಅವಕಾಶವಾದಿ ರಾಜಕಾರಣಕ್ಕೆ ದೊಡ್ಡ ಪ್ರಶಸ್ತಿ ನೀಡಿ

2 years ago

ನಿತೀಶ್‌ಕುಮಾರ್‌ರವರಿಗೆ ಅವಕಾಶವಾದಿ ರಾಜಕಾರಣಕ್ಕಾಗಿ ದೇಶದ ಅತ್ಯುನ್ನತವಾದ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕಾಗಿದೆ.

ಬಿಹಾರದ ಮುಖ್ಯಮಂತ್ರಿ ಜೆ.ಡಿ.ಯು ನಾಯಕ ತಮ್ಮ ರಾಜಕೀಯ ಜೀವನದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಶಾಶ್ವತವಾಗಿ ಅಂಟಿಕೊಂಡಿರಬೇಕೆಂಬ ಮಹಾದಾಸೆಯಿಂದ ಪದೇಪದೇ ಒಕ್ಕೂಟವನ್ನು ಬದಲಾಯಿಸುವ ಪರಂಪರೆಯನ್ನು ಹುಟ್ಟುಹಾಕಿದ್ದಾರೆ. ಲೋಕನಾಯಕ ಜಯಪ್ರಕಾಶ್ ನಾರಾಯಣರ ಕ್ರಾಂತಿಯ ಹಿನ್ನೆಲೆಯಲ್ಲಿ ಬಂದವರು ಎಂದು ಹೇಳಿಕೊಳ್ಳಲು ಇವರಿಗೆ ನಾಚಿಕೆಯಾಗಬೇಕು. ಅವಕಾಶವಾದ ರಾಜಕಾರಣ ಇವರ ಹುಟ್ಟು ಗುಣವಾಗಿದೆ. ಕಳೆದ ಎರಡು ದಶಕದ ಅವಧಿಯಲ್ಲಿ ಅದೆಷ್ಟೋ ಬಾರಿ ಬಿ.ಜೆ.ಪಿ. ನೇತೃತ್ವದ ಎನ್.ಡಿ.ಎ. ಸೇರುವುದು ಮತ್ತೆ ಅಲ್ಲಿಂದ ಹೊರಬಂದು ಮತ್ತೊಂದು ಒಕ್ಕೂಟವನ್ನು ಸೇರಿ ಸರ್ಕಾರ ರಚಿಸುವುದು ಇವರು ಮಾತ್ರ ಮುಖ್ಯಮಂತ್ರಿಯಾಗಿರಬೇಕು, ಇವರ ಬೆಂಬಲಿಗ ಪಕ್ಷಗಳಾಗಿ ಪ್ರತಿಯೊಂದು ಸಂದರ್ಭಕ್ಕೆ ಬಿ.ಜೆ.ಪಿಯನ್ನು ಒಂದು ಬಾರಿಶಮತ್ತೊಂದು ಬಾರಿ ರಾಷ್ಟ್ರೀಯ ಲೋಕದಳ ಇವುಗಳನ್ನು ಆಶ್ರಯಿಸುವುದು ಇವರಿಗೆ ಸರ್ವೇಸಾಮಾನ್ಯವಾಗಿದೆ.

ರಾಜಕಾರಣದಲ್ಲಿ ಮೌಲ್ಯಗಳು ಎಂಬ ಪದಕ್ಕೆ ಇವರ ನಡವಳಿಕೆಯಿಂದ ಅರ್ಥವೇ ಕಳೆದುಕೊಂಡಿದೆ. ಅವಕಾಶವಾದ ರಾಜಕಾರಣ ಯಾವ ರೀತಿ ಮಾಡಬೇಕು ಎಂಬ ವಿಚಾರದಲ್ಲಿ ಇವರು ಒಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಇವರೇ ಅದಕ್ಕೆ ಕುಲಪತಿಗಳಾಗಿ ಅವಕಾಶವಾದಿಗಳಿಗೆ ಮಾರ್ಗದರ್ಶಕರಾಗಲಿ.

ದೇಶದಲ್ಲಿ ಅನೇಕ ವಿಚಾರಗಳಿಗೆ ಪ್ರಶಸ್ತಿ ಕೊಡುವ ಪದ್ಧತಿ ಇದೆ. ಮೊದಲ ಬಾರಿಗೆ ನಮ್ಮ ದೇಶದಲ್ಲಿ ಅವಕಾಶವಾದಿ ರಾಜಕಾರಣಕ್ಕೆ ಯಾವುದಾದರೂ ಒಂದು ದೊಡ್ಡ ಪ್ರಶಸ್ತಿಯನ್ನು ನೀಡಿ ಬಿ.ಜೆ.ಪಿ. ಸರ್ಕಾರ ಸನ್ಮಾನಿಸಲಿ. ನಿತೀಶ್ ಕುಮಾ‌ರ್ ಅವರಿಗಂತೂ ನೈತಿಕತೆ ಪದದ ಅರ್ಥವೇ ತಿಳಿಯುತ್ತಿಲ್ಲ. ಬಿ.ಜೆ.ಪಿರವರು ಅಧಿಕಾರಕ್ಕಾಗಿ ಎಷ್ಟೊಂದು ಹತಾಶಾರಾಗಿದ್ದಾರೆ ಎಂದರೆ ಪದೇ ಪದೇ ನಿತೀಶ್ ಕುಮಾರ್‌ರವರು ಇವರನ್ನು ಬಿಟ್ಟು ಹೋದರೂ ಸಹ ಪ್ರತಿಯೊಂದು ಬಾರಿ ಮರಳಿ ಬಂದಾಗಲೂ ಅವರಿಗೆ ರತ್ನಗಂಬಳಿಯನ್ನಾಕಿ ಸ್ವಾಗತ ಮಾಡುವ ಮಟ್ಟಕ್ಕೆ ಇವರ ಅಧಿಕಾರದ ದಾಹ ಮುಟ್ಟಿದೆ.

ಬಿಹಾರದ ಜನರಿಗೆ ಸ್ವಾಭಿಮಾನ ಎನ್ನುವುದು ಇದ್ದಲ್ಲಿ, ಕರ್ಪೂರಿ ತಾಕೂರ್‌ರವರ ಶ್ರೇಷ್ಠ ರಾಜಕಾರಣದ ಗುಣ ಆ ಮಣ್ಣಿನಲ್ಲಿ ಉಳಿದುಕೊಂಡಿದ್ದರೆ, ಲೋಕನಾಯಕ ಜಯಪ್ರಕಾಶ್ ನಾರಾಯಣ ರವರು ಹುಟ್ಟು ಹಾಕಿದ ಸಂಪೂರ್ಣ ಕ್ರಾಂತಿಯ ನೆನಪುಗಳಿದ್ದರೆ, ಬುದ್ಧನಂತಹ ಮಹಾನ್ ಚೇತನದ ಅರಿವು ಇದ್ದಲ್ಲಿ ನಿತೀಶ್‌ ಕುಮಾರ್‌ರವರನ್ನು ಮುಂದಿನ ಚುನಾವಣೆಯಲ್ಲಿ ಠೇವಣಿಯನ್ನು ಕಳೆದು ಮನೆಗೆ ಕಳುಹಿಸುವುದರ ಮೂಲಕ ಬಿಹಾರದ ಜನತೆ ಅಧಿಕಾರ ದಾಹಿಯ ಅವಕಾಶವಾದ ಸಂಸ್ಕೃತಿಯ ನೀಚತನವನ್ನು ಒಪ್ಪುವುದಿಲ್ಲ ಎಂಬುದನ್ನು ರಾಷ್ಟ್ರದ ಜನರಿಗೆ ಸಾರಬೇಕು.

ನಿತೀಶ್ ಕುಮಾರ್ ಹೋದ ಮಾತ್ರಕ್ಕೆ ವಿರೋಧ ಪಕ್ಷದ ಒಕ್ಕೂಟ ಏನೂ ಆಗುವುದಿಲ್ಲ. ನಿತೀಶ್ ಕುಮಾರ್ ಪ್ರಭಾವ ಬಿಹಾರದಲ್ಲಿ ಹೊರತು ಪಡಿಸಿ ಬೇರೆ ಯಾವ ರಾಜ್ಯದಲ್ಲೂ ಕವಡೆ ಕಾಸಿನಷ್ಟು ಬೀರುವುದಿಲ್ಲ. ಮಾಧ್ಯಮದವರ ದೃಷ್ಟಿಯಲ್ಲಿ ನಿತೀಶ್‌ ಕುಮಾರ್‌ರವರ ನಿರ್ಗಮನ ದೊಡ್ಡ ಸುದ್ದಿಯಾಗಿರಬಹುದು. ಆದರೆ ಮುಂದಿನ ಚುನಾವಣೆಯಲ್ಲಿ ಇವರ ನಿರ್ಗಮನದಿಂದ ಯಾವ ನಕರಾತ್ಮಕ ಪರಿಣಾಮವು ವಿರೋಧ ಪಕ್ಷದ ಒಕ್ಕೂಟದ ಮೇಲೆ ಬೀರುವುದಿಲ್ಲ. ಇಂತಹ ಆಯಾರಾಮ್, ಗಯಾರಾಮ್‌ಗಳು ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯಗಳಲ್ಲೂ ಇದ್ದೇ ಇರುತ್ತಾರೆ.

– ಕೆ.ಎಸ್. ನಾಗರಾಜ್, ಬೆಂಗಳೂರು

Leave a Reply