ಸಮಾಜವಾದಿ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಶಸ್ತಿ

2 years ago

ಸಮಾಜವಾದಿ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ.

ರಾಮಮನೋಹರ ಲೋಹಿಯಾ ಅವರ ನಂತರ ಈ ದೇಶ ಕಂಡ  ಸಾಮಾಜಿಕ ಬದ್ಧತೆಯ ಸಮಾಜವಾದಿಗಳಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್, ಮಧು ದಂಡವತೆ ಹಾಗೂ ಮಧುಲಿಮೆಯೆ ಮುಖ್ಯರಾದವರು. ಇವರ ಜೊತೆಗೆ ನಮ್ಮ ಕರ್ನಾಟಕದ ಶಾಂತವೇರಿ ಗೋಪಾಲಗೌಡರನ್ನು ಸಹ ಸೇರಿಸಬಹುದು.

ಆಶ್ಚರ್ಯಕರ ವಿಷಯವೆಂದರೆ, ಈ ತಿಂಗಳ ಕೊನೆಯ ವಾರವು ಮಧು ದಂಡವತೆ ಮತ್ತು ಕರ್ಪೂರಿ ಠಾಕೂರ್ ಅವರ ನೂರನೇ ವರ್ಷದ ವಾರವಾಗಿದೆ. ಕೇಂದ್ರ ಸರ್ಕಾರ ಈ ದಿನ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಘೋಷಿಸಿದೆ. ಇದು ಒಳ್ಳೆಯ ನಿರ್ಧಾರ.

ಕಳೆದ ವಾರ ಬಳ್ಳಾರಿಯಲ್ಲಿ ಲೋಹಿಯಾ ಪ್ರಕಾಶನದ ಚೆನ್ನಬಸವಣ್ಣ ಮೂವರು ಮಹಾನೀಯರ  ಕೃತಿಗಳನ್ನು ಪ್ರಕಟ ಮಾಡಿ ಬಿಡುಗಡೆ ಮಾಡಿದರು.

ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನನ್ನ ಮೂರು ದಶಕದ ಮಿತ್ರರಾದ ಡಾ.ಎಲ್. ಹನುಮಂತಯ್ಯನವರು ಮಾತನಾಡುತ್ತಾ ಕರ್ಪೂರಿ ಠಾಕೂರ್ ಅವರ ಸಾರ್ವಜನಿಕ ಬದುಕು ಮತ್ತು ಸರಳತೆ ಬಗ್ಗೆ ಒಂದು ಮಾತು ಹೇಳಿದರು.

ಹನುಮಂಯ್ಯ ಮತ್ತು ಠಾಕೂರ್ ಅವರ ಪುತ್ರ ರಾಮನಾಥ ಠಾಕೂರ್ ಇಬ್ಬರೂ ರಾಜ್ಯ ಸಭಾ ಸದಸ್ಯರು ಮತ್ತು  ಆತ್ಮೀಯ ಗೆಳೆಯರು.

ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿದ್ದ ಕರ್ಪೂರಿ ಠಾಕೂರ್ ಅಧಿಕಾರದಿಂದ ಇಳಿದ ನಂತರ ತಮ್ಮ ಗುಡಿಸಿಲಿನಂತಹ ಮನೆಯನ್ನು ನವೀಕರಣ ಮಾಡಿಸಲು ಗುತ್ತಿಗೆದಾರನನ್ನು ಕೇಳಿದರಂತೆ. ಎಷ್ಟು ಹಣ ಇಟ್ಟಿದ್ದೀರಿ ಎಂದು ಗುತ್ತಿಗೆದಾರ ಕೇಳಿದ್ದಕ್ಕೆ ತಾವು ಉಳಿಸಿದ್ದ 26 ಸಾವಿರ ರೂಪಾಯಿಗಳನ್ನು ಜೇಬಿನಿಂದ ತೆಗೆದುಕೊಟ್ಟರಂತೆ. ಗುತ್ತಿಗೆದಾರ, ಸಾಹೇಬ್ ಈ ಹಣದಲ್ಲಿ ಶೌಚಾಲಯ ಮಾತ್ರ ಮಾಡಬಹುದು ಎಂದು ನಕ್ಕನಂತೆ.

ಠಾಕೂರ್, ದಂಡವತೆ, ಲಿಮೆಯೆ, ಲೋಹಿಯಾ, ಶಾಂತವೇರಿ ಇಂತಹ ಮಹನೀಯರು ಬದುಕಿದ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ಬದುಕು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಬೇಕಿದೆ.

ಈ ಪ್ರಶಸ್ತಿ ಸಮಾಜವಾದಿ ಸಿದ್ಧಾಂತಕ್ಕೆ ದೊರೆತ ಗೌರವ.

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply