ಸುಭಾಷ್ ಚಂದ್ರ ಬೋಸ್ ಅವರ ರಾಷ್ಟ್ರೀಯತೆ ಬಲಪಂಥೀಯ ರಾಷ್ಟ್ರೀಯತೆಯಾಗಿರಲಿಲ್ಲ

2 years ago

ಸಂಘ ಪರಿವಾರದ ಮೊದಲ ತಲೆಮಾರು, ವೈಚಾರಿಕವಾಗಿ ಗಾಂಧಿ ಮತ್ತು ನೆಹರೂ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದ ಬೋಸರನ್ನೇ ತಮ್ಮ ಪಾಳಯಕ್ಕೆ ಸೆಳೆಯಲು ಯತ್ನಿಸಿತ್ತು. ಆದರೆ ಬೋಸ್, ಅವರಿಂದ ದೂರ ಉಳಿದಿದ್ದರು. ಮುಂದೆ, ಅವರ ಆಕಸ್ಮಿಕ ಸಾವಿನ ನಂತರ ಆವರೆಗೆ ಸಾಧಿಸಲಾಗದಿದ್ದ ಕೆಲಸವನ್ನು ಪರಿವಾರ ಒಂದೇ ಏಟಿಗೆ ನಡೆಸಿಬಿಟ್ಟಿತು. ವಿಮಾನ ಅಪಘಾತವನ್ನು ‘ಪಿತೂರಿ’ ಎಂದು ಕರೆದು, ನೆಹರೂವನ್ನು ಅದರ ಹಿಂದೆ ಇರಿಸಿತು. ಗಾಂಧಿ ಮತ್ತು ನೆಹರೂಗೆ ಬೋಸ್ ಕುರಿತು ಇದ್ದ ಭಿನ್ನಾಭಿಪ್ರಾಯವನ್ನೇ ವೈಷಮ್ಯವೆಂದು ಬಿಂಬಿಸಿ, ತನ್ನ ಪಿತೂರಿ ಸಿದ್ಧಾಂತಕ್ಕೆ ರೆಕ್ಕೆ ಹಚ್ಚಿತು. ಬೋಸ್ ಕುರಿತು ಪುಸ್ತಕಗಳನ್ನು ಮುದ್ರಿಸಿತು. ದುಂಡು ಕನ್ನಡಕದ ಸುಭಾಷರಿಗೊಂದು ತಿಲಕವಿಟ್ಟು, ಅವರನ್ನು ಅಧಿಕೃತವಾಗಿ ‘ಹಿಂದೂ ವೀರ’ನಾಗಿ ಮಾಡಿಬಿಟ್ಟಿತು.

ಈ ಅವಧಿಯಲ್ಲಿ ಕಮ್ಯುನಿಸ್ಟರು “ಸುಭಾಶ್ ಬಾಬು ಹಿಟ್ಲರ್ ಸಹಾಯ ಪಡೆಯಲು ಹೋಗಿದ್ದರು” ಅನ್ನುವ ಆಕ್ಷೇಪ ಮುಂದಿಟ್ಟು ಅವರನ್ನು ದೂರವಿರಿಸಿದ್ದರು. ಇತ್ತ ಕಾಂಗ್ರೆಸ್ಸಿಗರೂ ನೆಹರೂ ಮನೆತನದ ಭಕ್ತಿಯಲ್ಲಿ ಮೈಮರೆತು, ಪರಿವಾರ ಹೆಣೆದಿದ್ದ ವೈಷಮ್ಯದ ಕಥೆಯನ್ನು ನೆಚ್ಚಿಕೊಂಡು ಅವರನ್ನು ದೂರವಿಟ್ಟಿದ್ದರು. ವಾಸ್ತವದಲ್ಲಿ ಬೋಸ್ ರಷ್ಯಾಕ್ಕೆ ತೆರಳಿ ಕಮ್ಯುನಿಸ್ಟರ ಸಹಾಯ ಪಡೆಯುವ ಉದ್ದೇಶ ಹೊಂದಿದ್ದುದು ಮಾತ್ರವಲ್ಲದೆ, ಬ್ರಿಟಿಷರನ್ನು ಮಣಿಸಲು ಅವರೇ ಸೂಕ್ತ ಎಂದು ಬಲವಾಗಿ ನಂಬಿದ್ದರು. ಈ ಅಂಶ ಎಡಪಂಥೀಯರಿಗೆ ಮನದಟ್ಟಾಗಿದ್ದು ತೀರಾ ಇತ್ತೀಚೆಗೆ. ಹತ್ತು – ಹನ್ನೆರಡು ವರ್ಷಗಳ ಹಿಂದೆ ಬುದ್ಧದೇಬ್ ಭಟ್ಟಾಚಾರ್ಯ, “ನಾವು ಸುಭಾಶರನ್ನು ದೂರವಿಟ್ಟು ತಪ್ಪು ಮಾಡಿದೆವು” ಎಂದು ಹೇಳಿಕೆ ನೀಡಿದ್ದರು.

ಕಾಂಗ್ರೆಸ್’ನವರದ್ದೂ ಇದೇ ಕಥೆ. ಬೋಸ್, ಎಲ್ಲ ಭಿನ್ನಾಭಿಪ್ರಾಯದ ನಡುವೆಯೂ ಗಾಂಧಿ ಮತ್ತು ನೆಹರೂ ಜೊತೆ ಉತ್ತಮ ಸಂಬಂಧ ಹೊಂದಿದ್ದರು. ಎಷ್ಟೆಂದರೆ, ಆಜಾದ್ ಹಿಂದ್ ಫೌಜ್’ನ ಎರಡು ನೌಕೆಗಳಿಗೆ ಗಾಂಧಿ ಮತ್ತು ನೆಹರೂ ಹೆಸರನ್ನು ಇರಿಸುವಷ್ಟು ಪ್ರಾಮಾಣಿಕವಾಗಿತ್ತು ಅವರ ಪ್ರೀತಿ! ನೆಹರೂ ಕೂಡಾ ‘ರೆಡ್ ಫೋರ್ಟ್ ಟ್ರಯಲ್ಸ್’ ಎಂದೇ ದಾಖಲಾಗಿರುವ ವಿಚಾರಣೆಯಲ್ಲಿ ಆಜಾದ್ ಹಿಂದ್ ಫೌಜ್ ಪರ ವಕೀಲರಾಗಿ ನ್ಯಾಯಾಲಯದಲ್ಲಿ ವಾದ ನಡೆಸಿದ್ದರು. ಈ ಐತಿಹಾಸಿಕ ಸತ್ಯಗಳನ್ನು ಜನಸಾಮಾನ್ಯರಿಗಿರಲಿ, ಖುದ್ದು ಕಾಂಗ್ರೆಸಿಗೂ ಯಾರೂ ಗಟ್ಟಿ ದನಿಯಲ್ಲಿ ಹೇಳಲೇ ಇಲ್ಲ.

ಇಂಥಾ ಅನುಕೂಲಕರ ಸನ್ನಿವೇಶದಲ್ಲಿ ಬಿಜೆಪಿ ಬೋಸರನ್ನು ತನ್ನ ಚುನಾವಣಾ ಭಾಷಣಗಳಲ್ಲಿಯೂ ಸೇರಿಸಿಕೊಂಡಿತು. ತಾನು ಅಧಿಕಾರಕ್ಕೆ ಬಂದರೆ ಸುಭಾಶರ ‘ರಹಸ್ಯ ಕಡತ’ಗಳನ್ನು ಬಹಿರಂಗಪಡಿಸುವುದಾಗಿ ಹೇಳಿಕೊಂಡಿತು. ಅದರಂತೆ ಮೋದಿ ಅಧಿಕಾರಕ್ಕೆ ಬಂದಮೇಲೆ ಸುಮಾರು 1200 ರಹಸ್ಯ ಕಡತಗಳಿಗೆ ಮುಕ್ತಿಯೂ ಸಿಕ್ಕಿತು. ಆದರೆ ಅದರಲ್ಲಿ ಪರಿವಾರ ಹೇಳುತ್ತಿದ್ದ ‘ಪಿತೂರಿ ಸಿದ್ಧಾಂತ’ ಸಮರ್ಥಿಸುವ ಒಂದೇ ಒಂದು ಪುರಾವೆಯೂ ಸಿಗಲಿಲ್ಲ. ಆದ್ದರಿಂದಲೇ, ಕಡತ ಬಹಿರಂಗಗೊಳಿಸುವ ಮೊದಲು ಇದ್ದ ವೀರಾವೇಶದ ಒಂದಂಶವೂ ಈಗ ಕಂಡುಬರಲಿಲ್ಲ. ವಾಗ್ದಾನ ನೀಡಿದ್ದಂತೆ ‘ರಹಸ್ಯ ಕಡತ’ದ ವಿವರಗಳನ್ನು ‘ಮನೆಮನೆಗೆ ತಲುಪಿಸುವ’ ಕೆಲಸವೂ ಆಗಲಿಲ್ಲ. ಕಾರಣವಿಷ್ಟೇ, ಅದರಿಂದ ಈಗ ಬಲಪಂಥೀಯರಿಗೆ ನಯಾಪೈಸೆ ಲಾಭವೂ ಇಲ್ಲ! ಹಾಗೆಂದೇ ಅದು ಮಿಲಿಟರಿ ಉಡುಗೆಯ ಬೋಸ್ ಚಿತ್ರವನ್ನು ಮಾತ್ರ ಉಳಿಸಿಕೊಂಡು, ಮಿಕ್ಕೆಲ್ಲವನ್ನೂ ಗಾಳಿಗೆ ತೂರಿಬಿಟ್ಟಿತು.

ವಾಸ್ತವದಲ್ಲಿ ಬೋಸರ ರಾಷ್ಟ್ರೀಯತೆ ಬಲಪಂಥೀಯ ರಾಷ್ಟ್ರೀಯತೆಯಾಗಿರಲಿಲ್ಲ. ಹಿಂದುತ್ವ ಅಥವಾ ಕುರುಡು ದೇಶ ಭಕ್ತಿ ಅವರ ಆದ್ಯತೆಯಾಗಿರಲಿಲ್ಲ. ಹಾಗೇನಾದರೂ ಇದ್ದಿದ್ದರೆ, ಅವರು ‘ವಂದೇ ಮಾತರಂ’ ಅನ್ನೇ ತಮ್ಮ ಸೇನೆಯ ಘೋಷಣೆಯಾಗಿ ಬಳಸುತ್ತಿದ್ದರು. ಆದರೆ ಜಾತ್ಯತೀತ ಮೌಲ್ಯಗಳ ಸಮರ್ಥಕರಾಗಿದ್ದ ಬೋಸ್, ತಮ್ಮ ಸಹಚರ ಆಬಿದ್ ಹಸನ್ ಸಫ್ರಾಣಿ ನೀಡಿದ ‘ಜೈ ಹಿಂದ್’ ಘೋಷಣೆಯನ್ನು ಆಜಾದ್ ಹಿಂದ್ ಫೌಜ್’ನ ಅಧಿಕೃತ ಘೋಷಣೆಯಾಗಿ ಮಾಡಿಕೊಂಡರು.

ಅಂದಂಗೆ, ಇವತ್ತು ಸುಭಾಷ್ ಬಾಬು ಹುಟ್ಟಿದ ದಿನ. ನಮ್ಮ ದೇಶವನ್ನ ಸ್ವತಂತ್ರಗೊಳಿಸೋಕೆ ಅವರೆಷ್ಟು ಡೆಸ್ಪರೇಟಾಗಿ ಹೋರಾಡಿದ್ರು ಅಂತ ನೆನಪಿಸ್ಕೊಳೋಣ…

– ಚೇತನಾ ತೀರ್ಥಹಳ್ಳಿ, ಕವಯಿತ್ರಿ

Leave a Reply