ಗಜಲ್ ಗಳ ಲೋಕದಲ್ಲಿ ಕಳೆದುಹೋಗುವ ಮುನ್ನ…

2 years ago

೧೨ನೇ ಶತಮಾನದಲ್ಲಿ ಕನ್ನಡದಲ್ಲಿ ವಚನ ರೂಪದಲ್ಲಿ ವಚನಕಾರರು ಸಾಹಿತ್ಯ ರಚಿಸುವ ಮೂಲಕ ಜಗತ್ತಿನ ಸಾಹಿತ್ಯಕ್ಕೆ ಹೊಸ ರೂಪ ಒಂದನ್ನು ಕೊಟ್ಟರು. ಇದು ಕನ್ನಡಿಗರು ಜಗತ್ತಿಗೆ ಕೊಟ್ಟ ಒಂದು ಅಪರೂಪದ ಕೊಡುಗೆ. ಇದೇ ಕಾಲಘಟ್ಟದಲ್ಲಿ ಪರ್ಷಿಯಾದಲ್ಲಿ ಗಜಲ್ ಎಂಬ ಹೊಸ ಸಾಹಿತ್ಯ ಪ್ರಕಾರವೊಂದು ರೂಪುಗೊಂಡಿತ್ತು. ಎರಡಕ್ಕೂ ಜಾಗತಿಕ ಮಟ್ಟಕ್ಕೆ ಏರುವ ಅವಕಾಶ ಸಿಕ್ಕದ್ದು ಕಾಕತಾಳೀಯವಲ್ಲ; ಇವೆರಡಕ್ಕೂ ವಿಶ್ವ ಮಾನ್ಯತೆ ಹೊಂದುವ ಶಕ್ತಿ ಅವುಗಳ ವಸ್ತು, ವಿಷಯ, ಮಂಡನೆಯ ಕ್ರಮಗಳಲ್ಲಿ ವೈಶಿಷ್ಟ್ಯವಿತ್ತು. ಇದೇ ಕಾರಣದಿಂದಲೇ ೮೦೦ ವರ್ಷಗಳು ಕಳೆದರೂ ವಚನ ಮತ್ತು ಗಜಲ್ಗಳೆಡೆಗಿನ ಆಸಕ್ತಿ, ಕುತೂಹಲ, ಅಧ್ಯಯನ, ರಚನೆ ನಿರಂತರವಾಗಿ ನಡೆಯುತ್ತಿವೆ. ವಚನಗಳು ಕನ್ನಡದಲ್ಲಿ ಅಭಿವ್ಯಕ್ತಿ ರೂಪ ಪಡೆದರೆ, ಗಜಲ್ಗಳು ಉರ್ದುವಿನಲ್ಲಿ ಸಾಹಿತ್ಯ ಲೋಕದಲ್ಲಿ ಮೆರೆದವು.

ನನ್ನ ಸೀಮಿತ ಅಧ್ಯಯನದ ಹಿನ್ನೆಲೆಯಲ್ಲಿ ವಚನ ಮತ್ತು ಗಜಲ್ಗಳ ತೌಲನಿಕ ಅಧ್ಯಯನ ನಡೆದಿರುವುದು ಅಪರೂಪ. ಇವೆರಡಕ್ಕೂ ಇರುವ ಕೆಲವು ಸಾಮ್ಯತೆಗಳೆಂದರೆ, ೧. ನುಡಿದರೆ ಮಾತಾಗುವ, ಹಾಡಿದರೆ ಹಾಡಾಗಬಹುದಾದ ಲಯದ ಸಾಧ್ಯತೆಗಳನ್ನು ಒಳಗೊಂಡ ರಚನೆಗಳು. ೨. ವಸ್ತುಗಳ ನಿರ್ವಹಣೆಯ ಹೊಸತನ. ೩. ಅನುಭವಜನ್ಯವಾದ ರಚನೆ ೪. ಲೌಖಿಕ – ಪಾರಲೌಖಿಕತೆಗಳ ಗೊಡವೆಯಿಂದ ಮುಕ್ತಿ ಪಡೆದು ಪ್ರೇಮದಲ್ಲಿ ಲೀನವಾಗುವುದು (ವಚನಕಾರರು ಲೌಖಿಕ, ಪಾರಲೌಖಿಕಗಳನ್ನು ಇನ್ನೊಂದು ನೆಲೆಯಿಂದ ಸ್ವರ್ಗ, ನರಕಗಳನ್ನು ವಿವರಿಸಿರುವ ಕ್ರಮದ ಮೂಲಕ ಪರಿಗಣಿಸಬೇಕು. ಗಜಲ್ಗಳಲ್ಲಿ ಪ್ರೇಮದ ಮೂಲಕ ಹೊಸತನವನ್ನು ತರಲು ಯತ್ನಿಸಲಾಗಿದೆ. ವಚನಗಳಲ್ಲಿ ಸಮಾಜ ಮತ್ತು ಗಜಲ್ಗಳಲ್ಲಿ ಪ್ರೇಮ ಪಾರಲೌಖಿಕ ಸುಖ ಎಂದು ಕೂಡ ಹೇಳಬಹುದು). ೫. ಪುರಾಣ, ಮಹಾಕಾವ್ಯಗಳ ಕಥನಗಳಿಂದ ಬಿಡುಗಡೆ. ೬. ಲೋಕದ ಸಂಕಟಗಳ ದನಿ ಇತ್ಯಾದಿಯಾಗಿ ಗುರುತಿಸಬಹುದು.   

ಇವೆಲ್ಲವುಗಳು ಇದೀಗ ನೆನಪಾಗಲು ನೆಪವಾಗಿದ್ದು, ಗೆಳೆಯ ಲಕ್ಷ್ಮೀನಾರಾಯಣ  ಕೆ ವಾಣಿಗರಹಳ್ಳಿಯವರ ‘ಜೋಗಿ ಜೋಳಿಗೆಯ ಕಾಳು’ಗಜಲ್ ಕೃತಿ. ಜೋಗಿ ಜೋಳಿಗೆಯ ಕಾಳು ಹೆಸರೇ ವಿಶೇಷವಾಗಿದೆ. ಇಲ್ಲಿನ ಮೂರು ಪದಗಳು ಮೂರು ಆಲೋಚನಾ ಕ್ರಮಗಳನ್ನು ಮಂಡಿಸುತ್ತವೆ. ನೆಲೆಯಿಲ್ಲದೆ ಅಲೆವ ಜೋಗಿ, ಭಿಕ್ಷುಕರ ಪ್ರಮುಖ ಪರಿಕರವಾದ ಜೋಳಿಗೆ ಮತ್ತು ಆಹಾರದ ಪ್ರಮುಖ ಭಾಗವಾಗಿರುವ ಕಾಳುಗಳು ಈ ಗಜಲ್ ಸಂಕಲನದಲ್ಲಿ ಬೇರೆಬೇರೆ ಹಂತದಲ್ಲಿ ಓದುಗನನ್ನು ಮುಖಾಮುಖಿಯಾಗುತ್ತವೆ. ಕವಿಗೆ ಅಲೆಮಾರಿ ಗುಣ, ಭಿಕ್ಷುಕರನ್ನೂ ಒಳಗೊಂಡು ಎಲ್ಲರನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ವಿಶಾಲ ಮನೋಧರ್ಮ ಮತ್ತು ಸಿಕ್ಕಾಗ ಆರೋಗ್ಯ ಕೆಡದಂತೆ ಸ್ವೀಕರಿಸಿ ಅರಗಿಸಿಕೊಳ್ಳುವ ಗುಣಗಳು ಅಗತ್ಯವಾಗಿರುತ್ತವೆ. ಈ ಕೃತಿಯಲ್ಲಿ ಇದಕ್ಕೆ ಅನೇಕ ಉದಾಹರಣೆಗಳು ಓದುಗರಿಗೆ ಸಿಗುತ್ತವೆ.

ಕನ್ನಡದ ಗಜಲ್ ಲೋಕದಲ್ಲಿ ರಾಯಚೂರಿಗೆ ಅಗ್ರಸ್ಥಾನ. ಅದರಲ್ಲೂ ೧೯೭೦ರ ದಶಕದಲ್ಲಿ ಶಾಂತರಸರು ಕನ್ನಡದಲ್ಲಿ ಗಜಲ್ ಸಾಹಿತ್ಯದ ರಹದಾರಿಯನ್ನು ತೆರೆದರು. ಅದರಲ್ಲೂ ಶಾಂತರಸ, ಪ್ರೊ.ಅಬ್ದುಲ್ ಮಜೀದ್ ಖಾನ್, ಡಾ.ದೇವೇಂದ್ರಕುಮಾರ ಹಕಾರಿ, ಪಂಚಾಕ್ಷರಿ ಹಿರೇಮಠ, ಡಾ.ಕೆ.ಮುದ್ದಣ್ಣ, ತನಹಾ ತಿಮ್ಮಪುರಿ ಮೊದಲಾದವರು ಉರ್ದುವಿನಿಂದ ಕನ್ನಡಕ್ಕೆ ಗಜಲ್ಗಳನ್ನು ಅನುವಾದಿಸುವ ಮೂಲಕ ಕನ್ನಡಕ್ಕೆ ಹೊಸ ಸಾಹಿತ್ಯ ಲೋಕವೊಂದನ್ನು ಪರಿಚಯಿಸಿದರು. ಮುಂದೆ ಅನುವಾದ ಮತ್ತು ಸ್ವಂತ ಗಜಲ್ ಕೃತಿಗಳಿಗೆ ಕನ್ನಡದಲ್ಲಿ ಸಾಕಷ್ಟು ಹುಲುಸಾದ ಬೆಳೆ ಬಂದಿತು. ಅನಂತರ ಜಂಬಣ್ಣ ಅಮರಚಿಂತ, ಮುಕ್ತಾಯಕ್ಕ, ಚಿದಾನಂದ ಸಾಲಿ, ಅಲ್ಲಾ ಗಿರಿರಾಜ, ದಸ್ತಗೀರಸಾಬ ದಿನ್ನಿ, ಡಾ.ಕಾಶಿನಾದ ಅಂಬಲಗೆ, ಗಿರೀಶ ಜಕಾಪುರೆ, ಈರಣ್ಣ ಬೆಂಗಾಲೆ, ಪ್ರೇಮ ಹೂಗಾರ, ಡಾ.ಮಕ್ತುಂಬಿ, ಪ್ರಭಾವತಿ ದೇಸಾಯಿ ಮೊದಲಾದವರು ಈ ಧಾರೆಯನ್ನು ಕನ್ನಡದಲ್ಲಿ ಮುನ್ನಡೆಸಿದ್ದಾರೆ. ಇದೀಗ ಲಕ್ಷ್ಮೀನಾರಾಯಣ ಕೆ. ವಾಣಿಗರಹಳ್ಳಿಯವರು ಕೂಡ ಗಜಲ್ ಲೋಕದಲ್ಲಿ ಒಂದು ಹೆಜ್ಜೆಯನ್ನು ಇಟ್ಟಿದ್ದಾರೆ. ಇವರ ಗಜಲ್ ಸಂಕಲನದಲ್ಲಿ ಪ್ರೇಮ, ವಿರಹ, ಪರಿಸರ, ಜಾತೀಯತೆ, ದಲಿತ, ದಮನಿತರ ನೋವುಗಳು, ಶೋಷಣೆ, ಮಹಾಪುರುಷರನ್ನು ಸಮಾಜ ನಡೆಸಿಕೊಂಡ ಬಗೆ, ಸಮಾಜದ ಅಂಕುಡೊಂಕುಗಳು ಮೊದಲಾದ ವಸ್ತುಗಳು ದಾಖಲಾಗಿವೆ.

ಈ ಸಂಕಲನದ ೧೨ನೇ ಗಜಲ್ ಜಗತ್ತಿನಲ್ಲೆಲ್ಲ ಕೊಲೆಗೀಡಾದ ಸಮಾಜಸುಧಾರಕರ ವ್ಯಕ್ತಿತ್ವ ಮತ್ತು ವಿಚಾರಗಳ ಗಾಥೆಯನ್ನು ಹೇಳುತ್ತದೆ. “ಕೊಲ್ಲಬಹುದು ನೀವು ವ್ಯಕ್ತಿಗಳ, ತತ್ವಸಿದ್ಧಾಂತಗಳನಲ್ಲ / ಮೌನವಾಗಿಯೇ ಕಾಯುತ್ತಿರುವೆವು ಸಮಾನತೆಗಾಗಿ ಅದು ಸಾಮಾನ್ಯವಲ್ಲ, ವಿಶ್ವದ ಶಾಂತಿಗಾಗಿ”ಎಂದು ಕೊನೆಯಾಗುವ ಈ ಗಜಲ್ನಲ್ಲಿ, ಬುದ್ಧ, ಮಹಮದ್ ಪೈಗಂಬರ್, ಬಸವಣ್ಣ, ಮಹಾತ್ಮ ಗಾಂಧೀಜಿಯವರ ವೈಚಾರಿಕ ಹತ್ಯೆ ಮತ್ತು ವ್ಯಕ್ತಿಹತ್ಯೆಯ ಹಂತಗಳನ್ನು ದಾಖಲಿಸುತ್ತದೆ. ಶತಶತಮಾನಗಳಿಂದ ಸಮಾಜ ಸುಧಾರಕರು ಮತ್ತು ಯಥಾಸ್ಥಿತಿವಾದಿಗಳ ನಡುವೆ ನಡೆದ ವೈಚಾರಿಕ ಸಂಘರ್ಷದಲ್ಲಿ ಮಾನವೀಯತೆಯ ಸೋಲುಗಳನ್ನು ಹಿಡಿದಿಡುವಲ್ಲಿ ಈ ಗಜಲ್ ಯಶಸ್ವಿಯಾಗಿದೆ. ‘ವಿಶ್ವದ ಶಾಂತಿಗಾಗಿ’ವಾಕ್ಯ ಒಂದೇ ಗಜಲ್ನಲ್ಲಿ ೬ ಕಡೆ ಪುನರಾವರ್ತನೆಯಾಗುವ ಮೂಲಕ ವೈಚಾರಿಕತೆಯ ಅಗತ್ಯವನ್ನು ಮಂಡಿಸುತ್ತಲೇ, ವೈಚಾರಿಕ ಹತ್ಯೆಯ ವೇಳೆ ಸುಮ್ಮನಿದ್ದ ಸಮಾಜದ ಡೋಂಗಿತನವನ್ನು ಬೆತ್ತಲೆ ಮಾಡುತ್ತದೆ.

“ಕೇಸರಿಯ ಬಾವುಟವನು ಕೈಯಲ್ಲಿಡಿದು ಬಂದಿರಿ ಇದು ಸರಿಯೇ
ಮೈ ಮನಗಳಲ್ಲೂ ಧರ್ಮವ ಪೂಸಿಕೊಂಡಿರಿ ಇದು ಸರಿಯೇ

ಕಪ್ಪು ಕಾಂಚಾಣವನು ಕುಣಿಕುಣಿಸಿದಿರಿ ಥಕ ಥೈ.ಥೈ….ಥೈಯಾ….
ಪ್ರತಿ ಕಾಂಚಾಣವನು ಗುಡಿಸಿ ಬೀಗಿದಿರಿ ಇದು ಸರಿಯೇ

ಭೂಗಳ್ಳರ ಬೆನ್ನಿಗೂ ನಿಂತು ಆಳಿದಿರಿ ದೇಶವನು
ದೇಶದ ಬೆನ್ನೆಲುಬ ಮೂಳೆ ಮುರಿದಿರಿ ಇದು ಸರಿಯೇ

ಸಂವಿಧಾನವ ತಿದ್ದುವಿರೇನು? ನಿಮ್ಮ ಸ್ವಾರ್ಥಕ್ಕೆ
ಬಡವನ ಬೆವರಿಗೂ ಬೆಲೆಯಿಲ್ಲದೆ ಎರಗಿದಿರಿ ಇದು ಸರಿಯೇ

ಧ್ವನಿಗಳನು ಹಿಸುಕಿ ಹೋರಾಟವನು ಹೊಸಕಿದಿರಿ
ನಿಮ್ಮಂತ ನೀತಿಗೆಟ್ಟವರು ನಮ್ಮನ್ನು ಆಳುವಿರಿ ಇದು ಸರಿಯೇ

ಜಾತಿ ಧರ್ಮಗಳಿಗೆ ಬಂಗಾರದ ಬೇಡಿ ತೊಡಿಸಿದಿರಿ
ವೈಷಮ್ಯಗಳ ಊಟ ಬಡಿಸಿರುವಿರಿ ಇದು ಸರಿಯೇ

ಬಡವನಿಗೆ ಗುಡಿಸಲೂ ಕಟ್ಟಿಸಲಾಗದ ನೀವು!
ದೇವರಿಗೆ ಗುಡಿಯ ಮಾಡುವಿರಿ!! ಇದು ಸರಿಯೇ”

ಎಂಬ ಸಾಲುಗಳು ಕನ್ನಡದ ಅಸ್ಮಿತೆಯ ಪ್ರತಿಬಿಂಬಗಳಾಗಿ ದಾಖಲಾಗಿವೆ. ಪಂಪ, ಬಸವಣ್ಣ, ಕುಮಾರವ್ಯಾಸ, ಕುವೆಂಪು, ಲಂಕೇಶ್ ಮೊದಲಾದವರ ಪ್ರಭುತ್ವವನ್ನು ಪ್ರಶ್ನಿಸುವ ಪರಂಪರೆಯ ಮುಂದುವರಿಕೆಯನ್ನು ಇಲ್ಲಿ ಗುರುತಿಸಬಹುದು. ಇಡೀ ಗಜಲ್ ವಾಚ್ಯವೆನಿಸಿದರೂ ನಿರ್ವಹಿಸುತ್ತಿರುವ ವಿಷಯದಿಂದ ಮಹತ್ವ ಪಡೆಯುತ್ತದೆ. ಪ್ರಭುತ್ವದ ಜೊತೆಗೆ ಸದಾ ಎಚ್ಚರದಿಂದ ಇರಬೇಕು ಎಂಬ ಕನ್ನಡದ ವಿವೇಕವನ್ನು ಇಲ್ಲಿ ಕಾಣಬಹುದು. ‘ವ್ಯಾಧನೊಂದು ಮೊಲನ ತಂದರೆ’ ಎಂಬ ವಚನದಲ್ಲಿ ಬಸವಣ್ಣ ಬಿಜ್ಜಳನ ಆಸ್ಥಾನದಲ್ಲಿ ಇದ್ದೇನೆ ಎಂಬ ಯಾವುದೇ ಅಳುಕಿಲ್ಲದೆ ‘ನೆಲನಾಳ್ದನ ಹೆಣನೆಂದರೆ ಒಂದಡಕೆಗೆ ಕೊಂಬರಿಲ್ಲ, ಮೊಲಕಿಂತ ಕಷ್ಟ ನರನ ಬಾಳುವೆ’ ಎಂಬ ಸಾಲಿನ ಮೂಲಕ ಪ್ರಭು ಮತ್ತು ನರರ ಬಾಳುವೆಯ ಬೆಲೆಯನ್ನು ಹಿಡಿದಿಡುವಂತೆ ಇಲ್ಲಿನ ಸಾಲುಗಳು ಪ್ರಭುತ್ವವನ್ನು ಕಟುವಾಗಿ ವಿಮರ್ಶಿಸುತ್ತಿವೆ. ಭೂಸ್ವಾಧೀನ ಕಾಯ್ದೆ ತಿದ್ದುಪಡಿ, ವಿವಾದಿತ ರೈತ, ಬಡವರ ವಿರೋಧಿ ೩ ಕೃಷಿ ಕಾಯ್ದೆಗಳು, ಗೋರಕ್ಷಕರ ಹೆಸರಿನಲ್ಲಿ ದೇಶಾದ್ಯಂತ ನಡೆಯುತ್ತಿರುವ ಗೂಂಡಾಗಿರಿ, ಅವೈಜ್ಞಾನಿಕ ನೋಟು ನಿಷೇಧ, ಜಿಎಸ್ಟಿ ಜಾರಿ, ನಿರಂತರ ಬೆಲೆ ಏರಿಕೆಯ ಬವಣೆಯಲ್ಲಿ ಬೇಯುತ್ತಿರುವ ಜನ ಒಂದುಕಡೆ ಇದ್ದಾರೆ. ಆದರೆ ಇವರಿಗೆ ಈ ನೋವುಗಳು ಕಾಣದಂತೆ ಜಾತಿ, ಧರ್ಮ, ಭಯೋತ್ಪಾದನೆ, ರಾಮಮಂದಿರ, ತಬ್ಲೀಘಿ ವಿವಾದ, ಹಿಜಬ್ ವಿವಾದ, ಹಲಾಲ್ ವಿವಾದ, ಆಜಾನ್ ವಿವಾದ, ಮುಸ್ಲಿಂ ವ್ಯಾಪಾರಿಗೆ ಹಿಂದೂ ದೇಗುಲಗಳಲ್ಲಿ ಮಾರಾಟಕ್ಕೆ ಪ್ರತಿರೋಧ ಮೊದಲಾದ ನಕಲಿ, ಉತ್ಪಾದಕ ಫಿಲ್ಟರ್ಗಳನ್ನು ಇಟ್ಟು ಪ್ರಭುತ್ವ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದೆ. ಇದಕ್ಕೆ ಗೋದಿ ಮಾಧ್ಯಮ ಅಥವಾ ಮಾರಿಕೊಂಡ ಮಾಧ್ಯಮಗಳು ಅಧ್ವರ್ಯುಗಳ ರೀತಿ ಯಜ್ಞ, ಯಾಗಾದಿಗಳಿಗೆ ತುಪ್ಪ, ಹವಿಸ್ಸು ಸುರಿದು, ಅಮಾಯಕರನ್ನೇ ಕೋಳಿ, ಮೇಕೆ, ಕುರಿ, ಕುದುರೆ, ದನಗಳನ್ನು ಯಜ್ಞಗಳಿಗೆ ಆಹುತಿ ಕೊಡುವಂತೆ ಬಲಿಕೊಡುತ್ತಿವೆ. ಜನರನ್ನು ಜಾತಿ, ಜನಾಂಗ, ಧರ್ಮಗಳ ಹೆಸರಿನಲ್ಲಿ ನಿರ್ಣಾಯಕವಾಗಿ ವಿಭಜಿಸಿ ಅವರನ್ನು ಮೋಸಗೊಳಿಸುವ ಹುನ್ನಾರಗಳು ನಿರಂತರವಾಗಿ ನಡೆಯುತ್ತಿವೆ. ಇಂತಹ ಮರೆಮಾಚಿದ ಸತ್ಯಗಳನ್ನು ಮೇಲಿನ ಗಜಲ್ನಲ್ಲಿ ಬಯಲಿಗೆಳೆಯುವ ದಿಟ್ಟತನ ಮಹತ್ವದ್ದಾಗಿದೆ.

ಸಂವಿಧಾನದ ಮೂಲ ಆಶಯಗಳಾದ ಸಹೋದರತೆ, ಸಮಾನತೆ, ಭ್ರಾತೃತ್ವ, ಪ್ರಜಾಪ್ರಭುತ್ವ, ಸಮಾಜವಾದ, ಧರ್ಮನಿರಪೇಕ್ಷತೆಗಳ ವಿರೋಧಿಯಾಗಿರುವವರು ಸಂವಿಧಾನದ ಅಡಿಯಲ್ಲೇ ಅಧಿಕಾರಕ್ಕೆ ಬಂದಿದ್ದಾರೆ. ಅದರ ಲಾಭ ಪಡೆದು ‘ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಾಯಿಸಲು’ ಎಂಬ ಹೇಳಿಕೆಯನ್ನು ನೀಡಿ ಅಧಿಕಾರದಲ್ಲಿ ಮುಂದುವರೆದಿದ್ದಾರೆ. ಗಜಲ್ನಲ್ಲಿ ‘ಸಂವಿಧಾನವ ತಿದ್ದುವಿರೇನು?’ ಎಂಬಂತಹ ಬಹು ಪ್ರಧಾನವಾದ ಪ್ರಶ್ನೆಗಳನ್ನು ಕೇಳುವ ಮೂಲಕ ಮಹತ್ವದ ಸೂಕ್ಷ್ಮ ಅಂಶಗಳನ್ನು ಈ ಗಜಲ್ ದಾಖಲಿಸುತ್ತದೆ.

“ಮುಟ್ಟದೆಯೆ ದೂರಮಾಡಿದಿರಿ ಇದು ಹೊಸತೇನಲ್ಲ
ಮೈಲಿಗೆಯ ಮಾಡಿ ಊರಿನಾಚೆಗೆ ದೂಡಿದಿರಿ ಇದು ಹೊಸತೇನಲ್ಲ

ಕೆರೆ ಬಾವಿ ನೀರಿಗೂ ಮಡಿ ಮಾಡಿದಿರಿ ನೀವೆಲ್ಲ
ಜಾತಿಯ ಬೇಲಿಯೊಳಗೆ ಬಂಧಿಸಿದಿರಿ ಇದು ಹೊಸತೇನಲ್ಲ

ಕಲಿಕೆಯ ಕಿತ್ತು ಕೂಲಿಗೆ ಅದುಮಿ ಮೀಸೆ ತೀಡಿದಿರಲ್ಲ
ಅದೇನ ಮಾಡಿದೆವು ನಾವೆಂದು ಶೋಷಣೆಯ ಮಾಡಿದಿರಿ ಇದು ಹೊಸತೇನಲ್ಲ

ಜೀತಕ್ಕೆ ಒಡ್ಡಿ ಮನೆ ಮಂದಿಯ ಬೆವರ ನೆಕ್ಕಿ ಸುಖಿಸಿದಿರಲ್ಲ
ನಮ್ಮಗಳ ರಕ್ತ ಮಾಂಸಗಳ ಹೀರಿದಿರಿ ಇದು ಹೊಸತೇನಲ್ಲ

ಯಾಕೆ? ಎಂದು ಕೇಳಿದರೆ. ಕತ್ತಿ ಗುರಾಣಿ ಮಚ್ಚು ತೆಗೆದಿರಲ್ಲ
ಮಾನವೀಯತೆಯ ಮನುಷ್ಯತ್ವ ಕಳೆದುಕೊಂಡಿರಿ ಇದು ಹೊಸತೇನಲ್ಲ”

ಎಂಬ ಗಜಲ್ ಭಾರತೀಯ ಮನಃಸ್ಥಿತಿಯಲ್ಲಿ ಅವಿತಿರುವ ‘ಜಾತಿಭೂತ’ವನ್ನು ಬಿಡಿಸುವ ಯತ್ನದಂತೆ ತೋರುತ್ತದೆ. ಇಲ್ಲಿ ಜಾತಿಭೂತವನ್ನು ಹಿಂದಿನದು ಮುಂದುವರೆಯುತ್ತಿರುವ ರೂಪಕದಂತೆ ಪರಿಗಣಿಸಬೇಕು. ವರ್ಣಾಶ್ರಮ ವ್ಯವಸ್ಥೆಯನ್ನು ಸೃಷ್ಟಿಸಿ, ವೃತ್ತಿಗೊಂದು ಜಾತಿಯಾಗಿ ವಿಂಗಡಿಸಿ, ಅಸ್ಪೃಶ್ಯತೆಯನ್ನು ಉತ್ತುಬೆಳೆದ ಈ ದೇಶದಲ್ಲಿ ಇಂದಿಗೂ ಅಸ್ಪೃಶ್ಯತೆ ತಾಂಡವವಾಡುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ನಗರಗಳನ್ನು ಅಸ್ಪೃಶ್ಯತೆಯ ಬಿಡುಗಡೆಯ ಕೇಂದ್ರಗಳು ಎಂದು ಭಾವಿಸಿದ್ದರು. ಆದರೆ, ಅವರ ಚಿಂತನೆಯನ್ನು ಸುಳ್ಳು ಮಾಡಿ, ಇಂದು ನಗರ ಪ್ರದೇಶಗಳಲ್ಲಿ ‘ಮಾಂಸಾಹಾರಿಗಳಿಗೆ ಮನೆ ಬಾಡಿಗೆಗೆ ಕೊಡುವುದಿಲ್ಲ’ ಎಂಬ ಬೋರ್ಡ್ ನೇತುಹಾಕುವ ಮಟ್ಟಕ್ಕೆ ಈ ದೇಶ ಬೌದ್ಧಿಕವಾಗಿ ದಿವಾಳಿಯಾಗಿದೆ. ಅಸ್ಪೃಶ್ಯತೆಗೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ. ಎಲ್ಲರ ರಕ್ತ ಕೆಂಪು. ಅತ್ಯಾಧುನಿಕ ಕಾಲದಲ್ಲಿ ಜಾತಿ, ಅಸ್ಪೃಶ್ಯತೆಗಳೆಂಬ ಅನಾಧುನಿಕ ಮೂಢನಂಬಿಕೆಗಳಲ್ಲಿ ಈ ದೇಶ ನರಳುತ್ತಿದೆ. ಮೇಲರಿಮೆ ಮತ್ತು ಕೀಳರಿಮೆ ಎಂಬ ರೋಗಗಳು ಈ ದೇಶದಲ್ಲಿ ನೆತ್ತರನ್ನೇ ಹರಿಸಲು ಕಾರಣವಾಗಿವೆ. ಹರಿದ ನೆತ್ತರಿನ ಬಣ್ಣವನ್ನಾದರೂ ಗುರುತಿಸುವ ಕಾಣ್ಕೆ ಇಲ್ಲಿ ಕಾಣುತ್ತಿಲ್ಲ. ಬಡವರಿಗೆ ಬೇಕಿರುವುದೇನು? ಮತ್ತು ಪ್ರಭುತ್ವ ಅವರ ಮುಂದಿಡಿತ್ತಿರುವುದೇನು? ಎಂಬ ಸಂಗತಿಯನ್ನು ನೇರವಾಗಿಯೇ ಗಜಲ್ನಲ್ಲಿ ದಾಖಲಿಸಲಾಗಿದೆ. ಅಕ್ಷರ, ಅಧಿಕಾರ, ಘನತೆಗಳಿಂದ ಈ ದೇಶದ ಶೂದ್ರ, ದಲಿತ ಮತ್ತು ಮಹಿಳೆಯರನ್ನು ಹೊರಗಿಟ್ಟ ಕುತಂತ್ರವನ್ನು ಇಲ್ಲಿನ ಸಾಲುಗಳು ಪ್ರಶ್ನಿಸುತ್ತಿವೆ. 

ಸತ್ತಾಗ ಎಲ್ಲರೂ ಮಣ್ಣಿನೊಡಲಿಗೆ ಸೇರುವುದು ಸಂಸ್ಕೃತಿ ಅಲ್ಲವೇ ನಾಣಿ
ಆ ಸಮಾಧಿಗೆ ತಾರಸಿಯ ಗೋಪುರ ಕಟ್ಟಿಸುವುದು ಅಸಂಸ್ಕೃತಿ ಅಲ್ಲವೇ ನಾಣಿ

ಹಸಿದವನಿಗೆ ಕೂಳ ನೈವೇದ್ಯವ ಮಾಡುವುದು ಸರಿತಾನೇ
ತುಂಬಿದೊಡಲಿಗೆ ದೇವರ ಪ್ರಸಾದ ತುರುಕುವುದು ವಿಕೃತಿ ಅಲ್ಲವೇ ನಾಣಿ

ಕಲ್ಲ ನಾಗರಗೆ ಹಾಲನೆರೆದು ಅಭಿಷೇಕವ ಮಾಡುವಿರಿ
ದಿಟದ ನಾಗರ ಕಂಡಾಗ ಕೊಲ್ಲುವುದು ದುರ್ಜಾತಿ ಅಲ್ಲವೇ ನಾಣಿ

ಹೆಣ್ಣು ದೇವರು ತಾಯಿ ಧರಿತ್ರಿಯೆಂದು ಪೂಜಿಸುವಿರಿ ನೀವು
ಸಿಕ್ಕಸಿಕ್ಕ ಹೆಣ್ಣಿನ ಮೈ ಮಾಂಸ ತಿನ್ನವುದು ಪುರುಷಕೀರ್ತಿ! ಅಲ್ಲವೇ ನಾಣಿ

ಓ ಮನುಜ ಬಿಡುವೆಯ ನಿನ್ನಯ ಸಂಸ್ಕೃತಿ ಹೆಸರಿನ ಲಜ್ಜೆಯನು
ಬಿಡು ನಿನ್ನ ಅಹಂಕಾರವನು ಮಲಿನವಾಗಿದೆ ಭಾರತಿ ಅಲ್ಲವೇ ನಾಣಿ

ಮೇಲಿನ ಗಜಲ್ ಅತ್ಯಾಧುನಿಕ ಮನುಜನ ಅನಾಧುನಿಕ ಮೂಢನಂಬಿಕೆಗಳನ್ನು ಪ್ರಶ್ನಿಸುತ್ತದೆ. ಈಜಿಪ್ಟ್ ನಾಗರಿಕತೆಯ ಸಮಯದಲ್ಲಿ ಮಡಿದವರೊಂದಿಗೆ ಅವರಿಗಿಷ್ಟವಾದ ವಸ್ತುಗಳನ್ನು ಇಟ್ಟು ಮಣ್ಣು ಮಾಡುವ ಸಂಪ್ರದಾಯ ಬೆಳೆದಿತ್ತು. ಇಂದಿಗಾದರೂ ತಿಥಿ ಮಾಡುವ ಸಮಯದಲ್ಲಿ ಮಡಿದವರಿಗಿಷ್ಟವಾದ ಆಹಾರ, ಪಾನೀಯಗಳನ್ನು ಎಡೆ ಮಾಡುವ ರೂಢಿ ಇದೆ. ಸತ್ತವರಿಗೆ ಘೋರಿ ಕಟ್ಟುವ ಮನುಜರು, ಇದ್ದಾಗ ಹೇಗೆ ನಡೆದುಕೊಳ್ಳುತ್ತಾರೆ ಎಂಬ ಪ್ರಶ್ನೆ ಮಹತ್ವದ್ದು. ಈ ಗಜಲ್ನಲ್ಲಿ ಸಂಸ್ಕೃತಿ – ವಿಕೃತಿ, ನಂಬಿಕೆ – ಮೂಢನಂಬಿಕೆ, ನಡೆ-ನುಡಿಗಳ ನಡುವಿನ ವ್ಯತ್ಯಾಸವನ್ನು ಮಂಡಿಸಲಾಗಿದೆ. ‘ದೇವತೆಗಳು ಎಲ್ಲಿ ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ’ ಎಂದ ಭಾರತದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆದಿರುವ ದೌರ್ಜನ್ಯಗಳನ್ನು ಮೇಲಿನ ಸಾಲುಗಳಲ್ಲಿ ಗುರುತಿಸಲಾಗಿದೆ. ಇದೇ ಹೆಣ್ಣನ್ನು ಮುಟ್ಟಾದಾಗ ಹೊರಗಿಡುವುದು, ದೇವಸ್ಥಾನಗಳಿಗೆ ಪ್ರವೇಶ ನೀಡದಿರುವುದು, ಪತಿಯೊಂದಿಗೆ ಸಜೀವವಾಗಿ ಸತಿಯಾಗಿಸಿದ್ದು, ವಿಧವೆಯರನ್ನು ಅಮಂಗಲೆಯರೆಂದು ಕರೆಯುವುದು, ದ್ವಿತೀಯ ದರ್ಜೆ ಪ್ರಜೆಯಂತೆ ಹೆಣ್ಣನ್ನು ಪರಿಗಣಿಸಲು ಕಾರಣವಾದ ಪ್ರಾಚೀನ ಭಾರತದ ಮನಃಸ್ಥಿತಿಗಳನ್ನೆಲ್ಲ ಈ ಗಜಲ್ನ ಎರಡು ಸಾಲುಗಳು ನೆನಪಿಸಿಬಿಡುತ್ತವೆ. ಭಾರತವನ್ನು ‘ಭಾರತಿ’ ಎಂದು ಬದಲಿಸಿ ಕರೆಯುವ ಮೂಲಕ ಸ್ಥಗಿತಗೊಂಡ ಮನಃಸ್ಥಿತಿಗೆ ಮದ್ದನ್ನು ನೀಡುವ ಕೆಲಸವನ್ನು ಮಾಡಲು ಯತ್ನಿಸಲಾಗಿದೆ.

೩೪ನೇ ಗಜಲ್ನಲ್ಲಿ ಈ ದೇಶದ ಸದ್ಯದ ಪರಿಸ್ಥಿತಿಯನ್ನು ಸಂಪೂರ್ಣವಾಗಿ ವಿವರಿಸಲಾಗಿದೆ. ರಾಜಕಾರಣ ಮತ್ತು ಧರ್ಮಗಳು ಒಂದರೊಡನೊಂದು ಸೇರಿಸಿದ ಪರಿಣಾಮದಿಂದ ಈ ದೇಶದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಈ ಗಜಲ್ನಲ್ಲಿ ಮಾರ್ಮಿಕವಾಗಿ ಮಂಡಿಸಲಾಗಿದೆ. ಧರ್ಮಾಂಧ ಭಂಗಿ ಸನ್ಯಾಸಿಗೆ ಧರ್ಮದ ಅಮಲು ಏರಿ, ಮಾನವೀಯತೆ ಮರೆತು, ಸರ್ವಾಧಿಕಾರಿಯಾಗಿ ಬೆಳೆದು, ದೇಶದ ನಾಗರಿಕರಿಗೆ ಪಕೋಡ ಮಾರಿ ಎಂದು ಉಪದೇಶ ಕೊಡುವ ಪ್ರಭುವನ್ನು ಈ ಕವಿತೆ ಸಮರ್ಥವಾಗಿ ಮುಖಾಮುಖಿಯಾಗಿದೆ. ರಾಜಕೀಯ ಪಕ್ಷಗಳು ಕೊಡುವ ಚುನಾವಣಾ ಭರವಸೆಗಳು ಮತ್ತು ಅವುಗಳನ್ನು ಈಡೇರಿಸಲು ಬಜೆಟ್ನಲ್ಲಿ ಒಳಗೊಂಡಿರುವ ಯೋಜನೆಗಳೆಷ್ಟು ಎಂಬುದರ ತಾಳೆ ನೋಡುವ ಪರಿಪಾಠ ದೇಶದಲ್ಲಿ ಇನ್ನೂ ಬೆಳೆದಿಲ್ಲ. ಇಂತಹ ಕವಿತೆಗಳು ಓದುಗನನ್ನು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಲು ಪ್ರೇರಣೆ ನೀಡುತ್ತವೆ. ಈ ಮೂಲಕ ಕವಿ ಯಾವುದೋ ಕತ್ತಲ ಲೋಕದಲ್ಲೋ, ಮಹಡಿಯ ಮಹಲಿನಲ್ಲೋ, ಸ್ವರ್ಗದಲ್ಲೋ ಇಲ್ಲ; ಇಹದಲ್ಲೇ ಇಳಿದು ಜನರ ನೋವಿನ ದನಿಯಾಗಬೇಕು ಎಂಬ ತಹತಹ ಇಲ್ಲಿನ ಅನೇಕ ಗಜಲ್ಗಳಲ್ಲಿದೆ. ಅದಕ್ಕೆ ೩೪ನೇ ಗಜಲ್ ಕೂಡ ಒಂದು ಉದಾಹರಣೆಯಾಗಿದೆ.

೩೫ನೇ ಗಜಲ್ನಲ್ಲಿ ೨೦೨೦ರ ಕಂಡುಕೇಳರಿಯದ ಕೊರೊನಾ ರೋಗದ ಹಿನ್ನೆಲೆ, ಮುನ್ನೆಲೆಯನ್ನುಳ್ಳ ವಸ್ತು ಇದೆ. ಕೊರೊನಾವನ್ನು ಮಾಧ್ಯಮಗಳು ಮಹಾಮಾರಿ ಎಂದು ಕರೆದು ಅದಕ್ಕೊಂದು ‘ಲಿಂಗದಾನ’ ಮಾಡಿದವು. ಸರ್ಕಾರ ಜನರ ರಕ್ಷಣೆಗೆ ನಿಯಮಗಳನ್ನು ಮಾಡುವ ಬದಲು ಅವರನ್ನು ಬೀದಿ ಹೆಣಗಳಾಗಿ ಸಾಯಲು ಬಿಟ್ಟು ಕೈಕಟ್ಟಿ ಕುಳಿತುಕೊಂಡು ಬಿಟ್ಟಿತ್ತು. ಒಮ್ಮೆ ಹಿಂದಕ್ಕೆ ತಿರುಗಿನೋಡಿಕೊಳ್ಳಬೇಕಾದ ಜರೂರು ಇರುವ ಸಂಗತಿಯನ್ನು ಈ ಗಜಲ್ ಓದುಗರೆದೆಗೆ ಸುರಿಯುತ್ತದೆ. ಒಂದು ವೇಳೆ ನೀವು ಇಂತಹ ಭೀಕರ ಸಂದರ್ಭದಲ್ಲಿ ದೇಶದ ಪ್ರಧಾನಿಯಾಗಿದ್ದರೆ ಏನು ಮಾಡುತ್ತಿದ್ದಿರಿ? ೮ ಗಂಟೆಗೆ ಬಂದು ಭಾಷಣ ಮಾಡುವ ವ್ಯಕ್ತಿ, ೧೨ ಗಂಟೆಗೆ ಲಾಕ್ಡೌನ್ ಎಂದು ಘೋಷಣೆ ಮಾಡುತ್ತಾರೆ. ಉತ್ತರ – ದಕ್ಷಿಣ, ಪೂರ್ವ – ಪಶ್ಚಿಮ ದಿಕ್ಕಿಗೆ ಓದು, ವ್ಯಾಪಾರ, ವ್ಯವಹಾರ, ಕೂಲಿ ಇತ್ಯಾದಿ ಕಾರಣಕ್ಕೆ ಜನ ಹೊರಗಡೆ ಹೋಗಿರುತ್ತಾರೆ. ಅಂತವರೆಲ್ಲರೂ ಮನೆಗಳಿಗೆ ಹಿಂದಿರುಗಲು ಬೇಕಾಗುವ ಸಮಯ ಎಷ್ಟು ಎಂದು ದೇಶವನ್ನು ನಡೆಸುವ ವ್ಯಕ್ತಿಗೆ ಇರಬೇಕೇ ಬೇಡವೇ? ೪೦ ಕಿ.ಮೀ. ದೂರ ಕ್ರಮಿಸಲು ಕೆಲವೊಮ್ಮೆ ೨ ಗಂಟೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಇಂತಹ ಸಮಯದಲ್ಲಿ ಕಾಶ್ಮೀರದಲ್ಲಿರುವ ವ್ಯಕ್ತಿ ಕನ್ಯಾಕುಮಾರಿಗೋ, ಕನ್ಯಾಕುಮಾರಿಯಲ್ಲಿರುವ ವ್ಯಕ್ತಿ ಕಾಶ್ಮೀರಕ್ಕೋ ತಲುಪುವುದು ಹೇಗೆ? ಎಂಬ ಸಣ್ಣ ಪ್ರಶ್ನೆ ೫೬ ಇಂಚಿನ ಎದೆ ಇದೆ ಎಂದು ಹೇಳಿಕೊಳ್ಳುವ ವ್ಯಕ್ತಿಗೆ ತಾಗಲೇ ಇಲ್ಲ. ಹಬ್ಬಗಳು ಮತ್ತು ಸಾಲುಸಾಲು ರಜಾದಿನಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಕಾಲಿಡಲು ಜಾಗವಿರದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಂದರ್ಭದಲ್ಲಿ ರಾತ್ರಿ ೧೨ ಗಂಟೆಯಿಂದ ಸಾರ್ವಜನಿಕ ಸಾರಿಗೆ, ರೈಲು, ವಿಮಾನ ಮತ್ತು ಖಾಸಗಿ ಸಾರಿಗೆ ಬಳಸುವಂತಿಲ್ಲ, ಹೊಟೆಲ್, ರೆಸ್ಟೊರೆಂಟ್ ಬಂದ್, ರಸ್ತೆಗಳು ಬಂದ್ ಎಂಬ ನಿಯಮವನ್ನು ದೇಶದ ಜನರ ಮೇಲೆ ಹೇರಲಾಗುತ್ತದೆ. ಜನ ಮನೆಗೆ ತಲುಪುವುದು ಹೇಗೆ? ಹೊಟೆಲ್, ರೆಸ್ಟೊರೆಂಟ್ ಬಂದ್ ಆದರೆ ಎಲ್ಲಿದ್ದಾರೋ ಅಲ್ಲಿ ಬದುಕುವುದು ಹೇಗೆ? ಇಂತಹ ಪ್ರಶ್ನೆಗಳನ್ನು ಅಂದು ಮಾರಿಕೊಂಡ ಮಾಧ್ಯಮಗಳು ಕೇಳಲಿಲ್ಲ. ಬದಲಿಗೆ ಕೊರೊನಾ ರೋಗ ಹರಡುವುದಕ್ಕೆ ತಬ್ಲೀಘಿಗಳು ಕಾರಣ ಎಂಬ ಸುಳ್ಳು ಸಂಶೋಧನೆಯಲ್ಲಿ ನಿರತವಾಗಿದ್ದವು.

ಇನ್ನು ಇಡೀ ಕೊರೊನಾ ಅವಧಿಯಲ್ಲಿ ವೈಜ್ಞಾನಿಕತೆಯ ಬದಲು ಮೂಢನಂಬಿಕೆಯನ್ನು ಬಿತ್ತುವ ಕೆಲಸವನ್ನು ಸರ್ಕಾರ, ಮಾಧ್ಯಮ, ‘ದೇಶವನ್ನಾಳುವ ಫಕೀರ’ರೆಲ್ಲ ಸೇರಿ ಮಾಡಿದರು. ದೀಪ ಆರಿಸಿ, ಕ್ಯಾಂಡಲ್ ಹಚ್ಚಿ ಎಂಬ ಟಾಸ್ಕ್ ಗಳನ್ನು ದೇಶದ ಜನಕ್ಕೆ ನೀಡಲಾಯಿತು. ದೀಪ ಆರಿಸಿ, ಕ್ಯಾಂಡಲ್ ಹಚ್ಚಿದರೆ ಕೊರೊನಾ ಹೋಗುತ್ತದೆಯೇ? ಎಂದು ಯಾವೊಂದು ಗೋದಿ ಮಾಧ್ಯಮವೂ ಕೇಳಲಿಲ್ಲ. ಇನ್ನು ಕೊರೊನಾ ವಾರಿಯರ್ಗಳ ಮೇಲೆ ಹೆಲಿಕಾಪ್ಟರ್ ಮೂಲಕ ಹೂವು ಸುರಿಯುತ್ತೇನೆ ಎಂದು ಚಹಾ ಮಾರಿದ್ದೇನೆ ಎಂದು ಹೇಳಿಕೊಳ್ಳುವ ವ್ಯಕ್ತಿ ಹೇಳಿದರು. ಆಗ ಕೊರೊನಾ ವಾರಿಯರ್ಸ್ ಚಿಕಿತ್ಸೆ ಕೊಡಲು ಪಿಪಿಇ ಕಿಟ್ ಕೊಡಿ ಎಂದು ಅಂಗಲಾಚುತ್ತಿದ್ದರು. ಆದರೆ ಕೊರೊನಾ ವಿರುದ್ಧ ಯುದ್ಧದಲ್ಲಿ ಹೋರಾಡಲು ಶಸ್ತ್ರಗಳಿಲ್ಲದೆ ಕಳಿಸಿದ್ದ ಕೊರೊನಾ ವಾರಿಯರ್ಸ್ ಅಳಲು ಚೌಕೀದಾರನ ಕಿವಿಗೆ ತಲುಪಲೇ ಇಲ್ಲ. ಅವರು ನವಿಲಿಗೆ ಕಾಳು ಹಾಕುತ್ತ ವಿರಾಮ ಕಾಲದಲ್ಲಿದ್ದರು. ನೋಟು ನಿಷೇಧದ ವೇಳೆ ಬೀದಿಯಲ್ಲಿ ನಿಂತು ಸತ್ತ ಜನರ ನಡುವೆ ಸಾಯದೆ ಬದುಕಿದ್ದ ಜನ ಇದೀಗ ಸತ್ತಮೇಲೆ ಸ್ಮಶಾನಗಳ ಮುಂದೆ ಸರದಿಯಲ್ಲಿ ನಿಂತರು. ನೀವೊಮ್ಮೆ ಆಲೋಚಿಸಿ. ಸಂವಿಧಾನ ನಿಮಗೆ ಅಧಿಕಾರ ಕೊಟ್ಟಿರುವುದು ಜನರ ರಕ್ಷಣೆಗೋ ಅಥವಾ ಅವರನ್ನು ಬೀದಿಹೆಣವಾಗಿಸಲೋ? ವಿದ್ಯಾವಂತರು ಯಾರೇ ಆದರೂ ಕೊರೊನಾ ಅವಧಿಯಲ್ಲಿ ದೇಶದ ಜನರಿಗೆ ಯಾವ ರೀತಿ ಅಭಯ ಕೊಡಬೇಕಾಗಿತ್ತು ಎಂಬುದನ್ನು ಯೋಚಿಸದೆ ಇರಲಾರರು. ವೈಜ್ಞಾನಿಕ ಮನೋಭಾವನೆ ಇರುವ ಯಾವುದೇ ವ್ಯಕ್ತಿ ಪ್ರಧಾನಿ ಹುದ್ದೆಯಲ್ಲಿದ್ದರೆ ಅವರು ಏನು ಮಾಡುತ್ತಿದ್ದರು?

“ದೇಶದ ಜನರೇ ನೀವು ಎಲ್ಲಿದ್ದೀರೋ ಅಲ್ಲೇ ಇರಿ. ನಿಮಗೆ ಅಗತ್ಯ ಎಲ್ಲ ಸೌಕರ್ಯಗಳನ್ನು ನಾನು ಒದಗಿಸುತ್ತೇನೆ. ನಿಮ್ಮನ್ನು ನಿಮ್ಮ ನಿಮ್ಮ ಊರುಗಳಿಗೆ ತಲುಪಿಸುವ ಜವಾಬ್ದಾರಿ ನನ್ನದು. ನಿಮ್ಮ ಊರಿಗೆ ರೈಲು, ಬಸ್, ವಿಮಾನ ಯಾವ ಅವಕಾಶವಿದೆಯೋ ಅದರಲ್ಲಿ ಕಳುಹಿಸುವ ವ್ಯವಸ್ಥೆ ಮಾಡುತ್ತೇನೆ. ನೀವು ಸಂಯಮದಿಂದ ವರ್ತಿಸಿ. ನಿಮ್ಮ ಊರಿಗೆ ತಲುಪಿಸಿದ ಮೇಲೆ ನೇರವಾಗಿ ನಿಮ್ಮ ಮನೆಗಳಿಗೆ ಹೋಗಬೇಡಿ. ನಿಮ್ಮ ಊರಿನಲ್ಲೇ ಕೊರೊನಾ ಪರೀಕ್ಷೆಯ ವ್ಯವಸ್ಥೆ ಮಾಡುತ್ತೇನೆ. ಅಲ್ಲಿ ಪರೀಕ್ಷೆಯಾದ ನಂತರ ನಿಮಗೆ ಕೊರೊನಾ ಪಾಸಿಟಿವ್ ಬಂದರೆ ಹೆದರಬೇಡಿ. ನಿಮಗೆ ಚಿಕಿತ್ಸೆ ಕೊಡಿಸುವ ಹೊಣೆ ನನ್ನದು. ಕ್ವಾರಂಟೈನ್ ಅವಧಿ ಮುಗಿದ ಮೇಲೆ ನೀವು ನಿಮ್ಮ ಮನೆಗೆ ತೆರಳಿ” ಎಂದು ದೇಶದ ಚೌಕೀದಾರರು ಅಭಯ ಕೊಡಲಿಲ್ಲ. ಮಹಾಭಾರತದ ಯುದ್ಧವನ್ನು ೧೮ ದಿನಗಳಲ್ಲಿ ಗೆದ್ದಿದ್ದೇವೆ, ಕೊರೊನಾ ವಿರುದ್ಧ ಯುದ್ಧವನ್ನು ೨೧ ದಿನಗಳಲ್ಲಿ ಗೆಲ್ಲೋಣ ಎಂದರು. ೨೧ ದಿನಗಳಲ್ಲ, ೧೮ ತಿಂಗಳು ಕಳೆದರೂ ರೋಗ ನಿಯಂತ್ರಣಕ್ಕೆ ಬರಲಿಲ್ಲ. ಈ ಅವಧಿಯಲ್ಲಿ ಕೊರೊನಾಗೆ ಚಿಕಿತ್ಸೆ ಇಲ್ಲದೆ ಸತ್ತವರದು ಒಂದು ಕತೆಯಾದರೆ, ‘ಎಲ್ಲಿಗೆ ಪಯಣ, ಯಾವುದೋ ದಾರಿ’ ಎಂದುಕೊಳ್ಳುತ್ತಾ ನಡೆದಾದರೂ ಮನೆಗೆ ತಲುಪುವ ಹಠತೊಟ್ಟ ಸಾವಿರಾರು ಕಾರ್ಮಿಕರು ಬೀದಿ ಹೆಣವಾದರು. ಚೌಕೀದಾರರ ಕಣ್ಣಿಗೆ ಇವರ ಸಾವು ಅಪ್ಪಿತಪ್ಪಿ ಬೀಳಲಿಲ್ಲ; ತಂದೆಯೊಬ್ಬ ಸೂಟ್ ಕೇಸ್ ಮೇಲೆ ತನ್ನ ಮಗುವನ್ನು ಬಾರಲು ಮಲಗಿಸಿ ಎಳೆದೊಯ್ಯುತ್ತಿದ್ದ ದೃಶ್ಯ ಅಣಬೆ ತಿನ್ನುವ ವ್ಯಕ್ತಿಯ ಕಣ್ಣಲ್ಲಿ ಕಣ್ಣೀರು ತರಿಸಲಿಲ್ಲ. ಇಂತಹ ಮಾನವೀಯತೆಯ ಮೇಲಿನ ದಾಳಿಯ ಘಟನೆಗಳನ್ನು ಗೋದಿ ಮಾಧ್ಯಮದವರು ತೋರಿಸಲೂ ಇಲ್ಲ. ಇಡೀ ಸಂಕಟದ ಸರಮಾಲೆಯನ್ನು ಮೇಲಿನ ಕವಿತೆ ಮೆಲುಕು ಹಾಕುವಂತೆ ಮಾಡುತ್ತದೆ. 

ಇವುಗಳಷ್ಟೇ ಅಲ್ಲದೇ, ತತ್ವ, ಸಿದ್ಧಾಂತ, ಸೈದ್ಧಾಂತಿಕ ಸಂಘರ್ಷ, ಪ್ರೇಮ, ವಿರಹ, ಚಿಂತನ ಪ್ರಧಾನ ಗಜಲ್ಗಳು ಕೂಡ ಈ ಸಂಕಲನದಲ್ಲಿವೆ. ಏಕಾಂತಕ್ಕಿಂತ ಲೋಕಾಂತಕ್ಕೆ ನಿಮ್ಮನ್ನು ಎಳೆಯುವ ರಾಜಕೀಯ ಪ್ರಜ್ಞೆ ಬೆಳೆಸುವ ಗಜಲ್ಗಳ ಜೊತೆಗೆ ಹದವಾದ ಪಾಕದ ರೀತಿಯಲ್ಲಿ ಇಲ್ಲಿನ ಗಜಲ್ಗಳ ಕಸೂತಿ ಹೆಣಿಗೆ ಇದೆ. ಅಪಾರ ರಾಜಕೀಯ ಪ್ರಜ್ಞೆ, ಬ್ರೆಕ್ಟ್, ಬೋದಿಲೇರ್ ಚಿಂತನೆಗಳು, ಧರ್ಮ ನಿರಪೇಕ್ಷತೆ ಮತ್ತು ಮಾನವೀಯ ತುಡಿತಗಳು ಇಲ್ಲಿನ ಗಜಲ್ಗಳ ಜೀವಾಳವಾಗಿದೆ. ನೀವೇ ಓದಿದರೆ ಇನ್ನಷ್ಟು ಹೊಳಹುಗಳು ನಿಮ್ಮದಾಗುತ್ತವೆ. ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ ಅವರ ಗಜಲ್ ಬರೆಯುವ ಈ ಸಾಹಸ ಮುಂದುವರೆಯಲಿ ಎಂದು ಆಶಿಸುತ್ತೇನೆ.  

– ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ

Leave a Reply