ಪ್ರಿಯ ಗೆಳೆಯರಾದ ಹರೀಶ ಗಂಗಾಧರ್ ಅವರ ‘ಗುರುತಿನ ಬಾಣಗಳು’ ನಾಳೆ ಬಿಡುಗಡೆಯಾಗುತ್ತಿದೆ. ಕಾರ್ಯಕ್ರಮ ಚಂದಗಾಣಲಿ. ನಾನು ಓದಿದ ಬಹಳ ಒಳ್ಳೆಯ ಪುಸ್ತಕವಿದು. ಇದಕ್ಕೆ ಬರೆದ ಮೊದಲಮಾತನ್ನು ಇಲ್ಲಿ ಹಂಚಿಕೊಂಡಿರುವೆ.
*****************************************

ಈಚೆಗೆ ಹೊಸತಲೆಮಾರಿನ ಕೆಲವು ಲೇಖಕರನ್ನು ನಾನು ಇಷ್ಟಪಟ್ಟು ಓದುತ್ತಿರುತ್ತೇನೆ. ಅವರ ಚಿಂತನೆಗಳಿಂದ ಕಲಿಯುತ್ತಿರುತ್ತೇನೆ. ಅಂತಹವರಲ್ಲಿ ಹರೀಶ್ ಗಂಗಾಧರ್ ಮುಖ್ಯರು. ತಾತ್ವಿಕ ತೀಕ್ಷ್ಣತೆಯುಳ್ಳ ಇವರ ಬರೆಹಗಳಲ್ಲಿ ಮುಖ್ಯವಾಗಿ ಎರಡು ಮಾದರಿಗಳಿವೆ. ಮೊದಲನೆಯವು ಆತ್ಮಕಥನಾತ್ಮಕ ಬರೆಹಗಳು. ಇವು ಹೆಚ್ಚಾಗಿ ಅಪ್ಪನಿಗೆ ಸಂಬಂಧಪಟ್ಟಿವೆ. ಇವು ಬಹಳ ಆಪ್ತವಾಗಿವೆ. ವ್ಯಕ್ತಿಚಿತ್ರಗಳಂತಿದ್ದರೂ ಆಳದಲ್ಲಿ ಬಾಳಿನ ಅರ್ಥವನ್ನು ಶೋಧಿಸುತ್ತವೆ. ಇಲ್ಲೊಂದು ಬಗೆಯ ಪಿತೃಹತ್ಯೆಯ ಗುಣವೂ, ಹತ್ಯೆಯ ಬಳಿಕ ಜ್ಞಾನೋದಯದ ನೆಲೆಯಲ್ಲಿ ಮರಳಿ ಪಿತೃವಿನ ಆವಾಹನೆಯೂ ಇದೆ. ಇದು ಕನ್ನಡದ ಬಹುತೇಕ ಆತ್ಮಚರಿತ್ರೆಗಳ ಅಥವಾ ಆತ್ಮಚರಿತ್ರಾತ್ಮಕ ಬರೆಹಗಳ ವಿಶಿಷ್ಟತೆ. ಎರಡನೆಯ ಮಾದರಿಯವು ಲೋಕವಿಶ್ಲೇಷಣೆಯವು. ತಾನು ಓದಿದ ಕೃತಿಗಳ, ಕಂಡ ವಿದ್ಯಮಾನಗಳ ವಿಶ್ಲೇಷಣೆ ಮಾಡುವಂತಹವು; ತಾನಿರುವ ಸಮಾಜಕ್ಕೆ ಬೇಕಾದ ಯಾವುದೊ ತತ್ವಸಂದೇಶವನ್ನು ಹುಡುಕುವಂತಹವು;ಜಾತೀಯತೆ ಲಿಂಗತಾರತಮ್ಯ ಮೂಲಭೂತವಾದ ಕೋಮುವಾದ ಸರ್ವಾಧಿಕಾರಗಳಲ್ಲಿ ಇರುವ ಹಿಂಸೆಕ್ರೌರ್ಯಗಳನ್ನು ವಿಶ್ಲೇಷಿಸಿ, ಅವಕ್ಕೆ ಬೇಕಾದ ಮದ್ದನ್ನು ಶೋಧಿಸುವಂತಹವು.

ಇಲ್ಲಿನ ಬರೆಹಗಳನ್ನು, ಅನುವಾದಗಳು, ಬೇರೆ ಬರೆಹಗಳಿಂದ ಪ್ರೇರಿತವಾಗಿ ಹುಟ್ಟಿದವು, ಸ್ವಂತ ಚಿಂತನೆಗಳು ಎಂದು ವಿಂಗಡಿಸಬಹುದು. ಆದರೆ ಮೂರೂ ಸ್ತರಗಳು ವ್ಯತ್ಯಾಸ ಮಾಡಲಾಗದಂತೆ ಬೆರೆತುಹೋಗಿವೆ. ಈ ಬರೆಹಗಳ ವಿಶಿಷ್ಟತೆಗಳನ್ನು ಹೀಗೆ ಗುರುತಿಸಬಹುದು:
೧. ಚಾರಿತ್ರಿಕ ಪ್ರಜ್ಞೆಯ ಸಮಕಾಲೀನೀಕರಣ. ಚಾರಿತ್ರಿಕವಾಗಿ ಜಗತ್ತಿನ ವಿದ್ಯಮಾನ ಮತ್ತು ಚಿಂತನೆಗಳನ್ನು ವಿಶ್ಲೇಷಿಸುತ್ತ ಒಂದು ತಾತ್ವಿಕ ಭಿತ್ತಿಯನ್ನು ಕಟ್ಟಿಕೊಡುವುದು. ಈ ಚಾರಿತ್ರಿಕ ಭಿತ್ತಿಗೆ ಅಥವಾ ಪ್ರಜ್ಞೆಗೆ ಭಾರತದ ಸಮಾಜ ಧರ್ಮ ಶಿಕ್ಷಣ ರಾಜಕಾರಣಗಳ ವರ್ತಮಾನವನ್ನು ಲಗತ್ತಿಸುವುದು ಮತ್ತು ನಾಳಿನ ಭಾರತದ ಒಂದು ಪರಿಕಲ್ಪನೆಯನ್ನು ಮಂಡಿಸುವುದು. ಭಾರತದಲ್ಲಿ ಇಂತಹುದೇ ಚಿಂತನೆ ಮತ್ತು ಚಳುವಳಿ ಮಾಡುತ್ತಿರುವ ಹೋರಾಟಗಾರರ ಜತೆ ಸಮೀಕರಿಸುವುದು. sಜರ್ಮನಿಯ ನಾಜಿಗಳ ಬಗ್ಗೆ ಬರೆದಾಗ ಭಾರತದ ಮೂಲಭೂತವಾದಿಗಳನ್ನು ಮ್ಯಾಲ್ಕಂ ಎಕ್ಸ್ ಕುರಿತು ಬರೆದಾಗ ಅಂಬೇಡ್ಕರ್ ಅವರನ್ನು, ಅಬ್ರಾಹಂ ಲಿಂಕನ್ ಬಗ್ಗೆ ಬರೆದಾಗ ಗಾಂಧಿಯನ್ನು ಅವರು ಸ್ಮರಿಸುತ್ತಾರೆ. ಇಲ್ಲಿ ಮತ್ತೆಮತ್ತೆ ಅಂಬೇಡ್ಕರ್ ಅವರ ಉಲ್ಲೇಖವಿದೆ. ಈ ಅರ್ಥದಲ್ಲಿ ಈ ಪುಸ್ತಕವನ್ನು ಜಗತ್ತಿನ ಹೋರಾಟಗಾರರ ಮಾನವತಾವಾದಿಗಳ ವ್ಯಕ್ತಿಚಿತ್ರಗಳ ಸಂಪುಟವಾಗಿ ಓದಬಹುದು.
೨. ಜಗತ್ತಿನ ಬೇರೆಬೇರೆ ಲೇಖಕರ ಮತ್ತ ಚಿಂತಕರ ಅನುಸಂಧಾನ. ಇಲ್ಲಿನ ಲೇಖನಗಳಲ್ಲಿ ನೂರಾರು ಹೊಸಹೊಸ ಲೇಖಕರ ಮತ್ತು ಕೃತಿಗಳ ಉಲ್ಲೇಖವಿದೆ. ಇದು ಲೇಖಕರ ಅಪಾರವಾದ ಮತ್ತು ವಿಶಿಷ್ಟವಾದ ಓದಿನ ಪ್ರಮಾಣವಾಗಿದೆ. ಸಾಹಿತ್ಯದ ವಿದ್ಯಾರ್ಥಿಯಾದ ನನಗೆ ಅವರು ಜಗತ್ತಿನ ಬೇರೆಬೇರೆ ಕವಿತೆಗಳನ್ನು ಪರಸ್ಪರ ಕನೆಕ್ಟ್ ಮಾಡಿ ವಿಶ್ಲೇಷಣೆ ಮಾಡುವುದು ಇಷ್ಟವಾಯಿತು. ಇಂತಹ ಲೇಖನಗಳನ್ನು ಅವರು ಮತ್ತಷ್ಟು ಹೆಚ್ಚು ಬರೆಯಬೇಕೆಂದು ಅನಿಸುತ್ತದೆ. ಕನ್ನಡದ ಓದುಗರಿಗೆ ಹೊಸಹೊಸ ಲೇಖಕರನ್ನು ಪುಸ್ತಕಗಳನ್ನು ಓದಲು ಪ್ರಚೋದಿಸುವ ಕೃತಿಯಿದು.
೩. ಕನ್ನಡ ವೈಚಾರಿಕ ಚಿಂತನೆಯು ಸಮಾಜ ರಾಜಕಾರಣ ಧರ್ಮವನ್ನು ಕುರಿತು ಮಥಿಸಿದರೂ, ಅದು ಹೆಚ್ಚಾಗಿ ಅಕ್ಷರಕೇಂದ್ರಿತ ಆಕರಗಳಿಗೇ ಹೋಗುತ್ತದೆ. ಅದಕ್ಕೆ ನಾದಕೇಂದ್ರಿತ ಸಂಗೀತ ದೃಶ್ಯಕೇಂದ್ರಿತ ಚಿತ್ರಕಲೆ ಶಿಲ್ಪ ಫೋಟೊ ವಾಸ್ತು ಸಿನಿಮಾ ರಂಗಭೂಮಿಗಳ ನೆನಪು ಕಡಿಮೆ. ನಾಟಕ ಸಿನಿಮಾಗಳಂತಹ ದೃಶ್ಯ ಆಕರಗಳಿಂದ ಬರೆಯುವ ಪ್ರಯೋಗ ಮಾಡಿದವರು ಅನಕೃ ಅವರು. ನವ್ಯ ಸಾಹಿತ್ಯ ಕಾಲದಲ್ಲಿ ಈ ಬಹುಮಾಧ್ಯಮೀಯ ಪರಂಪರೆ ನಶಿಸಿಹೋಯಿತು. ಈ ಹಿನ್ನೆಲೆಯಲ್ಲಿ ಹರೀಶರ ಲೇಖನಗಳು ಸಿನಿಮಾ ಮತ್ತು ಕ್ರೀಡೆಗಳನ್ನು ವಿಶ್ಲೇಷಿಸುವುದು ಮಹತ್ವದ ಸಂಗತಿಯಾಗಿದೆ. ಇಲ್ಲಿ ಸಮಾಜ ಮತ್ತು ರಾಜಕಾರಣದ ಬಗ್ಗೆ ಬರೆದರೂ ಸಾಹಿತ್ಯದಷ್ಟೆ ಸಿನಿಮಾ ಸಂಗೀತಗಳ ಪ್ರಸ್ತಾಪವಿದೆ.
೪. ಈ ಕೃತಿಯಲ್ಲಿ ಜಗತ್ತಿನ ಬೇರೆಬೇರೆ ಪ್ರದೇಶಗಳಲ್ಲಿ ದಮನಕ್ಕೆ ಒಳಗಾದ ಸಮುದಾಯಗಳ ಬಗ್ಗೆ ಕಾಳಜಿಯಿರುವ ಲೇಖನಗಳಿವೆ. ನಾಜಿಗಳ ಕಾಲದ ಯಹೂದಿಗಳು, ಇಸ್ರೇಲಿನ ಜಿಯೊನಿಸ್ಟ್ ದಮನಕ್ಕೆ ಒಳಗಾದ ಪ್ಯಾಲೆಸ್ತೇನಿಯರು, ಅಮೆರಿಕದ ಬಿಳಿಯರ ಕೈಯಲ್ಲಿ ನಲುಗಿದ ಕರಿಯರು, ಭಾರತದ ಜಾತಿ ವ್ಯವಸ್ಥೆಯಲ್ಲಿ ದಲಿತರು, ಕೋಮುವಾದಕ್ಕೆ ಮುಸ್ಲಿಮರು ಹೀಗೆ. ಇಲ್ಲಿ ಸಮುದಾಯಗಳನ್ನು ಕುರಿತ ಚಾಲ್ತಿಯಲ್ಲಿರುವ ಏಕರೂಪಿ ಗ್ರಹಿಕೆಗಳನ್ನು ಒಡೆಯಲಾಗಿದೆ. ಲೇಖನಗಳಲ್ಲಿ ಅತಿ ಹೆಚ್ಚು ಉಲ್ಲೇಖಗಳಿರುವುವು ಕಪ್ಪು ಚಳುವಳಿ ಮತ್ತು ಕಪ್ಪು ಸಾಹಿತ್ಯ ಕುರಿತು. ಇಲ್ಲಿ ಚಿನಿವಾ ಅಚಿಬೆ, ಮ್ಯಾಲ್ಕಂ ಎಕ್ಸ್, ಬೆಲ್ಹುಕ್ಸ್ ಮೊದಲಾಗಿ ಹಲವಾರು ಕಪ್ಪು ಲೇಖಕರು ಸಿದ್ಧಾಂತಿಗಳ ಮತ್ತು ಚಳುವಳಿಗಾರರ ಚರ್ಚೆಯಿದೆ. ಹೇಗೆ ಜನಾಂಗವಾದವು ಕ್ರೀಡೆ ಸಾಹಿತ್ಯ ಸಂಗೀತ ಸಿನಿಮಾಗಳನ್ನು ದಮನದ ಭಾಗವಾಗಿ ಬಳಸಿತು ಮತ್ತು ಇವೇ ಕಲೆಗಳನ್ನು ದಮನಿತರು ತಮ್ಮ ಪ್ರತಿರೋಧದ ಭಾಗವಾಗಿ ಮರುಹುಟ್ಟಿಸಿದರು ಎಂಬ ವಿಶ್ಲೇಷಣೆಯಿದೆ. ಇದು ಕೃತಿಯನ್ನು ದಮನಿತರ ಕೈಪಿಡಿಯನ್ನಾಗಿ ಮಾಡಿದೆ.
ಹರೀಶ್ ವೃತ್ತಿಯಿಂದ ಕಾಲೇಜು ಅಧ್ಯಾಪಕರು. ಅಧ್ಯಾಪನವು ಸಮಾಜ ನಿರ್ಮಾಣದ ಒಂದು ಉಪಕರಣ ಎಂದು ಭಾವಿಸಿದವರು. ಇಲ್ಲಿನ ಲೇಖನಗಳಲ್ಲಿರುವ ಚರ್ಚೆಯನ್ನು ಪಠ್ಯಕ್ರಮ ಪಠ್ಯವಸ್ತು ಕಲಿಕೆ ಕಲಿಸುವ ವಿಧಾನಗಳಿಗೆ ಅವರು ಲಗತ್ತಿಸುತ್ತಾರೆ. ಈ ಕಾರಣದಿಂದ ಲೇಖನಗಳು ಶಿಕ್ಷಣ ಚಿಂತನೆಗಳೂ ಆಗಿವೆ. ನಮ್ಮ ಕಾಲೇಜುಗಳಲ್ಲಿ ಹರೀಶ ಅವರಂತಹ ಜ್ಞಾನಿಗಳೂ ಮಾನವೀಯ ಮಿಡಿತವಿರುವ ಅಧ್ಯಾಪಕರೂ ಇರುವುದು, ವಿದ್ಯಾರ್ಥಿಗಳ ಭಾಗ್ಯ.
ಆಂಗ್ಲ ಅಧ್ಯಾಪಕರು ಕನ್ನಡ ಲೇಖಕರಾಗಿರುವುದಕ್ಕೆ ಬಿಎಂಶ್ರೀಯವರಿಂದ ಹಿಡಿದು ರಾಜೇಂದ್ರ ಚೆನ್ನಿ, ನಟರಾಜ ಹುಳಿಯಾರ್ ತನಕ ದೊಡ್ಡ ಪರಂಪರೆಯಿದೆ. ಇವರ ಬರೆಹಗಳಲ್ಲಿ ವಿಶ್ವಸಾಹಿತ್ಯದಿಂದ ಪಡೆದ ತಿಳುವಳಿಕೆಯನ್ನು ಕನ್ನಡ ಸಾಹಿತ್ಯ ಮತ್ತು ಕರ್ನಾಟಕದ ವಿದ್ಯಮಾನಗಳಿಗೆ ಲಗತ್ತಿಸಿ ಹೊಸ ಚಿಂತನೆಯನ್ನು ಹುಟ್ಟಿಸುವ ಗುಣವಿದೆ. ಇವರಿಗೆ ಹೋಲಿಸಿದರೆ ಹರೀಶರಲ್ಲಿ ಕನ್ನಡ ಮತ್ತು ಕರ್ನಾಟಕದ ಉಲ್ಲೇಖಗಳು ಕಡಿಮೆ. ವರದಿಗಾರಿಕೆಯೂ ಚಿಂತನಶೀಲತೆಯೂ ವಿದ್ಯಮಾನವೊಂದರ ವಿಶ್ಲೇಷಣೆಯೂ ಬೆರೆತಿರುವ ವಿಶಿಷ್ಟ ವಿನ್ಯಾಸದಲ್ಲಿ ಈ ಲೇಖನಗಳಿವೆ. ಹರೀಶ ಒಳ್ಳೆಯ ಸ್ಟೋರಿಟೆಲರ್. ಇಲ್ಲಿ ಕನ್ನಡವು ಲವಲವಿಕೆಯಿಂದ ಕೂಡಿದ್ದು ಸರಾಗವಾಗಿ ಓದಿಸಿಕೊಳ್ಳುತ್ತದೆ. ಆದರೆ ತುಸು ವಾಚಾಳಿಯೂ ಆಗಿವೆ. ಲಂಕೇಶರಂತೆ ವಿವರಣಾತ್ಮಕ ಗದ್ಯವನ್ನೂ ಕವಿತೆಯಂತೆ ಸಂಕ್ಷಿಪ್ತವಾಗಿ ಧ್ವನಿಪೂರ್ಣವಾಗಿ ಕಟ್ಟುವುದು ನಮ್ಮೆಲ್ಲರ ಎದುರಿರುವ ಸವಾಲು.
ಇಲ್ಲಿನ ಲೇಖನಗಳು ಭಾರತದಲ್ಲಿ ಕಳೆದ ಮೂರು ದಶಕಗಳ ವಿದ್ಯಮಾನಗಳಿಂದ ಕಂಗೆಟ್ಟ ಯಾವುದೇ ಸಂವೇದನಶೀಲ ಬರೆಹಗಾರರ ಬರೆಯುವಂತಹವು. ಇವನ್ನು ಕರ್ನಾಟಕದ ಹೊಸತಲೆಮಾರಿನ ತರುಣ ತರುಣಿಯರು, ವಿದ್ಯಾರ್ಥಿಗಳು ಓದಬೇಕು. ನಮ್ಮ ಸಂವಿಧಾನ ಹೇಳುವ ಪ್ರಜಾಪ್ರಭುತ್ವ, ಜಾತ್ಯತೀತತೆ ಸ್ವಾತಂತ್ರ್ಯ ಸಮಾನತೆ ಸಹಬಾಳುವೆಗಳಂತಹ ಆದರ್ಶ ಮೌಲ್ಯಗಳು ಇಲ್ಲಿ ಪ್ರತಿಪಾದಿತವಾಗಿವೆ. ಇಲ್ಲೊಂದು ರೋಗಗ್ರಸ್ತ ಅವಸ್ಥೆಯಿಂದ ಮುಕ್ತಿ ಪಡೆದು ಹೊಸ ಆರೋಗ್ಯಕರ ಸಮಾಜ ಕಟ್ಟುವ ಕನಸಿದೆ.
– ಪ್ರೊ. ರಹಮತ್ ತರೀಕೆರೆ, ಹಿರಿಯ ಸಂಶೋಧಕರು




