ಬಸವಣ್ಣನ ಪುರುಷ ಅಹಮ್ಮಿನ ವಿಮರ್ಶೆಯೂ, ಬೆಳಕು ಮತ್ತು ದೀಪದ ಬುಡದ ಕತ್ತಲೆಯೂ

1 year ago

ಈ ಜಗತ್ತಿನಲ್ಲಿ ಯಾರೂ ವಿಮರ್ಶಾತೀತರಲ್ಲ ಎನ್ನುವುದು ಎಷ್ಟು ಸತ್ಯವೋ, ಮೂಳೆ-ಮಾಂಸಗಳ ಮನುಷ್ಯರೂಪದಲ್ಲಿ ಹುಟ್ಟಿದ ಯಾರು ಕೂಡಾ ಪರಿಪೂರ್ಣರಲ್ಲ ಎಂಬುದೂ ಅಷ್ಟೇ ಸತ್ಯ. ವಿಮರ್ಶೆ ಮತ್ತು ಪರಿಪೂರ್ಣತೆಗಳೆಂಬ ಈ ಎರಡು ಸಮಾಂತರ ಎಚ್ಚರಗೋಲುಗಳ ನಡುವೆ ನಾವು ಬದುಕಿನ ಅರ್ಥ, ಮೌಲ್ಯಗಳನ್ನು ಅರಸಿಕೊಳ್ಳಬೇಕಾಗುತ್ತದೆ. ಅಗತ್ಯವಿದ್ದಾಗ ವಿಮರ್ಶೆಗೂ, ಒಮ್ಮೊಮ್ಮೆ ಪರಿಪೂರ್ಣತೆಯ ಪ್ರಶ್ನೆಗೂ ನಮ್ಮನ್ನು ನಾವು ತಾಕಿಸಿಕೊಳ್ಳುತ್ತಾ ಸಾಗಿದಾಗ ಮಾತ್ರ ನಡುವೆ-ಸುಳಿವ-ಆತ್ಮದಂತೆ ನಾವು ಚಲನೆಯ ನಿರಂತರತೆಯನ್ನು ಕಾಪಾಡಿಕೊಳ್ಳಬಹುದು; ಆದರ್ಶ ಎನ್ನಬಹುದಾದ ಒಂದಷ್ಟು ಪ್ರಜ್ಞೆಗಳನ್ನು ನಮ್ಮ ಚಲನೆಯ ಅಲ್ಲಲ್ಲಿ ಮೈಲಿಗಲ್ಲುಗಳಂತೆ ದಕ್ಕಿಸಿಕೊಳ್ಳಬಹುದು. ಅದನ್ನು ಬಿಟ್ಟು, ಹೆಜ್ಜೆಹೆಜ್ಜೆಗೂ ವಿಮರ್ಶೆ ಮತ್ತು ಪರಿಪೂರ್ಣತೆಯ ಎಚ್ಚರಗೋಲುಗಳನ್ನು ಪರಸ್ಪರ ಬೆಸೆದುಬಿಟ್ಟರೆ ಏನಾಗಬಹುದು? ಅವುಗಳ ನಡುವಿನ ನಮ್ಮ ದಾರಿಯೇ ಇಕ್ಕಟ್ಟುಗೊಳ್ಳುತ್ತದೆ. ಆದರ್ಶದ ಮೈಲುಗಲ್ಲುಗಳಿಲ್ಲದೆ ನಮ್ಮ ಚಲನೆಯು ಕ್ರಮೇಣ ಜಡಗೊಂಡುಬಿಡುವ ಸಂಭವವೂ ಇರುತ್ತೆ.

ಬುದ್ದ, ಬಸವ, ಗಾಂಧಿ, ಬಾಬಾ ಸಾಹೇಬ ಇಂತವರು ಇತಿಹಾಸದ ಚಲನೆಯಲ್ಲಿ ನಮಗೆ ಸಿಕ್ಕಿರುವ ಆದರ್ಶದ ಮೈಲುಗಲ್ಲುಗಳು. ಅವರ‍್ಯಾರೂ ಪುರಾಣ ಕಥೆಗಳ ಅತಾರ್ಕಿಕ ಸೃಷ್ಟಿಗಳಲ್ಲ; ನಮ್ಮನಿಮ್ಮಂತೆ ಮನುಷ್ಯ ಜೀವಿಗಳು! ಹಾಗಾಗಿ ಮನುಷ್ಯನಿಗೆ ಇರಬಹುದಾದ ಎಲ್ಲಾ ಮಿತಿಗಳ ನಡುವೆಯೇ ನಮಗೆ ಮಾದರಿಗಳಾಗಿ ದಕ್ಕಿರುವಂತವರು. ಯಾರು ಕೂಡಾ ಪರಿಪೂರ್ಣರಲ್ಲ ಎಂಬ ಸತ್ಯಸಂದರ್ಭವನ್ನು ನಿರ್ಲಕ್ಷಿಸಿ, ಯಾರೂ ವಿಮರ್ಶಾತೀತರಲ್ಲ ಎಂಬ ಸತ್ಯಪ್ರಮೇಯವನ್ನು ಇವರ ಬದುಕುಗಳಿಗೂ ಅನ್ವಯಿಸಲು ಮುಂದಾಗುವಾಗ, ವಿಮರ್ಶಕರಾದವರು ಒಂದು ಸ್ಪಷ್ಟ ಪ್ರಶ್ನೆಯನ್ನು ತಮ್ಮ ಎದುರು ಇರಿಸಿಕೊಳ್ಳಬೇಕಾಗುತ್ತದೆ. ಈ ನನ್ನ ವಿಮರ್ಶೆ ಮುಂದಿನ ಪೀಳಿಗೆಗೆ ಕೊಡುವ ಕಾಣ್ಕೆ ಏನು?

ಯಾರೂ ಪರಿಪೂರ್ಣರಲ್ಲದ ಈ ಜಗತ್ತಿನಲ್ಲಿ ನಮಗೆ ದಕ್ಕಿರುವ ಆದರ್ಶದ ಪ್ರಜ್ಞೆಗಳನ್ನು ಮತ್ತಷ್ಟು ಸುಲಭೀಕರಿಸುವ ಅಥವಾ ಸ್ಪಷ್ಟವಾಗಿಸುವ ನಿಟ್ಟಿನಲ್ಲಿ ನನ್ನ ವಿಮರ್ಶೆಯ ಕೊಡುಗೆ ಏನು? ಎಂಬ ಎಚ್ಚರವನ್ನು ನಮ್ಮ ವಿಮರ್ಶೆಗಳು ಮುಖಾಮುಖಿಯಾಗಬೇಕಾಗುತ್ತದೆ. ಇಲ್ಲವಾದಲ್ಲಿ, ಮನುಷ್ಯ-ಸಹಜರಾದ ಮೇಲ್ಕಾಣಿಸಿದ ಮಹನೀಯರೆಲ್ಲ ತಮ್ಮ ಕೊಡುಗೆಯ ಹೊರತಾಗಿಯೂ ಮುಂಬರುವ ಪೀಳಿಗೆಗಳಿಗೆ ನಮ್ಮ ವಿಮರ್ಶೆಗಳ ಫಲವಾಗಿ ಸಂಕೀರ್ಣಗೊಳ್ಳುವ ಅಪಾಯವಿರುತ್ತೆ.

ಹಣತೆಯೊಂದು ತನ್ನ ಸುತ್ತಲಿನ ಕಗ್ಗತ್ತಲನ್ನು ನಿವಾರಿಸಲು ನಿಸ್ವಾರ್ಥವಾಗಿ ಪ್ರಯತ್ನಿಸಿದ ಹೊರತಾಗಿಯೂ ಅದರ ಬುಡದಲ್ಲೇ ಒಂದಷ್ಟು ಕತ್ತಲು ಉಳಿದುಕೊಳ್ಳುತ್ತದೆ. ಅದು ಆ ಹಣತೆಯ ದೋಷವಲ್ಲ; ಹಣತೆಗಳ ಒಟ್ಟಾರೆ ಮಿತಿ. ವಿಮರ್ಶಕರಾದವರಿಗೆ ನೈಜ ಸವಾಲು ಎದುರುಗೊಳ್ಳುವುದೇ ಈ ಹಂತದಲ್ಲಿ. ಬೆಳಕು ಮತ್ತು ಕತ್ತಲುಗಳ ನಡುವಿನ ಸಂಘರ್ಷದಲ್ಲಿ ಹಣತೆ ತನ್ನನ್ನು ತಾನು ತೆತ್ತುಕೊಂಡ ವಿಶಾಲಾರ್ಥದಲ್ಲಿ ಹಣತೆಯನ್ನು ಮುಂದಿನ ಪೀಳಿಗೆಗೆ ದಾಟಿಸಬೇಕೊ? ಅಥವಾ ಅದರ ಇಡೀ ಹೋರಾಟವನ್ನೇ ನುಂಗಿಹಾಕುವಂತೆ, ಬುಡದ ಕತ್ತಲೆಯತ್ತ ಬೊಟ್ಟು ಮಾಡಿ, ಅದರ ಪರಿಪೂರ್ಣತೆಯ ಕೊರತೆಯನ್ನು ಪ್ರಶ್ನಿಸಬೇಕೊ? ವಿಮರ್ಶಕರಾದವರಿಗೆ ಇರಬೇಕಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪರಿಗಣಿಸುವುದಾದರೆ, ಇವರೆಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಂಡರೂ ನಾವು ಸ್ವಾಗತಿಸಲೇಬೇಕು. ಯಾಕೆಂದರೆ ಇವರೆಡರಲ್ಲಿ ಯಾವುದು ಕೂಡಾ ಅಸತ್ಯವಲ್ಲ. ಹಾಗಾಗಿ, ಈ ಹಂತದಲ್ಲಿ ಹೊರಗಿನವರು ವಿಮರ್ಶಕರಿಗೆ ಆಯ್ಕೆಗಳನ್ನು ಮುಂದಿಡುವ ಬದಲು ಅಥವಾ ಅವರ ಆಯ್ಕೆಯನ್ನು ಸರಿ-ತಪ್ಪೆಂದು ಅಲ್ಲಗಳೆವ ಬದಲು, ಸ್ವತಃ ವಿಮರ್ಶಕರೇ ತಮ್ಮ ಮುಂದೆ ಈ ಪ್ರಶ್ನೆ ಇಟ್ಟುಕೊಳ್ಳಬೇಕಾಗುತ್ತದೆ. ಈ ನನ್ನ ವಿಮರ್ಶೆ ಮುಂದಿನ ಪೀಳಿಗೆಗೆ ಕೊಡುವ ಕಾಣ್ಕೆ ಏನು?

ಖ್ಯಾತ ಬರಹಗಾರ್ತಿ ವಿನಯಾ ಒಕ್ಕುಂದ ಅವರು ಕಾರ್ಯಕ್ರಮವೊಂದರಲ್ಲಿ “ಬಸವಣ್ಣನೂ ಪುರುಷ ಅಹಂಕಾರವನ್ನು ಮೀರಲು ಸಾಧ್ಯವಾಗಲಿಲ್ಲ” ಎಂದಾಡಿದ ಮಾತಿನ ಸುತ್ತ ಹುಟ್ಟಿಕೊಳ್ಳುತ್ತಿರುವ ಸಾಂಸ್ಕೃತಿಕ ಚರ್ಚೆಗಾಗಿ ಈ ಪೀಠಿಕೆ ಹಾಕಬೇಕಾಯ್ತು. ನಮಗೆಲ್ಲ ತಿಳಿದಮಟ್ಟಿಗೆ ವಿನಯಾ ಒಕ್ಕುಂದ ಅವರು ಸಂವೇದನಾಶೀಲ ಹೆಣ್ಮನದ ಬರಹಗಾರ್ತಿ. ಬಸವಣ್ಣನವರನ್ನು ಮತ್ತು ಇಡೀ ಶರಣ ಸಾಹಿತ್ಯದ ಕಾಳಜಿಯನ್ನು ಚೆನ್ನಾಗಿ ಅಧ್ಯಯನ ಮಾಡಿ ಅರ್ಥ ಮಾಡಿಕೊಂಡವರು. ಮತ್ತು, ಕರುನಾಡಿನ ಬಹಳಷ್ಟು ಫೆಮಿನಿಸ್ಟರಂತೆ ಅವರು ಕೂಡಾ ತಮ್ಮ ಫೆಮಿನಿಸಂ ವಾದಕ್ಕೆ ಶರಣ ಚಳವಳಿಯಿಂದ ದೇಸಿ ಒಳಹುಗಳನ್ನು ಪಡೆದುಕೊಂಡಂತವರು. ಹಾಗಾಗಿ ಬಸವಣ್ಣನನ್ನು ಪುರುಷ ಅಹಂಕಾರಿಯಾಗಿ ಆರೋಪಿಸುವಷ್ಟು ಅಸೂಕ್ಷ್ಮರಲ್ಲ ಎಂಬುದು ನನ್ನ ಅನಿಸಿಕೆ. ಆದರೆ ಪುರುಷಾಧಿಪತ್ಯದ ಅಹಂಕಾರ ವ್ಯಾಪ್ತಿ ಎಷ್ಟು ಸಂಕೀರ್ಣವಾದುದು, ಅಗಾಧವಾದುದು, ಹಾಸುಹೊಕ್ಕಾದುದು ಎಂಬುದನ್ನು ವಿವರಿಸಲು ಅವರು ಬಸವಣ್ಣನನ್ನು ಉಲ್ಲೇಖಿಸಿರುವುದು ಅವರ ಮಾತುಗಳಲ್ಲಿ ಧ್ವನಿತವಾಗುತ್ತದೆ. ಬಸವಣ್ಣನೊಳಗಿನ ಕೇಡನ್ನು ಬಯಲಿಗಿಡುವುದು ಭಾಷಣಕಾರ್ತಿಯ ಉದ್ದೇಶವಾಗಿತ್ತು ಎನ್ನುವುದಕ್ಕಿಂತಲೂ ಹೆಚ್ಚಾಗಿ, ಪರುಷಾಧಿಪತ್ಯದ ಅಹಂಕಾರದ ಕೇಡಿನ ಅಗಾಧತೆಯನ್ನು ಅರ್ಥ ಮಾಡಿಸುವುದು ಭಾಷಣಕಾರ್ತಿಯ ಉದ್ದೇಶವಾಗಿ ಗೋಚರಿಸುತ್ತದೆ. ಅದೇನೆ ಆದರೂ, ದೀಪದ ಬುಡದ ಕತ್ತಲೆಯನ್ನು ಬೊಟ್ಟು ಮಾಡಿದ ಕಾರಣಕ್ಕೆ ಅವರ ಮಾತುಗಳು ಚರ್ಚೆಗೀಡಾಗುತ್ತಿವೆ. ಯಾರೂ ಪರಿಪೂರ್ಣರಲ್ಲದ ಈ ಜಗತ್ತಿನಲ್ಲಿ, ಬಸವಣ್ಣನಂತವರನ್ನೂ ನಾವು ಪರಿಪೂರ್ಣತೆಯ ವಿಮರ್ಶೆಯ ತಕ್ಕಡಿಯಲ್ಲಿಟ್ಟು ಮುಂದಿನ ಪೀಳಿಗೆಗೆ ದಾಟಿಸುತ್ತಿರುವ ಸಂದೇಶವೇನು? ಎಂಬುದು ವಿನಯಾ ಅವರ ಮಾತುಗಳನ್ನು ವಿರೋಧಿಸುತ್ತಿರುವವರ ಪ್ರಶ್ನೆ.

ಈ ಪ್ರಶ್ನೆಯನ್ನು ಬೇರೆ ಯಾರೋ ಅವರ ಮುಂದೆ ಇರಿಸುವುದಕ್ಕಿಂತ ಅಥವಾ ಇಂತಹ ಪ್ರಶ್ನೆಗಳ ಮೂಲಕ ಅವರ ಆಯ್ಕೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ಮಾಡುವುದಕ್ಕಿಂತ ಸ್ವತಃ ವಿಮರ್ಶಕಿಯಾಗಿ ಅವರೇ ಇಂತದ್ದೊಂದು ಪ್ರಶ್ನೆ ಇರಿಸಿಕೊಳ್ಳುವುದು ಉಚಿತ ಎನ್ನಿಸುತ್ತಿದೆ.

ಮೌಢ್ಯ ಮತ್ತು ಮನುವಾದದ ವಿರುದ್ಧ ಬಂಡಾಯಗಾರ ಬಸವಣ್ಣನವರ ಕ್ರಾಂತಿಯ ಅಧ್ಯಾಯ ಶುರುವಾಗುವುದೇ ಹೆಣ್ಣಾದ ಕಾರಣಕ್ಕೆ ತನ್ನ ಅಕ್ಕನಿಗೆ ತನ್ನಂತೆ ಜನಿವಾರ ದೀಕ್ಷೆ ಇಲ್ಲ ಎಂಬ ಲಿಂಗ ಅಸಮಾನತೆಯನ್ನು ಪ್ರತಿಭಟಿಸುವ ಮೂಲಕ. ಮುಂದೆ ಸೂಳೆ ಸಂಕವ್ವೆಯಂತಹ ಶರಣೆಗೂ ಅನುಭವ ಮಂಟಪದಲ್ಲಿ ಗೌರವ ದೊರಕಿಸಿಕೊಡುವವರೆಗೆ ಬಸವಣ್ಣನವರ ಸ್ತ್ರೀವಾದ ವಿಕಾಸವಾಗುತ್ತದೆ. ದೀಪದ ರೂಪಕವಾಗಿ ನೋಡುವುದಾದರೆ ಇದು ಬಸವಣ್ಣನ ಜ್ಯೋತಿಯ ಬೆಳಕಾದರೆ; ವಿನಯಾ ಒಕ್ಕುಂದ ಉಲ್ಲೇಖಿಸಿದ ತನ್ನ ಮಡದಿಯ ಕುರಿತಾಗಿ ಬಸವಣ್ಣ ಆಡಿದ ಮಾತುಗಳು, ದೀಪದ ಬುಡದ ಕತ್ತಲೆಯಾಗಿ ನಾವು ಸಮೀಕರಿಸಿಕೊಳ್ಳಬಹುದು. ಈಗ ನಮ್ಮ ಮುಂದೆ ಉದ್ಭವಿಸುವ ಪ್ರಶ್ನೆ ಈ ಎರಡು ಆಯಾಮದಲ್ಲಿ ನಮಗೆ ಯಾವುದು ಮುಖ್ಯವಾಗಬೇಕು; ಯಾವುದು ಅಮುಖ್ಯವಾಗಬೇಕು. ಇದನ್ನು ಆಯಾ ವಿಮರ್ಶಕರೇ ಆಯ್ಕೆ ಮಾಡಿಕೊಳ್ಳಬೇಕು.

ಆದರೆ ಒಂದಂತೂ ಸತ್ಯ. ವಿನಯಾ ಅವರ ವಿಮರ್ಶಾ ವಿಷಯದ ಆಯ್ಕೆಯ ಕಾರಣಕ್ಕೆ, ಅವರ ಅಭಿಪ್ರಾಯವನ್ನು ‘ಮಹಿಳಾ ಅಹಂಕಾರ’ವೆಂದು ಲೇವಡಿ ಮಾಡುವುದಿದೆಯಲ್ಲ, ಅದಂತೂ ಪರಮ ಅಸೂಕ್ಷ್ಮತೆಯದ್ದು ಮತ್ತು ಸ್ವತಃ ಫೆಮಿನಿಸ್ಟನಾದ ಬಸವಣ್ಣನೂ ಒಪ್ಪಲಾರದಂತದ್ದು.

– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು

Leave a Reply