ಬೆಂಗಳೂರು ನಗರದ ರಸ್ತೆಗಳ ಮೇಲೆ ನಾಗರೀಕರು ವಾಹನಗಳಲ್ಲಿ ಸಂಚರಿಸಿದರೆ ಕೆಲವೇ ದಿನಗಳಲ್ಲಿ ಮೂಳೆ ವೈದ್ಯರ ಚಿಕಿತ್ಸೆಗೆ ಹೋಗಲೇಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರು ನಗರದ ರಸ್ತೆಗಳು ಒಂದು ರೀತಿಯಲ್ಲಿ ಮೂಳೆ ವೈದ್ಯರ ರಾಯಭಾರಿಗಳ ಸ್ಥಿತಿಯಲ್ಲಿವೆ.
ಮಾನ್ಯ ಬಿ.ಬಿ.ಎಂ.ಪಿ.ಯ ಆಯುಕ್ತರು ಒಂದು ಬಾರಿ ದ್ವಿಚಕ್ರ ವಾಹನದಲ್ಲಿ ಬೆಂಗಳೂರು ನಗರದ ರಸ್ತೆಗಳ ಮೇಲೆ ಹಾದು ಯಾವುದೇ ರೀತಿಯ ಮೂಳೆ ಸಮಸ್ಯೆಬಾರದೆ ಮನೆಗೆ ಮರಳಿದರೆ, ಆಗ ಅವರಿಗೆ ಬಹುಮಾನವನ್ನು ಕೊಡಬಹುದು.
ಮಾನ್ಯ ಬಿ.ಬಿ.ಎಂ.ಪಿ. ಆಯುಕ್ತರು ಯಾವುದೇ ಕಾರ್ಯವನ್ನು ಮಾಡದೇ ಇದ್ದರೂ ಚಿಂತೆಯಿಲ್ಲ. ಮೊದಲು ಬೆಂಗಳೂರು ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚಿ ಮತ್ತು ಜಲಮಂಡಳಿ, ವಿದ್ಯುತ್ ಇಲಾಖೆ, ಇವರುಗಳು ಅಗೆದು ಹಾಳು ಮಾಡಿರುವ ರಸ್ತೆಗಳನ್ನು ಸರಿಪಡಿಸಿ, ವೈಟ್ ಟ್ಯಾಪಿಂಗ್ ಹೆಸರಿನಲ್ಲಿ ಅರ್ಧಂಬರ್ಧ ಆಗಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ.
ಈ ಹಿಂದಿನ ಸರ್ಕಾರ ಚುನಾವಣೆಯ ಸಂದರ್ಭದಲ್ಲಿ ಜನರನ್ನು ಮೂರ್ಖರನ್ನಾಗಿಸಲು ಕಳಪೆ ಮಟ್ಟದ ಡಾಂಬರೀಕರಣವನ್ನು ಮಾಡಿದ ಕಾರಣದಿಂದ ಕೆಲವೇ ಕೆಲವು ತಿಂಗಳಲ್ಲಿ ಮತ್ತೆ ರಸ್ತೆಗಳ ಸ್ಥಿತಿ ಹಾಳಾಗಿದೆ. ಮಳೆಗಾಲ ಬರುವ ಮುನ್ನ ಬೇಸಿಗೆ ಕಾಲದಲ್ಲಿ ರಸ್ತೆಗಳಿಗೆ ಮುಕ್ತಿ ಕಾಣಿಸಿ. ಹೆಚ್ಚು ವಾಹನಗಳು ಓಡಾಡುವ ಪ್ರಮುಖ ರಸ್ತೆಗಳಿಗೆ ವೈಟ್ ಟ್ಯಾಪಿಂಗ್ ಮಾಡುವುದು ಹೆಚ್ಚು ಸೂಕ್ತವಾಗಿರುತ್ತದೆ. ಮಾನ್ಯ ಆಯುಕ್ತರು ಕೂಡಲೇ ಬೆಂಗಳೂರು ನಗರದ ವಾರ್ಡ್ ಮಟ್ಟದ ಅಭಿಯಂತರರುಗಳಿಗೆ ರಸ್ತೆ ರಿಪೇರಿ ಮಾಡುವ ಜವಾಬ್ದಾರಿಯನ್ನು ನೀಡಿ ಕಾಲವನ್ನು ನಿಗದಿಪಡಿಸಿ. ಇಲ್ಲದಿದ್ದರೆ, ಬೆಂಗಳೂರು ನಗರದ ಜನರಿಗೆ ಮೂಳೆ ವೈದ್ಯರಿಂದ ಉಚಿತ ಚಿಕಿತ್ಸೆಯ ವ್ಯವಸ್ಥೆಯನ್ನು ಮಾಡಿಕೊಡಿ.
- ಕೆ.ಎಸ್.ನಾಗರಾಜ್, ಬೆಂಗಳೂರು




