ಚಿಕ್ಕ ಕುಟುಂಬ ಹೊಂದಲು ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಿ

2 years ago

#Get #birth #control #surgery #smallfamily

ನೋ ಸ್ಕಾಲ್ಪೇಲ್ ವ್ಯಾಸಕ್ಟುಮಿ ಸೌಲಭ್ಯ ಪುರುಷರಿಗೆ ಸರಳ ವಿಧಾನ

ಬಳ್ಳಾರಿ: ಚಿಕ್ಕ ಕುಟುಂಬ ಹೊಂದಲು ಕೇವಲ ಮಹಿಳೆಯರು ಮಾತ್ರ ಶಸ್ತ್ರಚಿಕಿತ್ಸೆ ಮಾಡಿಸುವ ರೂಢಿಯನ್ನು ತಪ್ಪಿಸಲು, ಪುರುಷರು ಸಹ ಮುಂದೆ ಬಂದು ಅತ್ಯಂತ ಸರಳ, ಗಾಯವಿಲ್ಲದ ಹಾಗೂ ಹೊಲಿಗೆ ಇಲ್ಲದ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆಯಾದ ನೋ ಸ್ಕಾಲ್ಪೇಲ್ ವ್ಯಾಸಕ್ಟುಮಿಯನ್ನು ಮಾಡಿಸಲು ಮುಂದೆ ಬರಬೇಕು ಹಾಗೂ ಪ್ರತಿ ಮಂಗಳವಾರ ಜರುಗುವ ಆಯುಷ್ಮಾನ್ ಭವ ಆರೋಗ್ಯ ಮೇಳಗಳಲ್ಲಿ ಇದರ ಮಾಹಿತಿ ಪಡೆದುಕೊಳ್ಳಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ರಮೇಶ್ ಬಾಬು ವಿನಂತಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಬೆಂಬಲದೊಂದಿಗೆ ವಿಮ್ಸ್, ಜಿಲ್ಲಾ ಆಸ್ಪತ್ರೆ ಮತ್ತು ಸ್ಥಳೀಯ ತಜ್ಞ ವೈದ್ಯರುಗಳಿಂದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಮೇಳಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮೇಳಗಳಲ್ಲಿ ನೋ ಸ್ಕಾಲ್ಪೇಲ್ ವ್ಯಾಸಕ್ಟುಮಿ ಕುರಿತು ಮಾಹಿತಿ ಸಹ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ದಂಪತಿಗಳು ತಮ್ಮ ಸುಂದರ ಕುಟುಂಬಕ್ಕಾಗಿ ಚಿಕ್ಕ ಕುಟುಂಬ ಹೊಂದಲು ಮಹಿಳೆಯರಿಗೆ ಟ್ಯುಬೆಕ್ಟುಮಿ ಮತ್ತು ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಲಭ್ಯವಿದ್ದು, ಪತ್ನಿಯು ಎತ್ತರ ಕಡಿಮೆ ಇದ್ದರೆ, ಹೆರಿಗೆ ಶಸ್ತ್ರಚಿಕಿತ್ಸೆಯ ಮೂಲಕ ಆಗಿದ್ದರೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಅಥವಾ ಇನ್ನಾವುದಾರೂ ತೊಂದರೆ ಇದ್ದರೆ ಅಂತಹ ಸಂದರ್ಭದಲ್ಲಿ ಪುರುಷರು ನೋ ಸ್ಕಾಲ್ಪೇಲ್ ವ್ಯಾಸಕ್ಟುಮಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಬಹುದು ಎಂದು ತಿಳಿಸಿದ್ದಾರೆ.

ಇದರಿಂದ ಲೈಂಗಿಕ ನಿಶ್ಯಕ್ತಿ, ಪುರುಷತ್ವಕ್ಕೆ ಯಾವುದೇ ದಕ್ಕೆ ಅಥವಾ ಅಡ್ಡಿಪರಿಣಾಮಗಳು ಇರುವುದಿಲ್ಲ. ಎಂದಿನಂತೆ ಪುನಃ ಎಲ್ಲ ಕೆಲಸ ಕಾರ್ಯಕಗಳನ್ನು ಮಾಡಬಹುದಾಗಿದೆ. ಎಲ್ಲ ತಾಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳಲಾಗುತ್ತದೆ. ಇದು 05 ರಿಂದ 10 ನಿಮಿಷಗಳಲ್ಲಿ ನೇರವೆರುವ ಶಸ್ತ್ರಚಿಕಿತ್ಸೆಯಾಗಿದ್ದು, ಫಲಾನುಭವಿಗೆ ರೂ.1100/-ಗಳನ್ನು ಪ್ರೋತ್ಸಾಹ ಧನ ರೂಪದಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಆಯುಷ್ಮಾನ್ ಭವ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ ಒಟ್ಟು 1654 ಆರೋಗ್ಯ ಮೇಳಗಳನ್ನು ಆಯೋಜಿಸಲಾಗಿದೆ. ಇಲ್ಲಿಯವರೆಗೆ 85973 ಜನರು ತಪಾಸಣೆಗೆ ಒಳಪಟ್ಟಿದ್ದು, ಇವರಲ್ಲಿ 8329 ಗರ್ಭಿಣಿಯರು ಸೇರಿದ್ದಾರೆ. ಶಿಬಿರದಲ್ಲಿ 64296 ಜನಕ್ಕೆ ರಕ್ತದೊತ್ತಡ ಮತ್ತು 61722 ಜನರಿಗೆ ಮಧುಮೇಹ ಪರೀಕ್ಷೆ ಕೈಗೊಳ್ಳಲಾಗಿದೆ. ಅಲ್ಲದೇ 34654 ಜನರಿಗೆ ಬಾಯಿ ಕ್ಯಾನ್ಸರ್, 10831 ಜನರಿಗೆ ಸ್ತನ ಕ್ಯಾನ್ಸರ್, 5453 ಜನರಿಗೆ ಗರ್ಭಕಂಠದ ಕ್ಯಾನ್ಸರ್ ಪರೀಕ್ಷೆ ಮಾಡಲಾಗಿದೆ. 8471 ಜನರಿಗೆ ನೇತ್ರ ಪರೀಕ್ಷೆ ಮಾಡಲಾಗಿದ್ದು ಮತ್ತು 9462 ಜನರಿಗೆ ಕ್ಷಯರೋಗದ ಪರೀಕ್ಷೆ ಮಾಡಲಾಗಿದೆ. 6304 ಜನರಿಗೆ ಕುಷ್ಠರೋಗ ಪರೀಕ್ಷೆ ಕೈಗೊಳ್ಳಲಾಗಿದೆ. 3627 ಜನರಿಗೆ ಕುಟುಂಬ ಕಲ್ಯಾಣದ ವಿಧಾನಗಳ ಸೇವೆಗಳನ್ನು ಒದಗಿಸಲಾಗಿದೆ ಎಂದಿದ್ದಾರೆ.

ಶಿಬಿರಗಳಲ್ಲಿ ಇ-ಸಂಜೀವಿನಿ ಆಪ್ ಮೂಲಕ ತಜ್ಞ ವೈದ್ಯರನ್ನು ಯಾವುದೇ ಹಣದ ವೆಚ್ಚವಿಲ್ಲದೆ 10083 ಜನ ಸಂಪರ್ಕಿಸಿದ್ದಾರೆ. ಶಿಬಿರದಲ್ಲಿ 8397 ಜನರಿಗೆ ಆಯುಷ್ ಪದ್ದತಿ ಸೇವೆ ನೀಡಲಾಗಿದೆ. ಮೇಳಗಳಲ್ಲಿ 1371 ಆಹಾರ ಪರೀಕ್ಷೆಗಳನ್ನು ಕೈಗೊಳ್ಳಲಾಗಿದೆ. ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದಡಿ 2898 ಮಕ್ಕಳಿಗೆ ಲಸಿಕೆಯನ್ನು ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಶಿಬಿರಗಳಲ್ಲಿ 4057 ಆಯುಷ್ಮಾನ ಭಾರತ್ ಕಾರ್ಡ್ಗಳನ್ನು ಸೃಜನೆ ಮಾಡಲಾಗಿದೆ ಮತ್ತು 19586 ಜನರಿಗೆ ಆಭಾ ಕಾರ್ಡ್ ರಚಿಸಲಾಗಿದೆ. ಅಭಿಯಾನಡಿಯಲ್ಲಿ 91 ಉಚಿತ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ 3364 ರಕ್ತ ಯುನಿಟ್ ರಕ್ತ ಸಂಗ್ರಹಿಸಲಾಗಿದೆ. ಒಟ್ಟು ಅಂಗಾಂಗ ದಾನ ನೋಂದಣಿಯಲ್ಲಿ ಜಿಲ್ಲೆಯಲ್ಲಿ 1248 ಜನರು ಅಂಗಾಂಗ ದಾನ ನೋಂದಣಿ ಮಾಡಿಕೊಂಡಿದ್ದು, ರಾಜ್ಯಮಟ್ಟದಲ್ಲಿ ಬಳ್ಳಾರಿ ಜಿಲ್ಲೆ ಮೊದಲ ಸ್ಥಾನದಲ್ಲಿ ಇದೆ ಎಂದು ಹೇಳಿದ್ದಾರೆ.

ಎಲ್ಲ ಸಾರ್ವಜನಿಕರು ಆಯುಷ್ಮಾನ್ ಭಾರತ ಕಾರ್ಡ್ಗಳನ್ನು ಮಾಡಿಸುವ ಮೂಲಕ ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ 5 ಲಕ್ಷದವರೆಗೆ ಹಾಗೂ ಎಪಿಎಲ್ ಕುಟುಂಬಗಳಿಗೆ ವಾರ್ಷಿಕ 1.5 ಲಕ್ಷದವರೆಗೆ ಉಚಿತ ಚಿಕಿತ್ಸಾ ವೆಚ್ಚವನ್ನು ಸುಸಜ್ಜಿತ ಸರಕಾರಿ ಅಥವಾ ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ಪಡೆಯಬಹುದು. ಕಾರ್ಡ್ಗಳನ್ನು ಗ್ರಾಮ್ ಒನ್, ಕರ್ನಾಟಕ ಒನ್, ಬಳ್ಳಾರಿ ಒನ್ಗಳಲ್ಲಿ ಮಾಡಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಆರೋಗ್ಯ ಮೇಳಗಳ ಯಶಸ್ವಿಗಾಗಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಮತ್ತು ತಂಡ ಜಿಲ್ಲಾ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳು ಹಾಗೂ ತಾಲ್ಲೂಕ ಆರೋಗ್ಯ ಅಧಿಕಾರಿಗಳು ಸೂಕ್ತ ಮೇಲ್ವಿಚಾರಣೆ ಕೈಗೊಳ್ಳಲಾಗುತ್ತಿದ್ದು, ಆಶಾಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಮಾಹಿತಿ ನೀಡುತ್ತಿದ್ದಾರೆ. ಆರೋಗ್ಯ ಶಿಕ್ಷಣಾಧಿಕಾರಿಗಳು ಆರೋಗ್ಯ ಜಾಗೃತಿ ಕಾರ್ಯ ಕೈಗೊಳ್ಳುತ್ತಿದ್ದಾರೆ. ಸಾರ್ವಜನಿಕರು ಮೇಳಗಳಲ್ಲಿ ಭಾಗವಹಿಸಿ ಆರೋಗ್ಯಯುತ ಬಳ್ಳಾರಿ ಜಿಲ್ಲೆಯನ್ನಾಗಿಸಲು ಸಹಕರಿಸಬೇಕು ಎಂದು ಕೋರಿದ್ದಾರೆ.

Leave a Reply