ಬೆಂಗಳೂರು: ಪ್ರತಿಷ್ಠಿತ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಫೆಬ್ರವರಿ 29 ರಿಂದ ಮಾರ್ಚ್ 7 ರವರೆಗೆ ನಡೆಯಲಿದೆ. ಮಾನವೀಯತೆಯ ಸಂದೇಶಗಳು ಈ ಬಾರಿ ಚಿತ್ರೋತ್ಸವದ ಪ್ರಮುಖ ಆಶಯವಾಗಿರಲಿವೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ 15ನೇ ಆವೃತ್ತಿಯನ್ನು ಫೆಬ್ರವರಿ 29ರ ಸಂಜೆ ಉದ್ಘಾಟನೆಯನ್ನು ವಿಧಾನಸೌಧದ ಮುಂಭಾಗದಲ್ಲಿ ನೆರವೇರಿಸಲಾಗುವುದು. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ದೇಶವಿದೇಶಗಳಲ್ಲಿ ಮನ್ನಣೆ ಪಡೆದಿರುವ ಚಿತ್ರೋತ್ಸವವಾಗಿದೆ. ವಿದೇಶಿ ಚಿತ್ರಗಳನ್ನು ಪ್ರದರ್ಶೀಸುವುದರ ಜೊತೆಗೆ ಕನ್ನಡ ಸೇರಿದಂತೆ ದೇಶದ ವಿವಿಧ ಭಾಷಾ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.
ಮಾರ್ಚ್ 7ರಂದು ಸಮಾರೋಪ ಸಮಾರಂಭ ನಡೆಯಲಿದ್ದು ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ. ಸಂಘಟನಾ ಸಮಿತಿ ಸಭೆಯ ಜೊತೆಗೆ ಕೋರ್ ಸಮಿತಿಯೂ ರಚನೆಯಾಗಿದ್ದು, ಸಮಾರಂಭ ಯಾವ ರೀತಿ ಏರ್ಪಡಿಸಬೇಕೆಂದು ತೀರ್ಮಾನವಾಗುತ್ತದೆ.
ಕೋಮುವಾದದ, ಶಾಂತಿ, ಸಮಾನತೆ, ಲಿಂಗ ಸಮಾನತೆ, ಸೌಹಾರ್ದತೆ, ಮಾನವೀಯತೆಯ ಸಂದೇಶಗಳು ಸಮಾಜಕ್ಕೆ ತಲುಪಬೇಕು. ಬಹುತ್ವಕ್ಕೆ ಹೆಚ್ಚು ಒತ್ತು ಕೊಡುವ ರೀತಿಯಲ್ಲಿ ಚಲನಚಿತ್ರೋತ್ಸವ ನಡೆಯಲಿದೆ. ಚಿತ್ರೋತ್ಸವವನ್ನು ಹೆಚ್ಚು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಅಗತ್ಯವಿರುವ ಆರ್ಥಿಕ ನೆರವನ್ನು ಸರ್ಕಾರ ಒದಗಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಹಿಂದೆ ವಿಧಾನಸೌಧದ ಮುಂಭಾಗದಲ್ಲಿಯೇ ಅಂತರರಾಷ್ಟ್ರಿಯ ಚಲನಚಿತ್ರೋತ್ಸವದ ಉದ್ಘಾಟನೆಯಾಗುತ್ತಿತ್ತು. ದೇಶವಿದೇಶದ ಸಿನಿರಂಗದ ಪ್ರಖ್ಯಾತ ಕಲಾವಿದರನ್ನು ಕರೆಸಲಾಗುತ್ತಿದೆ. ಈ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದ್ದು, ಅಂತರರಾಷ್ಟ್ರಿಯ ಚಲನಚಿತ್ರೋತ್ಸವವನ್ನು ಯಶಸ್ವಿಯಾಗಲಿದೆ ಎಂಬ ವಿಶ್ವಾಸವಿದೆ ಎಂದರು.




