ಉತ್ತಮ ಕಂಟೆಂಟ್ ಹೊಂದಿರುವ ಟಗರು ಪಲ್ಯ

2 years ago

ಡಾಲಿ ಪಿಕ್ಚ್ ರ್ಸ್ ಬ್ಯಾನರ್ ಅಡಿಯಲ್ಲಿ ನಟ ಧನಂಜಯ್ ನಿರ್ಮಿಸಿರುವ  ‘ಟಗರು ಪಲ್ಯ’ ಚಿತ್ರ ನೋಡಿದೆ. ರಾಜ್ಯಾದ್ಯಂತ ಏಕಕಾಲಕ್ಕೆ 175 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರ  ತನ್ನ ಕಥಾವಸ್ತು, ಮಂಡ್ಯ ಭಾಗದ ಭಾಷೆಯ ದೇಶೀಸೊಗಡು, ವಾಸುಕಿ ವೈಭವ್ ಎಂಬ ಮಧುರ ಕಂಠದ ಗಾಯಕನ ಸಂಗೀತ ನಿರ್ದೇಶನ, ದೃಶ್ಯಕಾವ್ಯದಂತಿರುವ ಪ್ರಾಕೃತಿಕ ಸೌಂದರ್ಯದ ಲೊಕೇಶನ್, ಧನಂಜಯ ಅವರೆ ಬರೆದಿರುವ ಒಂದು ಸುಂದರ ಹಾಡೂ ಸೇರಿದಂತೆ ಕಮರ್ಷಿಯಲ್ ಕಂಟೆಂಟ್ ಹಾಗೂ ಸ್ಟಾರ್ ನಟನಟಿಯರ ಹೈ ಓಲ್ಟೇಜ್ ಭರಾಟೆಯೇ ಜೋರಾಗಿರುವ ಈ ಕಾಲಘಟ್ಟದಲ್ಲಿ  ಕೆಲವೇ ನುರಿತ ನಟ ನಟಿಯರು ಹಾಗೂ ಹೊಸ ಕಲಾವಿದರ ಮೂಲಕ ಕಡಿಮೆ ಬಜೆಟ್ನಲ್ಲಿಯೂ ಉತ್ತಮ ಸಂದೇಶವಿರುವ ಕಂಟೆಂಟನ್ನು ಕಲಾತ್ಮಕವಾಗಿ ನೀಡಬಹುದು ಎಂಬುದನ್ನು ಟಗರು ಪಲ್ಯ ಚಿತ್ರ ಸಾಬೀತುಪಡಿಸಿದೆ.

      ಉಮೇಶ್ ಕೃಪಾ ಅವರ ನಿರ್ದೇಶನದ ಈ ಚಿತ್ರದಲ್ಲಿ ನಟ ಪ್ರೇಮ್ ಅವರ ಮಗಳು ಅಮೃತ ಅವರು ನಾಯಕ ನಟಿಯಾಗಿ, ಇಕ್ಕಟ್ ಖ್ಯಾತಿಯ ನಾಗಭೂಷಣ್ ನಾಯಕ ನಟನಾಗಿ ನಟಿಸಿರುವ ಈ ಚಿತ್ರದಲ್ಲಿ ಕಥೆಯ ದೃಷ್ಟಿಯಿಂದ ಅಷ್ಟೆ ಈತನನ್ನು ನಾಯಕನೆನ್ನಬಹುದು, ಹಾಗೆ ನೋಡಿದರೆ ಟಗರುನೇ ಈ ಚಿತ್ರದ ನಿಜವಾದ ನಾಯಕ ನಟ. ಇಡೀ ಕಥೆಯ ಪಾತ್ರಗಳು ಈ ಟಗರುವಿನ ಪಲ್ಯವನ್ನು ಸವಿಯುವ ಸಲುವಾಗಿಯೇ ಚಡಪಡಿಸುತ್ತಿರುವುದು. 

           ತಾರಾ ಮತ್ತು ರಂಗಾಯಣ ರಘು ತಂದೆತಾಯಿ ಪಾತ್ರಗಳು. ಇವರಿಗೊಬ್ಬಳೇ ಮಗಳು ಜ್ಯೋತಿ (ಅಮೃತ ) ಅವಳಿಗೆ ಬೆಂಗಳೂರಿನ ಇಂಜಿನಿಯರ್ ಹುಡುಗನೊಂದಿಗೆ ಮದುವೆ ಮಾತಾಗಿದೆ ( ಮದುಮಗ ವಾಸುಕಿ ವೈಭವ್ ) ಮದುವೆಗೆ ಮೊದಲು ತಂದೆ ತಾನು ಮನೆದೇವರಿಗೆ ಕಟ್ಟಿಕೊಂಡಿರುವ ಹರಕೆ ಪೂರೈಸಲು ಕಾಡಿನ ನಡುವೆ ಜಲಪಾತ( ಗಗನ ಚುಕ್ಕಿ ,ಬರಚುಕ್ಕಿ ಜಲಪಾತ ) ಬಳಿ ಇರುವ  ದೇವರ ಸನ್ನಿಧಿಗೆ ತಾನು ಬಲಿ ಕೊಡಲು ಹರಕೆ ಹೊತ್ತ ಕ್ವಿಂಟಾಲ್ ತೂಕದ ಮಜಭೂತು ಟಗರಿನೊಂದಿಗೆ ತನ್ನ  ಹಟ್ಟಿಯ ಜನರೊಟ್ಟಿಗೆ ತನ್ನ ಮಗಳು, ಹೆಂಡತಿ( ತಾರಾ ) ತನ್ನಣ್ಣ ( ವೈಜನಾಥ ಬಿರಾದಾರ್,) ತನ್ನ ತಂದೆ ತಾಯಿ ಕಳೆದುಕೊಡು ಅನಾಥನಾಗಿರುವ ತನ್ನ ತಂಗಿಯ ಮಗ( ಅಳಿಯ ) ನ ಜೊತೆ ಬಂದು ಹರಕೆ ತೀರಿಸಲು ದೇವರ ಮುಂದೆ ನಿಂತು ಪರಿಪರಿಯಾಗಿ ಬೇಡಿಕೊಂಡರೂ, ಅದೆಷ್ಟು ಸಲ ಅದರ ಕುತ್ತಿಗೆಗೆ ತೀರ್ಥದ ನೀರು ಚಿಮುಕಿಸಿದರೂ ಟಗರು ತಲೆ ಮೈ ಒದರದೆ ನಿಲ್ಲುತ್ತದೆ.

ದೇವಿಗೆ ಯಾಕೊ ಕೋಪ ಬಂದಿರಬೇಕು, ಅಥವಾ ತಮ್ಮದೇ ಯಾವುದಾದರೂ ಪೂರೈಸದೆ ಬಾಕಿ ಇರುವ ಹರಕೆ ಇರಬೇಕು ಎಂದು ಪರಿಪರಿಯಾಗಿ ಅದೇನಿದ್ದರೂ ಮಗಳಿಗೋಸ್ಕರ ಎರಡೆಕೆರೆ ಜಮೀನು ಮಾರಿ ಗ್ರಾಂಡಾಗಿ ಮದುವೆ ಮಾಡಲು ತುದಿಗಾಲಲ್ಲಿ ಇರುವ ತಂದೆ (ರಂಗಾಯಣ ರಘು )  ಬಾಡೂಟಕ್ಕೆ ಬಂದು, ಹಸಿವು ತಾಳಲಾರದೆ  ಕುರಿಯನ್ನು, ಊಟಕ್ಕೆ ಕರೆದವರನ್ನೂ ಬೈಯ್ತಾ ಇರೋ ಊರ ಜನರು, ಒಂದು ಕಡೆಯಾದರೆ, ಗೊತ್ತಾಗಿರುವ ಬೆಂಗಳೂರಿನ ಇಂಜಿನಿಯರ್ ಹುಡುಗನ ಕಡೆ ಗಮನವೇ ಇರದೆ, ತನ್ನ ಮಾಮನ ಜೊತೆ ( ತನ್ನ ತಂದೆಯ ತಂಗಿಯ ಮಗ ) ಪ್ರೀತಿಯಲ್ಲಿ ಬಿದ್ದು ಇಂದೇ ಅವನ ಜೊತೆ  ಓಡಿ ಹೋಗಲು ಸಂಚು ಹೂಡಿರುವ  ಮಗಳ  ಹುನ್ನಾರ ತಿಳಿದು ಅದನ್ನು ತನ್ನ ಗಂಡನಿಗೆ ಹೇಳಲಾರದೆ, ಹೇಳಲು ಸಮಯ ಸಿಗದೆ ಪರಿತಪಿಸುತ್ತಿರುವ ತಾಯಿಯ ಪಾತ್ರದಲ್ಲಿ ತಾರಾ ಅವರ ಅಭಿನಯ ಹಾಗೂ ಆ ಗ್ರಾಮ್ಯ ಭಾಷೆಗೆ ಆಕೆ ಜೀವ ತುಂಬಿಸಿರುವ ಪರಿ, ಒಂದು ತೂಕದ್ದಾದರೆ, ಅವಿದ್ಯಾವಂತ  ರೈತರ ಮಕ್ಕಳಾದರು ಪೇಟೆ ಸೇರಿ ಸುಖ ಜೀವನ ನಡೆಸಬೇಕೆಂಬ ಕಾರಣಕ್ಕಾಗಿ ಮಗಳನ್ನು  ಪೇಟೆಯ  ಇಂಜಿನಿಯರ್ ನನ್ನು ಅಳಿಯನನ್ನಾಗಿ ಮಾಡಿಕೊಳ್ಳುವ ಕನಸಿನ ಹಿಂದೆ ಬಿದ್ದ ಹೆಣ್ಣು ಮಗಳ ತಂದೆಯಾಗಿ, ರಂಗಾಯಣ ರಘು ಚಿತ್ರದ ಉದ್ದಕ್ಕೂ  ನೀಡಿರುವ ಭಾವಾಭಿನಯ ಆತನ ವೃತ್ತಿ ಜೀನಕ್ಕೆ ಅಂಟಿರುವ ಕಾಮಿಡಿ ಆಕ್ಟರ್ ಎಂಬ ಶೇಡ್ ಅನ್ನು ಮಸುಕು ಮಾಡಿ ತಾನು ಎಲ್ಲ ಪಾತ್ರಕ್ಕೂ ಸೈ ಅನ್ನುವ  ಹಾಗೆ ನಟಿಸಿದ್ದಾರೆ. ಇದು ಚಿತ್ರದ ಇನ್ನೊಂದು ತೂಕ.

    ಹಳ್ಳಿಯ ಹುಡುಗಿಯನ್ನು ಸೊಸೆ ಮಾಡಿಕೊಳ್ಳಲೆಂದು ತನ್ನ ಮಗ ( ವಾಸುಕಿ ವೈಭವ್) ನೊಂದಿಗೆ ಪೂಜೆಗೆ ಬಂದಿರುವ ( ಚಿತ್ರಾ ಶಣೈ, ಹಾಗು ಅವರ ಗಂಡ ಶ್ರೀನಾಥ್ ವಶಿಷ್ಟ)   ಅವರ ನಗರದ ಜನರ ಹುಸಿ ಆಡಂಬರ, ಸೋಗಲಾಡಿತನಗಳಿಗೆ ಜೀವ ಬಂದಂತೆ ನಟಿಸಿದ್ದಾರೆ.
     
ಚಿತ್ರದ ಮೊದಲ ಅರ್ಧ ಸ್ವಲ್ಪ ಲ್ಯಾಗ್ ಅನ್ನಿಸುತ್ತೆ, ನಿಜವಾಗಿಯೂ ಈ ಚಿತ್ರಕಥೆಯು ತನ್ನ ವೇಗವನ್ನು ಪಡೆದುಕೊಳ್ಳುವುದೇ ಇಂಟರ್ವಲ್ ನಂತರ. ನಗರ ಜೀವನ , ಹಳ್ಳಿ ಜೀವನಗಳೆಂಬ ಎರಡು ಆಯ್ಕೆಗಳು ಬಂದಾಗ  ಎಲ್ಲರ ಓಟ ನಗರದ ಕಡೆಗೆ, ಹಳ್ಳಿ ಮುದುಕರ, ರೋಗಿಗಳ ಹಾಗು ಭೂಮಿಯಯನ್ನು ಬಿಟ್ಟು ಹೋಗಲಾಗದ ಸಂಕಟಗಳಿಗೆ ಅಂಟಿಕೊಂಡವರ ತಾಣವಾಗಿದೆ. ಉನ್ನತ ವ್ಯಾಸಂಗದ ಕನಸು ಬಿಟ್ಟು ಬೇಸಾಯದಲ್ಲಿ ನಿರತ ವಯಸ್ಸಿಗೆ ಬಂದ ಹುಡುಗರಿಗೆ ಗಂಡು ಕೊಡಲು ಹಿಂದೇಟು ಹಾಕುತ್ತಿರುವ ಈ  ಮಂದಿಗೆ, ಹಳ್ಳಿಯ ರೈತ  ದುಡಿಯದಿದ್ದಲ್ಲಿ ಅವರಿಗೆ ಜೀವ ಹಿಡಿದುಕೊಳ್ಳಲು ಅನ್ನ ನೀಡುವವರಿಲ್ಲವೆಂಬ ಅರಿವನ್ನೂ ಚಿತ್ರ ಮೂಡಿಸುತ್ತದೆ.

ಮದುವೆ ಆಗಲು ಒಪ್ಪಿದ‌ ಪೇಟೆಯ ಗಂಡು ಹೈಜೀನಿಕ್ ನೆಪದಲ್ಲಿ ಹುಡುಗಿಯಿಂದ ಮಾರು ದೂರ ನಿಲ್ಲುವವನು. ಅವನ ತಾಯಿಗಾದರೋ ಹುಡುಗಿಯ ಆಸ್ತಿಯ ಮೇಲೆಯೇ ಕಣ್ಣು. ಕೊನೆಗೆ ಹುಡುಗಿ ಹಿರಿಯರ ಕಣ್ಣು ತೆರೆಸಿ ತಾನು ಪ್ರೀತಿಸುತಿದ್ದ ವಿಷಯವನ್ನು ತನ್ನ ಅಪ್ಪನಿಗೆ ಹೇಳಿ ತನ್ನ ಮಾವನೊಂದಿಗೆ ಮದುವೆಯಾಗಲು  ಒಪ್ಪಿಗೆ ಪಡೆಯುವುದರೊಂದಿಗೆ ಟಗರು ತಲೆ ಆಡಿಸಿ, ಮೈ ಒದರಿ, ದೇವರು ಅಸ್ತು ಎನ್ನುವುದರೊಂದಿಗೆ ಚಿತ್ರ ಮುಗಿಯುತ್ತದೆ.

                  ಚಿತ್ರದ ಕೊನೆಯ ದೃಶ್ಯದಲ್ಲಿ ಬರುವ  ಶರತ್ ಲೋಹಿತಾಶ್ವ ಹಾಗೂ ಕಿರುತೆರೆ ನಟಿ ಪುಟ್ಟಗೌರಿ ಸೀರಿಯಲ್ ನ ಅಜ್ಜಿ ಯ ಪಾತ್ರದ ನಟಿ ತಮ್ಮ ಸ್ಮರಣೀಯವಾದ ಅಭಿನಯದ ಮೂಲಕ ಮನಸೆಳೆಯುತ್ತಾರೆ.
          
 
ಚಿತ್ರದ ಕೊನೆಯಲ್ಲಿ ಬರುವ ಧನಂಜಯ್ ಅವರು ದೇವನೂರ ಮಹಾದೇವರ ಕುಸುಮಬಾಲೆಯಲ್ಲಿ ಬರುವ  “ಸಂಬಂಜ ಅನ್ನೋದು ದೊಡ್ದು ಕನಾ” ಮಾತಿನ  ಮೂಲಕ ಶುರು ಆಗುವ ಹಾಡು ಮತ್ತೊಮ್ಮೆ ಸಡಿಲಗೊಳ್ಳುತ್ತಿರುವ ಮನುಷ್ಯ ಸಂಬಂಧಗಳನ್ನು ಬೆಸೆಯಬೇಗಾಗಿರುವ ಅನಿವಾರ್ಯತೆಯನ್ನು ಕಟ್ಟಿಕೊಡುತ್ತದೆ.

        ನಟ ಪ್ರೇಮ್ ಅವರ ಮಗಳಿಗಿದು ಹೊಸ ಚಿತ್ರವಾದರೂ ಚಿತ್ರದ ದ್ವಿತೀಯಾರ್ಧದಲ್ಲಿ ಆಕೆಯ ಅಭಿನಯ ಅನುಭವಿ ನಟಿಯೊಬ್ಬಳು ಅಭಿನಯಿಸಿದಂತಿದೆ.  
      
               ವಾಸುಕಿ ವೈಭವ ಹಾಡಿಗೇ ಸರಿ. ಪ್ರತೀ ಫ್ರೇಮ್ ನಲ್ಲೂ ಆತನಿಂದ ಅಭಿನಯ ತೆಗೆಸಲು ನಿರ್ದೇಶಕ ಪಟ್ಟಿರುವ ಶ್ರಮವೇ ಎದ್ದುಕಾಣುವಂತಿದೆ. ಆದರೆ ಚಿತ್ರಕ್ಕೆ ಈತ ನೀಡಿರುವ ಸಂಗೀತ ಕನ್ನಡಕ್ಕೆ ಮತ್ತೊಬ್ಬ ಭರವಸೆಯ ಸಂಗೀತ ನಿರ್ದೇಶಕನ ಆಗಮನವನ್ನು ಸಾರುವಂತಿದೆ.  

           ಓವರ್ ಕುಡುಕನ  ಪಾತ್ರದಲ್ಲಿ  ( ಬಹುಶಃ ಮೈಸೂರು ಆರ್ಕೆಸ್ಟ್ರಾ ಖ್ಯಾತಿಯ  ಪೂರ್ಣ ಚಂದ್ರ ಅನ್ನಿಸುತ್ತೆ ?) ಅದು ಓವರ್ ಆಕ್ಟಿಂಗ್ ಅನ್ನಿಸುತ್ತೆ, ಚಿತ್ರದ ಉದ್ದಕ್ಕೂ ಒಂದೇ ಲೊಕೇಶನ್ ಏಕತಾನತೆ ಅಂತ ಅನ್ನಿಸಿದರೂ ಇಡೀ ಕಥೆ ನಡೆಯುವ ಫ್ಲಾಟ್ ಇದೊಂದೇ ಆಗಿರುವುದರಿಂದ ಅಂತ ಸಮರ್ಥಿಸಿಕೊಂಡರೂ, ಕೆಲವು ಫ್ಲಾಶ್ ಬ್ಯಾಕ್ಗಳ ಮೂಲಕವಾದರೂ ಇನ್ನೊಂದಿಷ್ಟು ಲೊಕೇಶನ್ಗಳಲ್ಲಿ ಪ್ರೇಕ್ಷಕನನ್ನು ಸುತ್ತಿಸಬಹುದಾಗಿತ್ತು.
                  
ಸಂತೋಷವಾಗಿ ಬದುಕೋಕೆ ಪೇಟೆನೇ ಬೇಕಾಗಿಲ್ಲ. ಸಂಬಂಧಗಳ ನಡುವಿನ ಆಪ್ತತೆ  ಮುಖ್ಯ. ವೃತ್ತಿ ಗೌರವ ಹೆಚ್ಚಿನ ಓದು  ಮತ್ತು ದೊಡ್ಡ ಸಂಬಳ ಪಡೆಯಯವರಿಗೆ  ಮಾತ್ರ  ಅಲ್ಲ. ನಮಗೆ ಅನ್ನ ಕೊಡುವ ರೈತನ ಬೇಸಾಯಕ್ಕೂ  ಇದೆ. ದೇಶ ಕಾಯುವ ಸೈನಿಕನ ಹಾಗೆಯೇ ದೇಹ ಕಾಯುವ  ಅನ್ನವನ್ನು  ಬೆಳೆಯುವ ರೈತ ಇಲ್ಲ ಅಂದರೆ ನಮ್ಮ ಉಸಿರೇ ಇರಲಾರದೆಂಬ ಬದುಕಿನ ಸತ್ಯವನ್ನು ಮುಟ್ಟಿಸುವ ಕೆಲಸವನ್ನು ಹಿರಿಯ ಕಿರಿಯ ನುರಿತ ಅರಿತ ಕಲಾವಿದರ ಮೂಲಕ  ಚಿತ್ರ ಯಶಸ್ವಿಯಾಗಿ ತಲುಪಿಸುವ ಕೆಲಸವನ್ನು ಚಿತ್ರ ತಂಡ ಅಚ್ಚುಕಟ್ಟಾಗಿ ಮಾಡಿದೆ.

– ಪ್ರೊ.ಟಿ.ಯಲ್ಲಪ್ಪ, ಅಧ್ಯಾಪಕರು

Leave a Reply