ಸಂದರ್ಶನ: ಪ್ರದೀಪ್ ಮಾಲ್ಗುಡಿ
ಸಿನಿಮಾ, ಧಾರಾವಾಹಿ ಮತ್ತು ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಪರಿಣತ ನಟರೂ ಆಗಿರುವ ಸಂಪತ್ ಕುಮಾರ್ ನಾ. ಅವರು ಸೈದ್ಧಾಂತಿಕ ತಿಳುವಳಿಕೆಯನ್ನು ಭಾವನಾತ್ಮಕವಾಗಿ ರಂಗಕ್ಕೆ ತರುವ ಪ್ರಯತ್ನಗಳಲ್ಲಿ ಯಶಸ್ವಿಯಾಗಿದ್ದಾರೆ. ಏ.ಪಿ.ಎಸ್. ಸಂಜೆ ಕಾಲೇಜಿನಲ್ಲಿ ಪದವಿ, ಅಭಿನಯ ತರಂಗದಲ್ಲಿ ಡಿಪ್ಲಮೊ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದಲ್ಲಿ ನಾಟಕ ಕಲೆಯಲ್ಲಿ ಎಂ.ಎ., ಪದವಿಯನ್ನು ಪಡೆದಿದ್ದಾರೆ. ಇವರು ನಿರ್ದೇಶಿಸಿದ ಸ್ಮಶಾನ ಕುರುಕ್ಷೇತ್ರ, ದಾರಾಶಿಕೋ, ಕುಲಂ, ಚದುರಂಗ ಮೊದಲಾದ ನಾಟಕಗಳು ವಿಶಿಷ್ಟ ದೃಶ್ಯ ಸಂಯೋಜನೆಗಳಿಗೆ ಹೆಸರಾಗಿವೆ. ಒಲವೆ ಜೀವನ ಲೆಕ್ಕಾಚಾರ, ಬೆಂಕಿಪಟ್ಣ, ಕಿರಗೂರಿನ ಗಯ್ಯಾಳಿಗಳು, ಕೆಜಿಎಫ್, ಪಟಾಕಿ, ಕವಲುದಾರಿ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈಗ ಸಂತೋಷ್ ಕೊಡೆಂಕೇರಿ ನಿರ್ದೇಶನದ ರವಿಕೆ ಪ್ರಸಂಗ ಚಿತ್ರದಲ್ಲಿ ಮುಖ್ಯವಾದ ಪಾತ್ರವನ್ನು ನಿರ್ವಹಿಸಿದ್ದಾರೆ. 2014ರಲ್ಲಿ ಅವರೊಡನೆ ನಡೆಸಿದ ಸಂದರ್ಶನ.
ಪ್ರಶ್ನೆ: ರಂಗಭೂಮಿ ಕಡೆ ಬರಲು ಕಾರಣ ಏನು?
ಉತ್ತರ: ಗ್ರಾಮೀಣ ಪರಿಸರದಿಂದ ಬಂದವನಾದ್ದರಿಂದ ನನಗೆ ಪೌರಾಣಿಕ ನಾಟಕಗಳನ್ನು ನೋಡುವ ಅವಕಾಶ ಸಹಜವಾಗಿ ಸಿಕ್ಕಿತ್ತು. ನನ್ನ ತಾತ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸ್ತಿದ್ರಂತೆ. ಅಪ್ಪಾಜಿ ಕೂಡ ಅಭಿನಯಿಸ್ತಿದ್ರಂತೆ. ನಮ್ಮ ಕಾಲಕ್ಕೆ ಅವರು ಅಭಿನಯ ನಿಲ್ಲಿಸಿಬಿಟ್ಟಿದ್ದರು. ಆದರೆ ಆಗಾಗ ನಮ್ಮೂರಿನ ಸುತ್ತ ನಡೆಯುತ್ತಿದ್ದ ಪೌರಾಣಿಕ ನಾಟಕಗಳು ನನಗೆ ಪ್ರೇರಣೆ ನೀಡಿದವು.
ಪ್ರಶ್ನೆ: ಹವ್ಯಾಸಿ ರಂಗಭೂಮಿಗೆ ಕರೆತಂದವರು ಯಾರು?
ಉತ್ತರ: ಪದವಿ ಹಂತದಲ್ಲಿ ಇಂಗ್ಲಿಶ್ ಮೇಷ್ಟ್ರು ಒಂದು ದಿನ ಕಾಲೇಜಲ್ಲಿ ನಾನು ಮಾಡಿದ ಶಕುನಿ ಪಾತ್ರವನ್ನು ನೋಡಿ ನಾಟಕ ಮಾಡೋಕೆ ಇಷ್ಟ ಇದೆಯೇನೋ ಅಂತ ಕೇಳಿದರು. ಆಮೇಲೆ ಎಂ.ಎಸ್.ಮೂರ್ತಿಯವರ ಅಭಿನಯ ತರಂಗ ಸೇರಿದೆ. ಅಲ್ಲಿಂದ ಮುಂದೆ ನಿರಂತರವಾಗಿ ಹನ್ನೆರಡು ವರ್ಷಗಳ ಕಾಲ ರಂಗಭೂಮಿಯಲ್ಲಿ ಕೆಲಸ ಮಾಡೋಕೆ ಅವಕಾಶ ಸಿಕ್ತು.
ಪ್ರಶ್ನೆ: ನೀವು ನೀನಾಸಂನ ವಿದ್ಯಾರ್ಥಿನಾ?
ಉತ್ತರ: ಖಂಡಿತ ಇಲ್ಲ. ನಾನು ಬೀದಿ ರಂಗಭೂಮಿ, ಹವ್ಯಾಸಿ ರಂಗಭೂಮಿಯಲ್ಲಿ ಕಲಿತದ್ದು ಹೆಚ್ಚು. ಹಾಗೆಯೆ ಪ್ರತಿ ನಾಟಕವು ನನಗೆ ಹೊಸಹೊಸ ಅನುಭವಗಳನ್ನು ನೀಡ್ತಾ ಹೋಯಿತು. ಅನೇಕರು ನನ್ನನ್ನು ನೀನಾಸಮ್ಮಾ? ಅಂತ ಕೇಳ್ತಾರೆ. ಆದರೆ ನಾನು ನೀನಾಸಂ ವಿದ್ಯಾರ್ಥಿ ಅಲ್ಲ.
ಪ್ರಶ್ನೆ: ನಿಮ್ಮ ರಂಗ ಗುರು ಯಾರು?
ಉತ್ತರ: ಸಿ. ಬಸವಲಿಂಗಯ್ಯ ಅವರು ನನ್ನ ಗುರುಗಳು. ಅವರ ಜೊತೆಗೆ ಪ್ರೊ. ರಾಜಪ್ಪ ದಳವಾಯಿಯವರು ಮೊದಲಾದವರು.
ಪ್ರಶ್ನೆ: ನಿಮ್ಮ ನಿರ್ದೇಶನದ ನಾಟಕಗಳಲ್ಲಿ ಬೌದ್ಧಿಕವಾದ ವಿಷಯಗಳಿಗೆ ಸೆಂಟಿಮೆಂಟಲ್ ಟಚ್ ಕೊಡುವ ಪ್ರಯತ್ನ ಇರುತ್ತೆ. ಈ ತಂತ್ರವನ್ನು ಎಲ್ಲಿಂದ ಕಲಿತಿರಿ?
ಉತ್ತರ: ಅದು ಕೂಡ ನನ್ನ ಹಳ್ಳಿಯ ಪರಿಸರದ ಕೊಡುಗೆಯಾಗಿರಬೇಕು. ಯಾಕೆಂದರೆ ಇವತ್ತಿಗೂ ನಮ್ಮ ಭಾರತೀಯರಿಗೆ ಸೆಂಟಿಮೆಂಟಲ್ ಆಗಿ ಹೇಳಿದರೆ ಏನನ್ನು ಬೇಕಾದರೂ ಅರ್ಥಮಾಡಿಸಬಹುದು. ಹಾಗಾಗಿ ಅದರ ಕಡೆ ನಾನು ಹೆಚ್ಚಿನ ಗಮನ ಕೊಡ್ತೀನಿ.
ಪ್ರಶ್ನೆ: ನಿಮಗೆ ಹೆಚ್ಚು ಖುಷಿ ನೀಡಿದ ಪಾತ್ರ ಯಾವುದು?
ಉತ್ತರ: ನಾಟಕಗಳಲ್ಲಿ ಬಹುತೇಕ ಪಾತ್ರಗಳು ಖುಷಿ ನೀಡಿವೆ. ಅಭಿನಯ ತರಂಗದಲ್ಲಿನ ರೋಮಿಯೋ ಜೂಲಿಯೆಟ್ ಪಾತ್ರ ಇಷ್ಟವಾಗಿತ್ತು. ತಾವರೆಕೆರೇಲಿ ತಾಳಿ ಕಟ್ಟೋಕ್ಕೂಲೀನೆ, ಗುಣಮುಖ, ಒಂದು ಬೊಗಸೆ ನೀರು, ದಾರಾಶಿಕೋ, ಕಾತಚಿ ಕಥಾಪ್ರಸಂಗ ಮೊದಲಾದ ನಾಟಕಗಳಲ್ಲು ಮುಖ್ಯ ಪಾತ್ರಗಳನ್ನೇ ನಿರ್ವಹಿಸಿದ್ದೇನೆ. ಅವು ಕೂಡ ಖುಷಿ ನೀಡಿವೆ.
ಪ್ರಶ್ನೆ: ಪ್ರಸ್ತುತ ರಂಗಭೂಮಿಯ ಬಗೆಗೆ ನಿಮ್ಮ ಅಭಿಪ್ರಾಯವೇನು?
ಉತ್ತರ: ಅನೇಕ ಹೊಸ ತಂಡಗಳು, ಯುವಕರು ಇತ್ತೀಚೆಗೆ ರಂಗಭೂಮಿಯ ಕಡೆ ಬರ್ತಿದಾರೆ. ಅವರನ್ನು ಚಾನಲೈಜ್ ಮಾಡುವ ಕೆಲಸ ನಡೀತಿಲ್ಲ. ಅವರ ಶಕ್ತಿಯನ್ನು ಗುರುತಿಸಿ, ಇಂಥ ಕೆಲಸ ನೀನು ಮಾಡು ಅಂತ ಹೇಳಿದರೆ, ಅವರ ಮುಂದಿನ ದಾರಿ ಸ್ಪಷ್ಟವಾಗಿ ರೂಪುಗೊಳ್ಳುತ್ತೆ. ಜತೆಗೆ ಕೆಲವು ಉತ್ಸಾಹಿಗಳು ಈ ಯಾವ ಮಾರ್ಗದರ್ಶನದ ಹೊರತಾಗಿಯೂ ಒಳ್ಳೆ ಕೆಲಸ ಮಾಡ್ತಿದಾರೆ.
ಪ್ರಶ್ನೆ: ಸಮಕಾಲೀನ ಸಮಸ್ಯೆಗಳನ್ನು ರಂಗಭೂಮಿ ಅಡ್ರೆಸ್ ಮಾಡ್ತಿದೆಯಾ?
ಉತ್ತರ: ಇತ್ತೀಚೆಗೆ ಆ ಟ್ರೆಂಡ್ ಕಡಿಮೆ ಆಗಿದೆ. ಒಂದು ಕಾಲಕ್ಕೆ ಸಾಮಾಜಿಕ ಹೋರಾಟಗಳಿಗೆ ಪ್ರೇರಣೆ ನೀಡುತ್ತಿದ್ದ ನಾಟಕಗಳು ಪ್ರಭುತ್ವದ ವಿರುದ್ಧ ಕೆಲಸ ಮಾಡ್ತಿದ್ದವು. ಆದರೆ ಈಗ ಅವುಗಳು ಕೂಡ ಹೊಂದಾಣಿಕೆಯ ಕಡೆ ಚಲಿಸುತ್ತಿರುವ ಅನುಮಾನ ವೈಯಕ್ತಿಕವಾಗಿ ನನಗಿದೆ.
ಪ್ರಶ್ನೆ: ರಂಗಭೂಮಿಗೆ ಬಂದವರನ್ನು ಅಲ್ಲೆ ಉಳಿಸಿಕೊಳ್ಳುವ ಕೆಲಸಗಳು ನಡೀತಿದೆಯಾ?
ಉತ್ತರ: ಇಲ್ಲಿ ತಾಳ್ಮೆ ಬೇಕು. ಆದರೆ ಇಲ್ಲಿಗೆ ಬಂದ ಕೆಲವರು ಬಂದಷ್ಟೇ ಬೇಗ ಹೊರಟೋಗ್ತಿದಾರೆ. ಅದರ ಜತೆಗೆ ಈಗ ಲಕ್ಷಗಟ್ಟಲೆ ಹಣ ಕೂಡ ನಾಟಕಗಳಿಗಾಗಿ ಬಿಡುಗಡೆಯಾಗ್ತಿದೆ. ಉದಾಹರಣೆಗೆ ನಮ್ಮ ಗುರುಗಳು ನಿರ್ದೇಶಿಸಿದ, ಕೆ.ವೈ.ನಾರಾಯಣಸ್ವಾಮಿಯವರು ರಂಗರೂಪ ನೀಡಿದ, ಕುವೆಂಪು ಅವರ ಕಾದಂಬರಿ ಮಲೆಗಳಲ್ಲಿ ಮದುಮಗಳು ಆಧಾರಿತ ಇದೇ ಹೆಸರಿನ ನಾಟಕ. ಇದು ಸರ್ಕಾರದ ಪ್ರಾಜೆಕ್ಟ್. ಅದರ ಜತೆಗೆ ನೀವು ಒಳ್ಳೆ ಎಫರ್ಟ್ ಹಾಕಿದರೆ ಖಾಸಗಿಯವರಿಂದಲೂ ನಾಟಕಗಳಿಗೆ ಪ್ರಾಯೋಜನೆ ಪಡೆಯಬಹುದು.
ಪ್ರಶ್ನೆ: ಧಾರಾವಾಹಿಯ ಪಯಣ ಹೇಗನ್ನಿಸುತ್ತೆ?
ಉತ್ತರ: ಅದು ಏಕತಾನತೆಯಿಂದ ಕೂಡಿರುತ್ತೆ. ನಾನು ಕೆಲವು ಸೀರಿಯಲ್ಗಳಲ್ಲಿ ಅಭಿನಯಿಸಿದಾಗ ಈ ಅನುಭವ ಆಗಿದೆ. ಜತೆಗೆ ಮೊನ್ನೆ ಜಹಾಂಗೀರ್ ಅವರ ಜತೆ ಮಾತಾಡ್ತಿದ್ದಾಗ ಅವರು ಕೂಡ ಇದೇ ಅಭಿಪ್ರಾಯಪಟ್ಟರು. ‘ಧಾರಾವಾಹಿಯಿಂದ ಕೆಲವು ಕಾಲ ದೂರ ಇರೋಣ ಅನ್ನಿಸ್ತಿದೆ. ಸಿನಿಮಾಗಳಲ್ಲಿ ಒಳ್ಳೆ ಅವಕಾಶ ಸಿಕ್ಕರೆ ಅಲ್ಲಿ ಕೆಲಸ ಮಾಡ್ತೀನಿ. ಹಾಗೆ ಸ್ವಲ್ಪ ದಿವಸ ರಂಗಭೂಮಿಯಲ್ಲಿ ಕೆಲಸ ಮಾಡೋಣಾಂತ ಯೋಚನೆ ಮಾಡ್ತಿದೀನಿ’ ಅಂತೇಳಿದರು. ಹಾಗೆ ಅನೇಕ ಧಾರಾವಾಹಿಗಳ ಕಲಾವಿದರು ಹೇಳ್ತಿರ್ತಾರೆ.
ಪ್ರಶ್ನೆ: ರಂಗ ನಿರ್ದೇಶಕರಾಗಿ ನಿಮ್ಮ ಅನುಭವ ಹೇಗಿತ್ತು?
ಉತ್ತರ: ನಿರ್ದೇಶಕನಾಗಿದ್ದಾಗ ಯೋಚನೆ ಮಾಡೋಕೆ ತುಂಬ ಸ್ಪೇಸ್ ಇರುತ್ತೆ. ಯಾಕೆಂದರೆ ನಾಟಕಕಾರ, ಕಲಾವಿದರು, ಪ್ರೇಕ್ಷಕರ ದೃಷ್ಟಿಯಿಂದ ಆಲೋಚನೆ ಮಾಡಿ ದೃಶ್ಯಗಳನ್ನು ಕಟ್ಟುವ ಜವಾಬ್ದಾರಿ ನಿರ್ದೇಶಕನ ಮೇಲೆ ಇರುತ್ತೆ. ಅದರಲ್ಲಿ ನಿಮಗೆ ಬೇಕಾದ ಸೋಷಿಯಲ್ ಇಶ್ಯೂಗಳ ಕುರಿತು ಡೈಲಾಗ್ ಮಾಡಬಹುದು. ಆ ಸಾಧ್ಯತೆ ಇವತ್ತಿಗೂ ರಂಗಭೂಮಿಯಲ್ಲಿ ಮುಕ್ತವಾಗಿದೆ. ಹಾಗಾಗಿ ನಾನು ರಂಗಭೂಮಿಯನ್ನು ಇಷ್ಟಪಡ್ತೀನಿ.
ಪ್ರಶ್ನೆ: ಸಿನಿಮಾದ ಕಡೆ ಯಾಕೆ ಪಯಣಿಸ್ತಿದೀರಿ?
ಉತ್ತರ: ತುಂಬ ದಿನಗಳಿಂದ ನನ್ನ ಸ್ನೇಹಿತರು ಸಿನಿಮಾ ಕ್ಷೇತ್ರಕ್ಕೆ ಹೋಗು. ನಿನ್ನ ಟ್ಯಾಲೆಂಟ್ಗೆ ಅಲ್ಲಿ ಒಳ್ಳೆ ಸ್ಪೇಸ್ ಇರುತ್ತೆ ಅಂತ ಹೇಳುತ್ತಿದ್ದರು. ಅದರ ಜತೆಗೆ ಪ್ರಸ್ತುತ ರಂಗಭೂಮಿಯಲ್ಲಿ ನಟನೆಯ ಮೂಲಕ ಜೀವನ ಸಾಗಿಸುವ ಅವಕಾಶ ಕೂಡ ಇಲ್ಲ. ಹಾಗಂತ ರಂಗಭೂಮಿಯನ್ನು ನಾನೇನು ದೂರುತ್ತಿಲ್ಲ, ಮತ್ತೆ ಅವಕಾಶ ಸಿಕ್ಕಾಗೆಲ್ಲ ರಂಗಭೂಮಿಯಲ್ಲಿ ಕೆಲಸ ಮಾಡ್ತೀನಿ.
ಪ್ರಶ್ನೆ: ಪ್ರಸ್ತುತ ಸಿನಿಮಾಗಳ ಬಗೆಗೆ ಏನನಿಸುತ್ತೆ?
ಉತ್ತರ: ಈಗ ಎಪ್ಪತ್ತು, ಎಂಬತ್ತರ ದಶಕದಲ್ಲಿ ಕನ್ನಡ ಸಿನಿಮಾದಲ್ಲಾದ ಪ್ರಯೋಗಗಳು ನಡೀತಿವೆ. ಅನೇಕ ಹೊಸಬರು ಇಲ್ಲಿಯೂ ಪ್ರವೇಶ ಮಾಡ್ತಿದಾರೆ. ಯಶಸ್ಸನ್ನೂ ಪಡೀತಿದಾರೆ. ಜಟ್ಟ, ತಲ್ಲಣ, ಲೂಸಿಯದಂತಹ ಸಿನಿಮಾಗಳು ಕಮರ್ಶಿಯಲ್ ಹಾಗೂ ಕಲಾತ್ಮಕ ಸಿನೆಮಾಗಳ ಅಂಶಗಳನ್ನು ಒಳಗೊಂಡಿವೆ. ಕಬಡ್ಡಿ ಸಿನಿಮಾದ ನಿರ್ದೇಶಕರಾದ ನರೇಂದ್ರ ಬಾಬು ಅವರು ಈಗ ಕಬೀರನನ್ನು ಕುರಿತ ಸಿನಿಮಾ ಮಾಡ್ತಿದಾರೆ. ಒಳ್ಳೆಯ ಬೆಳವಣಿಗೆಗಳು ಇಲ್ಲಿ ನಡೀತಿವೆ. ಅವುಗಳನ್ನು ಗುರುತಿಸುವ ಕೆಲಸ ಮಾತ್ರ ಇನ್ನೂ ನಡೆದಿಲ್ಲ.
ಪ್ರಶ್ನೆ: ಎಪ್ಪತ್ತರ ದಶಕದಲ್ಲಿ ಸಿನಿಮಾ ಕ್ಷೇತ್ರಕ್ಕೆ ಸಾಹಿತಿಗಳು, ಬುದ್ಧಿಜೀವಿಗಳು ಪ್ರವೇಶಿಸಿದ್ದರು. ಈಗ ಅಲ್ಲಿನ ವಾತಾವರಣ ಹೇಗಿದೆ?
ಉತ್ತರ: ಇಲ್ಲಿಯೂ ಕೂಡ ಆತರದ ಸಿದ್ಧತೆಗಳಿರುವವರು ಈಗ ಬಂದಿದಾರೆ. ಸಾಹಿತ್ಯ, ಕಲೆ, ರಂಗಭೂಮಿಯ ಬಗೆಗೆ ಒಲವಿರುವ, ಪರಿಶ್ರಮವಿರುವ, ಒಡನಾಟವಿರುವವರು ಇಲ್ಲಿದಾರೆ. ಹಾಗಾಗಿ ವಿಭಿನ್ನ ವಿಷಯಗಳನ್ನು ಒಳಗೊಂಡಿರುವ ಸಿನಿಮಾಗಳು ರ್ತಿವೆ.
ಪ್ರಶ್ನೆ: ಅವುಗಳಿಗೆ ಪ್ರೇಕ್ಷಕರು ಹೇಗೆ ಸ್ಪಂದಿಸ್ತಿದಾರೆ?
ಉತ್ತರ: ಇನ್ನೂ ನಮ್ಮ ಕನ್ನಡ ಪ್ರೇಕ್ಷಕರು ಇವುಗಳ ಕಡೆಗೆ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ. ಆದರೆ ತೀರಾ ನಿರಾಶಾದಾಯಕ ವಾತಾವರಣವೇನೂ ಇಲ್ಲ. ಇನ್ಮುಂದೆ ಈ ಪರಿಸ್ಥಿತಿ ಸುಧಾರಿಸಬಹುದು.
ಪ್ರಶ್ನೆ: ಓಕೆ ಆಲ್ ದ ಬೆಸ್ಟ್
ಉತ್ತರ: ಥ್ಯಾಂಕ್ ಯು…



