ಉದಯನಿಧಿ ಸ್ಟಾಲಿನ್ ವಿಷಯದಲ್ಲಿ ಅತ್ತಲೂ ಅಲ್ಲ ಇತ್ತಲೂ ಅಲ್ಲ ಎನ್ನುವಂತೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡುವವರ ಗಮನಕ್ಕೆ,
- ಸಂಘಪರಿವಾರ ಅಥವಾ ಆರೆಸ್ಸೆಸ್ ಗಳು ಸಿದ್ದಾಂತದ ವಿಷಯ ಬಂದಾಗ ಎಂದೂ ರಾಜಿಯಾಗಿಲ್ಲ. ಸಂಗಟನೆ ವಿಷಯದಲ್ಲಿ ಅವರು ಕೆಲವು ಕಾಲಕ್ಕೆ ಕೆಲವರನ್ನು ಮಾತ್ರ ಟಾರ್ಗೆಟ್ ಮಾಡಿ ಉಳಿದವರನ್ನು ಸೇರಿಸಿಕೊಳ್ಳುವ ತಂತ್ರಗಾರಿಕೆ ಮಾಡುತ್ತಾರೆಯೇ ವಿನಃ ಅವರ ಕೋರ್ ತತ್ವದಲ್ಲಿ ಬ್ರಾಹ್ಮಣವಾದವನ್ನು ಬಿಟ್ಟುಕೊಟ್ಟಿಲ್ಲ. ಇವತ್ತಿಗೂ ಅವರ ಕಲ್ಪನೆಯ ಸನಾತನ ಧರ್ಮ ಅಂದರೆ ವೈದಿಕ ಧರ್ಮವೇ.
- ಇಸ್ಲಾಂ, ಕ್ರೈಸ್ತ ದರ್ಮಗಳು ಮಾತ್ರವೇ ಇತ್ತೀಚಿಗೆ ಬಂದಂತವು, ಸನಾತನ ದರ್ಮಕ್ಕೆ ಆದಿಯೂ ಇಲ್ಲ ಅಂತ್ಯವೂ ಇಲ್ಲ, ಅತವಾ ಇದಕ್ಕೆ 5000 ವರ್ಷಗಳಿಂದ ಇದೆ ಎಂಬುದೆಲ್ಲಾ ಈ ವೈದಿಕ ಸನಾತನಿಗಳು ನಂಬಿಸಿಕೊಂಡು ಬಂದಿರುವ ಅಡುಗೂಲಜ್ಜಿ ಕತೆ. ನೀವೂ ಇದಕ್ಕೇ ತಲೆ ಆಡಿಸುವುದಾದರೆ ನೊ ಕಮೆಂಟ್ಸ್.
- ಈ ಸನಾತನ ದರ್ಮಕ್ಕೆ ಬಾರತದಲ್ಲಿ 3500 ವರ್ಷಗಳಿಗಿಂತ ಹಿಂದಿನ ಇತಿಹಾಸ ಇಲ್ಲ. ಮತ್ತು ಈ ಸನಾತನ ಸಂಸ್ಕೃತಿ ಶುರುವಾಗಿದ್ದು ಮಧ್ಯ ಏಶಿಯಾದಿಂದ ಯಾಮ್ನಾಯಾ ಸಂಸ್ಕೃತಿಯೊಂದಿಗೆ ಬಂದ ಆರ್ಯವೈದಿಕ ಪಶುಪಾಲಕರಿಂದ ಎನ್ನುವ ಸಂಗತಿ ಈಗ DNAಗಳ ಮೂಲಕವೂ ಸಾಬೀತಾಗಿದೆ.
- ಈ ಸನಾತನ ದರ್ಮ ಮತ್ತು ಸನಾತನ ಸಂಸ್ಕೃತಿ ಈ ದೇಶದಲ್ಲಿ ಶುರುವಾಗುವುದಕ್ಕೂ ಹತ್ತಾರು ಸಾವಿರ ವರ್ಷಗಳ ಹಿಂದೆ ಈ ದೇಶದಲ್ಲಿ ಆರ್ಯರಲ್ಲದ ಮೊದಲ ಬಾರತೀಯರು ಹುಟ್ಟುಹಾಕಿದ ದೊಡ್ಡ ಸಂಸ್ಕೃತಿ ಇದೆ. ಇಂದು ಇಡೀ ದೇಶದಲ್ಲಿ ಹರಡಿಕೊಂಡಿರುವುದು ಅದೇ ಮೂಲ ಬಾರತೀಯ ಸಂಸ್ಕೃತಿ. ಅದರ ಮೇಲೆ ಸವಾರಿ ಮಾಡುತ್ತಿರುವುದು ನಂತರ ಬಂದ ಸನಾತನ ದರ್ಮ ಅತವಾ ಸನಾತನ ವೈದಿಕ ಸಂಸ್ಕೃತಿ.
- ಈ ಮೇಲಿನ ಸ್ಪಷ್ಟ ಚಾರಿತ್ರಿಕ ತಿಳುವಳಿಕೆಯನ್ನು ಬಿಜೆಪಿ ಸಂಗಪರಿವಾರ ಹೊರತುಪಡಿಸಿದ ಯಾವುದೇ ರಾಜಕೀಯ ಪಕ್ಷ ಬಾರತೀಯರಿಗೆ ನೀಡಲು ಸೋತಿರುವುದೇ ಇಂದು ಸಂಗಪರಿವಾರ ತನ್ನ ಹುಸಿ ಸಿದ್ದಾಂತವನ್ನು, ವಿಷಕಾರಿ ಹಿಂದುತ್ವವನ್ನು ಬಾರತೀಯರ ತಲೆಗಳಲ್ಲಿ ತುಂಬಲು ಪ್ರಮುಕ ಕಾರಣ.
- ಸನಾತನ ದರ್ಮದ ನಿರ್ಮೂಲನೆ ಅಂದರೆ ಯಾವುದೇ ಸಮುದಾಯವನ್ನಾಗಲೀ ಯಾವುದೇ ಸಿದ್ದಾಂತದ ಜನರನ್ನಾಗಲೀ ನಿರ್ಮೂಲಿಸುವುದಲ್ಲ. ಆದರೆ ಒಂದು ವಿಷಕಾರಿ ದಾರ್ಮಿಕ-ರಾಜಕೀಯ-ಸಾಮಾಜಿಕ ಸಿದ್ದಾಂತದ ವಿರುದ್ದ ನಡೆಸುವ ಸೈದ್ದಾಂತಿಕ ಸಮರ. ಇದು ಆಗಲೇಬೇಕು.
- ನಮ್ಮ ಶೋಷಿತ ಸಮುದಾಯಗಳನ್ನು ಅಂಬೇಡ್ಕರ್-ಪೆರಿಯಾರ್-ಪುಲೆ-ಬುದ್ದ ಇವರ ಚಿಂತನೆಗಳೊಂದಿಗೆ ಈ ಸೈದ್ದಾಂತಿಕ ಹೋರಾಟದಲ್ಲಿ ಸಂಸಿದ್ದಗೊಳಿಸುವ ಎದೆಗಾರಿಕೆ ತೋರದೇ ಅಳುಮುಂಜಿಗಳಂತೆ ಹಿಂದಡಿ ಇಟ್ಟರೆ ಅಲ್ಲಿಗೆ ಶಾಶ್ವತವಾಗಿ ಗುಲಾಮರಾಗುವ ದಿನಗಳು ದೂರವಿಲ್ಲ.
- ಈ ದೇಶದಲ್ಲಿ ಒಂದೋ ಅಂಬೇಡ್ಕರ್-ಪೆರಿಯಾರ್-ಬಸವ-ಕುವೆಂಪು ಮುಂತಾದವರ ಚಿಂತನೆಗಳು ಗೆಲ್ಲಬೇಕು, ಜನರ ಬದುಕು ಹಸನಾಗಬೇಕು ಇಲ್ಲವೇ ಸನಾತನಿಗಳ ಸಿದ್ದಾಂತ ಗೆದ್ದು ಶಾಶ್ವತ ಗುಲಾಮಗಿರಿಗೆ ಬಾರತ ತಳ್ಳಲ್ಪಡಬೇಕು.
- ಹೌದು ಇದು ತೌಡು ಕುಟ್ಟುವ ಕಾಲವಲ್ಲ. ಜನರನ್ನು ಸೈದ್ದಾಂತಿಕವಾಗಿ ತಯಾರು ಮಾಡುವ ಸಂದಿಗ್ದದ ಕಾಲ. ಅದಕ್ಕೆ ಮೊದಲು ನಾವು ಸಂಸಿದ್ದರಾಗಬೇಕಿದೆ. ಇಲ್ಲವಾದರೆ ಈ ಸನಾತನಿ ಚಂಡಮಾರುತ ಎಲ್ಲವನ್ನೂ ಗುಡಿಸಿ ಗುಂಡಾರ ಮಾಡುವುದು ಶತಸ್ಸಿದ್ದ.
- ಹರ್ಷಕುಮಾರ್ ಕುಗ್ವೆ




