ಮುಖ್ಯಮಂತ್ರಿ ನಿವಾಸಕ್ಕೆ ತೆರಳಿ ಮುತ್ತಿಗೆ ಹಾಕಲು ಯತ್ನ: ಬಂಧನ

1 year ago

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಹಾಗೂ ಘಟನೆಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಮತ್ತು ಗೃಹ ಮಂತ್ರಿಗಳು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಪ್ರತಿಭಟನೆ ನಡೆಸಿತು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಧಾನಮಂಡಲದ ಉಭಯ ಸದನಗಳ ವಿಪಕ್ಷ ನಾಯಕ ಆರ್ ಅಶೋಕ್ ಮತ್ತು ಛಲವಾದಿ ನಾರಾಯಣ ಸ್ವಾಮಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೂರಾರು ನಾಯಕರು ಮೆರವಣಿಗೆಯಲ್ಲಿ ಮುಖ್ಯಮಂತ್ರಿ ನಿವಾಸಕ್ಕೆ ತೆರಳಿ ಮುತ್ತಿಗೆ ಹಾಕಲು ಯತ್ನಿಸಿದರು ಈ ವೇಳೆ ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದರು.

ಇದಕ್ಕೂ ಮುನ್ನ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರಕ್ಕೆ ವಿದ್ಯಾರ್ಥಿಗಳ ಶಾಪ ತಟ್ಟಿದೆ. ಭಾರತ ರತ್ನ ಬಂದವರಿಗೆ, ಯುದ್ಧ ಗೆದ್ದವರ ವಿಜಯೋತ್ಸ ಆಚರಿಸಲಾಗಿದೆ. ಪೊಲೀಸರು ಬೇಡ ಅಂದರೂ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ‌. ಕಾರ್ಯಕ್ರಮಕ್ಕೂ ನಮಗೂ ಸಂಬಂಧ ಇಲ್ಲ ಎಂದಾದರೆ ಅನುಮತಿ ಕೊಟ್ಟವರು ಯಾರು? ಎಂದು ಪ್ರಶ್ನಿಸಿದರು

ಕಪ್ ಇಟ್ಟುಕೊಂಡವರು, ಮುತ್ತು ಕೊಟ್ಟವರು ಹಾಗೂ ಫೋಟೋ ತೆಗೆಸಿಕೊಂಡವರು ನೀವು. ಆದರೆ ಅಮಾನತು ಆದವರು ಪೊಲೀಸರು. ಅಪರಾಧಿ ಯಾರು ಎಂಬುವುದು ಸಾಬೀತಾಗಬೇಕು. ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ರಾಜೀನಾಮೆ ಕೊಡುವವರೆಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಆರ್‌ಸಿಬಿ ಗೆಲುವಿನ ಜನಪ್ರಿಯತೆ ಕಿತ್ತುಕೊಳ್ಳುವ ಪ್ರಯತ್ನದ ಭಾಗವಾಗಿ ವಿಧಾನಸೌಧದಲ್ಲಿ ವಿಜಯೋತ್ಸವದ ಆಚರಣೆ ಮಾಡಲಾಯಿತು ಎಂದು ಆರೋಪಿಸಿದರು.

ಆರ್‌ಸಿಬಿ ಗೆಲುವಿನಲ್ಲಿ ತಮ್ಮ ಬೇಳೆ ಬೇಯಿಸಲು ಪ್ರಯತ್ನ ನಡೆಸಿದ್ದಾರೆ. ರಾಜ್ಯ ಸರ್ಕಾರದ ಪ್ರಾಯೋಜಿತ ಕೊಲೆ ಇದಾಗಿದೆ. ಸಿಎಂ ಹಾಗೂ ಡಿಕೆ ಶಿವಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಲಜ್ಜೆ ಗೆಟ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ವರೆಗೂ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಆರ್‌ಸಿಬಿ ಗೆಲುವಿನ ಸಂಭ್ರಮದ ಕ್ರೆಡಿಟ್ ತೆಗೆದುಕೊಳ್ಳಲು ಸಿದ್ದರಾಮಯ್ಯ ಡಿ ಕೆ ಶಿವಕುಮಾರ್ ಕ್ರೆಡಿಟ್ ವಾರ್ ನಡೆಸಿದ್ದರು. ಕಪ್ ಆರ್‌ಸಿಬಿದು ತಪ್ಪು ಸರ್ಕಾರದ್ದು. ಸರ್ಕಾರದ ತಪ್ಪಿಗೆ ಪೊಲೀಸರನ್ನು ಬಲಿಪಶು ಮಾಡಲಾಯ್ತು. ಹೇಮಂತ್ ನಿಂಬಾಲ್ಕರ್ ಅವರನ್ನು ಏಕೆ ಅಮಾನತು ಮಾಡಿಲ್ಲ, ಕೇವಲ ಪೋಲಿಸ್ ಕಮಿಷನರ್ ಅವರನ್ನು ಮಾತ್ರ ಅಮಾನತು ಮಾಡಿದ್ದು ಏಕೆ? ಜನರ ಪ್ರಾಣ ತೆಗೆಯುವ ಸಂಭ್ರಮ ಬೇಕಿತ್ತಾ? ಎಂದು ವಾಗ್ದಾಳಿ ನಡೆಸಿದರು.

Leave a Reply