ಬೆಂಗಳೂರು: ಬೆಳಗಾವಿ ಜಿಲ್ಲೆಯ ವಂಟಮೂರಿಯಲ್ಲಿ ನಡೆದ ಮಹಿಳೆಯ ವಿವಸ್ತ್ರ ಪ್ರಕರಣ ಖಂಡಿಸಿ, ಬಿಜೆಪಿ ಕಾರ್ಯಕರ್ತರು ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮುಖ್ಯಮಂತ್ರಿ ಮತ್ತು ಸರ್ಕಾರದ ಪ್ರಮುಖರು ಆಡಳಿತ ನಿರ್ವಹಣೆ ಮಾಡುವುದನ್ನು ಬಿಟ್ಟು ರಾಜಕಾರಣದಲ್ಲಿ ನಿರತರಾಗಿರುವ ಪರಿಣಾಮ ಆಡಳಿತ ಯಂತ್ರ ಸಂಪೂರ್ಣ ಹದಗೆಟ್ಟು ಹೋಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮಂಡ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಇಡೀ ಸರ್ಕಾರ ಬೆಳಗಾವಿಯಲ್ಲೇ ಇದ್ದ ಸಮಯದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ ನಡೆದದ್ದು ತಲೆ ತಗ್ಗಿಸುವ ಸಂಗತಿ. ಸರ್ಕಾರ ಈ ಪ್ರಕರಣದ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದೆ ಎಂದರು.
ಸರ್ಕಾರದ ಪ್ರತಿನಿಧಿಗಳು ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಜಿಲ್ಲಾ ಮಂತ್ರಿ, ಮುಖ್ಯಮಂತ್ರಿ, ಗೃಹ ಸಚಿವರು ಯಾರೂ ಘಟನಾ ಸ್ಥಳಕ್ಕೆ ಹೋಗಲಿಲ್ಲ. ದೇಶವ್ಯಾಪಿ ಪ್ರತಿಭಟನೆ ನಡೆದ ಬಳಿಕ ಮುಖ್ಯಮಂತ್ರಿ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಇಲ್ಲದಿದ್ದರೆ ಈ ಪರಿಹಾರವನ್ನೂ ನೀಡುತ್ತಿರಲಿಲ್ಲ ಎಂದು ಆರೋಪಿಸಿದರು. ಆದರೆ ವಾಸ್ತವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಗೃಹ ಸಚಿವ ಪರಮೇಶ್ವರ್ ಸಂತ್ರಸ್ತೆಯನ್ನು ಭೇಟಿಯಾಗಿ ಧೈರ್ಯ ತುಂಬುವ ಕೆಲಸ ಮಾಡಿದ್ದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾದ ಬಗ್ಗೆ ಅಧಿವೇಶನದಲ್ಲಿ ಚರ್ಚೆಗೆ ನಿಡುವಳಿ ಸೂಚನೆ ತಂದಿದ್ದೆ. ದಲಿತ ಮಹಿಳೆ ವಿವಸ್ತ್ರಗೊಳಿಸಿದ ಪ್ರಕರಣ ಚರ್ಚೆಯ ಅಜೆಂಡಾದಲ್ಲಿತ್ತು. ಆದರೆ ಮುಖ್ಯಮಂತ್ರಿಗಳು ಕಾಟಾಚಾರಕ್ಕೆ ಉತ್ತರ ನೀಡಿ, ಸಮಯ ವ್ಯರ್ಥ ಮಾಡಿದರು. ಮಹಿಳೆ ಪ್ರಕರಣ ಚರ್ಚೆಗೆ ಬರುತ್ತದೆ ಎಂದು ಪಲಾಯನ ಮಾಡಿದರು ಎಂದು ದೂರಿದರು.
ಘಟನಾ ಸ್ಥಳ ಪರಿಶೀಲನೆಗೆ ನಾಲ್ಕು ದಿನವಾದ ಮೇಲೆ ದೆಹಲಿಯಿಂದ ನಿಯೋಗ ಬರುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. 4 ದಿನ ನೀವು ಘಟನೆ ಮುಚ್ಚಿ ಹಾಕಿದ್ರಿ. ಯಾರು ಹೋಗದ ಹಾಗೇ ನೋಡಿಕೊಂಡಿದ್ದೀರಿ. ನಾನು ಅಲ್ಲಿಗೆ ಹೋಗುವವರೆಗೂ ಘಟನೆ ಬಗ್ಗೆ ಗೊತ್ತಾಗಿರಲಿಲ್ಲ. ಅಲ್ಲಿ ನಡೆದ ಘಟನೆ ಬಗ್ಗೆ ಹೇಳಲು ಆಗಲ್ಲ. ಅಷ್ಟು ಹೊಲಸಾಗಿ ನಡೆದಿದೆ. ನ್ಯಾಯಾಲಯ ಕೂಡ ಕಾಂಗ್ರೆಸ್‌ಗೆ ಛಿಮಾರಿ ಹಾಕಿದೆ ಎಂದು ಹೇಳಿದರು.
ಸಂತಸ್ತ ಮಹಿಳೆ ಈಗ ಆಸ್ಪತ್ರೆಯಲ್ಲಿದ್ದಾರೆ. ಮುಂದೆ ಊರಲ್ಲಿ ಹೇಗೆ ಬದುಕುತ್ತಾರೆ? ಕಾನೂನು ಸುವ್ಯವಸ್ಥೆ ಹೇಗೆ ಹಾಳಾಗಿದೆ ಎಂಬುದಕ್ಕೆ ಇದು ಉದಾಹರಣೆ. ಇಷ್ಟಾದರೂ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಕೊಡದೆ ಮೋಸ ಮಾಡಿದ್ದಾರೆ. ಸ್ಪೀಕರ್ ಕೂಡ ಮಲತಾಯಿ ಧೋರಣೆ ತೋರಿದ್ದಾರೆ ಎಂದರು.
ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಂಸದ ಡಿ.ವಿ. ಸದಾನಂದಗೌಡ ಇಷ್ಟು ಕೆಟ್ಟ ಆಡಳಿತವನ್ನು ನನ್ನ ಜೀವನದಲ್ಲೇ ನೋಡಿಲ್ಲ, ಆಡಳಿತ ವ್ಯವಸ್ಥೆ ಪೂರ್ತಿ ಹದಗೆಟ್ಟಿದೆ, ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ ಎಂದರು.
ಪೊಲೀಸ್ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಗೊಂಡು ಸರ್ಕಾರ ಕೆಲಸ ಮಾಡುತ್ತಿಲ್ಲ, ಗೃಹ ಸಚಿವ ಡಾ.ಜಿ. ಪರಮೇಶ್ವರ್, ಯಾವಾಗ ಎಚ್ಚೆತ್ತುಕೊಳ್ಳುತ್ತಾರೋ ಅಲ್ಲಿವರೆಗೂ ಹೋರಾಟ ಮಾಡುತ್ತೇವೆ. ಘಟನೆ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ, ಸೋಮವಾರ ಸಂಸತ್ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುತ್ತೇವೆ ಎಂದರು.
ಭ್ರೂಣ ಹತ್ಯೆ ಪ್ರಕರಣಗಳನ್ನು ತಡೆಯುವಲ್ಲಿ ಸರ್ಕಾರದ ವೈಫಲ್ಯವನ್ನೂ ಈ ಸಂದರ್ಭದಲ್ಲಿ ಖಂಡಿಸಲಾಯಿತು. ಗೃಹ ಸಚಿವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆದರು.




