ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರ ಬಂಧನ ಖಂಡನೀಯ

1 year ago

ಈ ಬಂಧನವು ರಾಜಕೀಯ ವಿರೋಧಿಗಳನ್ನು ದಮನಿಸಲು ನಡೆಸುವ ಸೇಡಿನ ರಾಜಕೀಯದ ಭಾಗವಾಗಿದೆ: ಅಪ್ಸರ್ ಕೊಡ್ಲಿಪೇಟೆ

ಹಾಸನ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಾಸನ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಅವರನ್ನು ಕೂಡಲೆ ಬಿಡುಗಡೆ ಮಾಡಲು ಆಗ್ರಹಿಸಿ ಹಾಸನದ ಹೇಮಾವತಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಆಫ್ಸರ್ ಕೊಡ್ಲಿಪೇಟೆ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರ ಬಂಧನ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಆಂದೋಲನವನ್ನು ಹಿಮ್ಮೆಟ್ಟಿಸುವ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರದ ಷಡ್ಯಂತ್ರದ ಭಾಗವಾಗಿದೆ ಎಂದರು.

ಬಿಜೆಪಿ ನೇತೃತ್ವದ NDA ಸರಕಾರ ED, NIA ಮೂಲಕ ನಮ್ಮನ್ನು ಈ ಹೋರಾಟದಿಂದ ಒಂದು ಇಂಚನ್ನು ಸಹ ಹಿಂದೆ ಸರಿಸಲು ಸಾಧ್ಯವಿಲ್ಲ. ನಮ್ಮ ಹೋರಾಟ ಇನ್ನಷ್ಟು ಬಲಗೊಳ್ಳಲಿದೆ ಎಂದರು.

SDPI ಈ ರೀತಿಯ ದಬ್ಬಾಳಿಕೆಯ ಹಾಗೂ ಪ್ರಜಾಪ್ರಭುತ್ವವಿರೋಧಿ ನಡೆಗಳ ವಿರುದ್ಧ ತನ್ನ ಸಂಪೂರ್ಣ ಶಕ್ತಿ ಮತ್ತು ದೃಢ ಸಂಕಲ್ಪದೊಂದಿಗೆ ಹೋರಾಟವನ್ನು ಮುಂದುವರಿಸಲಿದೆ ಎಂದರು.

SDPI ರಾಷ್ಟ್ರೀಯ ಅಧ್ಯಕ್ಷರ ಬಂಧನ ಕೇಂದ್ರ ಬಿಜೆಪಿ ಸರ್ಕಾರ ಭಿನ್ನಮತದ ಧ್ವನಿಯನ್ನು ನಿಗ್ರಹಿಸಲು ನಡೆಸುತ್ತಿರುವ ಸೇಡಿನ ರಾಜಕೀಯವಲ್ಲದೆ ಬೇರೇನೂ ಅಲ್ಲ ಎಂದು ಪ್ರತಿಪಾದಿಸುತ್ತದೆ. ಸುಳ್ಳು ಆರೋಪಗಳನ್ನು ಹೊರಿಸುವ ಮೂಲಕ ಮತ್ತು ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವ ವಿರೋಧಿಗಳನ್ನು ಬೆದರಿಸುವುದು ಮತ್ತು ದಬ್ಬಾಳಿಕೆ ಮಾಡುವುದು ಆಡಳಿತದ ಕಾರ್ಯಸೂಚಿಯ ಭಾಗವಾಗಿದೆ ಎಂದರು.

ಕರಾಳ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ದೇಶಾದ್ಯಂತ ಆಂದೋಲನದ ಮುಖ್ಯವಾಹಿನಿಯಲ್ಲಿರುವ SDPI ಬಗ್ಗೆ ಆಡಳಿತವು ಅಸಹಿಷ್ಣುತೆಯನ್ನು ಹೊಂದಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ ಎಂದರು.

ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು SDPI ರಾಷ್ಟೀಯ ಅಧ್ಯಕ್ಷ  MK ಫೈಝಿ ಅವರನ್ನು ಬಂಧಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶವಿರೋಧಿ ನಡೆಯನ್ನು ಮತ್ತೆ ಮುಂದುವರಿಸಿದೆ. ಭಾರತ ಈಗಲೂ ಪ್ರಜಾಸತ್ತಾತ್ಮಕ ದೇಶ ಎಂಬುದನ್ನು ಪ್ರಧಾನಿಗಳು ಹೇಗೆ ವಿದೇಶಗಳ ಮುಂದೆ ಭಾಷಣ ಬಿಗಿಯುತ್ತಿದ್ದಾರೆ ಎಂಬ ಪ್ರಶ್ನೆ ಮೂಡುತ್ತಿದೆ. ವಿರೋಧ ಪಕ್ಷದ ಸದಸ್ಯರ ವಿರುದ್ಧ ಕೇಂದ್ರೀಯ ಸಂಸ್ಥೆಗಳ ಅಸ್ಪಷ್ಟ ದುರ್ಬಳಕೆಯು ಸರ್ಕಾರವು ಪ್ರಜಾಪ್ರಭುತ್ವದಿಂದ ನಿರಂಕುಶಪ್ರಭುತ್ವಕ್ಕೆ ಪರಿವರ್ತನೆಯಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ ಎಂದರು.

ಈ  ಹಿಂದೆ  ರಾಷ್ಟ್ರೀಯ ತನಿಖಾ ಸಂಸ್ಥೆಗಳ ಅಧಿಕಾರಿಗಳ ತಂಡ ಬಂಧಿಸಿರುವ ವಿಪಕ್ಷಗಳ  ರಾಜಕಾರಣಿಗಳನ್ನು ಸುದೀರ್ಘವಾಗಿ ವಿಚಾರಣೆ ನಡೆಸಿದರೂ ಅವರ ವಿರುದ್ಧ ಅಕ್ರಮ ಎಸಗಿರುವ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಅದಾಗ್ಯೂ ಅವರನ್ನು ಬಂಧನ ಮಾಡಲಾಗಿದೆ ಎಂದರು.

2014ರಿಂದ ನಿಮ್ಮ ಆಡಳಿತದ ಅವಧಿಯಲ್ಲಿ ತನಿಖಾ ಸಂಸ್ಥೆಗಳು ಎಫ್‌ಐಆರ್ ದಾಖಲಿಸಿರೋದು, ಬಂಧನ ಮಾಡಿರೋದು, ದಾಳಿ ಮಾಡಿರೋದು, ವಿಚಾರಣೆಗೆ ಒಳಪಡಿಸಿರುವ ಒಟ್ಟು ರಾಜಕಾರಣಿಗಳ ಪೈಕಿ ಬಹುತೇಕರು ವಿಪಕ್ಷಗಳಿಗೆ ಸೇರಿದವರಾಗಿದ್ದಾರೆ. ಅಚ್ಚರಿಯ ವಿಷಯ ಅಂದ್ರೆ ಬಿಜೆಪಿಗೆ ಸೇರುವ ವಿಪಕ್ಷದ ನಾಯಕರ ವಿರುದ್ಧ ತನಿಖೆ ಮಾಡಲು ತನಿಖಾ ಸಂಸ್ಥೆಗಳು ಮುಂದಾಗೋದಿಲ್ಲ ಎಂದರು.

ಇನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್‌ನಲ್ಲಿದ್ದಾಗ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಅವರ ವಿರುದ್ಧ 2014, 2015ರಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು. ಆದರೆ ಅವರು ಬಿಜೆಪಿಗೆ ಸೇರಿದ ನಂತರ ಈ ಪ್ರಕರಣ ಮೂಲೆಗುಂಪಾಗಿದೆ. ಟಿಎಂಸಿ (ತೃಣಮೂಲ ಕಾಂಗ್ರೆಸ್) ಮಾಜಿ ನಾಯಕರಾದ ಸುವೇಂದು ಅಧಿಕಾರಿ ಮತ್ತು ಮುಕುಲ್ ರಾಯ್ ಅವರ ವಿರುದ್ಧದ ಹಗರಣ ಆರೋಪದಲ್ಲಿ ಇ.ಡಿ ಮತ್ತು ಸಿಬಿಐ ವಿಚಾರಣೆಗೆ ಮುಂದಾಗಿತ್ತು. ಆದರೆ ಅವರು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ಸೇರಿದ ನಂತರ ಆ ಪ್ರಕರಣವೂ ಹಳ್ಳ ಹಿಡಿದಿರುವ  ವಿಚಾರಗಳು ಬಿಜೆಪಿ ರಾಜಕೀಯ ದ್ವೇಷ ಸಾಧನೆಯ ಭಾಗವಾಗಿ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸುತ್ತಿರುವುದಕ್ಕೆ ಇರುವ ಉದಾಹರಣೆಯಾಗಿದೆ ಎಂದರು.

ಈಗ ಇದರ ಮುಂದುವರೆದ ಭಾಗವಾಗಿ ದೇಶದಲ್ಲಿ ವಕ್ಫ್ ಮಸೂದೆ ವಿರುದ್ಧ ಶಕ್ತವಾದ ಹೋರಾಟ ದೇಶಾದ್ಯಂತ SDPI ನೇತೃತ್ವದಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ಕೇಂದ್ರ ಮೋದಿ ಸರ್ಕಾರ ಪಕ್ಷದ ರಾಷ್ಟೀಯ ಅಧ್ಯಕ್ಷರನ್ನು ED ಮೂಲಕ ಅಕ್ರಮವಾಗಿ ಬಂಧಿಸಿದೆ. ಈ ಬಂಧನ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ವಿರುದ್ಧವಾದ ಕೇಂದ್ರ ಸರ್ಕಾರದ ನಡೆಯಾಗಿದ್ದು, ಇದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪ್ರತಿಭಟನೆ ಮೂಲಕ ಖಂಡಿಸುತ್ತದೆ ಎಂದರು.

ಕೇಂದ್ರ ಸರ್ಕಾರ ತನ್ನ ಜನ ವಿರೋಧಿ ನಡೆಯಿಂದ ಹಿಂದೆ ಸರಿದು ಕೂಡಲೇ MK ಫೈಝಿ ಅವರನ್ನು ಬಿಡುಗಡೆ ಮಾಡಬೇಕು ಎಂದು ತಾಕೀತು ಮಾಡುತ್ತಿದ್ದೇವೆ. ಒಂದು ವೇಳೆ ಇದೇ ರೀತಿ ಮುಂದುವರಿದರೆ  ಈ ಪ್ರತಿಭಟನೆ ಇನ್ನಷ್ಟು ಶಕ್ತಗೊಳ್ಳಲಿದೆ ಎಂಬ ಸಂದೇಶವನ್ನು ಸರ್ಕಾರಕ್ಕೆ ತಲುಪಿಸುತ್ತಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಶಜೀಲ್ ಅಹ್ಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸೈಯದ್ ಇರ್ಫಾನ್,  ಸೈಯದ್ ನದೀಂ, ವಿಮೆನ್ ಇಂಡಿಯಾ ಮೂಮೆಂಟ್ ಜಿಲ್ಲಾಧ್ಯಕ್ಷೆ ಅಫ್ರೂಝಾ ಬೇಗಂ, ಜಿಲ್ಲಾ ಸಮಿತಿ ಸದಸ್ಯರುಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.

Leave a Reply