ಬೆಂಗಳೂರು: ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವೆ ಇದೀಗ ಸಂಘರ್ಷ ತೀವ್ರಗೊಂಡಿದೆ. ಇದರ ಮುಂದುವರೆದ ಭಾಗವಾಗಿ ಅರ್ಕಾವತಿ ರೀಡೂ ಪ್ರಕರಣದ ವರದಿಗೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಸಿದ್ದರಾಮಯ್ಯ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ‘ರೀಡೂ’ ಹೆಸರಿನಲ್ಲಿ ಅರ್ಕಾವತಿ ಬಡಾವಣೆಯ ಭೂಮಿ ಡಿನೋಟಿಫಿಕೇಶನ್ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಚ್.ಎಸ್.ಕೆಂಪಣ್ಣ ಆಯೋಗದ ವರದಿ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋಟ್ ಪತ್ರ ಬರೆದಿದ್ದಾರೆ.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ರಾಜ್ಯಪಾಲರು ಬರೆದಿರುವ ಪತ್ರವನ್ನು ಉಲ್ಲೇಖಿಸಿ, ಆಯೋಗದ ವರದಿಗೆ ಸಂಬಂಧಿಸಿದ ಕಡತವನ್ನು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ನಗರಾಭಿವೃದ್ಧಿ ಇಲಾಖೆ ಇದೇ 11ರಂದು ಸಲ್ಲಿಕೆ ಮಾಡಿದೆ.
ಏನಿದು ಡಿನೋಟಿಫೈ ಪ್ರಕರಣ?: ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡಿದ್ದ ಜಮೀನಿನಲ್ಲಿ 540 ಎಕರೆಯನ್ನು ಹಿಂದೆ ಸಿಎಂ ಆಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ‘ರೀಡೂ’ ಹೆಸರಿನಲ್ಲಿ ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ ಎಂದು, ಅಂದು ವಿಪಕ್ಷದ ನಾಯಕರಾಗಿದ್ದ ಜಗದೀಶ ಶೆಟ್ಟರ್ ವಿಧಾನಸಭೆ ಅಧಿವೇಶನದಲ್ಲಿಯೇ ಆರೋಪಿಸಿದ್ದರು.
ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರಿ ಜಟಾಪಟಿಗೆ ಕಾರಣವಾಗಿದ್ದ ಈ ಪ್ರಕರಣದ ವಿಚಾರಣೆಗೆ 2014ರ ಆಗಸ್ಟ್ನಲ್ಲಿ ನ್ಯಾ. ಕೆಂಪಣ್ಣ ನೇತೃತ್ವದಲ್ಲಿ ಆಯೋಗವನ್ನು ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೇಮಿಸಿತ್ತು. ಅರ್ಕಾವತಿ ಬಡಾವಣೆಗೆ ಸ್ವಾಧೀನಪಡಿಸಿಕೊಂಡಿದ್ದ ಜಮೀನಿನಲ್ಲಿ 2004ರಿಂದ 2014ರವರೆಗೆ 983 ಎಕರೆ ವಿಸ್ತೀರ್ಣವನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಹೊರಗಿಟ್ಟಿರುವ ಕುರಿತು ವಿಚಾರಣೆ ನಡೆಸಿ ವರದಿ ನೀಡುವಂತೆ ಆಯೋಗಕ್ಕೆ ಸೂಚಿಸಲಾಗಿತ್ತು.
2017ರ ಆಗಸ್ಟ್ನಲ್ಲಿ ಆಯೋಗ 1,861 ಪುಟಗಳ ವರದಿಯನ್ನು ರಾಜ್ಯ ಸರ್ಕಾರದ ಅಂದಿನ ಮುಖ್ಯ ಕಾರ್ಯದರ್ಶಿ ಸುಭಾಶ್ಚಂದ್ರ ಕುಂಠಿಯಾ ಅವರಿಗೆ ಸಲ್ಲಿಸಿತ್ತು. ಈ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಅಂದಿನ ಸರ್ಕಾರ ಮಂಡಿಸಿತ್ತು. ಅದನ್ನು ಒಪ್ಪಿದೆಯೋ ಅಥವಾ ತಿರಸ್ಕರಿಸಿದೆಯೋ ಎಂಬುದನ್ನು ಬಹಿರಂಗಪಡಿಸಿರಲಿಲ್ಲ. ನಿಯಮಾನುಸಾರ, ವಿಧಾನ ಮಂಡಲದ ಉಭಯ ಸದನಗಳಲ್ಲಿಯೂ ಮಂಡಿಸಿರಲಿಲ್ಲ.
ಆ ಬಳಿಕ, ಅಧಿಕಾರಕ್ಕೆ ಬಂದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಗಳು ಇದರ ಬಗ್ಗೆ ಮೌನ ವಹಿಸಿದ್ದವು. ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ, ಕಾಂಗ್ರೆಸ್ ಪಕ್ಷ ಶೇ 40ರಷ್ಟು ಕಮಿಷನ್ ಆರೋಪ ಮಾಡಿತ್ತು. ಅದಕ್ಕೆ ತಿರುಗೇಟು ನೀಡಿದ್ದ ಬೊಮ್ಮಾಯಿ, ಅರ್ಕಾವತಿ ಹಗರಣವನ್ನು ಹೊರತಂದು ಶಿಕ್ಷೆಗೆ ಗುರಿಪಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದು ಬಿಟ್ಟರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.




