ಬೆಂಗಳೂರು: ನಾನೇನಾದರೂ ಭ್ರಷ್ಟಾಚಾರದ ಹಗರಣಗಳಲ್ಲಿ ಭಾಗಿಯಾಗಿದ್ದರೆ ನಾಲ್ಕು ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಯಾಕೆ ತನಿಖೆ ಮಾಡಿಸಿಲ್ಲ? ಆಗ ಬಾಯಿಯಲ್ಲಿ ಕಡುಬು ಹಾಕಿಕೊಂಡು ಕೂತಿದ್ದರಾ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ತಮ್ಮ ಮೇಲಿನ ಭ್ರಷ್ಟಾಚಾರದ ಆರೋಪಗಳಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಈಗ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ, ಪ್ರತಿ ಬಾರಿ ಬಿಜೆಪಿ ವಿರುದ್ಧ ಆರೋಪ ಮಾಡಿದಾಗ ನಮ್ಮತ್ತ ಬೆರಳು ತೋರಿಸುವುದು ಅವರಿಗೆ ಚಾಳಿಯಾಗಿದೆ ಎಂದರು.
ನಮ್ಮ ಸರ್ಕಾರದ ವಿರುದ್ದ ಆರೋಪಗಳು ಕೇಳಿಬಂದಾಗೆಲ್ಲ ಅದಕ್ಕೆ ಆಧಾರಗಳು ಇಲ್ಲದೆ ಇದ್ದರೂ ತಕ್ಷಣ ತನಿಖೆಗೆ ಆದೇಶ ನೀಡುತ್ತಿದ್ದೆ. ಐಎಎಸ್ ಅಧಿಕಾರಿ ಡಿ.ಕೆ.ರವಿ ಮತ್ತು ಡಿವೈಎಸ್‌ಪಿ ಗಣಪತಿಯವರ ಆತ್ಮಹತ್ಯೆ, ಅಕ್ರಮ ಲಾಟರಿ ಪ್ರಕರಣ, ಪರೇಶ್ ಮೇಸ್ತಾ ಸಾವು, ಸೌಜನ್ಯ ಕೊಲೆ ಪ್ರಕರಣವೂ ಸೇರಿದಂತೆ ಒಟ್ಟು 8 ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಿದ್ದೆ.
ಡಿ.ಕೆ.ರವಿ, ಗಣಪತಿ, ಪರೇಶ್ ಮೇಸ್ತಾ ಸೇರಿದಂತೆ ಹೆಚ್ಚಿನ ಪ್ರಕರಣಗಳಲ್ಲಿ ಸಿಬಿಐ ‘ಬಿ ರಿಪೋರ್ಟ್’ ನೀಡಿದೆ. ಒಂದೇ ಒಂದು ಪ್ರಕರಣದಲ್ಲಿಯೂ ನಮ್ಮನ್ನು ದೋಷಿ ಮಾಡಿಲ್ಲ ಎಂದರು.
ಅರ್ಕಾವತಿ ಬಡಾವಣೆಯಲ್ಲಿ ರೀ ಡೂ ಮಾಡಲಾಗಿದೆ ಎಂಬ ಆರೋಪ ಕೇಳಿಬಂದ ಕೂಡಲೇ ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ಅವರ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ಮಾಡಿದ್ದೆ. ನನ್ನಿಂದ ಒಂದು ಗುಂಟೆ ಜಾಗ ಕೂಡಾ ಡಿನೋಟಿಫಿಕೇಶನ್ ಆಗಿಲ್ಲ ಎಂದು ಕೆಂಪಣ್ಣ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ರೀ ಡೂ ಮಾಡಲು ಹೇಳಿದ್ದು ರಾಜ್ಯ ಹೈಕೋರ್ಟ್. ನ್ಯಾಯಾಲಯದ ಆದೇಶವನ್ನಷ್ಟೇ ನಮ್ಮ ಸರ್ಕಾರ ಪಾಲಿಸಿದೆ. ಎಲ್ಲಿಯೂ ಡಿನೋಟಿಫಿಕೇಷನ್ ನಡೆದಿಲ್ಲ. ನ್ಯಾಯಮೂರ್ತಿ ಕೆಂಪಣ್ಣನವರೇ ಇದನ್ನು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಕೆಂಪಣ್ಣನವರ ವರದಿಯ ಅಧ್ಯಯನ ಮಾಡಲು ಐಎಎಸ್ ಅಧಿಕಾರಿ ವಿಜಯಭಾಸ್ಕರ್ ನೇತೃತ್ವದಲ್ಲಿ ಸಮಿತಿ ನೇಮಕ ಮಾಡಿದ್ದೆ. ಆ ಸಮಿತಿ ವರದಿ ನೀಡುವ ಸಮಯದಲ್ಲಿ ಚುನಾವಣೆ ಎದುರಾದ ಕಾರಣ ಆ ವರದಿಯ ಮೇಲೆ ಕ್ರಮಕೈಗೊಳ್ಳಲಾಗಲಿಲ್ಲ ಎಂದರು.
ಈಗ ರೀಡೂ ಮಾಡಲಾಗಿದೆ ಎಂದು ಆರೋಪ ಮಾಡುವವರು ನಿವೃತ್ತ ನ್ಯಾ.ಕೆಂಪಣ್ಣ ಮತ್ತು ವಿಜಯಭಾಸ್ಕರ್ ನೀಡಿರುವ ವರದಿಯ ಮೇಲೆ ಯಾಕೆ ಕ್ರಮಕೈಗೊಂಡಿಲ್ಲ? ನಾಲ್ಕು ವರ್ಷಗಳಿಂದ ಬಾಯಿ ಮುಚ್ಚಿಕೊಂಡು ಕೂತವರು ಈಗ ರಾಜಕೀಯ ದುರುದ್ದೇಶದಿಂದ ಆರೋಪ ಮಾಡುತ್ತಿದ್ದಾರೆ. ಈ ಎರಡೂ ವರದಿಗಳು ಸರ್ಕಾರದ ಕೈಯಲ್ಲಿದೆ. ನಾನು ತಪ್ಪು ಮಾಡಿದ್ದರೆ ಶಿಕ್ಷೆ ವಿಧಿಸಿ. ನಿಮ್ಮ ಅಕ್ರಮಗಳನ್ನು ಮುಚ್ಚಿಹಾಕಲು ಸುಳ್ಳು ಆರೋಪಗಳನ್ನು ಮಾಡಬೇಡಿ ಎಂದರು.
ಎಸಿಬಿ ರಚನೆ ಮಾಡಿ ಲೋಕಾಯುಕ್ತವನ್ನು ದುರ್ಬಲಗೊಳಿಸಿದ್ದೇವೆ ಎಂಬ ಆರೋಪ ಸತ್ಯಕ್ಕೆ ದೂರವಾದುದು. ಆಗಿನ ಲೋಕಾಯುಕ್ತರಾಗಿದ್ದ ಭಾಸ್ಕರ್ ರಾವ್ ಅವರ ಮಗ ಮನೆಯಲ್ಲಿಯೇ ಕೂತು ಆರೋಪಿ ಅಧಿಕಾರಿಗಳ ರಕ್ಷಣೆ ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತದ ಕಾರ್ಯದ ಮೇಲೆ ಕಣ್ಣಿಡಲು ಎಸಿಬಿ ರಚನೆ ಮಾಡಿದ್ದೇವೆಯೇ ಹೊರತು ಅದರಲ್ಲಿ ಯಾವುದೇ ದುರುದ್ದೇಶ ಇರಲಿಲ್ಲ ಎಂದರು.
ಎಸಿಬಿ ಅಸ್ತಿತ್ವದಲ್ಲಿರುವುದು ಕೇವಲ ಕರ್ನಾಟಕ ರಾಜ್ಯದಲ್ಲಿ ಅಲ್ಲ, ಬಿಜೆಪಿ ಆಡಳಿತ ಇರುವ ಗುಜರಾತ್, ಮಧ್ಯಪ್ರದೇಶ, ಹರ್ಯಾಣ ಮೊದಲಾದ ರಾಜ್ಯಗಳಲ್ಲಿ ಇವೆ. ಅಲ್ಲಿ ಯಾಕೆ ಬಿಜೆಪಿ ಎಸಿಬಿಗೆ ವಿರುದ್ದವಾಗಿ ಮಾತನಾಡುವುದಿಲ್ಲ? ಇಲ್ಲಿ ಎಸಿಬಿಯನ್ನು ಮುಚ್ಚಿ ಲೋಕಾಯುಕ್ತಕ್ಕೆ ಪೂರ್ಣ ಅಧಿಕಾರ ನೀಡಲು ಕಾರಣ ಹೈಕೋರ್ಟ್ ಆದೇಶವೇ ಹೊರತು, ಇದು ಬಿಜೆಪಿಯವರ ಪುಣ್ಯದ ಕೆಲಸ ಅಲ್ಲ ಎಂದರು.




