ಸಚಿವರ ಹೇಳಿಕೆ ಕುರಿತು ಉನ್ನತ ತನಿಖೆಗೆ ಆದೇಶ

3 years ago

ಬೆಂಗಳೂರು: ಪೊಲೀಸ್ ಅಧಿಕಾರಿಗಳ ವರ್ಗಾವಣೆ ಕುರಿತು ಸಚಿವ ಎಂ.ಟಿ.ಬಿ.ನಾಗರಾಜ್ ಹೇಳಿಕೆಯಿಂದ ಮುಜುಗರಕ್ಕೆ ಸಿಲುಕಿರುವ ರಾಜ್ಯ ಸರ್ಕಾರ  ಸಚಿವರ ಹೇಳಿಕೆಯ ಬಗ್ಗೆ ಉನ್ನತ ತನಿಖೆಗೆ ಆದೇಶಿಸಿದೆ

ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ತನಿಖೆಯಿಂದ ಸತ್ಯಾಂಶ ಹೊರಬರಲಿದೆ. ಈ ಬಗ್ಗೆ ಮಾತನಾಡಲು ಕಾಂಗ್ರೆಸ್‍ಗೆ ನೈತಿಕತೆ ಇಲ್ಲ ಎಂದರು.

ಸಚಿವ  ಎಂ.ಟಿ.ಬಿ.ನಾಗರಾಜ್ ಇನ್ಸ್ ಪೆಕ್ಟರ್ ನಂದೀಶ್ ಆತ್ಮಹತ್ಯೆ ನಂತರ ನೀಡಿದ ಹೇಳಿಕೆ‌ ಬಗ್ಗೆ ಸ್ವತಃ ನಾನೇ ತನಿಖೆ ನಡೆಸಿ ವರದಿ ನೀಡಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದೇನೆ. ಈ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ ಎಂದರು.

ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್‍ಗೆ ನೈತಿಕತೆ ಇಲ್ಲ, ಈ ಹಿಂದೆ ಕೆಲವು ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ವಹಿಸಿದಾಗ ಏನೆಲ್ಲ ಆಗಿದೆ ಎಂಬುದು ಎಲ್ಲರಿಗೂ ಗೊತ್ತು. ಅರ್ಕಾವತಿ ಲೇಔಟ್‍ನಲ್ಲಿ ನೂರಾರು ಎಕರೆ ಡಿನೋಟಿಫಿಕೇಷನ್ ನಡೆಸಿದ ರೀಡೂ ತನಿಖೆ ಏನಾಯಿತು ಎಂಬುದು ರಾಜ್ಯದ ಜನತೆಗೆ ಗೊತ್ತು ಎಂದರು.

ಪ್ರಕರಣ ಕುರಿತು ಬೇಗ ಸತ್ಯಾಂಶ ಹೊರಬರಲಿ ಎಂಬ ಕಾರಣಕ್ಕಾಗಿಯೇ ನಾವು ಉನ್ನತಮಟ್ಟದ ತನಿಖೆಗೆ ಆದೇಶಿಸಿದ್ದೇವೆ. ಸತ್ಯಾಂಶ ಹೊರಬರಲಿ ಅಲ್ಲಿಯವರೆಗೂ ಕಾಂಗ್ರೆಸ್‍ನವರು ಯಾರಿಗೂ ಪ್ರಮಾಣ ಪತ್ರ ಕೊಡುವ ಅಗತ್ಯವಿಲ್ಲ ಎಂದರು.

ನಾಳೆ ನಡೆಯಲಿರುವ ಕನ್ನಡ ಚಿತ್ರರಂಗದ ಧ್ರುವತಾರೆ ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸ್ವಾಭಿಮಾನಿ ಕನ್ನಡಿಗರೆಲ್ಲರೂ ಭಾಗವಹಿಸಬೇಕೆಂದು ಮನವಿ ಮಾಡಿದರು.

ನಾಳೆ ಮಧ್ಯಾಹ್ನ 4 ಗಂಟೆಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ವಿಧಾನಸೌಧದ ಮೆಟ್ಟಿಲುಗಳು ಮೇಲೆ ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರವಾಗಿ ನೀಡಲಾಗುತ್ತಿದೆ. ಎಲ್ಲಾ ಅಭಿಮಾನಿಗಳು ಭಾಗವಹಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದರು.

ನವೆಂಬರ್ 2ರಿಂದ 4ವರೆಗೆ ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮವನ್ನೂ ಸಹ ಮಾಡುತ್ತಿದ್ದೇವೆ. ವಿಶ್ವದ ನಾನಾ ಭಾಗದ ಹೂಡಿಕೆದಾರರು, ಬಂಡವಾಳಶಾಹಿಗಳು ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಈ ಕಾರ್ಯಕ್ರಮ ಮುಂದಿನ ಕರ್ನಾಟಕದ ಆರ್ಥಿಕ ಬೆಳವಣಿಗೆಯ ದಿಕ್ಸೂಚಿಯಾಗಿರಲಿದೆ. 5 ಲಕ್ಷ ಕೋಟಿ ಹೂಡಿಕೆಯಾಗಲಿದೆ. ಅನೇಕ ಕ್ಷೇತ್ರಗಳ ಪ್ರಗತಿ, ಬೆಳವಣಿಗೆ ಸವಾಲುಗಳ ಬಗ್ಗೆ ಕೂಡ ಚರ್ಚೆ ನಡೆಸಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೂ ಎಲ್ಲರೂ ಭಾಗಿಯಾಗಬೇಕು ಎಂದರು.

ನವೆಂಬರ್ 11ರಂದು ವಂದೇ ಭಾರತ್ ರೈಲು, ವಿಮಾನ ನಿಲ್ದಾಣದ ಟರ್ಮಿನಲ್-2 ಮತ್ತು ಕೆಂಪೇಗೌಡರ ಪ್ರಗತಿಯ ಪ್ರತಿಮೆ ಉದ್ಘಾಟನೆಯಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡುತ್ತಿದ್ದಾರೆ. ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದೆ ಎಂದರು.

Leave a Reply