ನಾನು ಆ ತಪ್ಪು ಮಾಡುವುದಿಲ್ಲ…
ಅದು ಪ್ರತಿಷ್ಠಿತ ಕ್ಯಾನ್ಸರ್ ಆಸ್ಪತ್ರೆ. ಸ್ಪೆಷಲ್ ವಾರ್ಡ್ ನಲ್ಲಿ ಮಂಚದ ಮೇಲೆ ದಿಂಬಿಗೆ ಒರಗಿ ಅವರು ಮಲಗಿದ್ದರು. ರಕ್ತ ಕ್ಯಾನ್ಸರ್ ನಿಂದ ಪೀಡಿತರಾಗಿದ್ದರು. ಸಾವಿನ ಮನೆಯ ಬಾಗಿಲು ತಟ್ಟಲು ಸಮೀಪದಲ್ಲಿದ್ದರು.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಅವರು “ನೀವು ಕ್ಷೇಮವಾಗಿರುವಿರಾ?” ಎಂದರು. ನಾನು “ಹೂಂ” ಅಂದೆ. ‘ಬಹುಶಃ ಇದು ನಮ್ಮ ಕೊನೆಯ ಭೇಟಿಯಾಗಿರುತ್ತೆ” ಎಂದರು.
ಅವರಿಗೆ ಮಾತಾಡುವ ಆಸೆ. ಆದರೆ ಅವರು, ‘ಹೆಚ್ಚಿಗೆ ಮಾತಾಡಬಾರದೇನೋ, ಆಯಾಸಗೊಳ್ಳುವರೇನೋ’ ಎಂದುಕೊಂಡ ನಾನು, ಆದಷ್ಟು ಮೌನವಾಗಿರಲು ನೋಡಿದೆ. ಆದರೆ ಅವರು, “ಒಂದೆರಡು ಮಾತಾಡುವೆ, ಬೇಸರವಿಲ್ಲ ತಾನೇ?… ಇನ್ನೇನು ನಾನು ಇವೊತ್ತೋ ನಾಳೆಯೋ?… ಸಾಯುವ ಈ ಸಂದರ್ಭದಲ್ಲಿ ನನಗನಿಸಿದ್ದು ಇಷ್ಟೆ; ಭಾವನೆಗಳಲ್ಲಿ ಬದುಕುವವರು ಎಂದೂ ಸುಖವಾಗಿರುವುದಿಲ್ಲ. ತುಂಬಾ ಪ್ರಾಕ್ಟಿಕಲ್ ಆಗಿದ್ದರೇನೇ ಒಳ್ಳೆಯದು. ಇಲ್ಲಿ ಎಲ್ಲವೂ ವ್ಯವಹಾರಿಕ. ಸಂಬಂಧಗಳೆಲ್ಲವೂ ಲಾಭ, ನಷ್ಟದ ಮೇಲೆ ನಿಂತಿರುತ್ತವೆ. ವ್ಯವಹಾರಿಕವಾಗಿ ಬದುಕುವವರಿಗೆ ಭಾವನೆಗಳು ಕಡಿಮೆ. ಅವರು ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ. ಅವರಲ್ಲಿ ಗಲಿಬಿಲಿ ಇಲ್ಲ. ನೆಮ್ಮದಿಯಾಗಿರುತ್ತಾರೆ.
ನಾನು ಹೆಂಡತಿ, ಮಕ್ಕಳು ಅಂತೆಲ್ಲಾ ಬಡಿದಾಡಿದೆ. ಸ್ವಾತಂತ್ರ್ಯವಿಲ್ಲದೆ ಬದುಕಿದೆ. ಈ ಕ್ಷಣದವರೆಗೂ ನನಗಾಗಿ ನಾನು ಬದುಕಲಿಲ್ಲ. ನನ್ನ ಮನೆ, ನನ್ನವರು ಅಂತೆಲ್ಲಾ ಬದುಕು ಸವೆದು ಹೋಯ್ತು. ಈ ಬಂಧನದಿಂದ ಸುಖ ಇಲ್ಲ…
ನಾನು ಆಸ್ಪತ್ರೆಗೆ ಅಡ್ಮಿಟ್ ಆಗಿ ಸುಮಾರು ಎರಡು ತಿಂಗಳಾಯ್ತು. ನಾನೇ ದುಡಿದ ಹಣದಲ್ಲಿ ಆಸ್ಪತ್ರೆಯ ಖರ್ಚುವೆಚ್ಚ ನೋಡಿಕೊಳ್ಳುತ್ತಿರುವೆ. ಹೆಂಡತಿ, ಮಕ್ಕಳಿಗೆ ಬೇಕಾದಷ್ಟು ಮಾಡಿಟ್ಟಿರುವೆ. ಒಂದಷ್ಟು ನೆಮ್ಮದಿಯಾಗಿರೋಣ ಅನ್ನುವಷ್ಟರಲ್ಲಿ ಈ ಕಾಯಿಲೆ ನನ್ನನ್ನು ಜೀವಂತ ಸುಟ್ಟುಹಾಕುತ್ತಿದೆ.
ನನ್ನ ಗಂಡು ಮಕ್ಕಳಿಬ್ಬರು ಅವರ ಹೆಂಡತಿಯರು ಕಾಟಾಚಾರಕ್ಕೆಂಬಂತೆ ವಾರಕ್ಕೊಮ್ಮೆಯೋ, ಹದಿನೈದು ದಿನಗಳಿಗೊಮ್ಮೆಯೋ, ಬಂದು ಹೋಗುತ್ತಾರೆ. ನನಗೆ ಮೊಮ್ಮಕ್ಕಳ ನೋಡುವಾಸೆ. ಆದರೆ ಇಲ್ಲಿಗೆ ಅವರನ್ನು ನನ್ನ ಮಕ್ಕಳು ಕರೆದುಕೊಂಡು ಬರುವುದಿಲ್ಲ. ಇನ್ನಿವರಿಗೆ ನಾನು ಹೇಗಿದ್ದರೂ ಸಾಯುತ್ತೇನೆ; ಬೇಗ ಸತ್ತು ಬಿಡಲಿ ಅನಿಸಿರಬೇಕು…
ಶಿವಕುಮಾರ್, ನನ್ನ ಗೆಳೆಯನೊಬ್ಬ ಮದುವೆ ಆಗಲಿಲ್ಲ ಕಣ್ರಿ. ಅವನೇ ಪುಣ್ಯವಂತ! ತುಂಬಾ ಖುಷಿಯಾಗಿದ್ದಾನೆ. ಅವನಿಗೆ ಬೇಕಾದ ಅಡುಗೆ ಅವನೇ ಮಾಡಿಕೊಳ್ಳುತ್ತಾನೆ. ತನಗಿಷ್ಟವಾದ ಕಡೆ ಹೋಗಿ ಬರುತ್ತಾನೆ. ಕ್ಲಬ್ ಗೆ ಹೋಗುತ್ತಾನೆ, ಹಾಡುತ್ತಾನೆ. ನರ್ತಿಸುತ್ತಾನೆ. ಅವನಿಗನಿಸಿದಂತೆ ಅವನು ಬದುಕುತ್ತಾನೆ… ಒಂಟಿಯಾಗಿರಬೇಕು. ಸಂಸಾರದಲ್ಲಿ ಸುಖವಿಲ್ಲ. ಅದರಲ್ಲೂ ನಾವು ಯಾರಿಗಾಗಿ ಕಷ್ಟಪಡುತ್ತೇವೋ ಅವರಿಗೆ ನಮ್ಮ ಬಗ್ಗೇನೇ ಪ್ರೀತಿ, ಕಾಳಜಿ ಇರುವುದಿಲ್ಲ…
ನಾನು ಎಂತಹ ವ್ಯರ್ಥವಾದ ಬದುಕು ಮಾಡಿಬಿಟ್ಟೆ?… ಹೆಂಡತಿ, ಮಕ್ಕಳ ಸೆರೆಯಲ್ಲಿ ಸಿಕ್ಕು ಸೆರೆವಾಸ ಅನುಭವಿಸಿಬಿಟ್ಟೆ… ನಿಮಗೊಂದು ಮಾತು ಹೇಳುತ್ತೇನೆ. ನಿಮಗೂ ಆಗಲೇ ನನ್ನ ಹಾಗೆ ಅನಿಸಿರಲೂಬಹುದು. ನಿಮಗೆ ಮಕ್ಕಳಿದ್ದರೆ ದಯಮಾಡಿ ಅವರಿಗೆ ಮದುವೆ ಮಾಡಬೇಡಿ. ಅವರಿಷ್ಟದಂತೆ ಬದುಕಲು ಹೇಳಿ. ಸಂಸಾರದಲ್ಲಿ ಖುಷಿಯಿಲ್ಲ ಎಂದು ಹೇಳಿ. ಅವರನ್ನು ಮದುವೆಯೆಂಬ ಖೆಡ್ಡಾದಲ್ಲಿ ಕೆಡವಬೇಡಿ…” ಎಂದೆಲ್ಲಾ ಒಂದೇ ಉಸಿರಲ್ಲಿ ಮಾತಾಡಿದ್ದರು. ಅವರನ್ನು ನೋಡಿ ಬಂದು ಒಂದು ವಾರವಾಗಿರಲಿಲ್ಲ. ಅವರು ತೀರಿ ಹೋದರು.
ಅವರು ಏಕೆ ಹೀಗೆಲ್ಲಾ ಮಾತಾಡಿದರು?…ಅವರಿಗೆ ಈ ಬದುಕು ಹೇಗೆ ಕಂಡಿತ್ತೋ?…ಅವರ ಅಭಿಪ್ರಾಯ ಸರಿಯೋ ತಪ್ಪೋ ಎಂದು ನಾನು ಹೇಳಲಾರೆ. ಒಬ್ಬೊಬ್ಬರ ಪಾಲಿಗೆ ಈ ಬದುಕೆಂಬುದು ಒಂದೊಂದು ರೀತಿ ಎಟುಕಿರುತ್ತದೆ.
ಈ ಘಟನೆ ನನಗೆ ಈ ಹೊತ್ತಲ್ಲಿ ನೆನಪಾಗಲು ಕಾರಣ ನನಗೆ ಪರಿಚಿತರಿರುವ ಯುವ ಅಧ್ಯಾಪಕರೊಬ್ಬರು ಈಗ ತಾನೇ ಸಿಕ್ಕು ಮಾತಾಡುತ್ತಾ; ಮದುವೆ ಬಗ್ಗೆ ವಿಷಯ ಪ್ರಸ್ತಾಪಿಸಿದಾಗ, “ಮದುವೆಯಾಗಿ ನನ್ನ ಅಪ್ಪ ಅಮ್ಮ ಅನುಭವಿಸಿರುವುದೇ ಸಾಕು. ನಾನು ಆ ತಪ್ಪು ಮಾಡುವುದಿಲ್ಲ” ಎಂದರು. ಬಹಳಷ್ಟು ಮಂದಿ ಯುವಕರು ಹೀಗೆಯೇ ನನ್ನೊಂದಿಗೆ ಹೇಳಿದ್ದಾರೆ. ಇನ್ನು ಕೆಲಮಂದಿ ಮದುವೆಯಾದವರು, “ಮಕ್ಕಳೇ ಬೇಡ” ಎನ್ನುತ್ತಾರೆ.
ಇನ್ನು ಹತ್ತಿಪ್ಪತ್ತು ವರ್ಷಗಳಲ್ಲಿ ಮದುವೆಯಾಗದವರ, ಮದುವೆಯಾಗಿದ್ದರೂ ಮಕ್ಕಳಿಲ್ಲದವರ ದೊಡ್ಡ ಸಮಾಜವೇ ನಮ್ಮೆದುರಿರುತ್ತದೇನೋ?
– ಎಂ.ಎಸ್.ಶಿವಕುಮಾರ್, ನಿವೃತ್ತ ಉಪನ್ಯಾಸಕ



