ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ಮಾಜಿ ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರ ಮನವಿ ಗಮನ ಸೆಳೆಯುವಂತದ್ದು. ‘ಹಂದಿ ಮಾಂಸವನ್ನು ತಿನ್ನುವುದಕ್ಕೆ ಬಿಡಿ’ ಎಂದು ಅವರು ಸರ್ಕಾರದ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆಹಾರ ಎನ್ನುವುದು ಜೀವನಕ್ರಮವೇ ಹೊರತು ಅದೇ ಮನುಷ್ಯನ ಶ್ರೇಷ್ಠತೆ, ಆತನ ಸಾತ್ವಿಕತೆ ಅಥವಾ ನೈತಿಕತೆಯನ್ನು ಸಾಬೀತುಪಡಿಸುವ ಮಾನದಂಡವಲ್ಲ. ಹಾಗಾಗಿ ಹಂದಿಮಾಂಸ ತಿನ್ನುವುದು ಆರಗ ಜ್ಞಾನೇಂದ್ರ ಅವರ ಜೀವನ ಕ್ರಮವಾಗಿದ್ದರೆ, ಅಥವಾ ಅಂತಹ ಜೀವನಕ್ರಮದವರ ಪರವಾಗಿ ಅವರು ಮನವಿ ಮಾಡಿಕೊಂಡಿದ್ದರೆ, ಖಂಡಿತ ಅದು ಯೋಗ್ಯವಾದ ಮನವಿ. ಅವರ ಆ ಮನವಿಯನ್ನು ಮಾನ್ಯ ಮಾಡಲೇಬೇಕು!
ಜೊತೆಗೆ, ಮತ್ತೊಬ್ಬರ ಆಹಾರಕ್ರಮವನ್ನು ಪ್ರಶ್ನಿಸುವ; ಅದನ್ನು ಬಲವಂತವಾಗಿ ನಿರ್ಬಂಧಿಸುವ; ಆ ಮೂಲಕ ಹಲ್ಲೆಗಳನ್ನು ಯೋಜಿಸುವ; ಅಂತಹ ಹಲ್ಲೆಗಳನ್ನು ‘ಆಕ್ಷನ್ನು ರಿಯಾಕ್ಷನ್ನು’ ಎಂಬ ಕ್ಷುಲ್ಲಕ ಲೇವಡಿಗೆ ತುತ್ತಾಗಿಸುವ ಮನಸ್ಥಿತಿಯನ್ನು ಕಳಚಿಕೊಂಡು, ಜ್ಞಾನೇಂದ್ರ ಮತ್ತು ಅವರು ಪ್ರತಿನಿಧಿಸುವ ಪಕ್ಷ ಆದಷ್ಟು ಬೇಗ ಹೊರಬರಲಿ ಎಂದು ಹಾರೈಸೋಣ.
ಅಂದಹಾಗೆ, ಆರಗ ಅವರು ಕೇಳಿಕೊಳ್ಳುತ್ತಿರುವುದು ಬೆಳೆ ಹಾನಿ ಮಾಡುವ ಕಾಡುಹಂದಿಗಳನ್ನು ಕೊಂದು ತಿನ್ನುವುದರ ಬಗ್ಗೆ. ಬೆಳೆ ಹಾನಿ ಮಾಡುವ ಹಂದಿಗಳನ್ನು ಲೈಸೆನ್ಸ್ ಹೊಂದಿದ ಬಂದೂಕುಗಳಿಂದ ಗುಂಡಿಟ್ಟು ಕೊಲ್ಲಲು ಅವಕಾಶವಿದೆಯಾದರೂ, ಹಾಗೆ ಕೊಂದ ಹಂದಿಯ ಮಾಂಸವನ್ನು ತಿನ್ನಲು ಕಾನೂನಿನಲ್ಲಿ ನಿರ್ಬಂಧವಿದೆ. ಈ ನಿರ್ಬಂಧವನ್ನು ತೆಗೆದು ಹಾಕಬೇಕೆನ್ನುವುದು ಅವರ ಬೇಡಿಕೆ. ಕೊಂದ ಹಂದಿಯ ಮಾಂಸ ತಿನ್ನಲು ಅವಕಾಶ ಸಿಕ್ಕರೆ, ತಿನ್ನುವುದಕ್ಕೆಂದೇ ಕಾಡುಹಂದಿಗಳನ್ನು ಕೊಂದು, ಬೆಳೆ ರಕ್ಷಣೆಯ ನೆಪ ಹೇಳುವವರ ಸಂಖ್ಯೆ ಹೆಚ್ಚಾಗಬಹುದು. ಅದು ಆ ವನ್ಯಮೃಗಗಳ ಸಂತತಿಯ ಅಳಿವಿಗೂ ಕಾರಣವಾಗಬಹುದು. ಈ ಎಲ್ಲಾ ಆಯಾಮಗಳಿಂದ ಯೋಚಿಸಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ.
ಆದರೆ, ಆಯಾ ಜನ ಅಥವಾ ಸಮುದಾಯಗಳ ವೈಯಕ್ತಿಕ ಆಯ್ಕೆಯಾದ ಆಹಾರವನ್ನು ಸಾಂಸ್ಕೃತಿಕ ರಾಜಕಾರಣದ ವಿಷಯವನ್ನಾಗಿ ಮಾಡಿಕೊಂಡು, ಆ ಮೂಲಕ ಶೋಷಣೆಯನ್ನು ಪೋಷಿಸುವ, ದಬ್ಬಾಳಿಕೆಯನ್ನು ಪ್ರತಿಪಾದಿಸುವ ನಿಲುವುಗಳು ಈಗಲಾದರೂ ಬದಲಾಗಲಿ. ನಮ್ಮಂತವರ ಈ ನಿರೀಕ್ಷೆ ದುಬಾರಿಯದ್ದಿರಬಹುದೇನೊ?
ಆರಗ ಜ್ಞಾನೇಂದ್ರರೇ, ನೀವೂ ಸೇರಿದಂತೆ ನಿಮ್ಮವರೆಲ್ಲ ಈ ಕುರಿತು ಒಮ್ಮೆ ಸಾವಕಾಶವಾಗಿ ಯೋಚಿಸಿ ನೋಡಿ….
- ಬರಹ: ಪಂಚರ್ ಅಂಗ್ಡಿ



