ಬೆಳಗಾವಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕಾಗಿ ಮೀಸಲಿಟ್ಟ ಎಸ್ಸಿ-ಎಸ್ಪಿ/ಟಿಎಸ್ಪಿ ಅನುದಾನವನ್ನು ರಾಜ್ಯ ಸರ್ಕಾರ ತನ್ನ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಬಳಸಿಕೊಂಡಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ವಿಧಾನ ಪರಿಷತ್ ನಲ್ಲಿ ಧರಣಿ ನಡೆಸುವ ಮೂಲಕ ಗದ್ದಲ ಮತ್ತು ಕೋಲಾಹಲ ಸೃಷ್ಟಿಸಿದರು.
ವಿಪಕ್ಷಗಳ ನಾಯಕರ ಗದ್ದಲದಿಂದ ಸುಗಮ ಕಲಾಪ ಸಾಧ್ಯವಾಗದೆ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ಕೆಲ ಕಾಲ ಮುಂದೂಡಿದರು. ಮತ್ತೆ ಸದನ ಸಮಾವೇಶಗೊಂಡಾಗ ಇದೇ ಪರಿಸ್ಥಿತಿ ಮುಂದುವರೆಯಿತು. ಇದರಿಂದ ಅಸಮಾಧಾನಗೊಂಡ ಹೊರಟ್ಟಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಹೋಗುವುದಾಗಿ ಘೋಷಿಸಿದರು. ಜೊತೆಗೆ ಈ ವಿಷಯದ ಕುರಿತು ಸೋಮವಾರ ವಿಸ್ತೃತ ಚರ್ಚೆ ಗೆ ಅವಕಾಶ ನೀಡುವುದಾಗಿ ಪ್ರಕಟಿಸಿದರು. ಇದಕ್ಕೆ ಸಮ್ಮತಿಸಿದ ಬಿಜೆಪಿ ಸದಸ್ಯರು ಧರಣಿ ಕೈಬಿಟ್ಟರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಅವರು, ಎಸ್ಸಿಎಸ್ಪಿ ಟಿಎಸ್ಪಿ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ಬಳಕೆ ಮಾಡಿರುವ ಅನುದಾನದ ಕುರಿತು ಪ್ರಶ್ನಿಸಿದರು. ಇದಕ್ಕೆ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ನೀಡಿದ ಉತ್ತರಕ್ಕೆ ಅಸಮಧಾನ ವ್ಯಕ್ತಪಡಿಸಿದ ಛಲವಾದಿ ನಾರಾಯಣಸ್ವಾಮಿ, ಪರಿಶಿಷ್ಟ ಜಾತಿಗೆ ನಿಗದಿಪಡಿಸಿದ ಹಣವನ್ನು ಎಸ್ಸಿ, ಎಸ್ಪಿ-ಟಿಎಸ್ಪಿ ಕಾಯ್ದೆಯ ಸೆಕ್ಷನ್ 7 ಎ ಪ್ರಕಾರ ನೇರ ಫಲಾನುಭವಿಗಳು, ಸೆಕ್ಷನ್ 7ಬಿ ಪ್ರಕಾರ ಕಾಲೇಜುಗಳು, ಶಿಕ್ಷಣ ಸಂಸ್ಥೆ, ಅಭಿವೃದ್ಧಿ, ಸೆಕ್ಷನ್ 7 ಸಿ ಆರೋಗ್ಯ, ಶಿಕ್ಷಣ, ಸಮುದಾಯ ಭವನ ಹಾಗೂ 7ಡಿ ಅಭಿವೃದ್ಧಿ ಬಳಕೆ ಬಿಟ್ಟು ಅನ್ಯ ಯೋಜನೆಗಳಿಗೆ ಬಳಸುವಂತಿಲ್ಲ ಎಂದು ಕಾಯ್ದೆಯಲ್ಲಿವೆ. ಆದರೆ, ಇದನ್ನು ಉಲ್ಲಂಘಿಸಿ ಗ್ಯಾರಂಟಿ ಯೋಜನೆಗಳಿಗೆ ಅನುದಾನ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದರು.
ಇದು ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಮುಂತಾದ ಸಾಮಾನ್ಯ ಸಾಮಾಜಿಕ ವಲಯದ ಯೋಜನೆಗಳನ್ನು ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆಯಡಿ ಸೇರಿಸಲು ಅವಕಾಶವಿರುತ್ತದೆ. ಹಾಗಾಗಿ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಕಾರಣಕ್ಕೂ ಅನುದಾನ ದುರುಪಯೋಗವಾಗಿಲ್ಲ ಎಂದು ಎಚ್.ಸಿ.ಮಹದೇವಪ್ಪ ವಿವರಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಾರಾಯಣಸ್ವಾಮಿ, ನಿಮಗೆ ನೀಡಿರುವ ಲಿಖಿತ ಉತ್ತರದಲ್ಲಿ ಗೃಹ ಲಕ್ಷ್ಮೀ, ಅನ್ನಭಾಗ್ಯ, ಗೃಹ ಜ್ಯೋತಿ, ಶಕ್ತಿ ಹಾಗೂ ಯುವ ನಿಧಿ ಯೋಜನೆಗಳಿಗೆ ಒಟ್ಟು 10 ಸಾವಿರಕ್ಕೂ ಅಧಿಕ ಕೋಟಿ ರೂಪಾಯಿ ಬಳಕೆ ಮಾಡಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ. ಇದು ಮರೆಮಾಚುವ ಪ್ರಯತ್ನ ಎಂದರು.
ಸಚಿವರ ಉತ್ತರಕ್ಕೆ ತೃಪ್ತರಾಗದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಇದು ದಲಿತ ವಿರೋಧ ಸರ್ಕಾರ, ಚುನಾವಣೆಯಲ್ಲಿ ಎಲ್ಲರಿಗೂ ಗ್ಯಾರಂಟಿ ಕೊಡುತ್ತೇವೆ ಎಂದು ಹೇಳಿ ಈಗ ಎಸ್ಸಿಎಸ್ಪಿ-ಟಿಎಸ್ಪಿ ಮೀಸಲಿಟ್ಟ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಧ್ಯಪ್ರವೇಶಿಸಿ, ಈ ಯೋಜನೆಯಡಿ ಮೀಸಲಿಟ್ಟ ಯೋಜನೆಗಳನ್ನು ಅನ್ಯ ಯೋಜನೆಗಳಿಗೆ ಬಳಸಿಕೊಳ್ಳುವಂತಿಲ್ಲ ಎಂದು ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ. ನಾವು ಫಲಾನುಭವಿಗಳನ್ನು ಗುರುತಿಸಿ ಹಂಚಿಕೆ ಮಾಡಿದ್ದೇವೆ ಎಂದು ಸರ್ಕಾರದ ಸಮರ್ಥನೆಗೆ ನಿಂತರು.
ಆಗ ಪ್ರತಿಕ್ರಿಯಿಸಿದ ಛಲವಾದಿ ನಾರಾಯಣಸ್ವಾಮಿ, ಹಾಗಾದರೆ ಈ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಏಕೆ ಕೊಟ್ಟಿದ್ದೀರಿ, ಅನ್ಯ ಉದ್ದೇಶಗಳಿಗೆ ಬಳಕೆ ಮಾಡುವಂತಿಲ್ಲ ಎಂದು ನೀವೇ ಹೇಳುತ್ತಿದ್ದೀರಿ, ಆದರೆ 11 ಸಾವಿರ ಕೋಟಿ ಹಣವನ್ನು ನಿಮ್ಮ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದೀರಿ. ದಲಿತರ ಹಣ ದಲಿತರ ಅಭಿವೃದ್ಧಿಗೇ ಮೀಸಲಿಡಬೇಕು. ಕೇವಲ ಸಿಮೆಂಟ್ ರಸ್ತೆ, ಸಮುದಾಯಭವನ, ಚರಂಡಿ ನಿರ್ಮಾಣ ಮಾಡಿದರೆ ಸಾಲದು, ಶಿಕ್ಷಣ ಅದಕ್ಕೆ ಬೇಕಾದ ಹಣ ಒದಗಿಸಿದರೆ ದಲಿತರ ಉದ್ದಾರವಾಗುತ್ತದೆ ಎಂದರು.
ಈ ಹಂತದಲ್ಲಿ ಗದ್ದಲ ಜೋರಾಯಿತು. ಸಭಾಪತಿ ಮತ್ತೆ ಸದನವನ್ನು ಮುಂದೂಡಿದರು. ಸದನ 2ನೇ ಬಾರಿಗೆ ಸೇರಿದಾಗ ಹಿಂದಿನ ಸರ್ಕಾರದ ಅವಧಿಯಲ್ಲೇ 10 ಸಾವಿರ ಕೋಟಿ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಈಗ ನಾವು ಕಾಯ್ದೆಯನ್ನು ಮತ್ತಷ್ಟು ಬಲಪಡಿಸುತ್ತಿದ್ದೇವೆ. ಯಾವ ಯೋಜನೆಗೆ ಹಣ ಮೀಸಲಿಡಲಾಗಿದೆಯೋ ಅದಕ್ಕಷ್ಟೇ ಬಳಸಿಕೊಳ್ಳಬೇಕು. ಇವರಿಗೆ ದಲಿತರ ಉದ್ದಾರವಾಗಬೇಕಿಲ್ಲ. ಎಲ್ಲರದಲ್ಲೂ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಡಳಿತ ಪಕ್ಷದ ನಾಯಕರು ತಿರುಗೇಟು ನೀಡಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ 7,800 ಕೋಟಿ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಲಾಗಿದೆ ಎಂದು ಸದನದಲ್ಲೇ ಉತ್ತರ ಕೊಟ್ಟಿದ್ದಾರೆ. ಈಗ ದಲಿತರ ಬಗ್ಗೆ ಮಾತನಾಡುತ್ತಾರೆ. ನಾಚಿಕೆಯಾಗುವುದಿಲ್ಲವೇ ಎಂದು ಬಿಜೆಪಿ ವಿರುದ್ಧ ವಾಗ್ದಾಳಿಯನ್ನು ಆಡಳಿತ ಪಕ್ಷದ ನಾಯಕರು ನಡೆಸಿದರು.
ಆಗ ಸಭಾಪತಿ ಬಸವರಾಜ ಹೊರಟ್ಟಿ ಮಧ್ಯಪ್ರವೇಶಿಸಿ, ಹೀಗೆ ಮುಂದುವರೆದರೆ ಸದನ ನಡೆಸಲು ಕಷ್ಟವಾಗುತ್ತದೆ. ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಸೋಮವಾರ ಚರ್ಚೆಗೆ ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ಧರಣಿ ಕೈ ಬಿಟ್ಟರು.



