ಬೆಂಗಳೂರು: ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿಕೊಂಡು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದರು.
ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಜನ್ಮ ದಿನಾಚರಣೆ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಐಟಿ ಅಧಿಕಾರಿಗಳು ಕಾಂಗ್ರೆಸ್ನವರ ಮನೆಗಳ ಮೇಲೆ ದಾಳಿ ಮಾಡುವಂತೆ ಬಿಜೆಪಿಯವರ ಮನೆಗಳ ಮೇಲೆ ಏಕೆ ದಾಳಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಜಾರ್ಖಂಡ್ ಸಂಸದರ ಮನೆಯಲ್ಲಿ ಐಟಿ ದಾಳಿಯಾಗಿ ಸಾಕಷ್ಟು ಹಣ ದೊರೆತಿದ್ದು, ಅಲ್ಪಸಂಖ್ಯಾತರಿಗೆ ಆರ್ಥಿಕ ಸೌಲಭ್ಯವಿಲ್ಲವೆನ್ನುವ ಕಾಂಗ್ರೆಸ್ನವರ ಮನೆಯಲ್ಲಿಯೇ ಅಪಾರ ಹಣ ದೊರೆಯುತ್ತಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಸಿದ ಸಿದ್ದರಾಮಯ್ಯ, ಯಾರ ಬಳಿ ಬೇನಾಮಿ ಹಣ ದೊರೆತರೂ ಅದು ಕಾನೂನು ರೀತಿ ತಪ್ಪು. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲೇಬೇಕು ಎಂದು ಅಭಪ್ರಾಯಪಟ್ಟರು.
ಕಾಂಗ್ರೆಸ್ ಪಕ್ಷದವರನ್ನೇ ಗುರಿಯಾಗಿಸಿಕೊಂಡು ಐಟಿ ದಾಳಿಗಳನ್ನು ಮಾಡಲಾಗುತ್ತಿದೆ. ಬಿಜೆಪಿ ಪಕ್ಷದವರ ಮೇಲೆ ದಾಳಿಗಳು ಆಗುತ್ತಿಲ್ಲ. ಬಿಜೆಪಿಯವರ ಮನೆಗಳ ಮೇಲೂ ಐಟಿ ದಾಳಿ ನಡೆದರೆ ಬೇನಾಮಿ ಹಣ ದೊರೆಯಬಹುದು. ಬಿಜೆಪಿಯವರ ಮನೆಗಳ ಮೇಲೆ ದಾಳಿ ಮಾಡಿದರೆ ಬೇಕಾದಷ್ಟು ಹಣ ಸಿಗಬಹುದು ಎಂದರು.




