ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ನೀಡಿದ ಭರವಸೆಯಂತೆ ರಾಜ್ಯ ಸರ್ಕಾರ ಪರಿಷ್ಕರಿಸಿರುವ ಅನ್ನಭಾಗ್ಯ ಯೋಜನೆ ಇಂದಿನಿಂದ ಜಾರಿಯಾಗಿದೆ.
ರಾಜ್ಯ ಸರ್ಕಾರದ ಬಳಿ ಹೆಚ್ಚುವರಿ ಪಡಿತರದ ಧಾನ್ಯ ದಾಸ್ತಾನಿನ ಕೊರತೆಯಿರುವ ಹಿನ್ನೆಲೆಯಲ್ಲಿ ಶೇ.99ರಷ್ಟು ಪಡಿತರ ಚೀಟಿದಾರರ ಖಾತೆಗೆ ನೇರವಾಗಿ ಹಣ ರವಾನೆಯಾಗಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಬಿಪಿಎಲ್ ಕಾರ್ಡುದಾರ ಪ್ರತಿಯೊಬ್ಬ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿ ವಿತರಿಸಲಾಗುವುದು ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಿಗೆ ಹಣ ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗುವುದು ಎಂದು ಹೇಳಿದರು.
ರಾಜ್ಯಸರ್ಕಾರದ ಬಳಿ ಹಣವೂ ಸಿದ್ಧವಿದೆ, ಪಡಿತರ ಚೀಟಿದಾರರ ಖಾತೆಗಳ ಮಾಹಿತಿಯೂ ಲಭ್ಯವಿದೆ. ಕೊಟ್ಟ ಮಾತಿನಂತೆ ಯೋಜನೆ ಪ್ರಾರಂಭವಾಗಲಿದೆ. ಒಂದು ವೇಳೆ ಯಾರ ಬಳಿಯಾದರೂ ಬ್ಯಾಂಕ್ ಖಾತೆಗಳಿಲ್ಲದಿದ್ದರೆ ಪಡಿತರ ಚೀಟಿಯಲ್ಲಿ ಮುಖ್ಯಸ್ಥರ ಹೆಸರಿನ ಪ್ರಕಾರವೇ ಬ್ಯಾಂಕ್ ಖಾತೆ ಆರಂಭಿಸುವಂತೆ ಸಲಹೆ ನೀಡಿದರು.
ಬಿಪಿಎಲ್ ಕಾರ್ಡುದಾರರ ಕುಟುಂಬದ ಸದಸ್ಯರಿಗೆ ತಲಾ 5 ಕೆ.ಜಿ. ಅಕ್ಕಿಯ ಬದಲು ಕೆ.ಜಿ.ಗೆ 34 ರೂ. ಎಂಬಂತೆ ಹಣ ಪಾವತಿಸಲು ನಿರ್ಧರಿಸಲಾಗಿದೆ. ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದರೂ ಅಕ್ಕಿ ಬದಲು ಹಣ ನೀಡುತ್ತೇವೆ ಎಂದು ತಿಳಿಸಿದರು.
ಹಣ ನೀಡುವುದು ತಾತ್ಕಾಲಿಕ ವ್ಯವಸ್ಥೆ ಮಾತ್ರ. ಆದಷ್ಟು ಶೀಘ್ರವಾಗಿಯೇ ಅಕ್ಕಿ ಸಂಗ್ರಹಿಸಿ ಪಡಿತರ ಚೀಟಿದಾರರಿಗೆ ಅಕ್ಕಿಯನ್ನೇ ನೀಡುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಕೇಂದ್ರಸರ್ಕಾರದ ಬಳಿ ಸಾಕಷ್ಟು ಅಕ್ಕಿ ದಾಸ್ತಾನಿದೆ. ಹಣ ನೀಡುತ್ತೇವೆ ಕೊಡಿ ಎಂದರೂ ಅವರು ರಾಜ್ಯಕ್ಕೆ ಪೂರೈಕೆ ಮಾಡಲು ಸಿದ್ದರಿಲ್ಲ ಈ ನಿಟ್ಟಿನಲ್ಲಿ ಒಂದು ತಿಂಗಳ ನಮ್ಮ ಸತತ ಪ್ರಯತ್ನ ವಿಫಲವಾಯಿತು ಎಂದು ಹೇಳಿದರು.
ಹೆಚ್ಚುವರಿ ಅಕ್ಕಿಗೆ ಕೋರಿಕೆ ಸಲ್ಲಿಸಿ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿತ್ತು. ನಾನು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆ. ಮುಖ್ಯಮಂತ್ರಿಯವರು ಗೃಹಸಚಿವರನ್ನು ಭೇಟಿ ಮಾಡಿದ್ದರು. ರಾಜ್ಯದಲ್ಲೂ ಕೂಡ ಹಲವಾರು ಬಾರಿ ಕೇಂದ್ರ ಆಹಾರ ನಿಗಮದ ಅಧಿಕಾರಿಗಳ ಜೊತೆ ನಾನು, ಮುಖ್ಯಮಂತ್ರಿ ಸಭೆ ನಡೆಸಿ ಚರ್ಚೆ ನಡೆಸಿದ್ದೆವು. ಅಕ್ಕಿ ದಾಸ್ತಾನಿದೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ಕೇಂದ್ರ ಸರ್ಕಾರ ರಾಜಕೀಯ ಕಾರಣಕ್ಕೆ ತೊಂದರೆ ಮಾಡಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಡಿತರ ಚೀಟಿದಾರರಿಗೆ 10 ಕೆ.ಜಿ. ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಅದರ ಪ್ರಕಾರ ದಕ್ಷಿಣ ಕರ್ನಾಟಕದಲ್ಲಿ 2 ಕೆ.ಜಿ. ರಾಗಿ, 8 ಕೆ.ಜಿ. ಅಕ್ಕಿ, ಉತ್ತರ ಕರ್ನಾಟಕದಲ್ಲಿ 2 ಕೆ.ಜಿ. ಜೋಳ, 8 ಕೆ.ಜಿ. ಅಕ್ಕಿ ನೀಡಲು ನಿರ್ಧರಿಸಲಾಗಿದೆ
ಈಗಾಗಲೇ ಕೇಂದ್ರ ಸರ್ಕಾರ 5 ಕೆ.ಜಿ. ಅಕ್ಕಿ ನೀಡುತ್ತಿದೆ. ಬಾಕಿ ಉಳಿದ 5 ಕೆ.ಜಿ. ಆಹಾರ ಧಾನ್ಯದಲ್ಲಿ ಅಕ್ಕಿ ಬದಲು ರಾಗಿ, ಜೋಳವನ್ನೇ ಹೆಚ್ಚು ಕೊಡಿ ಎಂದರೆ ನಾವು 2 ರಿಂದ 4 ಕೆ.ಜಿ.ವರೆಗೂ ಇತರ ಆಹಾರ ಧಾನ್ಯ ನೀಡಲು ಸಿದ್ಧರಿದ್ದೇವೆ. ಆದರೆ ಇದನ್ನು ಜನರ ಬೇಡಿಕೆ ಆಧರಿಸಿ ನಿರ್ಧರಿಸುತ್ತೇವೆ ಎಂದರು.
ಪಡಿತರ ಚೀಟಿದಾರರಿಗೆ ನೀಡುವ ಅಕ್ಕಿ , ರಾಗಿ, ಜೋಳ ಹೊಂದಿಸಲು ರಾಜ್ಯ ಸರ್ಕಾರ ಹಲವು ಮಾರ್ಗಗಳನ್ನು ಅನುಸರಿಸುತ್ತಿದೆ. ಬೆಂಬಲ ಬೆಲೆಯಡಿ ನೇರವಾಗಿ ರೈತರಿಂದ ಖರೀದಿ ಮಾಡಿ ದಾಸ್ತಾನು ಮಾಡಿಕೊಳ್ಳುವುದು, ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳು ಹಾಗೂ ಇತರ ಸಂಸ್ಥೆಗಳಿಂದಲೂ ಖರೀದಿ ಹಾಗೂ ನೇರ ಖರೀದಿ ವ್ಯವಸ್ಥೆಗಳ ಮೂಲಕ ಅಗತ್ಯ ಆಹಾರ ಧಾನ್ಯ ಸಂಗ್ರಹ ಮಾಡಲಾಗುತ್ತಿದೆ ಎಂದು ಹೇಳಿದರು.



