‘ಜಿಲ್ಕಾ’ ಎಂಬ ಬಹುಭಾಷಾ ಚಿತ್ರದ ಮೂಲಕ ಉದಯೋನ್ಮುಖ ನಟ ಮತ್ತು ನಿರ್ದೇಶಕನಾಗಿ ಹೆಸರಾಗಿರುವ ಕವೀಶ್ ಶೆಟ್ಟಿ ಇಂದು ಹುಟ್ಟುಹಬ್ಬವನ್ನು ಕೊರೊನಾ ಸೃಷ್ಟಿಸಿರುವ ಅನಾಹುತಗಳ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಶೀಘ್ರದಲ್ಲೇ ಸೆಟ್ಟೇರಲಿರುವ ತಮ್ಮ ಎರಡನೇ ಚಿತ್ರದ ಸಿಹಿ ಸುದ್ಧಿಯನ್ನು ಹಂಚಿಕೊಂಡಿರುವ ಅವರು, ಈ ಬಾರಿ ಸಂಪೂರ್ಣವಾಗಿ ಕ್ಯಾಮರಾ ಮುಂದೆಯೇ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದೇನೆ ಅರ್ಥಾತ್ ಈ ಚಿತ್ರದಲ್ಲಿ ನಾಯಕನಾಗಿ ಮಾತ್ರ ನಟಿಸುತ್ತಿದ್ದೇನೆ ಎಂದಿದ್ದಾರೆ.
ಈ ಚಿತ್ರಕ್ಕೆ ಈಗಾಗಲೇ ಹೆಸರಾಂತ ಕನ್ನಡ, ತೆಲುಗು, ತಮಿಳು ನಿರ್ದೇಶಕರ ಜೊತೆ ಹಲವಾರು ಯಶಸ್ವಿ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಹೊಂದಿರುವ ಆತ್ಮೀಯರೊಬ್ಬರು ಚೊಚ್ಚಲ ನಿರ್ದೇಶನ ಮಾಡುತ್ತಿದ್ದಾರೆ ಎಂದು ಹೇಳಿರುವ ಕವೀಶ್ ಶೆಟ್ಟಿ ಕೊರೊನಾ ಲಾಕ್ಡೌನ್ ಮುಗಿಯುತ್ತಿದ್ದಂತೆಯೇ ಚಿತ್ರದ ಶೀರ್ಷಿಕೆಯ ಜೊತೆ ಚಿತ್ರದ ನಾಯಕಿ, ನಿರ್ದೇಶಕರು, ನಿರ್ಮಾಪಕರು ಮತ್ತು ನಿರ್ಮಾಣ ಸಂಸ್ಥೆಯ ಹೆಸರನ್ನು ವಿಶೇಷವಾಗಿ ಅನಾವರಣಗೊಳಿಸುವುದಾಗಿ ಹೇಳಿಕೊಂಡಿದ್ದಾರೆ.
ಇದೊಂದು ಸಂಪೂರ್ಣ ಪ್ರಮಾಣದ ಸಸ್ಪೆನ್ಸ್, ಆಕ್ಷನ್ ಮತ್ತು ಥ್ರಿಲ್ಲರ್ ಹೊಂದಿರುವ ಮಾಸ್ ಪ್ಯಾಕೇಜ್ ಆಗಿದ್ದು ಪ್ರೇಕ್ಷಕರ ಮನ ಮಿಡಿಯುವ ಅಪರೂಪದ ಪ್ರೇಮಕಥೆಯಿದೆ ಎಂದಿದ್ದಾರೆ.
ಮೊದಲನೇ ಹಂತದ ಸ್ಕ್ರಿಪ್ಟ್ ವರ್ಕ್ ಮುಗಿಸಿರುವ ಚಿತ್ರತಂಡ ಉಳಿದ ತಂತ್ರಜ್ಞರು ಮತ್ತು ಸಹ ಕಲಾವಿದರ ಆಯ್ಕೆಯಲ್ಲಿ ತೊಡಗಿಸಿಕೊಂಡಿದೆ. ಕನ್ನಡ, ಹಿಂದಿ ಮತ್ತು ಮರಾಠಿ ಈ ಮೂರು ಭಾಷೆಗಳಲ್ಲಿ ನಿರ್ಮಾಣವಾಗುವ ಈ ಚಿತ್ರದಲ್ಲಿ ಎಲ್ಲರ ಅಚ್ಚುಮೆಚ್ಚಿನ ನಾಯಕಿಯೊಬ್ಬರು ನಟಿಸಲಿದ್ದಾರೆ.
ಅಲ್ಲದೇ ಬಹುಭಾಷೆಯ ಹೆಸರಾಂತ ಕಲಾವಿದರು ಮತ್ತು ನುರಿತ ತಂತ್ರಜ್ಞರು ಈ ಚಿತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎನ್ನುವ ಮೂಲಕ ಇದೊಂದು ದೊಡ್ಡ ಬಜೆಟ್ಟಿನ ಅದ್ಧೂರಿ ವೆಚ್ಚದ ಚಿತ್ರವೆನ್ನುವ ಸುಳಿವನ್ನೂ ನೀಡಿದ್ದಾರೆ.
ಜೊತೆಗೆ, ಎಲ್ಲರೂ ಕೋವಿಡ್ ನಿಯಮಾವಳಿಗಳನ್ನು ಶಿಸ್ತಿನಿಂದ ಪಾಲಿಸಿ ಸುರಕ್ಷಿತ ಮತ್ತು ಆರೋಗ್ಯದಿಂದಿರಿ ಎಂದು ಮನವಿಮಾಡಿಕೊಂಡಿದ್ದಾರೆ.




