ಕನ್ನಡ ಚಲನಚಿತ್ರ ರಂಗದಲ್ಲಿ ಅನೇಕ ನಟಿಯರು ಹಿಂದಿ ಚಲನಚಿತ್ರವೂ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿಯೂ ತಮ್ಮ ಸಾಧನೆಯನ್ನು ಮೆರೆದಿದ್ದಾರೆ. ಇವರಲ್ಲಿ ಪ್ರಮುಖವಾಗಿ ಹರಿಣಿ, ಎಂ.ವಿ.ರಾಜಮ್ಮ, ಸಾಹುಕಾರ್ ಜಾನಕಿ, ಕಾಂಚನ, ಲೀಲಾವತಿ, ಪಂಡರೀಬಾಯಿ, ಆರತಿ, ಭಾರತಿ, ಕಲ್ಪನ, ಮಂಜುಳ, ಲಕ್ಷ್ಮಿ ಮುಂತಾದವರ ಅಭಿಯನವನ್ನು ಕನ್ನಡ ಚಲನಚಿತ್ರ ರಂಗ ಇರುವ ತನಕ ಯಾರೂ ಮರೆಯುವಂತಿಲ್ಲ. ಇಂತಹ ಶ್ರೇಷ್ಠರ ಸಾಲಿನಲ್ಲಿ ಪ್ರಮುಖವಾಗಿ ಗುರುತಿಸಲ್ಪಟ್ಟವರು ಡಾ.ಎಂ.ಲೀಲಾವತಿರವರು.
1938ರಲ್ಲಿ ಹುಟ್ಟಿದ ಇವರು ಇಲ್ಲಿಯ ತನಕ ವಿವಿಧ ಭಾಷೆಗಳಲ್ಲಿ 600ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯದ ಮೂಲಕ ರಾಷ್ಟ್ರದ ಗಮನವನ್ನು ಸೆಳೆದಿದ್ದರು. 400ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ನಟಿಸುವುದು ಎಂದರೆ ಸಾಮಾನ್ಯವೇನಲ್ಲ. ಇದೊಂದು ಸಾಧನೆಯೇ ಸರಿ. ವರನಟ ಡಾ.ರಾಜ್ ಕುಮಾರ್, ಎನ್.ಟಿ.ರಾಮರಾವ್, ಎಂ.ಜಿ.ರಾಮಚಂದ್ರನ್, ಶಿವಾಜಿ ಗಣೇಶನ್, ಜೆಮಿನಿ ಗಣೇಶ್, ಎ. ನಾಗೇಶ್ವರರಾವ್, ರಜನಿಕಾಂತ್, ಕಮಲಹಾಸನ್, ವಿಷ್ಣುವರ್ಧನ್, ಅಂಬರೀಷ್ ಹೀಗೆ ಇಂತಹ ಶ್ರೇಷ್ಠ ನಾಯಕ ನಟರ ಜೊತೆಯಲ್ಲಿ ಇವರು ಅಭಿನಯಿಸಿದ್ದಾರೆ.
1958ರಲ್ಲಿ ಮಾಂಗಲ್ಯ ಭಾಗ್ಯದ ಚಿತ್ರದ ಮೂಲಕ ಚಲನಚಿತ್ರ ರಂಗವನ್ನು ಪ್ರವೇಶಿಸಿದ ಇವರು ಭಕ್ತಪ್ರಹ್ಲಾದ, ಚಂದ್ರಹಾಸ, ನಾಗಪೂಜೆ, ಗಂಗೆಗೌರಿ, ಗೆಜ್ಜೆಪೂಜೆ, ಬೆಂಗಳೂರಿಗೆ ಬಂದ ಬೋರೇಗೌಡ, ಭಕ್ತಕುಂಬಾರ, ನಾಗರಹಾವು, ಪ್ರೊ. ಹುಚ್ಚರಾಯ, ಉಪಾಸನೆ, ಕಥಾಸಂಗಮ, ನಾ ನಿನ್ನ ಮರೆಯಲಾರೆ ಹೀಗೆ ಅತ್ಯಂತ ಶ್ರೇಷ್ಠ ಚಲನಚಿತ್ರಗಳಲ್ಲಿ ನಟಿಸಿರುತ್ತಾರೆ.
ಇದಲ್ಲದೆ ತಮಿಳು ಮತ್ತು ತೆಲುಗು ಭಾಷೆಯಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು. ಇವರ ಅಭಿನಯಕ್ಕೆ ಅನೇಕ ಪ್ರಶಸ್ತಿಗಳು ಬಂದಿದೆ. 2008ರಲ್ಲಿ ತುಮಕೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನೂ ಸಹ ನೀಡಿ ಇವರ ಕಲಾಸೇವೆಯನ್ನು ಪುರಸ್ಕರಿಸಿರುತ್ತಾರೆ.
ಇವರು ಕೇವಲ ಕಲಾ ಸೇವೆಯಲ್ಲದೆ ಸಮಾಜಸೇವೆಯಲ್ಲೂ ಸಹ ತಮ್ಮನ್ನು ತೊಡಗಿಸಿಕೊಂಡಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಸೋಲದೇವನ ಹಳ್ಳಿಯಲ್ಲಿ ಸುಮಾರು ಅರ್ಧ ಎಕರೆಗೂ ಹೆಚ್ಚು ಜಾಗವನ್ನು ಆಸ್ಪತ್ರೆಗೆ ನೀಡಿ ತಮ್ಮ ಸ್ವಂತ ಹಣದಿಂದಲೇ ಸುಮಾರು 30 ಲಕ್ಷ ರೂ.ಗಳಲ್ಲಿ ಲೀಲಾವತಿ ಆಸ್ಪತ್ರೆಯನ್ನು ನಿರ್ಮಾಣ ಮಾಡಿ ಅಲ್ಲಿನ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಿದ್ದಾರೆ. ಹಲವಾರು ಬಾರಿ ಆರೋಗ್ಯ ತಪಾಸಣಾ ಶಿಬಿರ ಮತ್ತು ಚಿಕಿತ್ಸಾ ಶಿಬಿರಗಳ ಮೂಲಕ ಸಹಸ್ರಾರು ಜನರ ಖಾಯಿಲೆಗಳಿಗೆ ನೆರವು ನೀಡಿದ್ದಾರೆ.
ಇದಲ್ಲದೆ ಪಶುಗಳ ಆರೋಗ್ಯದ ಕಡೆಗೆ ಗಮನವನ್ನು ಹರಿಸಿ ಪಶುವೈದ್ಯಕೀಯ ಚಿಕಿತ್ಸಾ ಘಟಕವನ್ನೂ ತೆರೆದಿದ್ದಾರೆ. ಲೀಲಾವತಿರವರ ಜೊತೆಯಲ್ಲಿ ನಟ ವಿನೋದ್ ರಾಜ್ ರವರು ಹೆಜ್ಜೆ ಹೆಜ್ಜೆಯಲ್ಲೂ ಜೊತೆಯಲ್ಲಿದ್ದು ತಾಯಿಯನ್ನು ಇವರು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದರು. ತಾಯಿ ಮಗನನ್ನ ಅಷ್ಟೇ ಪ್ರೀತಿಯಿಂದ, ಮಮತೆಯ ಸಾಗರದಲ್ಲಿ ಕೊಂಡೊಯ್ಯುತ್ತಿದ್ದರು.
ಲೀಲಾವತಿರವರು ಮತ್ತು ವಿನೋದ್‌ರಾಜ್ ಅವರು ಸೋಲದೇವನಹಳ್ಳಿಯಲ್ಲಿ ಕೇವಲ ತಮ್ಮ ಬದುಕನ್ನು ನೋಡಿಕೊಳ್ಳದೆ ಗ್ರಾಮೀಣ ಜನರ ಹಿತವನ್ನು ಕಾಯುತ್ತಾ ಅಲ್ಲಿನ ಅನೇಕ ಸಮಸ್ಯೆಗಳ ಕಡೆ ಗಮನವನ್ನ ಹರಿಸಿ ರೈತರಿಗೆ ಮತ್ತು ನಾಗರಿಕರಿಗೆ ಹಲವಾರು ರೀತಿಯ ನೆರವನ್ನು ಸರ್ಕಾರಗಳಿಂದ ಒದಗಿಸಿಕೊಟ್ಟಿದ್ದಾರೆ. ಇದರಿಂದಾಗಿ ಈ ಪ್ರದೇಶದಲ್ಲಿ ಇವರ ಬಗ್ಗೆ ವಿಶೇಷವಾದ ಪ್ರೀತಿ ಮತ್ತು ಗೌರವವೂ ಇದೆ.
ಲೀಲಾವತಿರವರು ತಮ್ಮ ಸ್ವಂತ ಶ್ರಮದಿಂದ ದುಡಿದಿರುವ ಹಣದಿಂದ ಸಮಾಜ ಸೇವೆ ಮತ್ತು ಅನೇಕ ಅಶಕ್ತ ಕಲಾವಿದರ ನೆರವಿಗೆ ನಿಂತಿದ್ದರು. ಬಲಗೈಲಿ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎಂಬಂತೆ ಇವರು ತಮ್ಮ ಸೇವಾ ಕಾರ್ಯವನ್ನ ಕಾಪಾಡಿಕೊಂಡು ಬಂದಿದ್ದಾರೆ. ಇತ್ತೀಚೆಗೆ ಡಯಾಲಿಸಿಸ್ ನಿಧಿ ಸಂಗ್ರಹಿಸುವಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದು, ಬಡತನದಿಂದ ಬಳಲುತ್ತಿರುವ, ಆರ್ಥಿಕವಾಗಿ ದುರ್ಬಲವಾಗಿರುವ, ಮೂತ್ರಪಿಂಡದ ಖಾಯಿಲೆಯಿಂದ ನೆರಳುತ್ತಿರುವ ಜನರ ನೆರವಿಗಾಗಿ ಡಯಾಲಿಸಿಸ್ ನಿಧಿಯನ್ನು ಸ್ಥಾಪಿಸಿದ್ದಾರೆ.
ಲೀಲಾವತಿಯವರ ಬದುಕು ಹೂವಿನ ಹಾಸಿಗೆಯಲ್ಲ. ಕಣ್ಣಿಗೆ ಕಾಣದ, ಯಾರ ಅರಿವಿಗೂ ಬಾರದ ಅನೇಕ ಸಂಘರ್ಷದ ದಿನಗಳನ್ನು ಮತ್ತು ಕ್ಷಣಗಳನ್ನು ಎದುರಿಸಿದ್ದಾರೆ. ಬಂದಂತಹ ಎಲ್ಲ ತೊಂದರೆ ತಾಪತ್ರಯಗಳನ್ನ ನಿಜಕ್ಕೂ ವೀರವನಿತೆಯಂತೆ ಎದುರಿಸಿ ಧೈರ್ಯವಾಗಿ ಬದುಕನ್ನು ಸಾಗಿಸಿದ್ದರು.
- ಕೆ.ಎಸ್. ನಾಗರಾಜ್, ಬೆಂಗಳೂರು




