ಶಿವಮೊಗ್ಗ: ಶಿವಮೊಗ್ಗದ ಒಬ್ಬ ಸಾಮಾನ್ಯ ರೈತರು ಕುವೆಂಪು ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೋಗಿದ್ದಾರೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ಹಿಂದಿನ ದಿನ ಸುಮ್ಮನೆ ವಿಮಾನ ನೋಡಲು ಬಂದ ಅವರು ವಿಮಾನದಲ್ಲಿ ಹೋಗಲೇ ಬೇಕು ಎಂದು ನಿರ್ಧರಿಸಿ ಅಲ್ಲಿಯೇ ಇಂಡಿಗೋ ಕೌಂಟರ್ ನಲ್ಲಿ ಟಿಕೆಟ್ ಬುಕ್ ಮಾಡಿ ಈ ದಿನ ಹಾರಿಯೇಬಿಟ್ಟರು. ಅಲ್ಲಿ ಏನೂ ಕೆಲಸವಿಲ್ಲ, ಸುಮ್ಮನೆ ಹೋಗಿ, ಅಲ್ಲಿಳಿದು, ತಕ್ಷಣ ರೈಲಿನಲ್ಲಿ ವಾಪಸಾಗಿ ತಮ್ಮ ಪಾಲಿನ ಕರ್ತವ್ಯಕ್ಕೆ ಹಾಜರಾಗುತ್ತೇನೆ ಎಂದು ಖುಷಿಯಿಂದ ತಮ್ಮ ಪುಳಕ ಹಂಚಿಕೊಂಡ ಅವರು, ಶಿವಮೊಗ್ಗದ ನಮ್ಮ ಹೆಮ್ಮೆಯ ರೈತ ಎಂದು ಹೇಳಿದ್ದಾರೆ.
ಜನ ಸಾಮಾನ್ಯರೂ ಕೂಡ ವಿಮಾನದಲ್ಲಿ ಓಡಾಡುವಂತೆ ಆಗಬೇಕು ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಕಂಡಿದ್ದ ಕನಸು ನನಸಾಗುತ್ತಿದೆ! ಹೆಮ್ಮೆ-ಸಾರ್ಥಕ ಭಾವದಲ್ಲಿ ಎದೆ ಆರ್ದ್ರವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.




