ನಾಡ ಕಚೇರಿಗಳಿಗೆ ದಿಢೀರ್ ಭೇಟಿ, ಆಡಳಿತ ವ್ಯವಸ್ಥೆಗೆ ಚುರುಕು ನೀಡಲು ಯತ್ನಿಸಿದ ಕೃಷ್ಣ ಬೈರೇಗೌಡ

3 years ago

KrishnaByreGowda #surprise #visit #districtoffices #tried #speed #administrative #system

ಶಿವಮೊಗ್ಗ: ಹೊಳೆಹೊನ್ನೂರು ಹಾಗೂ ಆಯನೂರು ಹೋಬಳಿ ನಾಡ ಕಚೇರಿಗೆ ದಿಢೀರ್ ಭೇಟಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಅಧಿಕಾರಿಗಳಿಂದ ಅನೇಕ ಮಾಹಿತಿಗಳನ್ನು ಪಡೆದರು. ಈ ವೇಳೆ ಎರಡೂ ಹೋಬಳಿಯ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಕ್ತ ತರಬೇತಿ ನೀಡದಿರುವುದನ್ನು ತಿಳಿದ ಅವರು ಅಸಮಾಧಾನ ಹೊರಹಾಕಿದರು. ಅಲ್ಲದೆ, ಸೂಕ್ತ ತರಬೇತಿ ಇಲ್ಲದೆ, ಗ್ರಾಮ ಲೆಕ್ಕಾಧಿಕಾರಿಗಳು ಕೆಲಸ ನಿರ್ವಹಿಸುವುದು ಹೇಗೆ? ಎಂದು ಪ್ರಶ್ನಿಸಿದರಲ್ಲದೆ, ಶೀಘ್ರದಲ್ಲೇ ತರಬೇತಿ ನೀಡುವಂತೆಯೂ ಸೂಚಿಸಿದರು.

ಇನ್ನೂ ಆಯನೂರಿನಲ್ಲಿ ನಕಾಶೆ ರಸ್ತೆ ಒತ್ತುವರಿಯಾಗಿರುವ ಕುರಿತ ಜನರ ಆರೋಪಕ್ಕೂ ಕಿವಿಗೊಟ್ಟ ಅವರು, ಈ ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇದೇ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗರ ಕೆಲಸದ ಮಹತ್ವವನ್ನು ತಿಳಿಸಿಕೊಟ್ಟ ಅವರು, “ನೀವು ನೀಡುವ ವರದಿಯನ್ನು ರಾಷ್ಟ್ರಪತಿಗಳೂ ಸಹ ಬದಲಿಸಲು ಸಾಧ್ಯವಿಲ್ಲ. ನಿಮ್ಮ ಹುದ್ದೆಗೆ ಸಾಕಷ್ಟು ಮಹತ್ವವಿದೆ. ಹೀಗಾಗಿ ಹುದ್ದೆಯ ಜವಾಬ್ದಾರಿ ಅರಿತು ಜನಪರವಾಗಿ ಕೆಲಸ ನಿರ್ವಹಿಸಬೇಕು ಎಂದು ಮನವಿ ಮಾಡಿದರು.

ಜೊತೆಗೆ ಭೂ ಕಂದಾಯವೂ ಸೇರಿದಂತೆ ಇತರೆ ಸೇವೆಗಳಿಗೆ ಹಣ ಪಾವತಿಯನ್ನು ಆನ್ಲೈನ್ ಪೇಮೆಂಟ್ ಮೂಲಕವೂ ಸ್ವೀಕರಿಸುವ ಬಗ್ಗೆ ಪರಿಶೀಲಿಸಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇ-ಆಡಳಿತ ಅನುಷ್ಠಾನ ವಿಳಂಬಕ್ಕೆ ಅಸಮಾಧಾನ: ಶಿವಮೊಗ್ಗ ನಗರ ಸಬ್ ರಿಜಿಸ್ಟ್ರಾರ್ ಕಚೇರಿಗೂ ದಿಢೀರ್ ಭೇಟಿ ನೀಡಿದ ಕಂದಾಯ ಸಚಿವರು, ತಹಶೀಲ್ದಾರ್ ಜಿಲ್ಲಾಧಿಕಾರಿ ಹಾಗೂ ಉಪ ಆಡಳಿತಾಧಿಕಾರಿಗಳು ಈವರೆಗೆ ಇ-ಆಡಳಿತ ಅನುಷ್ಠಾನಗೊಳಿಸದಿರಲು ಕಾರಣವೇನು? ಎಂದು ಅಧಿಕಾರಿಗಳಿಗೆ ಕಟು ಪ್ರಶ್ನೆಗಳನ್ನು ಮುಂದಿಟ್ಟರು.

ಜಿಲ್ಲಾಧಿಕಾರಿಗಳು ಆಗಸ್ಟ್-15ರಿಂದಲೇ ಇ-ಆಡಳಿತವನ್ನು ಪಾಲಿಸಬೇಕು ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್ ಗಳು ಸೆಪ್ಟೆಂಬರ್ 01 ರಿಂದ ಇ-ಆಫೀಸ್ ಆಡಳಿತಕ್ಕೆ ಮುಂದಾಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೂ, ಶಿವಮೊಗ್ಗದಲ್ಲಿ ಈವರೆಗೆ ಇ-ಆಡಳಿತ ಜಾರಿಯಾಗಿಲ್ಲ. ಇದಕ್ಕೆ ಕಾರಣವೇನು? ಇಂಟರ್ ನೆಟ್ ಸಮಸ್ಯೆ ಸೇರಿದಂತೆ ಬೇರೆ ಯಾವುದೇ ಸಮಸ್ಯೆ ಇದ್ದರೂ ಸಹ ಶೀಘ್ರದಲ್ಲೇ ಪರಿಹರಿಸಬೇಕು. ಅಧಿಕಾರಿಗಳು ಶೀಘ್ರದಲ್ಲಿ ಇ-ಆಡಳಿತಕ್ಕೆ ಮುಂದಾಗಬೇಕು ಎಂದು ಸೂಚನೆ ನೀಡಿದರು.

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಇಲಾಖೆಯ ಆಯುಕ್ತ ಸುನಿಲ್ ಕುಮಾರ್, ಸರ್ವೆ ಆಯುಕ್ತ ಮಂಜುನಾಥ್ ಹಾಗೂ ಜಿಲ್ಲಾಧಿಕಾರಿ ಡಾ| ಸೆಲ್ವಮಣಿ ಆರ್. ಹಾಗೂ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply