ಶಿರಾದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು: ಸತೀಶ್ ಜಾರಕಿಹೊಳಿ

1 year ago

ಬೆಂಗಳೂರು: ಉತ್ತರ ಕರ್ನಾಟಕ ಪ್ರದೇಶದ ಜಿಲ್ಲೆಗಳ ಜೊತೆ ಸಂಪರ್ಕ ಸಾಧಿಸುವ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ತುಮಕೂರು ಜಿಲ್ಲೆಯ ಶಿರಾದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಶಿರಾ ಬಳಿ ನಿರ್ಮಾಣವಾಗಬೇಕು ಎಂದು ನಾನು ಆರು ತಿಂಗಳ ಹಿಂದೆಯೇ ಪತ್ರ ಬರೆದಿದ್ದೇನೆ. ಇದರಿಂದ ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಹಲವಾರು ಜಿಲ್ಲೆಗಳಿಗೆ ಅನುಕೂಲವಾಗುತ್ತದೆ. ಅಲ್ಲಿ ಸರ್ಕಾರದ ಭೂಮಿ ಕೂಡ ಲಭ್ಯವಿದೆ ಎಂದರು.

2ನೇ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಶಿರಾದಲ್ಲಾದರೆ ಆಕಡೆಗೆ ಸಂಚಾರದಟ್ಟಣೆ ನಿಯಂತ್ರಣಗೊಳ್ಳುತ್ತದೆ. ಬೆಂಗಳೂರಿಗೆ ಬರುವುದು ತಪ್ಪುತ್ತದೆ. ಬೆಂಗಳೂರು ಬಳಿಯೇ ಮತ್ತೊಂದು ವಿಮಾನನಿಲ್ದಾಣವಾದರೆ ಮತ್ತೆ 5 ಸಾವಿರ ವಾಹನಗಳು ಬರುತ್ತವೆ. ಮತ್ತಷ್ಟು ಸಂಚಾರದಟ್ಟಣೆ ಹೆಚ್ಚಾಗುತ್ತದೆ ಎಂದರು.

ನಾವು ಏನೇ ಶಿಫಾರಸು ಮಾಡಿದರೂ ಅಂತಿಮವಾಗಿ ತೀರ್ಮಾನ ಮಾಡುವುದು ವಿಮಾನನಿಲ್ದಾಣ ಪ್ರಾಧಿಕಾರದವರು. ತಾಂತ್ರಿಕ ಅಂಶಗಳನ್ನು ಪರಿಗಣಿಸಿ ತಜ್ಞರ ಸಮಿತಿ ನಿರ್ಧಾರ ತೆಗೆದುಕೊಳ್ಳುತ್ತದೆ. ನಾವು ನಮ್ಮ ಅನುಕೂಲಕ್ಕೆ ತಕ್ಕಂತೆ ಏನೇ ಹೇಳಿದರೂ ಅದು ಕಾರ್ಯಸಾಧುವಲ್ಲ ಎಂದರು.

ಶಿರಾದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ದೊಡ್ಡ ಸಂಸ್ಥೆಯವರು ಮುಂದೆ ಬರುವುದಿಲ್ಲ. ಜಿಲ್ಲೆಯ ವಿಮಾನ ನಿಲ್ದಾಣವಾಗುತ್ತದೆ ಎಂದು ಟೀಕಿಸುವುದು ಅಪ್ರಸ್ತುತ. ಬೆಂಗಳೂರಿನ ಪರಿಸ್ಥಿತಿಯನ್ನೂ ಗಮನಿಸಬೇಕು. ಕೇವಲ ಬೆಂಗಳೂರಿನವರು ಮಾತ್ರ ವಿದೇಶಗಳಿಗೆ ಹೋಗುವುದಿಲ್ಲ. ಬೇರೆ ಬೇರೆ ಜಿಲ್ಲೆಗಳಿಂದಲೂ ಬರುತ್ತಾರೆ. ಬೆಂಗಳೂರಿಗೆ ಮತ್ತೆ 5 ಸಾವಿರ ವಾಹನಗಳು ಹೆಚ್ಚಾಗಿ ಬಂದರೆ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನೂ ಗಮನಿಸಬೇಕಿದೆ ಎಂದರು.

ಲೋಕೋಪಯೋಗಿ ಇಲಾಖೆಯಲ್ಲಿ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರಿಗೆ ಕಾಲದಿಂದ ಕಾಲಕ್ಕೆ ಬಿಲ್ ಪಾವತಿ ಮಾಡಲಾಗುತ್ತಿದೆ. ಇಲಾಖೆಯಿಂದ ಯಾರೂ ಕಮಿಷನ್‌ ಕೇಳುತ್ತಿಲ್ಲ. ಯಾವುದಾದರೂ ಅಂತಹ ನಿರ್ದಿಷ್ಟ ಪ್ರಕರಣಗಳಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ನನ್ನ ಇಲಾಖೆಗೆ ಸಂಬಂಧಪಟ್ಟಂತೆ ಗುತ್ತಿಗೆದಾರರ ಸಂಘ ಈ ಮೊದಲು ನೀಡಿದ್ದ ಸಲಹೆಗಳನ್ನು ಆಧರಿಸಿ ಕ್ರಮ ಕೈಗೊಂಡಿದ್ದೇವೆ. ಮುಂದೆಯೂ ಯಾವುದೇ ಸಲಹೆಗಳನ್ನು ನೀಡಿದರೆ ಅದನ್ನು ಪರಿಗಣಿಸುತ್ತೇವೆ. ರಾಜಕಾರಣ ಎಂದ ಮೇಲೆ ಶಾಸಕರು, ಪಕ್ಷದ ಕಾರ್ಯಕರ್ತರು ಶಿಫಾರಸು ನೀಡುವುದು ಸಹಜ. ಅದರಲ್ಲಿ ತಪ್ಪಿಲ್ಲ ಎಂದರು.

Leave a Reply