ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ವಿಘ್ನ: ಪರಿಹರಿಸಲು ಎಂ ಬಿ ಪಾಟೀಲ್ ಯತ್ನ

9 months ago

ಬೆಂಗಳೂರು: ಹೆಚ್ಚುತ್ತಿರುವ ಪ್ರಯಾಣ ದಟ್ಟಣೆ ಕಡಿಮೆ ಮಾಡುವ ದೃಷ್ಟಿಯಿಂದ ಬೆಂಗಳೂರಿನಲ್ಲಿ ಮತ್ತೊಂದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಬೇಕು ಎಂಬ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಗೆ ಕೇಂದ್ರ ಸರ್ಕಾರದ ನಿಲುವಿನಿಂದ ಹಿನ್ನಡೆಯಾಗಿದೆ.

ಹೊಸದಾಗಿ ವಿಮಾನ ನಿಲ್ದಾಣ ಬರುವ ಸ್ಥಳದ ಕುರಿತು ಕೇಂದ್ರ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ಕರ್ನಾಟಕಕ್ಕೆ ಆಗಮಿಸಿ ಇಲ್ಲಿನ ಅಧಿಕಾರಿಗಳು ಮತ್ತು ತಜ್ಞರ ಜೊತೆ ಸಮಾಲೋಚನೆ ನಡೆಸಿದ್ದರು. ನಂತರ ವಿಮಾನ ನಿಲ್ದಾಣ ಸ್ಥಾಪನೆ ಕುರಿತಂತೆ ಕರ್ನಾಟಕ ರಾಜ್ಯ ಸೂಚಿಸಿದ ಬೆಂಗಳೂರು ಹೊರವಲಯದ ಕಗ್ಗಲೀಪುರ, ಬಿಡದಿ ಮತ್ತು ಸೋಲೂರು ಸಮೀಪ 3 ಸ್ಥಳಗಳನ್ನು ಪರಿಶೀಲನೆ ನಡೆಸಿದ್ದರು.

ಇದೀಗ ವಿಮಾನಯಾನ ಪ್ರಾಧಿಕಾರ ಈ ಮೂರು ಸ್ಥಳಗಳ ಕುರಿತು ಕೆಲವು ಆಕ್ಷೇಪಣೆಗಳನ್ನು ಸಲ್ಲಿಸಿದ್ದು, ಇಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಅಷ್ಟೊಂದು ಅನುಕೂಲಕರವಾಗುವುದಿಲ್ಲ ಎಂದು ವರದಿ ನೀಡಿರುವುದಾಗಿ ವರದಿಯಾಗಿದೆ.

ಪ್ರಾಧಿಕಾರ ಇಂತಹ ವರದಿ ಸಿದ್ದಪಡಿಸಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ದೆಹಲಿಗೆ ದೌಡಾಯಿಸಿದ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್, ಕೇಂದ್ರ ವಿಮಾನಯಾನ ಖಾತೆ ಸಚಿವರೊಂದಿಗೆ ಮಾತುಕತೆ ನಡೆಸಿದರು.

ಈ ವೇಳೆ ಸ್ಥಳ ನಿಗದಿ ಕುರಿತು ಕೇಂದ್ರ ವಿಮಾನಯಾನ ಪ್ರಾಧಿಕಾರ ವ್ಯಕ್ತಪಡಿಸಿರುವ ಸಂಶಯಗಳ ಬಗ್ಗೆ ವಿವರಣೆ ನೀಡಿದ ಅವರು, ಬೆಂಗಳೂರಿಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಗೊಂದಲ ಬಗೆಹರಿಸುವುದಾಗಿ ತಿಳಿಸಿದ್ದು, ಅಲ್ಲಿಯವರೆಗೆ ಯಾವುದೇ ತೀರ್ಮಾನ ಕೈಗೊಳ್ಳದಂತೆ ಮನವಿ ಮಾಡಿದ್ದಾರೆ.

ಬೆಂಗಳೂರಿಗೆ ಹಿಂತಿರುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಂ ಬಿ ಪಾಟೀಲ್, ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿ ಮಾಡಬೇಕು ಎಂಬ ನಿಟ್ಟಿನಲ್ಲಿ ಸೋಮವಾರ ಅಥವಾ ಮಂಗಳವಾರ ಮಹತ್ವದ ಸಭೆ ನಡೆಯಲಿದೆ. ಇದರ ಜೊತೆಗೆ ಮುಖ್ಯಮಂತ್ರಿಗಳ ಜೊತೆಗೂ ಚರ್ಚೆ ನಡೆಸಬೇಕಾಗಿದೆ ಎಂದರು.

ಕೇವಲ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ಮಾತ್ರವಲ್ಲದೆ, ಮೈಸೂರು, ಶಿವಮೊಗ್ಗ, ವಿಜಯಪುರ ಸೇರಿದಂತೆ ರಾಜ್ಯದ ಇತರ ವಿಮಾನ ನಿಲ್ದಾಣಗಳ ಬಗ್ಗೆಯೂ ಚರ್ಚೆ ನಡೆದಿದೆ. ಎಲ್ಲಾ ವಿಮಾನ ನಿಲ್ದಾಣಗಳನ್ನು ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾಗೆ ವಹಿಸಿ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಆದರೆ, ನಾನು ಒಬ್ಬನೇ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಆಗುವುದಿಲ್ಲ. ಹೀಗಾಗಿ, ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ, ಅವರ ಸಲಹೆ ಮತ್ತು ನಿರ್ದೇಶನದ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

Leave a Reply