ಪೊಲೀಸ್ ನೇಮಕ: ವಯೋಮಿತಿ ಹೆಚ್ಚಳ ಕುರಿತು ಚಿಂತನೆ: ಆರಗ ಜ್ಞಾನೇಂದ್ರ

3 years ago

ತುಮಕೂರು: ಕೋವಿಡ್ ಸಾಂಕ್ರಾಮಿಕ ‌ಸೇರಿದಂತೆ ಹಲವು ಕಾರಣಗಳಿಂದ ಪೊಲೀಸ್ ಹುದ್ದೆಗಳ ನೇಮಕಾತಿ ನಡೆದಿಲ್ಲ ಈ ಹಿನ್ನೆಲೆಯಲ್ಲಿ ಸದ್ಯ ನಡೆಯಲಿರುವ ಪೊಲೀಸರ ನೇಮಕಾತಿಯಲ್ಲಿ ಗರಿಷ್ಠ ವಯೋಮಿತಿಯನ್ನು ಎರಡು ವರ್ಷ ಹೆಚ್ಚಿಸುವ ಕುರಿತು ಚಿಂತನೆ ನಡೆದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ತುಮಕೂರಿನಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿವರನ್ನು ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಕಾನ್ಸ್ ಟೇಬಲ್ ಹುದ್ದೆ ಆಕಾಂಕ್ಷಿ ನೂರಾರು ಯುವಕರು ಸಚಿವರ ಕಾಲಿಗೆ ಬಿದ್ದು, ಕಣ್ಣೀರಿಟ್ಟು ವಯೋಮಿತಿ ಸಡಿಲಿಸುವಂತೆ ಮನವಿಮಾಡಿಕೊಂಡರು.

ಕೋವಿಡ್ ಹಾಗೂ ಇತರ ಕಾರಣಗಳಿಂದಾಗಿ ಪೊಲೀಸರ ನೇಮಕಾತಿ ನಡೆದಿಲ್ಲ. ಈಗ ನೇಮಕಾತಿ ಪ್ರಕ್ರಿಯೆಗಳು ಆರಂಭವಾಗಿದ್ದು, ವಯೋಮಿತಿ ಸಡಿಲಿಸದಿದ್ದರೆ ಸಾಕಷ್ಟು ಮಂದಿಗೆ ಉದ್ಯೋಗ ಸಿಗುವುದಿಲ್ಲ. ಒಂದು ಬಾರಿಯಾದರೂ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ, ಪೊಲೀಸರ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಳ ಮಾಡುವಂತೆ ಸಾಕಷ್ಟು ಒತ್ತಡಗಳು ಬಂದಿವೆ. ಪೊಲೀಸ್ ಇಲಾಖೆಯಲ್ಲಿ ಯುವ ಶಕ್ತಿ ಇರಬೇಕು ಎಂಬುದು ನನ್ನ ಆಶಯ. ಆದರೆ ಒತ್ತಡಗಳು ಹೆಚ್ಚಾಗುತ್ತಿವೆ ಎಂದರು.

ಒತ್ತಡಗಳು ಬಂದ ಕಾರಣಕ್ಕೆ ನೇಮಕಾತಿ ಪ್ರಕ್ರಿಯೆಯನ್ನು ಒಂದು ತಿಂಗಳು ಕಾಲ ಮುಂದೂಡಲಾಗಿದೆ. ಎರಡು ವರ್ಷ ಸಡಿಲಿಕೆ ಮಾಡುವ ಆಲೋಚನೆ ಇದೆ. ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

Leave a Reply