ಬೆಂಗಳೂರು: ಗುಣಮಟ್ಟದ ಶಿಕ್ಷಣ ನೀಡುವಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಬಹಳ ಪ್ರಮುಖ ಪಾತ್ರ ವಹಿಸುವ ಕಾರಣ ಇದರಲ್ಲಿರುವ ಎಲ್ಲ ಅಂಶಗಳನ್ನು ಜಾರಿ ಮಾಡಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಅನುಷ್ಠಾನಕ್ಕೆ ಬರಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಘೋಷಿಸಿದ್ದಾರೆ.
ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುವುದರಿಂದ ಶಿಕ್ಷಣದಲ್ಲಿ ಅನೇಕ ಸುಧಾರಣೆಗಳು ಆಗಲಿವೆ. ಇದನ್ನು ನಮ್ಮ ರಾಜ್ಯದಲ್ಲೂ ಅನುಷ್ಠಾನ ಮಾಡಲು ಈಗಾಗಲೇ ತೀರ್ಮಾನಿಸಿದ್ದೇವೆ. ಎಲ್ಲ ಅಂಶಗಳನ್ನು ಅನುಷ್ಠಾನ ಮಾಡುತ್ತೇವೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ 2020ರ ಕನ್ನಡ ಅವತರಣಿಕೆಯ ಪುಸ್ತಕದ ಪ್ರತಿಗಳನ್ನು ಎಲ್ಲ ಶಿಕ್ಷಕರಿಗೆ ಒದಗಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಸಾರ 3ರಿಂದ 8ರ ವಯೋಮಾನದ ಮಕ್ಕಳಿಗೆ ಶಿಕ್ಷಣ ನೀಡುವ ಬುನಾದಿ ಹಂತದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಬಿಡುಗಡೆಯಾಗಿದ್ದು, ಇದನ್ನು ಕನ್ನಡಕ್ಕೆ ಭಾಷಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಆಟಿಕೆಗಳು, ಸ್ಥಳೀಯ ಕತೆ, ಪುರಾಣ, ವೈವಿಧ್ಯತೆಗಳನ್ನೊಳಗೊಂಡ ರಾಜ್ಯ ಪಠ್ಯಕ್ರಮ ಚೌಕಟ್ಟನ್ನು ರಚಿಸಿ, 2023-24ನೇ ಸಾಲಿನಿಂದ ಬುನಾದಿ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ 2020ರ ಶಿಫಾರಸ್ಸಿನಂತೆ ಶಾಲಾ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಕನ್ನಡ ಭಾಷೆಯನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ರಾಷ್ಟ್ರೀಯ ಮತ್ತು ರಾಜ್ಯ ಪಠ್ಯಕ್ರಮ ಚೌಕಟ್ಟುಗಳನುಸಾರ ಅಂಗನವಾಡಿ ಶಿಕ್ಷಕರ ಸಾಮರ್ಥ್ಯಾಭಿವೃದ್ಧಿಗೆ ಅಗತ್ಯವಾದ ಸಾಮರ್ಥ್ಯ ವರ್ಧನೆ ಕಾರ್ಯಕ್ರಮವನ್ನು ಹಂತವಾರು ಅನುಷ್ಠಾನಗೊಳಿಸಲಾಗುವುದು ಎಂದರು.
ರಾಜ್ಯದಲ್ಲಿ ಒಂದು ಕೋಟಿ ಐದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 8100 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು, ನಾಡುನುಡಿ ಬೆಳೆಸುವ ಕೆಲಸ ಮಾಡಬೇಕು ಎಂದರು.
ವಿದ್ಯಾರ್ಥಿಗಳಲ್ಲಿ ಕೋವಿಡ್ ನಿಂದ ಉಂಟಾಗಿರಬಹುದಾದ ಕಲಿಕಾ ಕೊರತೆಗಳನ್ನು ಸರಿದೂಗಿಸಲು ಇಡೀ ದೇಶದಲ್ಲಿಯೇ ಮಾದರಿ ಎನ್ನಬಹುದಾದ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಶಾಲಾ ಶಿಕ್ಷಕರು ಮತ್ತು ಇಲಾಖೆಯ ಅಕಾರಿ, ಸಿಬ್ಬಂದಿಗಳು ಅತ್ಯಂತ ಶ್ಲಾಘನೀಯ ಕಾರ್ಯ ಮಾಡುತ್ತಿದ್ದಾರೆ ಎಂದರು.




