ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಖಾಲಿ ಇರುವ 2.5 ಲಕ್ಷ ಹುದ್ದೆಗಳನ್ನು ಆದ್ಯತೆಯ ಮೇರೆಗೆ ಭರ್ತಿ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
67ನೇ ಕರ್ನಾಟಕ ರಾಜ್ಯೋತ್ಸವ ಆಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಸರ್ಕಾರಿ ಇಲಾಖೆಗಳಲ್ಲಿ ಎರಡೂವರೆ ಲಕ್ಷ ಹುದ್ದೆಗಳು ಖಾಲಿ ಇವೆ. ಮೊದಲ ಹಂತದಲ್ಲಿ ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಿದ್ದೇವೆ ಎಂದರು.
ಉಳಿದ ಒಂದೂವರೆ ಲಕ್ಷ ಹುದ್ದೆಗಳನ್ನು ಎರಡು ವರ್ಷದಲ್ಲಿ ಭರ್ತಿ ಮಾಡಲಾಗುವುದು. ನಾಳೆಯಿಂದ ಜಾಗತಿಕ ಹೂಡಿಕೆದಾರರ ಸಮಾವೇಶ ಆರಂಭವಾಗಲಿದೆ. ಇದರಿಂದ ಅಂದಾಜು ಮೂರೂವರೆ ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಮೂಲಕ ನಿರುದ್ಯೋಗ ನಿವಾರಣೆ ಮಾಡಲು ನಮ್ಮ ಸರ್ಕಾರ ತೆಗೆದುಕೊಂಡಿರುವ ದಿಟ್ಟ ಕ್ರಮ ಇದಾಗಿದೆ ಎಂದರು.
ಖಾಸಗಿ ವಲಯದಲ್ಲೂ ನಮ್ಮ ಸರ್ಕಾರ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದೆ. ಜಾಗತಿಕ ಹೂಡಿಕೆದಾರರ ಸಮಾವೇಶದಿಂದ ಮೂರೂವರೆ ಲಕ್ಷ ಉದ್ಯೋಗಗಳು ಲಭಿಸಲಿವೆ. ಇದರಲ್ಲಿ ಕನ್ನಡಿಗರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಲಿದೆ ಎಂದರು.
ಪ್ರಾಶಸ್ತ್ಯ ಸಿಗಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಹೀಗಾಗಿಯೇ ಕನ್ನಡ ಭಾಷೆಯನ್ನು ಆಡಳಿತದಲ್ಲಿ ಕಡ್ಡಾಯವಾಗಿ ಜಾರಿಗೊಳಿಸಲು ಕಾಯಿದೆ ಸಿದ್ಧಪಡಿಸಿದ್ದು ಅದನ್ನು ಬರುವ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸುತ್ತೇವೆ ಎಂದರು.
ಬೆಳಗಾವಿಯಲ್ಲಿ ಬರುವ ಡಿಸೆಂಬರ್‌ನಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಕನ್ನಡಕ್ಕೆ ಆದ್ಯತೆ ನೀಡುವ ಕಾನೂನು ಜಾರಿಗೆ ತರಲು ತೀರ್ಮಾನಿಸಿದ್ದೇವೆ ಎಂದರು.
ಕನ್ನಡ ನಾಡು ಕಟ್ಟಲು ನನ್ನ ಪಾತ್ರ ಏನು, ನನ್ನ ಜವಾಬ್ದಾರಿ ಏನು ಎಂಬುದನ್ನು ಅರಿತುಕೊಳ್ಳಬೇಕು. ಈ ರಾಜ್ಯೋತ್ಸವದ ಸುಸದಂರ್ಭದಲ್ಲಿ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ನಮ್ಮ ಹಿರಿಯರು ನಮಗೆ ಸಾಕಷ್ಟು ಬಳುವಳಿ ಕೊಟ್ಟಿದ್ದಾರೆ. ನಾವು ಅದನ್ನು ಉಳಿಸಿಕೊಂಡು ಅಂತಃಕರಣ ನಮ್ಮ ಗುಣ ಎಲ್ಲರನ್ನು ಒಪ್ಪಿಕೊಳ್ಳುವುದು ನಮ್ಮ ಗುಣಧರ್ಮ, ಉತ್ತಮ ಶಿಕ್ಷಣ, ಆರೋಗ್ಯ, ಉದ್ಯೋಗ, ತಂತ್ರಜ್ಞಾನ, ವಿಜ್ಞಾನ ಜೊತೆಗೆ ಎಲ್ಲ ಮೂಲಭೂತ ಸೌಕರ್ಯ ಇರುವ ಸುಂದರ ನಾಡು ಕಟ್ಟುವ ಸಂಕಲ್ಪ ಮಾಡಬೇಕಿದೆ ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡೋಣ ಎಂದರು.
ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸಾಕಷ್ಟು ಸಾಧನೆ ಮಾಡಿದ ಕರ್ನಾಟಕ ಮುಂಚೂಣಿ ರಾಜ್ಯವಾಗಿದೆ. ಈಗಾಗಲೇ ಆರೂವರೆ ದಶಕ ಪೂರೈಸಿದ್ದೇವೆ. ಕರ್ನಾಟಕದಲ್ಲಿ 10 ಕೃಷಿ ವಲಯಗಳಿವೆ. ವರ್ಷದ ಎಲ್ಲ ದಿನಗಳಲ್ಲಿ ಕೃಷಿ ಮಾಡಲು ಅವಕಾಶ ಇರುವ ರಾಜ್ಯ ಕರ್ನಾಟಕ. ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಇನ್ನು ಮೂರು ನಾಲ್ಕು ವರ್ಷ ರಾಜ್ಯದಲ್ಲಿ ನೀರಿನ ಸಮಸ್ಯೆ ಇರುವುದಿಲ್ಲ ಎಂದರು.
ಪ್ರವಾಹದ ಸಂದರ್ಭದಲ್ಲಿ ಎರಡು ಪಟ್ಟು ಪರಿಹಾರ ನೀಡಿದ್ದೇವೆ. ಒಂದು ವರ್ಷದಲ್ಲಿ ಸುಮಾರು 8 ಸಾವಿರ ಶಾಲಾ ಕೊಠಡಿ ಕಟ್ಟುವ ತೀರ್ಮಾನ ಮಾಡಿದ್ದೇವೆ. ಈ ನಾಡಿನಲ್ಲಿ ದುಡಿಮೆಗೆ ಅತಿ ಹೆಚ್ಚು ಬೆಲೆ ಇದೆ. ನಮ್ಮ ಸರ್ಕಾರ ದುಡಿಯುವ ವರ್ಗಕ್ಕೆ ಹೆಚ್ಚು ಆದ್ಯತೆ ನೀಡುತ್ತದೆ. ರೈತರ, ಮಕ್ಕಳು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಲು ವಿದ್ಯಾ ಯೋಜನೆ ಜಾರಿಗೆ ತಂದಿದ್ದೇವೆ. ಕೃಷಿ ಕಾರ್ಮಿಕರು, ನೇಕಾರರ ಮಕ್ಕಳು, ಮೀನುಗಾರರ ಮಕ್ಕಳು, ಆಟೊ ಡ್ರೈವರ್ ಮಕ್ಕಳಿಗೆ ವಿದ್ಯಾನಿಧಿ ವಿಸ್ತರಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಚಿವರಾದ ಬಿ.ಸಿ. ನಾಗೇಶ್, ಸಂಸದ ಪಿ.ಸಿ. ಮೋಹನ್ ಶಾಸಕ ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಗೋವಿಂದರಾಜ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಹಾಗೂ ಮತ್ತಿತರರು ಹಾಜರಿದ್ದರು.



