ಇಲಾಖಾ ವಿಚಾರಣೆ ನೆಪದಲ್ಲಿ ತರಬೇತಿ ವಿಭಾಗದ ಎಡಿಜಿಪಿಗೆ ಬಡ್ತಿ ನಿರಾಕರಣೆ

11 months ago

ಬೆಂಗಳೂರು: ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ಅಲೋಕ್ ಮೋಹನ್ ಅವರ ಸೇವಾ ನಿವೃತ್ತಿಯ ನಂತರ ರಾಜ್ಯ ಪೊಲೀಸ್ ಹಿರಿಯ ಅಧಿಕಾರಿಗಳ ಬಡ್ತಿ ವಿಚಾರ ಇದೀಗ ವಿವಾದವಾಗಿ ಪರಿಣಮಿಸಿದೆ. ಆರೋಪ ಪ್ರಕರಣವೊಂದರ ಇಲಾಖಾ ವಿಚಾರಣೆ ನೆಪದಲ್ಲಿ ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ಅಲೋಕ್ ಕುಮಾರ್ ಅವರಿಗೆ ಬಡ್ತಿ ನಿರಾಕರಿಸಲಾಗಿದೆ. ಆದರೆ ಅವರ ವಿರುದ್ಧದ ಇಲಾಖಾ ತನಿಖೆಯು ಈಗಾಗಲೇ ತನಿಖೆ ಪೂರ್ಣಗೊಂಡಿರುವುದು ಬೆಳಕಿಗೆ ಬಂದಿದೆ.

ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಮುಂಬಡ್ತಿ ನೀಡದ ಸರ್ಕಾರ 6 ವರ್ಷದ ಹಿಂದಿನ ಪ್ರಕರಣವನ್ನು ಕೆದಕಿ ಇಲಾಖಾ ತನಿಖೆಗೆ ಆದೇಶಿಸಿದೆ. ಸರ್ಕಾರ ಇಲಾಖಾ ತನಿಖೆಗೆ ಆದೇಶಿಸಿದ್ದರೂ ಈ ತನಿಖೆ ಈಗಾಗಲೇ ಪೂರ್ಣಗೊಂಡಿರುವ ಬಗ್ಗೆ ಅಲೋಕ್ ಕುಮಾರ್ ಅವರು ಆರ್ಟಿಐ ಅಡಿ ಪ್ರಶ್ನಿಸಿ ಉತ್ತರ ಪಡೆದಿದ್ದಾರೆ.

ವಿಧಾನಸೌಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಸರ್ಕಾರದ ಅಧೀನ ಕಾರ್ಯದರ್ಶಿ ಇಲಾಖಾ ತನಿಖೆ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಎಲ್ಲಾ ಮಾಹಿತಿಗಳು ಲಭ್ಯವಿದ್ದರೂ ಮುಂಬಡ್ತಿ ನೀಡದ ಸರ್ಕಾರದ ನಡೆಯಿಂದ ಬೇಸತ್ತಿರುವ ಅಲೋಕ್ ಕುಮಾರ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಲೀಗಲ್ ನೋಟಿಸ್ ನೀಡಿದ್ದಾರೆ.

ಪ್ರಕರಣದ ತನಿಖೆ ನಡೆಸಿದ ಸಿಬಿಐ ಬಿ ರಿಪೋರ್ಟ್ ಸಲ್ಲಿಕೆ ಮಾಡಿತ್ತು. ಈ ವೇಳೆ ಭಾಸ್ಕರ್ ರಾವ್ (ನಿವೃತ್ತ) ಮತ್ತು ಅಲೋಕ್ ಕುಮಾರ್ ವಿರುದ್ಧ ಇಲಾಖಾ ವಿಚಾರಣೆಗೆ ಸಿಬಿಐ ಶಿಫಾರಸು ಮಾಡಿತ್ತು. ಆದರೆ ಅಂದು ಈ ಇಬ್ಬರು ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ಪ್ರಾರಂಭಿಸದೇ ಪ್ರಾಥಮಿಕ ಹಂತದಲ್ಲಿಯೇ ಮುಖ್ಯಮಂತ್ರಿಗಳ ಅನುಮೋದನೆಯೊಂದಿಗೆ ಮುಕ್ತಾಯಗೊಳಿಸಲಾಗಿದೆ.

ಪ್ರಸ್ತುತ ಇಬ್ಬರು ಅಧಿಕಾರಿಗಳ ಇಲಾಖಾ ವಿಚಾರಣೆಗೆ ಸಂಬಂಧಿಸಿದ ಕಡತಗಳು ಮುಖ್ಯಮಂತ್ರಿಯವರ ಕಚೇರಿಯಲ್ಲಿರುತ್ತದೆ. ಇಲಾಖಾ ವಿಚಾರಣೆ ಪ್ರಾಥಮಿಕ ಹಂತದಲ್ಲಿಯೇ ಮುಕ್ತಾಯವಾಗಿದ್ದರೂ ಈಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇಲಾಖಾ ತನಿಖೆಯ ಕಾರಣ ನೀಡಿ ಮುಂಬಡ್ತಿ ನೀಡಲು  ನಿರಾಕರಿಸಿದೆ.

ಈ ಹಿಂದೆ ಕೇಳಿ ಬಂದಿದ್ದ ಫೋನ್ ಟ್ಯಾಪಿಂಗ್ (ದೂರವಾಣಿ ಕದ್ದಾಲಿಕೆ) ಹಾಗೂ ಅಕ್ರಮವಾಗಿ ಮೊಬೈಲ್ ಕರೆ ವಿವರ(ಸಿಡಿಆರ್) ಪಡೆದ ಪ್ರಕರಣದಲ್ಲಿ ಅಲೋಕ್ ಕುಮಾರ್ ವಿರುದ್ಧ ಸರ್ಕಾರ ಇಲಾಖಾ ವಿಚಾರಣೆಗೆ ಆದೇಶ ನೀಡಿದೆ.

ಒಂದು ಡಿಜಿಪಿ ಸ್ಥಾನ ತೆರವಾದ ಹಿನ್ನೆಲೆ 1994ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಅಲೋಕ್ ಕುಮಾರ್ ಅವರಿಗೆ ಈ ತಿಂಗಳಲ್ಲಿ ಡಿಜಿಪಿ ಆಗಿ ಮುಂಬಡ್ತಿ ಸಿಗಬೇಕಿತ್ತು. ಆದರೆ ಈಗ ಇಲಾಖಾ ವಿಚಾರಣೆಗೆ ಆದೇಶ ನೀಡಿರುವುದರಿಂದ ಮುಂಬಡ್ತಿ ನೀಡಲು ಸಾಧ್ಯವಿಲ್ಲ. ಇದರಿಂದಾಗಿ ಅದೇ ಬ್ಯಾಚ್ನ ಹಿರಿಯ ಅಧಿಕಾರಿಯಾದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರಿಗೆ ಡಿಜಿಪಿಯಾಗಿ ಮುಂಬಡ್ತಿ ಸಿಗುವ ಸಾಧ್ಯತೆಯಿದೆ.

ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದ ಅವಧಿಯಲ್ಲಿ ಅಲೋಕ್ ಕುಮಾರ್ ಸಿಸಿಬಿ ಮುಖ್ಯಸ್ಥರಾಗಿದ್ದರು. 2019ರಲ್ಲಿ ಬಿಜೆಪಿ ಆಪರೇಷನ್ ಕಮಲ ನಡೆಸಲು ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂಬ ಸುದ್ದಿಗಳು ಹರಿದಾಡಲು ಆರಂಭವಾಗಿತ್ತು. ಈ ವೇಳೆ ಕುಮಾರಸ್ವಾಮಿ ಸರ್ಕಾರ ಕೆಲ ಅಧಿಕಾರಿಗಳು, ಸ್ವಾಮೀಜಿಗಳು ಮತ್ತು ರಾಜಕೀಯ ಮುಖಂಡರ ಫೋನ್ ಟ್ಯಾಪಿಂಗ್ ಮತ್ತು ಸಿಡಿಆರ್ ಸಂಗ್ರಹಿಸಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಚರ್ಚೆ ಜೋರಾಗುತ್ತಿದ್ದ ಸಮಯದಲ್ಲೇ ಕುಮಾರಸ್ವಾಮಿ ಅವರು ಅಲೋಕ್ ಕುಮಾರ್ ಅವರನ್ನು ಎಡಿಜಿಪಿಯಾಗಿ ಮುಂಬಡ್ತಿ ನೀಡಿ, ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿದ್ದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಸಿಬಿಐ ಅಲೋಕ್ ಕುಮಾರ್ ಮನೆ ಮೇಲೆ ದಾಳಿ ಸಹ ನಡೆಸಿತ್ತು. ಈ ವೇಳೆ ಭಾಸ್ಕರ್ರಾವ್ ಯಾರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಫೋನ್ ಟ್ಯಾಪಿಂಗ್ ಮಾಡಿದ್ದ ಆಡಿಯೋ ಒಂದು ವೈರಲ್ ಮಾಡಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಬಳಿಕ ಸಿಬಿಐ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿತ್ತು.

Leave a Reply