ಕುಂದೂರು ತಿಮ್ಮಯ್ಯನವರ ಆತ್ಮಕಥನ ದಾಟಿಯ ‘ಅಂಗೂಲಿಮಾಲ’ ಓದಿ ಈಗ್ತಾನೆ ಮುಗಿಸಿದೆ..
ಕತೆ ಅಂತ್ಯಕ್ಕೆ ಬರುತ್ತಿದ್ದಂಗೆ ನನಗನಿಸಿದ್ದು.
ಸಾಮ್ರಾಟ್ ಅಶೋಕ “ಕಳಿಂಗ ಯುದ್ಧದ’ ಭೀಕರತೆಯ ಚಿತ್ರಣವನ್ನು ಕಣ್ಣಾರೆ ಕಂಡು ಅವನ ಮನವು ಜರ್ಝರಿತಗೊಂಡು ರಣರಂಗದಲ್ಲಿಯೇ ಕತ್ತಿಯನ್ನು ಬಿಸುಟು, ಕಣ್ಣೀರು ಸುರಿಸಿ ಬುದ್ಧ ಗುರುವಿನ ಧಮ್ಮವನ್ನು ಅಪ್ಪಿ ಆಹಿಂಸೆಯ ಮಾರ್ಗದಲ್ಲಿ ನಡೆದಂತೆ. ಪ್ರೊಫೆಸರ್ ಬಿ.ಕೃಷ್ಣಪ್ಪನವರು ಭದ್ರಾವತಿಯಲ್ಲಿ ಆಯೋಜಿಸಿದ್ದ ಪ್ರಥಮ ದಲಿತ ಶಿಬಿರಕ್ಕೆ ಬೆಲ್ಲದಮಡುಗು ಕೃಷ್ಣಪ್ಪನವರ ಒತ್ತಾಸೆಯಿಂದ ತಿಮ್ಮಣ್ಣ ಶಿಬಿರದಲ್ಲಿ ಪಾಲ್ಗೊಂಡು ಮನಃಪರಿವರ್ತನೆಯಾಗಿ ದಲಿತರ ಬಿಡುಗಡೆಗಾಗಿ ದಸಂಸ ಕುಂದೂರು ಹೋರಾಟ ಕಟ್ಟಲು ನಿಶ್ಚಯಿಸಿ ಊರಿಗೆ ಬಂದದ್ದು.
ಇದೇ ಕಾಲಘಟ್ಟದಲ್ಲಿ ಕೋಲಾರದ ಗೌರಿಬಿದನೂರಿನಲ್ಲಿ ನಡೆದ ಒಂದು ಪ್ರಸಂಗವನ್ನು ಇಲ್ಲಿ ಗಮನಿಸಬಹುದು.
ಗೌರಿಬಿದನೂರಿನ ಎಲ್ಲೋಡಿನ ಸಂಗಾತಿ ಸಂಘಂ ಆಂಜೀನಪ್ಪ ಹರೆಯದಲ್ಲೆ ವೈರಾಗ್ಯ ಮೂಡಿ ಮನೆ ತೊರೆದು ತಂಬೂರಿ ಹಿಡಿದು ಕೈವಾರ ತಾತಯ್ಯನ ಗುರುಪರಂಪರೆಯ ಕಡೆ ಆಕರ್ಷಿತನಾಗಿ ಮನೆ ಮನೆ ಭಿಕ್ಷೆ ಬೇಡುತ್ತಾ ತೆಲುಗು ತತ್ವಪದಗಳನ್ನು ಹಾಡುತ್ತಾ ಆದಿನಾರಾಯಣಸ್ವಾಮಿ ತಪ್ಪಲಿನ ಬೆಟ್ಟದ ದೊಡ್ಡ ಗುಹೆಯಲ್ಲಿ ಪುಟಗೋಸಿ ತೊಟ್ಟು ಕೈಗೆ ತಂಬೂರಿ ಹಿಡಿದು ಅವಧೂತಕ್ಕೆ ಜಾರಿದ್ದು, ಕುರಿಮೇಕೆ ಕಾಯ್ವ ಹುಡುಗುರು ಕೊಟ್ಟ ತಂಗಳುಂಡು ಗಡ್ಡಧಾರಿಯಾಗಿದ್ದ ಆಂಜೀನಪ್ಪ ಎಲ್ಲೋಡಿನ ಜಮೀನ್ದಾರಿ ವಿಜಯರಾಘವರೆಡ್ಡಿಯನ್ನು ಕಂಡರೆ ಇವರಿಗೆ ಆಗುತ್ತಿರಲಿಲ್ಲ. ಈತ ಇಲ್ಲಿ ದೊಡ್ಡ ಭೂಮಾಲೀಕನಾಗಿದ್ದ. ದಲಿತರ ಮೇಲೆ ಇನ್ನಿಲ್ಲದ ದರ್ಪತೋರುತ್ತಿದ್ದ, ಇನ್ನಿಲ್ಲದ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿದ್ದ ಹೊತ್ತಲ್ಲಿ ವಿಜಯರಾಘವರೆಡ್ಡಿ ಸೊಕ್ಕಿನಿಂದ ಮಾತಾಡಿ
“ಅವನ ಕೈಯಲ್ಲಿ ಏನಾಗ್ತದೆ ಕಿಸಿಯೋಕೆ, ಅವನು ಸಂನ್ಯಾಸಿ ಆಗವ್ನೆ” ಎಂಬ ಮಾತು ಆಂಜೀನಪ್ಪನ ಕಿವಿಗೆ ಬಿದ್ದುದ್ದೆ ತಡ ತಂಬೂರಿ ಬಿಸಾಡಿ ಪ್ಯಾಂಟ್ ತೊಟ್ಟು ಆಗ್ತಾನೆ ದಲಿತ ಹೋರಾಟ ಕಟ್ಟುಲು ಭೂಮಿಕೆ ಹಾಕಿಕೊಟ್ಟಿದ್ದ ಕೆ.ನಾರಾಯಣಸ್ವಾಮಿ ಕೋಲಾರದಲ್ಲಿ ದಲಿತ ಚಳವಳಿ ಕಟ್ಟಲು ಹೆಡ್ ಮೇಷ್ಟ್ರುವಿನಂತೆ ಇದ್ದವರು. ಆ ಕಾಲಕ್ಜೆ ಅಂಬೇಡ್ಕರ್ ಕುರಿತ ಪುಸ್ತಕವೇ ಇಲ್ಲದ ಹೊತ್ತಲ್ಲಿ ಮೊಟ್ಟಮೊದಲ ಬಾರಿಗೆ “ಅಂಬೇಡ್ಕರ್ ವಾಣಿ” ಎಂಬ ಕಿರು ಪುಸ್ತಕ ಬರೆದು ಚಳವಳಿಯ ಕಾರ್ಯಕರ್ತರಿಗೆ ಹಂಚಿ ಅಂಬೇಡ್ಕರ್ ಅವರನ್ನು ಜಿಲ್ಲೆ ಮತ್ತು ನಾಡಿಗೆ ಪರಿಚಯಿಸಿದವರು.
ಆಗ್ತಾನೆ ಚಳವಳಿ ಕಟ್ಟೋಕೆ ಅಡಿಪಾಯ ಹಾಕಿದವರಲ್ಕಿ ಮೊದಲಿಗರು ಈ ನಮ್ಮ KNS.. [ಕುಂದೂರು ತಿಮ್ಮಣ್ಣ KNS ಅವರನ್ನ ಅವರ ಆತ್ಮಕಥನದಲ್ಲಿನೆನೆದಿದ್ದಾರೆ] ಇವರ ಆಶಯಗಳನ್ನು ಚಳವಳಿಯಾಗಿಸಿ ಮುನ್ನಡಿಸಿದವರಲ್ಲಿ ಕೋಟಿಗಾಹಳ್ಳಿರಾಮಯ್ಯ, ಎನ್. ವೆಂಟೇಶ್, ಯರನಾಗನಹಳ್ಳಿರಾಮಚಂದ್ರ,ಕರ್ನಲ್ ರಾಮಚಂದ್ರ, ಎನ್.ಮುನಿಸ್ವಾಮಿ ಪಟ್ಟಿ ಹೀಗೆ ಬೆಳಯುತ್ತದೆ. ಅಂದಿನ ಗೌರಿಬಿದನೂರಿನಲ್ಲಿ ಸ್ಕೂಲ್ ಮೇಷ್ಟ್ರುಗಳಾಗಿದ್ದ ಕೊಮ್ಮಣ್ಣ, ರಾಮಚಂದ್ರಪ್ಪ, ಸಿ.ಜಿ.ಗಂಗಪ್ಪರಂತಹವರ ಮಾರ್ಗದರ್ಶನದಲ್ಲಿ ದಿಟ್ಟತೆಯಿಂದ ಹೋರಾಟಗಳನ್ನು ರೂಪಿಸಿ ಸಂಘಕಟ್ಟಿ ನಿಸ್ವಾರ್ಥ ಬದುಕು ಸವೆಸಿ ಸಹಜ ಭೌದ್ಧಬಿಕ್ಕು[ಸಂತ]ನಂತೆ ಬದುಕಿನ ಕಡೆದಿನಗಳಲ್ಲಿ ಹೆಗಲಲ್ಲಿನ ಜೋಳಿಗೆಯಲ್ಲಿ ಭಿಕ್ಷಾಪಾತ್ರ ಹಿಡಿದು ಕನಿಷ್ಠ ಮಾತ್ರೆಗೂ ಗತಿಯಿಲ್ಲದ ಈ ಮಣ್ಣಿಗೆ ಮರೆಯಾದ ಸಂಘಂ ಆಂಜೀನಪ್ಪ ನನಗೆ ನೆನಪಾಗ್ತರೆ.
ಈ ಆತ್ಮಕಥನದ ಹಿನ್ನೆಲೆಯಲ್ಲಿ ಸಂಘಂ ಆಂಜೀನಪ್ಪನಂತಹ ನಿಸ್ವಾರ್ಥ ದಸಂಸ ಕಾರ್ಯಕರ್ತನ ಮಾಡಲ್ ಇಟ್ಟುಕೊಂಡು ನನ್ನ ಅನಿಸಿಕೆ ಮುಂದುವರೆಸುವೆ.
ನಾನು ಆರಂಭದಲ್ಲಿ ಹೇಳಿದಂತೆ ಅಶೋಕನ ಮನಃಪರಿವರ್ತನೆಗೆ ‘ಕಳಿಂಗ’ ಹೇಗೋ ಕುಂದೂರು ತಿಮ್ಮಯ್ಯನಿಗೆ ಭದ್ರಾವತಿ ಪ್ರಥಮ ದಲಿತ ಶಿಬಿರ ಕೂಡ ಬಹುಮುಖ್ಯ ಪರಿವರ್ತನಾ ರೂಪಕವಷ್ಟೇ. [ಎರಡನೆ ದಲಿತ ಶಿಬಿರ ಮೈಸೂರಿನ ಸಿದ್ಧಾರ್ಥ ಹಾಸ್ಟೆಲ್ಲಿನಲ್ಲಿ ನಡೆದಿತ್ತೆಂದು ದಾಖಲಾಗಿದೆ.] ಶಿಬಿರ ಮುಗಿಸಿ ಗ್ರಾಮೀಣ ಕ್ರೀಡೆಯಾದ ಕಬ್ಬಡಿ ಆಟಗಳನ್ನು ಆಡುತ್ತಾ ಅಲ್ಲಿಸಿಕ್ಕ ಗೆಳೆಯರ ಸಹವಾಸದೋಷದಿಂದ ದಾದಾಗಿರಿಗಿಳಿದು ಆನಂತರ ಭದ್ರಾವತಿಯಲ್ಲಿ ಶಿಬಿರ ಮುಗಿಸಿ ಮನಃಪರಿವರ್ತನೆ ಹೊಂದಿ ದಲಿತರ ಏಳಿಗೆ ಬಯಸಿ ಕುಂದೂರಿಗೆ ಹೊರಟಾಗ ಆಗಿನ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಅದು ಕಳ್ಳುಮುಳ್ಳಿನ ಹಾದಿಯಾಗಿತ್ತು. ಜಮ್ಮೀನ್ದಾರಿ ಪ್ರಭಾವಿ ಲಿಂಗವಂತರನ್ನು, ಗೌಡಿಕೆಯನ್ನು ಎದುರಿಸುವುದು ಅಷ್ಟು ಸಾಮಾನ್ಯದ ವಿಷಯವಾಗಿರಲಿಲ್ಲ.
ಆ ಹೊತ್ತಿಗೆ ದಲಿತ ಸಮುದಾಯವು ಹಸಿವು, ಅವಮಾನ, ಮೇಲ್ವರ್ಗಗಳು ಹೇರಿದ ಸಾಮಾಜಿಕ ಬಹಿಷ್ಕಾರದಂತಹ ಶೋಷಣೆ, ದಬ್ಬಾಳಿಕೆಗಳಿಗೆ ನಲುಗಿ ಸೊರಗಿದ್ದ ದಲಿತ ಸಮುದಾಯದ ಬಿಡುಗಡೆಗೆ ಧಾವಿಸಿದ ತಿಮ್ಮಣ್ಣ ತನ್ನ ಕೆಚ್ಚೆದೆಯ ನಿಲುವಿನ ಹೋರಾಟಗಳಿಂದ ಜಮೀನ್ದಾರಿ ಲಿಂಗಾಯತರ ಅಟ್ಟಹಾಸದಲ್ಲಿ ಮೆರೆಯುತ್ತಿದ್ದ ‘ಕುಂದೂರು’ನ್ನು ದಲಿತ ಸಮುದಾಯದ ಪ್ರಯೋಗಭೂಮಿ [ಶಕ್ತಿ ಕೇಂದ್ರ] ವಾಗಿಸಿ ಪರಿವರ್ತಿಸಿದ್ದು ಸಾಮಾನ್ಯದ ವಿಷಯ ಅಲ್ಲ. ಅವರೊಟ್ಟಿಗೆ ಕೆ.ಬಿ.ಸಿದ್ದಯ್ಯ, ಪ್ರೊ.ಬಿಕೆಯಂತ ಮೇರು ನಾಯಕರು, ಅಸಂಖ್ಯಾತ ಕಾರ್ಯಕರ್ತರು ಒತ್ತಾಸೆಯ ಸಮಷ್ಟಿ ಬಲವೇ ತಿಮ್ಮಣ್ಣ ನಾಯಕನಾಗಿ ರೂಪುಗೊಳ್ಳಲು ಸಾಧ್ಯವಾಯಿತು.
ದಲಿತಪ್ರಜ್ಞೆ ರೂಪಗೊಳ್ಳುತ್ತಿದ್ದ ಕಾಲಘಟ್ಟದಲ್ಲಿ ತಿಮ್ಮಣ್ಣ ಯಂಗ್ ಅಂಡ್ ಎನರ್ಜಿಟಿಕ್ಕಾಗಿ ಇಪ್ಪತ್ತರ ಹರೆಯದರ ಒಳಗೆ ಮುನ್ನಡೆಸಿದ ಸಾಮಾಜಿಕ ಸಮುದಾಯದ ಹೋರಾಟದ ಪ್ರಸಂಗಗಳನ್ನು ಓದುತ್ತಿದ್ದಂತೆ ಎದೆ ನಡುಗಿಸಿಬಿಡುತ್ತೆ. ಕಬ್ಬಡಿ ಆಟದ ಅಥ್ಲೆಟಿಕ್ ಯುವ ಆಟಗಾರನಾಗಿ ಬೆಳಯುತ್ತಿದ್ದ ಹೊತ್ತಲ್ಲಿ,ನಡೆದ ಹೊಡೆದಾಟಗಳು, ಶ್ರೀರಾಂಪುರ ಗರಡಿಗೆ ಪೈಲ್ವಾನ್ ಆಗಲು ಬಂದು ಅಲ್ಲಿನ ಕಿಟ್ಟಿಗ್ಯಾಂಗ್ ಚಕ್ರವ್ಯೂಹದಿಂದ ತಪ್ಪಿಸಿಕೊಂಡ ಕತೆಯಂತೂ ರೋಚಕವಾಗಿದೆ.
ತಿಮ್ಮಣ್ಣನವರು ಕುಂದೂರಿನಲ್ಲಿ ದೈತ್ಯವ್ಯಕ್ತಿತ್ವವಾಗಿ ಬೆಳೆದಂತೆ ಕಣ್ಣುರಿ ಮಾಡಿಕೊಂಡ ಊರಿನ ಮತ್ತು ಸುತ್ತಮುತ್ತಲ ಪ್ರಭಾವಿ ಮೇಲ್ಜಾತಿ ನಾಯಕರ ನಿದ್ದೆಗೆಟ್ಟು ಸುಪಾರಿ ಕೊಲೆಗೆ ಯತ್ನಿಸಿದ್ದು, ತಿಮ್ಮಣ್ಣನ ಹೋರಾಟದ ಫಲವುಣ್ಣಿದ ಫಲಾನುಭವಿಯೊಬ್ಬ ಕೊಲೆ ಮಾಡಲು ಬಂದು ತಿಮ್ಮಣ್ಣ ಮುಖ ನೋಡಿ ಪ್ರಶ್ಚಾತ್ತಾಪ ಪಟ್ಟು ಕೈಹಿಡಿದು ಕ್ಷಮೆಕೋರಿ ಸುಫಾರಿಕೊಟ್ಟವರಿಗೆ ತಿರುಗಮುರಗ ಹೊಡೆಯುವೆನೆಂದು ಹೇಳುವ ಸನ್ನಿವೇಷವಂತೂ ಓದುಗರನ್ನು ಭಾವುಕಗೊಳಿಸಬಲ್ಲದು.
ಬುದ್ದ ಗುರುವಿಗೆ ಶಿಷ್ಯ ಆನಂದ ಸಿಕ್ಕಂತೆ ಬೆಲ್ಲದಮಡುಗು ಕೃಷ್ಣಪ್ಪನಿಗೆ ತಿಮ್ಮಣ್ಣ ಶಿಷ್ಯನಾಗಿ ಊರಿನ ಕೀರ್ತಿ ಹೆಚ್ಚಿಸಿದ್ದು ಅಚ್ಚರಿ ಎನಿಸಿತ್ತು. ಊರಿನಲ್ಲಿ ದೋತಿ,ಪಂಚೆ ಉಟ್ಟರೆ ಬೀದಿಗಿಳಿದು ನುಗ್ಗಿ ಹೊಡೆವ, ಮೇಲ್ವರ್ಗದವರು ಪಾಯಿಖಾನೆಗೆ ಬಳಸಿದ ನೀರನ್ನು ಕುಡಿಯಲು ಸಹ ಕೊಡುತ್ತಿರಲಿಲ್ಲವಾದರೂ, ಇದಕ್ಕಾಗಿ ಕುಂದೂರುಕಟ್ಟೆ ನೀರು ಮುಟ್ಟಲು ನಡೆಸಿದ ಹೋರಾಟ ನಂತರ ಊರಮುಂದೆ ನಡೆದ ಮಾರಣಾಂತಿಕ ಹಲ್ಲೆಗಳು ಕನಿಷ್ಠ ಮೆರವಣಿಗೆ ಹೊರಟ ದೇವರನ್ನು ದೂರದಿಂದಲೂ ನೋಡಲು ಅವಕಾಶವೀಯದ ಜಾತಿಪೂರಿತ ಕಾರ್ಕೋಟ ವಿಷಸರ್ಪಗಳ ನಡುವೆ ಜಾತಿ ಕೊಚ್ಚೆಗಲೀಜುಗಳ ಮಧ್ಯೆ ಕುಂದೂರು ದಲಿತ ಶಾಖೆಯ ಬಿಳಲುಬೇರುಗಳು ಸುತ್ತಲ ಹಳ್ಳಿಗಳಿಗೆ ವಿಸ್ತರಿಸಿ ಪಸರಿಸಿ ಅರಳಿಸಿ ಯುವಕರಲ್ಲಿ ಸಂಘದ ಬಗ್ಗೆ ಜಾಗೃತಿ ಮೂಡಿಸಿದ ಬಿಡಿಬಿಡಿ ಕಥನಗಳು ಆಪ್ತವಾಗುತ್ತವೆ.
ಇಂದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡಿಪಾಯವೆಂಬಂತೆ ಸುಸಜ್ಜಿತ ವಿದ್ಯಾರ್ಥಿ ನಿಲಯದ ಕಟ್ಟಡಗಳು ಎದ್ದುನಿಲ್ಲಲು ಕಾರಣವಾಗಿದ್ದು ದಲಿತ ಚಳವಳಿ ರೂಪಿಸಿದ ಹೋರಾಟಗಳೇ. ಕಟ್ಟಡಗಳ ಪ್ರತಿ ಕಂಬಗಳಲ್ಲಿ ಕಾಣದ ಕಾರ್ಯಕರ್ತರ ನೆತ್ತರು ಗುರುತುಗಳಿವೆ. ಈ ಹಿನ್ನೆಲೆಯಲ್ಲಿ ತಿಮ್ಮಣ್ಣ ಮುಂದಿನ ಭವಿಷ್ಯದ ತಲೆಮಾರುಗಳಿಗೆ ಭವಿಷ್ಯದ ದೃಷ್ಟಿಯಿಂದ ಹಾಸ್ಟೆಲ್ಲುಗಳ ನಿರ್ಮಾಣದ ಹೋರಾಟ ಮಹತ್ವದ್ದಾಗಿದೆ. ದಲಿತರ ಹಿತಾಸಕ್ತಿಯ ಜತೆಜತೆಗೆ ಮೇಲ್ವರ್ಗಗಳಲ್ಲಿದ್ದ ಕಷ್ಟಕಾರ್ಪಣ್ಯಗಳಿಗೆ ತಿಮ್ಮಣ್ಣ ನಿಸ್ವಾರ್ಥವಾಗಿ ಸೇವೆಗೆ ಸ್ಪಂದಿಸಿದ್ದಾರೆ. ಹಾಗೆ ಆ ಭಾಗದ ಪ್ರಭಾವಿ ಗಂಗಾಧರಗೌಡ ಎಂಬ ದೈತ್ಯನ ಸೊಕ್ಕುಮುರಿದು ಅವನ ಮನಃಪರಿವರ್ತನೆ ಮಾಡಿದ್ದು, ದಿನೇ ದಿನೇ ಮೇಲ್ವರ್ಗಗಳ ಪ್ರೀತಿವಿಶ್ವಾಸಗಳನ್ನು ಗಳಿಸಿದ ತಿಮ್ಮಣ್ಣ ತಾನೆ ಮುಂದು ನಿಂತು “ಹಾಲೇಶ್ವರ ಯುವಕ ಸಂಘ” ಕಟ್ಟಿ ಅವರ ಮುಖಗಳಲ್ಲಿ ನಗು ಉಕ್ಕುವಂತೆ ಮಾಡಿದ್ದು.
ನೆನೆದವರ ಮನಗಳಲ್ಲಿ
ಸೊರಗಿದವರ ಕಂಗಳಲ್ಲಿ
ನಿಚ್ಚಂಪೊಸತಾಗಿ ಮಾಗಿದ ನಾಯಕನಾಗಿ ಬದಲಾಗುವ ಪರಿ ಅಚ್ಚರಿಮೂಡಿಸುತ್ತದೆ. ಕೇಬಿ-ಗಂಗರಾಜಮ್ಮರ ಮದುವೆಯನ್ನು ತಿಮ್ಮಣ್ಣನೇ [ಮುಂದುಮನಿಷಿ]ಯಾಗಿ ನಿಂತು ಮಾಡಿದ ಮದುವೆ ಪ್ರಸಂಗ ಚಾರಿತ್ರಿಕವಾದುದ್ದು.
“ಹೊಲೆಮಾದಿಗರಟ್ಟಿ” ಒಟ್ಟುಗೂಡಿ ಈ ಎರಡು ಉಪಜಾತಿಗಳು ಸಂಗಮಗೊಂಡಿದ್ದು ಈ ನಾಡಿನ ದಲಿತ ಸಮುದಾಯಕ್ಕೆ ಮಾದರಿ ಆಗಬೇಕೆಂದು ಪ್ರೊ.ಬಿಕೆ, ಕೇಬಿ ಸಿದ್ದಯ್ಯನವರು ತೋರಿದ ಆದರ್ಶಪ್ರಾಯದ ಹೆಜ್ಜೆ ಗುರುತುಗಳು ಚರಿತ್ರೆಯ ಪುಟಗಳಲ್ಲಿ ದಾಖಲೆ ಆಯಿತೇ ಹೊರತು ಅದು ನಡೆಯಾಗಲಿಲ್ಲವೆಂಬುದು ದುಖ್ಖದ ವಿಷಯ.
ತಿಮ್ಮಣ್ಣನವರು ರಾಜಕೀಯದ ಕಡೆ ಆಕರ್ಷಿತರಾಗಿ ಜನರ ಸೇವೆ ಮಾಡಲು ಬಂದಾಗ ಆಗ ನಡೆಯುವ ಪ್ರಸಂಗಗಳು ತುಂಬಾ ಸ್ವಾರಸ್ಯಕರವಾಗಿದೆ. ಆ ಕಾಲಕ್ಕೆ ಮಂಡಲ ಪಂಚಾಯಿತಿ ಸದಸ್ಯನಾಗಿ ತಾಲೂಕು ಬೋರ್ಡ್ ಗೆ ಎರಡು ಬಾರಿ ಸಾಧಿಸಿದ ದಿಗ್ವಿಜಯ ತಿಮ್ಮಣ್ಣನಿಗಿದ್ದ ಮೇಲ್ವರ್ಗದ ಬೆಂಬಲವನ್ನು ನಾವು ಗ್ರಹಿಸಬಹುದು. ಈ ಘಟನಾವಳಿಗಳನ್ನು ನನಗೆ ಓದುತ್ತಿದ್ದಂತೆ ತಮಿಳಿನ ಪಾ.ರಂಜಿತ್ ನಿರ್ದೇಶನದ ಮೆದ್ರಾಸ್ ಸಿನಿಮಾ ನೆನಪಿಗೆ ಬಂತು. ಮದ್ರಾಸ್ ಸಿನಿಮಾಗೆ ನೆರವಾದ ಕತೆ ನಮ್ಮ ಕುಂದೂರಲ್ಲೇ ಇತ್ತಲ್ಲ ಅನಿಸಿಬಿಡ್ತು. ಗೊಲ್ಲರ ದೊಡ್ಡಯ್ಯನ ಅನುಮಾನಸ್ಪದ ಕೊಲೆಯನ್ನು ಪ್ರಭಾವಿಗಳ ಮನಿಟೋಕನ್ ಪಡೆದು ಹಾರ್ಟ್ ಫೇಲ್ಯೂರ್ ಅಂತ ನಂಬಿಸಿ ಮರ್ಡರ್ ಮಿಸ್ಟ್ರಿಯನ್ನು ಬೆತ್ತಲುಗೊಳಿಸಿ ಹಂತಕರನ್ನು ಜೈಲುಕಂಬಿ ಎಣಿಸೋ ಹಾಗೇ ಮಾಡಿದ ತಿಮ್ಮಣ್ಣನ ದಿಟ್ಟಹೆಜ್ಜೆ ಮೈನರಳಿಸುತ್ತೆ. ಒಮ್ಮೆ ಖಾಯಿಲೆಬಿದ್ದು ಸಾವು ಬದುಕಿನ ಮಧ್ಯೆ ನರಳುತ್ತಿದ್ದಾಗ ದಲಿತ ಸಮುದಾಯ ಅವರ ನೆರವಿಗೆ ಬಾರದಿರುವುದು ನೋವಿನ ವಿಷಯ. ಅಂತಹ ಸಂಕಷ್ಟದ ದಿನಗಳಲ್ಲಿ ಆತುಕೊಂಡ ಶಾಣಪ್ಪನವರು. ಮುತುವರ್ಜಿವಹಿಸಿ ಅವರನ್ನು ಪ್ರತಿಷ್ಟಿತ ಮಲ್ಲಿಗೆ ಆಸ್ಪತ್ರೆಗೆ ದಾಖಲು ಮಾಡಿದ ಶಾಣಪ್ಪನವರು”ರೀ ತಿಮ್ಮಣ್ಣ ನೀವು ಮತ್ತೆ ನಡೆದಾಡಬೇಕು ಸಂಘಕಟ್ಟಿ ನಮ್ಮನ್ನು[ಸರ್ಕಾರ] ಎಚ್ಚರಿಸ್ತಿರಬೇಕಯ್ಯ ನೀನು” ಅನ್ನೋ ಮಾತುಗಳು ಶಾಣಪ್ಪರವರು ಪ್ರಬುದ್ಧ ರಾಜಕೀಯ ಮತ್ಸದ್ದಿತನವನ್ನು ತೋರುತ್ತದೆ.
ಈ ಕಾಲಘಟ್ಟದಲ್ಲಿ ಯಾವುದೇ ರಾಜಕೀಯ ನಾಯಕನಲ್ಲೂ ಶಾಣಪ್ಪನವರನ್ನು ಕಾಣೋಕೆ ಸಾದ್ಯವೇ ಇಲ್ಲ ಬಿಡಿ.
ಕ್ಲೆಮ್ಯಾಕ್ಸ್ ಘಟ್ಟದಲ್ಲಿ ಚುನಾವಣೆಯಲ್ಲಿ ಮತ ಕೇಳಲು ಹೋದಾಗ ಹೆಣ್ಣೊಬ್ಬಳ ಕಣ್ಣೀರು ಆಕೆಯ ಅಂತಃಕರಣ ಕಟ್ಟೆಹೊಡೆಯುತ್ತೆ. ಪಟಾಕಿ ಸಿಡಿಸಿದ ಮಹಿಳೆ ಪ್ರಸಂಗ ಬಾಳ ಮುಖ್ಯವಾದ ಘಟ್ಟ. ಆ ಊರಿನ ಫ್ಯೂಡಲ್ ಗಳ ಅಟ್ಟಹಾಸ, ಅಹಮ್ಮಿಕೆಯನ್ನು ಸುಡುವ ರೂಪಕವಾಗಿ ಸಿಡಿಮದ್ದು ನಮ್ಮ ಕಣ್ಣಮುಂದೆ ಸಿಡಿಯುತ್ತದೆ.
ಹೀಗೆ ತಿಮ್ಮಣ್ಣನವರು ನಮ್ಮ ಮೈಮನಗಳ ತುಂಬೆಲ್ಲಾ ಆವರಿಸಿಕೊಳ್ಳುತ್ತಾರೆ. ಈ ಕೃತಿಯಲ್ಲಿ ನಾನು ನೋಟ್ ಮಾಡುವಂತ ಮಿತಿಗಳಿಲ್ಲವಾದರೂ ತಿಮ್ಮಣ್ಣನ ಬೆನ್ನಹಿಂದೆ ಇದ್ದ ಅವರ ಮಡದಿ ಸಾವಿತ್ರಮ್ಮ ಸಂಸಾರವನನ್ನು ಕಟ್ಟಿಕೊಂಡು ಮೂರು ಮಕ್ಕಳನ್ನು ಬೆಳೆಸಿ ವಿದ್ಯಾವಂತರನ್ನಾಗಿ ಮಾಡಿದ್ದು ತಿಮ್ಮಣ್ಣನ ಹೋರಾಟದಷ್ಟೆ ಮುಖ್ಯ ಅಂತ ಭಾವಿಸಿದ್ದೇನೆ.
ಗೆಳಯ ಗುರುಪ್ರಸಾದ್ ಕಂಟಲಗೆರೆಯವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕುಂದೂರು ತಿಮ್ಮಯ್ಯನವರು ಈಗಾಗಲೆ ಕನ್ನಡದ ಪ್ರಜ್ಞೆಯ ಲೋಕವನ್ನು ತಲುಪಿದ್ದಾರೆ. ಇಲ್ಲಿನ ಕತೆಗಳನ್ನು ಸೋಸಿಕೊಂಡರೆ ಖಂಡಿತ ಇದು ಒಂದು ಒಳ್ಳೆಯ ಸಿನಿಮಾನೋ ಅಥವಾ ನಾಟಕವೋ ಆಗುವ ಸಾದ್ಯತೆಗಳಿವೆ. ಕಾಲದ ಚರಿತ್ರೆಯಲ್ಲಿ ಮರೆವಿನಲ್ಲಿ ಅಜ್ಞಾತವಾಗಿ ಕಣ್ಮರೆಯಾಗಬಹುದಾದ ಅಸಲಿ ಒರ್ಜಿನಲ್ ದಲಿತಪ್ರಜ್ಞೆಯನ್ನು ಎರಡು ವರ್ಷಗಳ ಕಾಲ ತನ್ಮಯದಿಂದ ಕಾದು ಹೆಕ್ಕಿ ಸೋಸಿ ಅಕ್ಷರಗಳಲ್ಲಿ ಮೂಡಿಸಿ ಮುಂದಿನ ತಲೆಮಾರಿನ ಪ್ರಜ್ಞೆಯ ಲೋಕಕ್ಕೆ ದಾಟಿಸಲು ಕಂಕಣಕಟ್ಟಿ ಕೂತ ಗೆಳಯ ಗುರುಪ್ರಸಾದ್ ಕಂಟಲಗೆರೆಗೆ ನನ್ನ ಪ್ರೀತಿಯ ಅಭಿನಂದನೆಗಳು.
ಪ್ರತಿಯೊಂದು ಮನೆಮನೆಯಲ್ಲಿರಬೇಕಾದ ಪುಸ್ತಕವಿದು. ಹಾಗೇ ಇಂದಿನ ನಕಲಿ ದಲಿತ ಪುಡಿ ನಾಯಕರುಗಳಿಗೆ ತೆರೆದ ಪಠ್ಯದಂತಿದೆ ಈ ಆತ್ಮಕಥನ. ನಮ್ಮಂಥ ಯುವಕರನ್ನು ಸದಾ ಎಚ್ಚರದಲ್ಲಿಟ್ಟು ಕಾಯ್ವ ಹೊತ್ತಿಗೆ ಇದು.
– ಗಂಗಪ್ಪ ತಳವಾರ್, ಕವಿ




