ಬರಗೂರು ರಾಮಚಂದ್ರಪ್ಪ (1947) ಅವರ ಆಯ್ದ ಅನುಭವಗಳ ಕಥನ ‘ಕಾಗೆ ಕಾರುಣ್ಯದ ಕಣ್ಣು’ , ಪುರುಷೋತ್ತಮ ಬಿಳಿಮಲೆ(1955) ಅವರ ಚದುರಿಬಿದ್ದ ಆತ್ಮದ ತುಣುಕುಗಳ ‘ಕಾಗೆ ಮುಟ್ಟಿದ ನೀರು’, ರಹಮತ್ ತರೀಕೆರೆ (1959) ಅವರ ಬಾಳ ಚಿತ್ರಗಳ ‘ಕುಲುಮೆ’ ಬದುಕಿನ ಕಥನಗಳು ಚೂರು ಹೆಚ್ಚುಕಡಿಮೆ ಒಂದೇ ಕಾಲದಲ್ಲಿ ಪ್ರಕಟವಾಗಿವೆ. ವಯೋಮಾನದಲ್ಲಿ ಚೂರು ವ್ಯತ್ಯಾಸವಿದೆ. ಬರಗೂರರು ಇವರಿಬ್ಬರಿಗಿಂತಲೂ ಹಿರಿಯರು.
ಈ ಮೂವರು ಹಿರಿಯರಿಗೆ ಕೆಲವು ಸಾಮ್ಯಗಳಿವೆ. ಮೂವರೂ ದಲಿತ-ಬಂಡಾಯ ಚಳವಳಿಗಳ ಸಹಭಾಗಿಗಳೂ ಚಳವಳಿಯ ಏರುಮುಖ-ಇಳಿಮುಖವನ್ನು ಕಂಡವರು. ಮೂವರೂ ಸಂಸ್ಕೃತಿ ಚಿಂತಕರು. ಮೂವರೂ ಅಂಚಿನ ಸಮುದಾಯಗಳ ಅಧ್ಯಯನದ ಕಡೆ ಆಸಕ್ತಿ ತಳೆದವರು. ಮೂವರೂ ಪಬ್ಲಿಕ್ ಇಂಟಲೆಕ್ಚ್ವಲ್ಸ್, ಮೂವರೂ ಜೀವಪರ ಸೌಹಾರ್ದ ಕರ್ನಾಟಕಕ್ಕಾಗಿ ದುಡಿದವರು, ಮೂವರೂ ಅಕಾಡೆಮಿಕ್ ವಾತಾವರಣದಿಂದ ಸಾಮಾಜಿಕ ಚಳವಳಿಗಳತ್ತ ಮುಖ ಮಾಡಿದವರು.
ಈ ಮೂವರು ಹಿರಿಯರು ಬದುಕನ್ನು ಗ್ರಹಿಸಿದ ಬಗೆ, ಹೆಣ್ಣನ್ನು ನಡೆಸಿಕೊಂಡ ಬಗೆ, ಚಳವಳಿಯನ್ನು ಗ್ರಹಿಸಿದ ಬಗೆ, ಕುಟುಂಬವನ್ನು ಕಾಪಿಟ್ಟ ಬಗೆ, ದಲಿತ ಸಮುದಾಯಗಳನ್ನು ಕಂಡ ಬಗೆ, ಸಮಕಾಲೀನತೆಗೆ ಸ್ಪಂದಿಸಿದ ಬಗೆ, ಕಾಕತಾಳೀಯವಾಗಿ ಈ ಮೂರು ಆತ್ಮಕಥನಗಳು ‘ಕ’ ಕಾರದಿಂದ ಆರಂಭವಾಗಿವೆ. ಇದರ ಮುಂದುವರಿಕೆಯಾಗಿ ಈ ಮೂವರ ಬದುಕಿನ ಕಥನಗಳಲ್ಲಿ ಕಂಡುಬರುವ ‘ಕರ್ನಾಟಕದ ಕಥೆ’ ಎಲ್ಲವನ್ನೂ ತೌಲನಿಕವಾಗಿ ಅಧ್ಯಯನ ಮಾಡಬೇಕಿದೆ.
ಒಬ್ಬರದು ಬರಗೂರೆಂಬ ಪುಟ್ಟ ಗ್ರಾಮದಿಂದ ಬೆಂಗಳೂರಿನತ್ತ ಪಯಣ, ಮತ್ತೊಬ್ಬರದು ಬಿಳಿಮಲೆಯಿಂದ ದೆಹಲಿಯ ಕಡೆ ಪಯಣ, ಮಗದೊಬ್ಬರದು ಸಮತಳ-ತರೀಕೆರೆಯಿಂದ ಹಂಪಿಯ ಕಡೆಗಿನ ಈ ಪಯಣದ ಜಿಯಾಗ್ರಫಿಕಲ್ ವಿಶ್ಲೇಷಣೆ ಮಾಡಬೇಕಿದೆ. ಮೂವರೂ ಕರ್ನಾಟಕದ ಮೂರು ಭಾಗಗಳ ಪ್ರತಿನಿಧಿಗಳು.
ಇದು ಯಾರೋ ಒಬ್ಬರು ಮಾಡದೆ ಬೇರೆ ಬೇರೆ ಹಿನ್ನೆಲೆಯ ಯುವ ತಲೆಮಾರು ಈ ಮೂರೂ ಆತ್ಮಕಥನಗಳನ್ನು ಚರ್ಚೆಗೆ-ಸಂವಾದಕ್ಕೆ ಒಡ್ಡಬೇಕಿದೆ. ಪರೀಕ್ಷೆ ಮಾಡಬೇಕಿದೆ. ಮಹಿಳೆಯರು ಈ ಮೂರು ಬಾಳ ಕಥನಗಳನ್ನು ಹೆಣ್ಣಿನ ಕಣ್ಣೋಟದಲ್ಲಿ ವಿಶ್ಲೇಷಣೆ ಮಾಡಬೇಕಿದೆ. ತಕ್ಷಣಕ್ಕೆ ಹೊಳೆದ ಈ ಸಂಗತಿಯನ್ನು ನಿಮ್ಮ ಮುಂದಿಟ್ಟಿರುವೆ. ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.
– ಅರುಣ್ ಜೋಳದಕೂಡ್ಲಿಗಿ, ಜಾನಪದ ವಿದ್ವಾಂಸರು




