ಜಗತ್ತಿನಲ್ಲಿ ಹೆಣ್ಣಿಗಾಗಿ, ಅಧಿಕಾರಕ್ಕಾಗಿ ಭೂಮಿಗಾಗಿ ಯುದ್ಧಗಳು ನಡೆದಿವೆ. ಈ ಯುದ್ಧಗಳಲ್ಲಿ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದಾರೆ. ನಮ್ಮ ದೇಶದಲ್ಲಿ ಜಾತಿಯ ಹೆಸರಿನಲ್ಲಿ, ಅದರಲ್ಲು ಅಮಾಯಕ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದನ್ನು ನಾವು ನಿತ್ಯ ಕಾಣುತ್ತಿದ್ದೇವೆ. ಈ ಜಾತಿ ಯುದ್ಧದಲ್ಲಿ ದಿನವೂ ಪ್ರಾಣ ಕಳೆದುಕೊಳ್ಳುತ್ತಿರುವುದು ದಲಿತ ಬಂಧುಗಳು ಮಾತ್ರ. ಯುದ್ಧದ ಕಿಚ್ಚು ಹಚ್ಚುವ ಮೇಲ್ಜಾತಿಯ ಜನ ಪ್ರಾಣ ಕಳೆದುಕೊಂಡ ಒಂದು ಉದಾಹರಣೆಯು ನಮಗೆ ಸಿಗುವುದಿಲ್ಲ.
ತಮ್ಮ ಮೇಲೆ ನಡೆಯುವ ಹಲ್ಲೆ, ಅತ್ಯಾಚಾರ, ಅಮಾನವೀಯ ಹಿಂಸೆ, ಉಪವಾಸ, ಕಗ್ಗೊಲೆಗಳ ವಿರುದ್ಧ ಈ ದೇಶದ ದಲಿತರು ಧ್ವನಿಯೆತ್ತಲು ಸಾಧ್ಯವಾಗಿಲ್ಲ. ಮೇಲ್ಜಾತಿಯ ರಾಕ್ಷಸರ ವಿರುದ್ಧ ಧ್ವನಿಯನ್ನೇ ಎತ್ತಲಾರದ ಅವರು, ಕೈ ಎತ್ತಲು ಸಾಧ್ಯವೇ?
ಬುದ್ಧನ ಕಾರುಣ್ಯ ಅವರ ಎದೆಯ ತುಂಬಾ ತುಂಬಿಕೊಂಡಿದೆ. ತಮ್ಮ ಮೇಲೆ ಎಷ್ಟೇ ಅನ್ಯಾಯ ಅತ್ಯಾಚಾರಗಳು ನಡೆದಾಗಲೂ ಅವರು ಅದನ್ನು ಸಹಿಸಿಕೊಂಡು ಮೌನವಾಗಿ ನೋವು ತಿನ್ನುತ್ತಿದ್ದಾರೆ. ಇತರರ ಮೇಲೆ ಅವರು ಎಂದಿಗೂ ಪ್ರತಿ ದಾಳಿ ಮಾಡಲಿಲ್ಲ. ಸೇಡು ತೀರಿಸಿಕೊಳ್ಳಲಿಲ್ಲ. ವೈರ ಸಾಧಿಸಲಿಲ್ಲ. ಮೇಲ್ಜಾತಿಯ ನಾವೆಲ್ಲರೂ ನಿಜಕ್ಕೂ ಮನುಷ್ಯರಾಗಿದ್ದರೆ, ನಮ್ಮ ಪೂರ್ವಿಕರ ಕಾಲದಿಂದಲೂ ನಡೆದುಕೊಂಡು ಬಂದಿರುವ ದುಷ್ಟತನಕ್ಕೆ ನಮಗೆ ನಾವೇ ಪಶ್ಚಾತ್ತಾಪ ಹಾಗೂ ನಾಚಿಕೆ ಪಡಬೇಕು, ದಲಿತರ ಕ್ಷಮೆ ಕೇಳಬೇಕು.
ಇಂತಹ ಒಂದು ಪಾಪಪ್ರಜ್ಞೆಯನ್ನು ಓದುಗನಲ್ಲಿ ಉಂಟು ಮಾಡುವ ಮಹತ್ವದ ಕೃತಿ ಅಂಗುಲಿಮಾಲ. ನಮ್ಮ ನಾಡಿನ ಮಹತ್ವದ ದಲಿತ ಹೋರಾಟಗಾರ, ಸಂಘಟಕ ಕುಂದೂರು ತಿಮ್ಮಯ್ಯನವರ ಆತ್ಮಕಥನವನ್ನು ಕವಿ, ಕಥೆಗಾರ ಗುರುಪ್ರಸಾದ್ ಕಂಟಲಗೆರೆಯವರು ಬಹಳ ಸೊಗಸಾಗಿ ನಿರೂಪಿಸಿದ್ದಾರೆ. ಬೆಂಗಳೂರಿನ ಶ್ರೀರಾಮಪುರದ ರೌಡಿಗಳ ಅಡ್ಡೆಯಲ್ಲಿ ಕಳೆದು ಹೋಗಬೇಕಾಗಿದ್ದ ಕುಂದೂರು ತಿಮ್ಮಯ್ಯ ತನ್ನ ಜನಾಂಗದ ಹಿತರಕ್ಷಣೆಗಾಗಿ ಕಟ್ಟಿದ ಬಹುದೊಡ್ಡ ಹೋರಾಟಗಳನ್ನು ಗುರುಪ್ರಸಾದ್ ಇಲ್ಲಿ ಅದ್ಭುತವಾಗಿ ದಾಖಲಿಸಿದ್ದಾರೆ.
ನೂರು ವರ್ಷಗಳ ಹಿಂದೆ ಬಾಬಾ ಸಾಹೇಬರು ತನ್ನ ಸಂಕಟದ ಬದುಕನ್ನು ಅಕ್ಷರಗಳ ಮೂಲಕ ಅನಾವರಣ ಮಾಡದಿದ್ದರೆ ನಮಗೆ ಈ ದೇಶದ ದಲಿತರ ನೋವು ಅರ್ಥವೇ ಆಗುತ್ತಿರಲಿಲ್ಲವೇನೋ. ಬಾಬಾ ಸಾಹೇಬರಿಗಿಂತ ಹಿಂದೆ ಅವರ ಪೂರ್ವಿಕರು ಅನುಭವಿಸಿದ ಘನಘೋರ ಯಾತನೆಯನ್ನು ಯಾರೂ ಕಟ್ಟಿಕೊಡಲಿಲ್ಲ. ಈ ದೇಶದ ಪ್ರತಿಯೊಬ್ಬ ದಲಿತನ ಬದುಕಿನಲ್ಲೂ ಇರಬಹುದಾದ ಸಂಕಟಗಳನ್ನು ಅವರು ಅಕ್ಷರ ರೂಪದಲ್ಲಿ ಬರೆಯದ ಹಾಗೆ ವಿದ್ಯೆಯನ್ನೇ ನಿರಾಕರಿಸಲಾಗಿತ್ತು. ಕುಂದೂರು ತಿಮ್ಮಯ್ಯ ಕೂಡ ಬರೆಯುವ ಜಾಯಮಾನದವರಲ್ಲ. ಅವರಿಗೆ ವೈಯಕ್ತಿಕ ಬದುಕು ಎಂಬುದೇ ಇಲ್ಲ. ಅವರ ಬಾಯಲ್ಲಿ ಬರುವುದೆಲ್ಲ ಸಂಘಟನೆಯ ಹೋರಾಟದ ಬದುಕಿನ ಚಿತ್ರಗಳು.
60-70ರ ದಶಕದಲ್ಲಿ ಬಿ.ಕೃಷ್ಣಪ್ಪನವರ ಪರಿಶ್ರಮದಿಂದ ದಲಿತ ಸಂಘರ್ಷ ಸಮಿತಿ ಹುಟ್ಟಿಕೊಳ್ಳುತ್ತದೆ. ಒಮ್ಮೆ ಭದ್ರಾವತಿಯಲ್ಲಿ ಕಾರ್ಯಕರ್ತರಿಗಾಗಿ ಒಂದು ಶಿಬಿರವನ್ನು ಏರ್ಪಾಟು ಮಾಡುತ್ತಾರೆ. ಕವಿ ಕೆ.ಬಿ.ಸಿದ್ದಯ್ಯ ಅವರೊಂದಿಗೆ ಭದ್ರಾವತಿಯ ಆ ಶಿಬಿರಕ್ಕೆ ಹೋದ ತಿಮ್ಮಯ್ಯನವರ ಆಲೋಚನೆ ಹಾಗೂ ಬದುಕಿನ ಕ್ರಮವೇ ಬದಲಾಗಿ ಹೋಗುತ್ತದೆ. ಅಲ್ಲಿಂದ ಹಿಂದಿರುಗಿದ ಮೇಲೆ ತಮ್ಮ ಊರಿನಲ್ಲಿ ದಲಿತರ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆ ಅವರಲ್ಲಿ ಆತಂಕ ಸೃಷ್ಟಿಸುತ್ತದೆ. ಕುಡಿಯುವ ನೀರಿಗಾಗಿ ಆ ಜನ ಬಹುದೂರ ಹೋಗಬೇಕಾಗಿರುತ್ತದೆ. ಶಿಬಿರದಲ್ಲಿ ಬಾಬಾಸಾಹೇಬರು ಚೌಡಾರ್ ಕೆರೆಯಲ್ಲಿ ನಡೆಸಿದ ನೀರು ಮುಟ್ಟುವ ಸತ್ಯಾಗ್ರಹ ತಿಮ್ಮಯ್ಯನವರ ಮನಸ್ಸಿನಲ್ಲಿ ಸ್ಪೂರ್ತಿಯಾಗಿ ನಿಲ್ಲುತ್ತದೆ. ಆ ಕೂಡಲೇ ಅವರು ತಮ್ಮ ಊರಿನ ದಲಿತ ತರುಣರನ್ನು ಸಂಘಟಿಸಿ ನೀರು ಮುಟ್ಟುವ ಚಳುವಳಿಯನ್ನು ರೂಪಿಸುತ್ತಾರೆ. ದಲಿತರಿಗಾಗಿಯೇ ತಮ್ಮ ಕೇರಿಯಲ್ಲಿ ಮಾದಿಗರ ಗಣೇಶ ಉತ್ಸವ ಮಾಡುವ ಮೂಲಕ ಆ ಗಣೇಶನನ್ನು ಮೇಲ್ಜಾತಿಯವರು ಬಳಸುತ್ತಿದ್ದ ಕಟ್ಟೆಯಲ್ಲಿ ಮುಳುಗಿಸುತ್ತಾರೆ. ಹೀಗೆ ಪ್ರಾರಂಭವಾದ ಅವರ ಹೋರಾಟ ನಿರಂತರವಾಗಿ ಮುನ್ನಡೆಯುತ್ತದೆ. ಅವುಗಳಲ್ಲಿ ಹಲವು ಹೋರಾಟಗಳು ಓದುಗರ ಅಂತರಂಗಕ್ಕೆ ಹಾಗೂ ಆತ್ಮಸಾಕ್ಷಿಗೆ ಪ್ರಶ್ನೆಗಳನ್ನೆಸೆಯುತ್ತವೆ.
ಕೆಬಿ ಸಿದ್ದಯ್ಯನವರ ವಿವಾಹ ಪ್ರಸಂಗವಂತು ಅತ್ಯಂತ ರೋಚಕವಾಗಿದೆ. ಹೊರಗಿನವರ ಕಣ್ಣಿಗೆ ದಲಿತರ ಎರಡು ಪಂಗಡಗಳಾದ ಹೊಲೆಯ ಮತ್ತು ಮಾದಿಗ ಒಂದೇ ಆಗಿರುತ್ತವೆ. ಈ ಎರಡು ಪಂಗಡದ ಜನರನ್ನು ಹೊರಗಿನವರು ಅಸ್ಪೃಶ್ಯರೆಂದೇ ದೂರ ಇಟ್ಟಿದ್ದಾರೆ. ಇಬ್ಬರ ಸಮಸ್ಯೆಯೂ ಒಂದೇ ಮಾದರಿಯಲ್ಲಿದೆ. ಇಬ್ಬರೂ ಒಂದಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆಯೂ ಇದೆ. ಹೆಣ್ಣು ಕೊಟ್ಟು ತರುವ ವಿಚಾರದಲ್ಲಿ ಹೊಂದಾಣಿಕೆ ಈ ಎರಡು ಜಾತಿಯಲ್ಲಿ ಇಲ್ಲದಿರುವುದು ವಿಪರ್ಯಾಸ. ಗಂಗರಾಜಮ್ಮ ಹೊಲೆಯ ಜನಾಂಗದ ಹೆಣ್ಣುಮಗಳು. ಸಿದ್ದಯ್ಯ ಮಾದಿಗರ ಸಂಕುಲಕ್ಕೆ ಸೇರಿದವರು. ವಿದ್ಯಾವಂತರಾದ ಇವರಿಬ್ಬರೂ ಪರಸ್ಪರ ಒಪ್ಪಿ ಮದುವೆಯಾಗಲು ನಿರ್ಧರಿಸುತ್ತಾರೆ. ಈ ಮದುವೆಯನ್ನು ಕುಂದೂರಿನಲ್ಲಿ ನಡೆಸಬೇಕಾದ ಜವಾಬ್ದಾರಿ ತಿಮ್ಮಯ್ಯನವರ ಹೆಗಲಿಗೇರುತ್ತದೆ. ದಲಿತ ಸಂಘರ್ಷ ಸಮಿತಿಯ ಸಾವಿರಾರು ಕಾರ್ಯಕರ್ತರು, ನಾಯಕರು ಬಿ. ಕೃಷ್ಣಪ್ಪನವರ ನೇತೃತ್ವದಲ್ಲಿ ಕುಂದೂರಿಗೆ ಬರುತ್ತಾರೆ. ಏನಾದರೂ ಮಾಡಿ ಈ ವಿವಾಹವನ್ನು ತಡೆಯಬೇಕೆಂದು ಗಂಗರಾಜಮ್ಮನ ಕುಟುಂಬದವರು ಅಲ್ಲಿಗೆ ಬಂದು ನಾನಾ ರೀತಿಯ ತೊಂದರೆ ಕೊಡಲು ಆರಂಭಿಸುತ್ತಾರೆ. ಅವರೊಂದಿಗೆ ಬಿ. ಕೃಷ್ಣಪ್ಪನವರು ನಡೆಸುವ ವಾಗ್ವಾದ ಒಂದು ನಾಟಕದ ಜೀವಂತ ಸಂಭಾಷಣೆಯ ಹಾಗೆ ನನಗೆ ಕಾಣಿಸುತ್ತದೆ. ನಂತರ ಸಿದ್ದಯ್ಯ ತಾನು ಹೆಣ್ಣಿಗೆ ತಾಳಿ ಕಟ್ಟುವುದಿಲ್ಲ ಎಂದು ಹಠ ಹಿಡಿಯುತ್ತಾರೆ. ಆದರೆ ಗಂಗರಾಜಮ್ಮ ತನಗೆ ತಾಳಿ ಕಟ್ಟಲೇಬೇಕೆಂದು ಒತ್ತಾಯಿಸುತ್ತಾರೆ. ಇವೆಲ್ಲವೂ ಅತ್ಯಂತ ಕುತೂಹಲಕರವಾಗಿ ನಿರೂಪಿಸಲ್ಪಟ್ಟಿವೆ.
ಒಡೆದ ಬಾಡಿನ ಮಡಿಕೆ ಪ್ರಸಂಗವಂತು ಏಕಕಾಲದಲ್ಲಿ ಓದುಗರಿಗೆ ಸಂಕಟವನ್ನು ಕುತೂಹಲವನ್ನು ಉಂಟುಮಾಡುತ್ತದೆ. ಇಂತದೇ ಪ್ರಸಂಗ ನಮ್ಮ ಅಕ್ಕನ ಊರು ಕಣಕುಪ್ಪೆಯಲ್ಲೂ ಒಮ್ಮೆ ನಡೆದಿತ್ತು. ಮುನಿಯಪ್ಪನನ್ನು ಪೂಜೆ ಮಾಡಲು ನಮ್ಮ ಜನ ಒಂದು ಹೊಲದ ಮರದ ಕೆಳಗೆ ಸೇರಿಕೊಂಡರು. ಮರಿ ಕಡಿದು, ಮಸಾಲೆ ಅರೆದು, ದೊಡ್ಡ ಮಣ್ಣಿನ ಮಡಕೆಯಲ್ಲಿ ಮಾಂಸದ ಸಾರನ್ನು ಬೇಯಿಸುತ್ತಿದ್ದರು. ನಾವೆಲ್ಲ ಹಲಸಿನ ಎಲೆಗಳನ್ನು ಹುಡುಕಿ, ಅಂಚಿಕಡ್ಡಿ ಚುಚ್ಚಿ, ದೊನ್ನೆಗಳನ್ನು ಮಾಡಿಕೊಂಡು ಊಟಕ್ಕಾಗಿ ಕಾಯುತ್ತಿದ್ದೆವು. ಇದ್ದಕ್ಕಿಂತಂತೆ ಒಲೆಯ ಮೇಲಿದ್ದ ಆ ದೊಡ್ಡ ಮಡಿಕೆ ಒಡೆದು ಹೋಗಿ ಮಾಂಸದ ಸಾರೆಲ್ಲ ಒಲೆಯ ಬೆಂಕಿಗೆ ಬಿದ್ದಿತು. ಅಲ್ಲಿದ್ದ ನಾವೆಲ್ಲರೂ ಹೊಟ್ಟೆ ಉರಿದುಕೊಂಡು ಇದ್ದ ಮಾಂಸದ ತುಂಡುಗಳನ್ನು ಆದು, ಮಾಂಸದ ತುಂಡುಗಳಿಗೆ ಮೆತ್ತಿಕೊಂಡಿದ್ದ ಬೂದಿಯನ್ನು ತೊಳೆದು, ಮತ್ತೆ ಬೇಯಿಸಿ ತಿಂದೆವು. ಕುಂದೂರಿನಲ್ಲಿ ಬಾಡಿನ ಮಡಕೆ ಒಡೆದ ಈ ಪ್ರಸಂಗದಲ್ಲಿ ಬಡಜನರ ಹಸಿವಿನ ಜಗತ್ತು ಅನಾವರಣಗೊಳ್ಳುತ್ತದೆ.
ಈ ಪುಸ್ತಕದಲ್ಲಿ ‘ಗಂಗಾಧರಗೌಡನ ಮನಃಪರಿವರ್ತನೆ’ ಎನ್ನುವ ಒಂದು ಅಧ್ಯಾಯ ಇದೆ. ವಿದ್ಯಾವಂತನಾದ ಈ ಗಂಗಾಧರಗೌಡ ದಂಡಿನಶಿವರದ ಪಟೇಲರ ವಂಶಕ್ಕೆ ಸೇರಿದ ಶ್ರೀಮಂತ. ಈತನ ತೋಟಕ್ಕೆ ಹುಚ್ಚಯ್ಯ ಎನ್ನುವ ಬಡವ ಆಡು ಕುರಿ ಬಿಟ್ಟು ಮೇಯಿಸಿದ್ದಾನೆಂದು ಅವನನ್ನು ಅಮಾನವೀಯವಾಗಿ ಹೊಡೆಯಲಾಗುತ್ತದೆ. ಈ ಗೌಡನ ವಿರುದ್ಧ ಯಾರೂ ಪೊಲೀಸರಿಗೆ ದೂರು ನೀಡಲು ಸಾಧ್ಯವಾಗುತ್ತಿರಲಿಲ್ಲ. ದಲಿತ ಸಂಘರ್ಷ ಸಮಿತಿಯ ತಾಲೂಕು ಘಟಕಕ್ಕೆ ಈ ವಿಷಯ ಮುಟ್ಟುತ್ತದೆ. ಅವರು ಬೃಹತ್ ಪ್ರತಿಭಟನೆ ಒಂದನ್ನು ಈ ಗೌಡನ ವಿರುದ್ಧ ರೂಪಿಸುತ್ತಾರೆ. ಅದಕ್ಕೆ ತುಮಕೂರಿನಿಂದ ಕೆ.ಬಿ. ಸಿದ್ದಯ್ಯ, ದೊರೆರಾಜು ಅವರ ನೇತೃತ್ವದಲ್ಲಿ ನೂರಾರು ಜನ ಹೋರಾಟಗಾರರು ಬರುತ್ತಾರೆ. ಅತ್ತ ತಿಪಟೂರು ಕಡೆಯಿಂದ ತಿಮ್ಮಯ್ಯನವರ ನೇತೃತ್ವದಲ್ಲಿ ನೂರಾರು ಜನ ಬರುತ್ತಾರೆ. ಈ ಹೋರಾಟವನ್ನು ಬೆಂಬಲಿಸಿ, ರೈತ ಸಂಘದ ಎನ್.ಜಿ. ರಾಮಚಂದ್ರ ಮುಂತಾದವರು ಹೋಗುತ್ತಾರೆ. ಕೆ.ಬಿ. ಸಿದ್ದಯ್ಯನವರ ಒತ್ತಾಯ ಹಾಗೂ ಪೊಲೀಸರ ಎಚ್ಚರಿಕೆ ಕಾರಣದಿಂದಾಗಿ ಗಂಗಾಧರಗೌಡ ತನ್ನ ತಪ್ಪನ್ನು ಒಪ್ಪಿಕೊಂಡು ಸಭೆಗೆ ಬಂದು ಕ್ಷಮೆ ಕೇಳುತ್ತಾನೆ. “ನನ್ನನ್ನು ಕ್ಷಮಿಸಿ, ನಾನು ಈ ಕೆಲಸ ಮಾಡಬಾರದಾಗಿತ್ತು. ನಾನು ನಿಮ್ಮಂತೆಯೇ ಪ್ರಜ್ಞಾವಂತನಾಗಿದ್ದುಕೊಂಡು ಈ ಕೆಲಸ ಮಾಡಿಬಿಟ್ಟೆ. ನನ್ನ ಗ್ರಾಚಾರ ಚೆನ್ನಾಗಿರಲಿಲ್ಲ. ನನ್ನ ತಂದೆ ಸತ್ತು ಮೂರು ದಿನ ಆಗಿತ್ತು. ಗುಡ್ಡೆ ಮೇಲಿನ ಹಣ್ಣು ಹಂಪಲು ಅಂಗೆ ಇದ್ದು. ಹುಚ್ಚಯ್ಯನ ಮೇಕೆಗಳು ಬಂದು ಕಿತ್ಕೊಂಡು ಮೇಯ್ತಾ ಇದ್ದು. ಆವೇಶದಲ್ಲಿ ನಾನು ದುಡಿಕಿ ಬಿಟ್ಟೆ. ಅನಿವಾರ್ಯವಾಗಿ ಹಿಂಗಾಯ್ತು. ನಾನು ಯಾವತ್ತೂ ಅಷ್ಟೇ. ದಲಿತರ ಪರವಾಗಿ ಇದ್ದೀನಿ. ಇದೊಂದು ಬಾರಿ ಅವಕಾಶ ಕೊಡಿ” ಎಂದು ಕೇಳಿಕೊಳ್ಳುತ್ತಾನೆ. ಈ ಮೂಲಕ ಆ ಗೌಡನಲ್ಲಿ ಒಂದು ಅಭೂತಪೂರ್ವ ಬದಲಾವಣೆ ಆಗಿರುತ್ತದೆ. ಇಲ್ಲಿ ಕೇವಲ ಬುದ್ಧನ ಕಾಲದ ಅಂಗುಲಿಮಾಲ ಮಾತ್ರ ಇಲ್ಲ. ತಿಮ್ಮಯ್ಯ ಕೂಡ ಒಬ್ಬ ಅಂಗುಲಿಮಾಲ. ಗಂಗಾಧರಗೌಡ ಮತ್ತೊಬ್ಬ ಅಂಗುಲಿಮಾಲ. ಬುದ್ಧ ಗುರುವಿನ ಕಾರುಣ್ಯದಿಂದ ಕ್ರೌರ್ಯವನ್ನು ಕಿತ್ತೆಸೆದು, ಮಾನವೀಯ ಅಂತಃಕರಣವನ್ನು ಒಳಗೊಳ್ಳುವುದೇ ಅಂಗುಲಿಮಾಲ ಎನ್ನುವ ರೂಪಕದ ಅರ್ಥ. ಸಜ್ಜನರ ಉದ್ದೇಶ ಇದೆ ಅಲ್ಲವೇ. ದುಷ್ಟರನ್ನು ಬದಲಾಯಿಸಿ ದಾರಿಗೆ ತಮ್ಮ ತಂದುಕೊಳ್ಳುವುದೆ ಅಲ್ಲವೆ?
ನಾನು ಈ ಪುಸ್ತಕವನ್ನು ಓದುವ ಸಂದರ್ಭದಲ್ಲಿ ‘ಗೊಲ್ಲರ ದೊಡ್ಡಯ್ಯನ ಮರ್ಡರ್’ ಎನ್ನುವ ಅಧ್ಯಾಯ ನನ್ನ ಎದೆಯಲ್ಲಿ ಬಹಳ ನೋವನ್ನುಂಟು ಮಾಡಿತು. ಕಣ್ಣಂಚಿನಲ್ಲಿ ನೀರು ತೊಟ್ಟಿಕ್ಕಿತು. ತಿಪಟೂರು ತಾಲೂಕಿನ ಕಟ್ಟಿಗೆನಹಳ್ಳಿ ಗ್ರಾಮದ ಗೋಮಾಳವನ್ನು ಗೊಲ್ಲರು ಮತ್ತು ಮಾದಿಗರು ಗೈಮೆ ಮಾಡಿಕೊಂಡಿರುತ್ತಾರೆ. ಆ ಜಮೀನಿನಲ್ಲೇ ಮೇಲ್ಜಾತಿಯ ಭೂಮಾಲೀಕರು ಸ್ಮಶಾನ ಮಾಡುವ ಸಂಚು ಹೂಡುತ್ತಾರೆ. ಇದನ್ನು ಆ ಊರಿನ ಗೊಲ್ಲ ಜನಾಂಗದ ದೊಡ್ಡಯ್ಯ, ತಿಮ್ಮಯ್ಯನವರ ಗಮನಕ್ಕೆ ತರುತ್ತಾನೆ. ಮಾರನೆಯ ದಿನ ಬಂದು ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಹೇಳುತ್ತಾನೆ. ದುರದೃಷ್ಟಾವಶಾತ್ ಮಾರನೇ ದಿನ ಆತ ಬರುವುದಿಲ್ಲ. ಆತ ಸತ್ತ ಸುದ್ದಿ ತಿಮ್ಮಯ್ಯನವರಿಗೆ ತಲುಪುತ್ತದೆ. ಪೋಸ್ಟ್ ಮಾರ್ಟಂ ಮಾಡಿದ ವೈದ್ಯ ಹಾಗೂ ಪೊಲೀಸ್ ಅಧಿಕಾರಿಗಳು ‘ದೊಡ್ಡಯ್ಯ ಹಾರ್ಟ್ ಅಟ್ಯಾಕ್ ನಿಂದ ಸತ್ತಿದ್ದಾನೆ’ ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಅಲ್ಲಿಗೆ ತಕ್ಷಣ ಧಾವಿಸಿದ ತಿಮ್ಮಯ್ಯ “ಈತ ನೆನ್ನೆ ನನ್ನೊಂದಿಗೆ ಮಾತನಾಡಿದ್ದ. ಇಂದು ಸತ್ತಿದ್ದಾನೆ ಎಂದರೆ, ಇದು ಹಾರ್ಟ್ ಅಟ್ಯಾಕ್ ಅಲ್ಲ, ಕೊಲೆ” ಎಂದು ವಾದಿಸುತ್ತಾರೆ. ದೊಡ್ಡಯ್ಯನ ಶವವನ್ನು ಸಂಪೂರ್ಣ ತೆರೆದು ತೋರಿಸುವ ಪೊಲೀಸ್ ಅಧಿಕಾರಿ “ಈತನ ಶವದಲ್ಲಿ ಒಂದು ಗಾಯ ಆಗಿಲ್ಲ/ ಅದು ಹೇಗೆ ನೀವು ಕೊಲೆ ಎಂದು ಹೇಳುತ್ತೀರಿ” ಎಂದು ವಾದಿಸುತ್ತಾನೆ. ತಿಮ್ಮಯ್ಯನವರಿಗೆ ಗಾಬರಿಯಾಗುತ್ತದೆ ದೊಡ್ಡಯ್ಯನ ಕೊಲೆಗೆ ನ್ಯಾಯ ದೊರಕಿಸಲಾಗುತ್ತಿಲ್ಲವೆಂಬ ಕೊರಗು ಬರುತ್ತದೆ. ದೊಡ್ಡಯ್ಯನ ಶವದ ಎದುರಿಗೆ ಕುಳಿತ ತಿಮ್ಮಯ್ಯ ಶವದ ತಲೆ ಸವರುತ್ತಾ “ನನ್ನನ್ನು ಕ್ಷಮಿಸಿ ಬಿಡು ದೊಡ್ಡಯ್ಯ, ನಿನಗೆ ನ್ಯಾಯ ಕೊಡಿಸಲು ನನಗೆ ಸಾಧ್ಯವಾಗುತ್ತಿಲ್ಲ” ಎಂದು ದುಃಖಪಡುವಾಗ ತಿಮ್ಮಯ್ಯನವರ ಕೈ ತಲೆಯ ಕೆಳಭಾಗವನ್ನು ಸವರುತ್ತದೆ. ಅಲ್ಲಿ ಏನೋ ತಣ್ಣಗೆ ಸಿಕ್ಕಂತಾಗಿ, ರಕ್ತ ಬುಳಬುಳನೆ ಹೊರಬರುತ್ತದೆ. ಆಗ ಅವರಿಗೆ ಖಾತ್ರಿಯಾಗಿ, ದೊಡ್ಡಯ್ಯನ ಕೊಲೆಯಾಗಿದೆ ಯಾರೋ ಹೊಡೆದಿದ್ದಾರೆ ಎಂದು ಪೊಲೀಸರಿಗೆ ಕೂಗಿ ಹೇಳುತ್ತಾರೆ. ಅನ್ಯಾಯವಾಗಿ ದೊಡ್ಡಯ್ಯನ ಮರ್ಡರ್ ಕೇಸನ್ನು ಮುಚ್ಚಿ ಹಾಕಲು ಹೊರಟ ಪೊಲೀಸರಿಗೆ ದಿಗ್ಭ್ರಮೆ ಆಗುತ್ತದೆ.
ವಿಧಾನಪರಿಷತ್ತಿನ ಸದಸ್ಯರಾಗಿದ್ದ ಎಸ್. ಚನ್ನಬಸವಯ್ಯನವರ ಕಾರಣದಿಂದಾಗಿ ನನಗೆ ಅಬಕಾರಿ ಮಂತ್ರಿ ಕೆ.ಬಿ.ಶಾಣಪ್ಪ ಸ್ನೇಹಿತರಾಗಿದ್ದರು. ತಿಮ್ಮಯ್ಯನವರ ಸಂಕಷ್ಟದ ಸಂದರ್ಭದಲ್ಲಿ ಶಾಣಪ್ಪ ಹೇಗೆ ನೆರವಾಗಿದ್ದರು, ಎಂಬುದನ್ನು ಈ ಕೃತಿಯಲ್ಲಿ ಪ್ರಾಮಾಣಿಕವಾಗಿ ಸ್ಮರಿಸಲಾಗಿದೆ.
ನಾವೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಅಂಗುಲಿಮಾಲರೆ. ನಮ್ಮ ಒಳಗಿನ ದುಷ್ಟತನ ಬುದ್ಧ ಕಾರುಣ್ಯದಿಂದ ಬದಲಾಗುತ್ತದೆ ಎಂಬುದನ್ನು ತಿಮ್ಮಯ್ಯನವರ ಬದುಕಿನಿಂದ ತಿಳಿಯಲು ಸಾಧ್ಯವಾಗುತ್ತದೆ.
– ಎಲ್.ಎನ್.ಮುಕುಂದರಾಜ್, ನಿವೃತ್ತ ಪ್ರಾಂಶುಪಾಲರು



