ಅಧಿಕಾರಕ್ಕೆ ಬಂದರೆ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಕೊಡುತ್ತೇವೆ: ಸಿದ್ದರಾಮಯ್ಯ

3 years ago

ವಿಜಯನಗರ: ನಮ್ಮದು ನುಡಿದಂತೆ ನಡೆಯುವ ಪಕ್ಷ. ನಾವು ಚುನಾವಣಾ ಕಾಲದಲ್ಲಿ ನೀಡುವ ಭರವಸೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುವ ಕೆಲಸ ಮಾಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ  ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶವನ್ನು ಉದ್ಘಾಟಿಸಿ ಮಾತಾಡಿದ   ಅವರು, ಪ್ರಜಾಧ್ವನಿ ಯಾತ್ರೆಯ ಮೂಲಕ ನಮ್ಮ ಪಕ್ಷದ ಎಲ್ಲಾ ನಾಯಕರು 22 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಸಮಾವೇಶಗಳಲ್ಲಿ ಭಾಗವಹಿಸಿ, ಜನರ ಧ್ವನಿಯನ್ನು ಆಲಿಸುವ ಕೆಲಸ ಮಾಡಲಿದ್ದೇವೆ. ಈ ಯಾತ್ರೆಯ ಮೂಲಕ ಜನರ ಧ್ವನಿಯನ್ನು ಆಲಿಸಿ ಮುಂದೆ ಅಧಿಕಾರಕ್ಕೆ ಬಂದರೆ ಅದರಂತೆ ನಡೆಯುವ ಕೆಲಸ ಮಾಡುತ್ತೇವೆ ಎಂದರು.

2013ರ ಚುನಾವಣೆಯಲ್ಲಿ ರಾಜ್ಯದ ಜನರಿಗೆ 165 ಭರವಸೆಗಳನ್ನು ನೀಡಿ, 2013ರಿಂದ 2018 ರವರೆಗೆ ನಾವು ಅಧಿಕಾರದಲ್ಲಿದ್ದಾಗ 158 ಭರವಸೆಗಳನ್ನು ಈಡೇರಿಸಿದ್ದೇವೆ. ಬಿಜೆಪಿ ಅವರು ಬೇಕಾದರೆ ನಮ್ಮ ಪ್ರಣಾಳಿಕೆ ಮತ್ತು ಅವುಗಳನ್ನು ಈಡೇರಿಸಿದ ಮಾಹಿತಿಯನ್ನು ನೋಡಬಹುದು ಎಂದರು.

ಬಿಜೆಪಿ ಪಕ್ಷ 2018ರಲ್ಲಿ 600 ಭರವಸೆಗಳನ್ನು ನೀಡಿತ್ತು, ಬಸವರಾಜ ಬೊಮ್ಮಾಯಿ ಅವರು ಈ 600 ಭರವಸೆಗಳಲ್ಲಿ ಎಷ್ಟು ಈಡೇರಿಸಿದ್ದಾರೆ ಎಂಬುದನ್ನು ಹೇಳಬೇಕು. ಈ ಬಗ್ಗೆ ಹಲವು ಬಾರಿ ನಾನು ಚರ್ಚೆಗೆ ಆಹ್ವಾನವನ್ನು ನೀಡಿದ್ದೇನೆ. ಬೊಮ್ಮಾಯಿ ಅವರಿಗೆ ಧಮ್‌, ತಾಕತ್‌ ಇದ್ದರೆ ಒಂದೇ ವೇದಿಕೆ ಮೇಲೆ ಈ ವಿಚಾರವನ್ನು ಚರ್ಚೆ ಮಾಡೋಣ ಬನ್ನಿ ಎಂದು ಸವಾಲೆಸೆದರು.

ನಮ್ಮ ಸರ್ಕಾರದಲ್ಲಿ ಪ್ರಣಾಳಿಕೆ ಹೊರತಾಗಿ 30 ಹೆಚ್ಚುವರಿ ಕಾರ್ಯಕ್ರಮವನ್ನು ಜನರಿಗೆ ಕೊಟ್ಟಿದ್ದೇವೆ. ಬಿಜೆಪಿಗೆ 600ರಲ್ಲಿ 10% ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ಬೊಮ್ಮಾಯಿ ಅವರೇ ಎಷ್ಟು ಸುಳ್ಳು ಹೇಳುತ್ತೀರಿ? ಬಿಜೆಪಿ ಎಂದರೆ ಸುಳ್ಳಿನ ಫ್ಯಾಕ್ಟರಿ ಎಂದರು.

ತುಂಗಭದ್ರಾ ಈ ನಾಡಿನ ಜೀವನಾಡಿ. ತುಂಗಭದ್ರಾ ಅಣೆಕಟ್ಟಿನಲ್ಲಿ 130 ಟಿಎಂಸಿ ನೀರು ಸಂಗ್ರಹವಾಗಬೇಕು. ಆದರೆ ಹೂಳು ತುಂಬಿರುವುದರಿಂದ 37 ಟಿಎಂಸಿ ನೀರಿನ ಶೇಖರಣೆ ಕಡಿಮೆಯಾಗಿದೆ. ಇಷ್ಟರ ಮಟ್ಟಿಗೆ ಜನರಿಗೆ ಅನ್ಯಾಯ ಆಗಿದೆ. ಆಂದ್ರಪ್ರದೇಶಕ್ಕೆ 200 ಟಿಎಂಸಿ ನೀರು ಹರಿದುಹೋಗುತ್ತಿದೆ, ಅದಕ್ಕೆ ಪರ್ಯಾಯ ಅಣೆಕಟ್ಟು ಕಟ್ಟುತ್ತೇವೆ ಎಂದು ಬಿಜೆಪಿ ಭರವಸೆ ನೀಡಿತ್ತು, ಅವರಿಂದ ಕಟ್ಟಲು ಸಾಧ್ಯವಾಗಿದೆಯಾ? ಎಂದು ಪ್ರಶ್ನಿಸಿದರು.

ನಾನು ಇಂದು ಈ ಭಾಗದ ಜನರಿಗೆ ಮಾತು ಕೊಡುತ್ತೇನೆ, ನಾವು ಅಧಿಕಾರಕ್ಕೆ ಬಂದರೆ ಸಮನಾಂತರ ಅಣೆಕಟ್ಟನ್ನು ಕಟ್ಟುತ್ತೇವೆ. ಇದಕ್ಕೆ ಎಷ್ಟು ಹಣ ಬೇಕಾದರೂ ಖರ್ಚಾಗಲಿ ನಾವು ಅದನ್ನು ಒದಗಿಸುತ್ತೇವೆ ಎಂದು ಭರವಸೆ ನೀಡಿದರು.

ಬಿಜೆಪಿಯವರು ತಾವು ಅಧಿಕಾರಕ್ಕೆ ಬಂದರೆ ರಾಜ್ಯದ ನೀರಾವರಿಗೆ 5 ವರ್ಷಗಳಲ್ಲಿ 1 ಲಕ್ಷದ 50 ಸಾವಿರ ಕೋಟಿ ಹಣ ಖರ್ಚು ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಎಷ್ಟು ಖರ್ಚು ಮಾಡಿದ್ದೀರಿ ಬೊಮ್ಮಾಯಿ? ಈ ವರ್ಷದ ಕೊನೆಗೆ ಖರ್ಚಾಗುವುದು 45 ಸಾವಿರ ಕೋಟಿ ಮಾತ್ರ. ಇನ್ನೂ 1 ಲಕ್ಷ ಕೋಟಿ ಹಣ ಖರ್ಚು ಮಾಡಲು ಸಾಧ್ಯವಾಗಿಲ್ಲ. ಪಕ್ಷದ ನಾಯಕರ ಜೊತೆ ಈ ಹಿಂದೆ ಹೊಸಪೇಟೆಯಿಂದ ಕೂಡಲಸಂಗಮದ ವರೆಗೆ ಪಾದಯಾತ್ರೆ ಮಾಡಿ, ನಾವು ಅಧಿಕಾರಕ್ಕೆ ಬಂದರೆ ಪ್ರತೀ ವರ್ಷ ನೀರಾವರಿಗೆ 10,000 ಕೋಟಿ ಖರ್ಚು ಮಾಡುತ್ತೇವೆ ಎಂದು ಘೊಷಣೆ ಮಾಡಿದ್ದೆ. ಇದರಂತೆ ನಾವು 5 ವರ್ಷಗಳಲ್ಲಿ 50,000 ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಿ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದರು.

ನಾವು ಹಿಂದೆಯೂ ನುಡಿದಂತೆ ನಡೆದಿದ್ದೇವೆ. ಮುಂದೆಯೂ ಇದಕ್ಕೆ ಬದ್ಧವಾಗಿರುತ್ತೇವೆ. ಬಿಜಾಪುರ ಸಮಾವೇಶದಲ್ಲಿ ನಾವೊಂದು ಘೋಷಣೆ ಮಾಡಿದ್ದೇವೆ, ಮುಂದಿನ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ 5 ವರ್ಷಗಳಲ್ಲಿ 2 ಲಕ್ಷ ಕೋಟಿ ಹಣವನ್ನು ರಾಜ್ಯದ ನೀರಾವರಿ ಯೋಜನೆಗಳಿಗಾಗಿ ಖರ್ಚು ಮಾಡುತ್ತೇವೆ ಎಂಬ ವಾಗ್ದಾನ ನೀಡಿದ್ದೇವೆ. ಇದರಲ್ಲಿ ತುಂಗಭದ್ರಾ ಸಮನಾಂತರ ಅಣೆಕಟ್ಟು ಕೂಡ ಸೇರಿದೆ ಎಂದರು.

ಈ ಭಾಗದ ರೈತರು ವಾರ್ಷಿಕವಾಗಿ ಸುಮಾರು 7 ರಿಂದ 8 ಲಕ್ಷ ಟನ್‌ ಕಬ್ಬು ಬೆಳೆಯುತ್ತಾರೆ. ಇಲ್ಲಿ ಬೆಳೆದ ಕಬ್ಬನ್ನು ದಾವಣಗೆರೆ, ಹರಪನಹಳ್ಳಿ, ಮುಂಡರಗಿಗೆ ತೆಗೆದುಕೊಂಡು ಹೋಗಬೇಕು. ಇಲ್ಲಿನ ಐ,ಎಸ್‌,ಆರ್‌ ಕಬ್ಬಿನ ಕಾರ್ಖಾನೆ, ಕಂಪ್ಲಿ ಸಕ್ಕರೆ ಕಾರ್ಖಾನೆ ಮುಚ್ಚಿಹೋಗಿದೆ. ಆನಂದ್‌ ಸಿಂಗ್‌ ಅವರಿಂದ ಇವುಗಳ ಬಾಗಿಲು ತೆಗೆಸಲು ಆಯಿತಾ? ಇದರಿಂದ 10,000 ಎತ್ತಿನ ಬಂಡಿ ಇಟ್ಟವರು ನಿರುದ್ಯೋಗಿಗಳಾದರು, 40,000 ರೈತ ಕುಟುಂಬಗಳು ಬೀದಿ ಪಾಲಾದವು. ಹೀಗಾಗಿ ನಾವು ಅಧಿಕಾರಕ್ಕೆ ಬಂದ ತಕ್ಷಣ ಇಲ್ಲಿನ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಿ, ಹತ್ತಿರದಲ್ಲೇ ಕಾರ್ಖಾನೆ ಸಿಗುವಂತ ಕೆಲಸ ಮಾಡುತ್ತೇವೆ ಎಂದರು.

ಸಕ್ಕರೆ ಕಾರ್ಖಾನೆ ಮುಚ್ಚಿಹೋಗಿರುವುದರಿಂದ ಗಾಣಗಳಲ್ಲಿ ಬೆಲ್ಲ ತಯಾರು ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಕೊಂಚ ಸಹಾಯವಾಗುತ್ತಿದೆ. ಆದರೆ ಜಿಲ್ಲಾಡಳಿತದವರು ಬೆಲ್ಲ ತಯಾರಿಸುವ ಗಾಣಗಳನ್ನು ಮುಚ್ಚಿಸಲು ನೋಟಿಸ್‌ ನೀಡುತ್ತಿದ್ದಾರೆ. ಇದಕ್ಕೆ ಆನಂದ್‌ ಸಿಂಗ್‌ ಕಾರಣ. ಈ ಸರ್ಕಾರ ಗಾಣಗಳನ್ನು ಮುಚ್ಚಿಸಲು ಹೊರಟರೆ ನಾವು ರೈತರ ಪರವಾಗಿ ಹೋರಾಟ ಮಾಡುತ್ತೇವೆ ಎಂಬ ಎಚ್ಚರಿಕೆಯನ್ನು ಸರ್ಕಾರ ಮತ್ತು ಡಿಸಿ ಗೆ ಎಚ್ಚರಿಕೆ ನೀಡುತ್ತೇನೆ. ಒಂದು ವೇಳೆ ಮುಚ್ಚಿಸಿದ್ರೆ ಮುಂದಿನ ದಿನಗಳಲ್ಲಿ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದರು.

ಹೊಸಪೇಟೆ ಒಂದು ಐತಿಹಾಸಿಕ ಸ್ಥಳ. ಇಲ್ಲಿನ 25 ವಾರ್ಡ್‌ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಯಾಕ್ರೀ ಆನಂದ್‌ ಸಿಂಗ್ ಈ ಸಮಸ್ಯೆಯನ್ನು ಬಗೆಹರಿಸಿಲ್ಲ? ಮಳೆ ಬಂದರೆ ಇಡೀ ಹೊಸಪೇಟೆ ನೀರಿನಿಂದ ತುಂಬಿ ಹೋಗುತ್ತದೆ. ಸರಿಯಾಗಿ ಚರಂಡಿ ವ್ಯವಸ್ಥೆ ಮಾಡಿಲ್ಲ. ಇಂಥವರು ಮತ್ತೆ ಅಧಿಕಾರಕ್ಕೆ ಬರಬೇಕ? ಎಂದು ಪ್ರಶ್ನಿಸಿದರು.

ನಾನು ಮುಖ್ಯಮಂತ್ರಿಯಾಗಿರುವಾಗ ಎಲ್ಲಾ ಜಾತಿ ಧರ್ಮದ ಬಡವರಿಗೆ ಉಚಿತವಾಗಿ 7 ಕೆ.ಜಿ ಅಕ್ಕಿಯನ್ನು ನೀಡುತ್ತಿದ್ದೆ, ಈಗ 4 ಕೆ.ಜಿ ಗೆ ಕಡಿಮೆ ಮಾಡಿದ್ದಾರೆ. ಇದು ಯಾರಪ್ಪನ ಮನೆ ಹಣ? ಜನರ ದುಡ್ಡಲ್ಲಿ ಜನರಿಗೆ ಅಕ್ಕಿ ಕೊಡಲು ಏನು ರೋಗ ಇವರಿಗೆ. ಇಂಥವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ತಲಾ 5 ವಿಧಾನಸಭಾ ಕ್ಷೇತ್ರಗಳು ಇವೆ. ವಿಜಯನಗರದಲ್ಲಿ 5ಕ್ಕೆ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅನ್ನು ಗೆಲ್ಲಿಸುವ ತೀರ್ಮಾನ ಇಲ್ಲಿನ ಜನ ಮಾಡಬೇಕು ಎಂದರು.

ಸಂವಿಧಾನಕ್ಕೆ ತಿದ್ದುಪಡಿ ತಂದು 371(ಜೆ) ಮಾಡಿದ್ದು ಕಾಂಗ್ರೆಸ್‌ ಸರ್ಕಾರ. ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್‌ ಅವರ ಜೊತೆ ನಾವೆಲ್ಲ ಹೋರಾಟ ಮಾಡಿ ಸೋನಿಯಾ ಗಾಂಧಿ ಮತ್ತು ಮನಮೋಹನ್‌ ಸಿಂಗ್‌ ಅವರನ್ನು ಒಪ್ಪಿಸಿ ಇದನ್ನು ಜಾರಿಗೆ ತಂದವರು ನಾವು. ಹೆಚ್.ಕೆ ಪಾಟೀಲ್‌ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದ್ದೆ, ಈ ಸಮಿತಿ ನೀಡಿದ್ದ ವರದಿಯ ಶಿಫಾರಸನ್ನು ನೂರಕ್ಕೆ ನೂರರಷ್ಟು ಒಪ್ಪಿ ಜಾರಿ ಮಾಡಿದ್ದು ನಾವು ಎಂದರು.

ಹೈದ್ರಾಬಾದ್‌ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದೆ ಬಿಜೆಪಿ ಸಾಧನೆ. 371(ಜೆ) ವಿರೋಧ ಮಾಡಿದ್ದು ಬಿಜೆಪಿಯ ಅಡ್ವಾಣಿ ಅವರು. ಎಸ್,ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿರುವಾಗ ಲಾಲ್‌ ಕೃಷ್ಣ ಅಡ್ವಾಣಿ ಅವರು ಗೃಹ ಸಚಿವರಾಗಿದ್ದ ವೇಳೆ ಕೃಷ್ಣ ಅವರಿಗೆ ಪತ್ರ ಬರೆದು 371(ಜೆ) ಮಾಡಲು ಸಾಧ್ಯವಿಲ್ಲ ಎಂದಿದ್ದರು. ವಾಜಪೇಯಿ ಪ್ರಧಾನಿ ಆಗಿದ್ದಾಗ ಇದನ್ನು ಮಾಡಿಸಲು ಸಾಧ್ಯವಾಗಿಲ್ಲ. ಮನಮೋಹನ್‌ ಸಿಂಗ್‌ ಅವರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಇಂದು ಈ ಭಾಗದ ಮಕ್ಕಳು ಇಂಜಿನಿಯರ್‌, ಲಾಯರ್‌, ಡಾಕ್ಟರ್‌, ಶಿಕ್ಷಕರಾಗಲು 371(ಜೆ) ವಿಶೇಷ ಮೀಸಲು ಸೌಲಭ್ಯ ಕಾರಣ ಎಂದರು.

ನಮ್ಮ ಸರ್ಕಾರದ ಅವಧಿಯಲ್ಲಿ ಈ ಭಾಗದ 36,000 ಹುದ್ದೆಗಳನ್ನು ಭರ್ತಿ ಮಾಡಿದ್ದೆವು. ಆನಂದ್‌ ಸಿಂಗ್‌ ನೀವೆಷ್ಟು ಹುದ್ದೆ ಭರ್ತಿ ಮಾಡಿದ್ದಿಯಪ್ಪ? ಒಂದೇ ಒಂದು ಹುದ್ದೆ ಭರ್ತಿ ಮಾಡಿಲ್ಲ. ನಾವು ಅಧಿಕಾರಕ್ಕೆ ಬಂದರೆ ಹೈದ್ರಾಬಾದ್‌ ಕರ್ನಾಟಕದ ಅಭಿವೃದ್ಧಿಗೆ ಪ್ರತೀ ವರ್ಷ 5000 ಕೋಟಿ ಹಣ ಖರ್ಚು ಮಾಡುತ್ತೇವೆ ಮತ್ತು ಈ ಭಾಗದ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಇದರ ಜೊತೆಗೆ ಈಗ 4 ಕೆ.ಜಿ ಮಾಡಿರುವ ಅಕ್ಕಿಯನ್ನು 10 ಕೆ.ಜಿ ಗೆ ಏರಿಕೆ ಮಾಡುತ್ತೇವೆ. ಈ ನಂಬಿಕೆ ನಿಮಗೆ ಇದೆ ಅಲ್ವಾ? ಎಂದು ನಾಗರಿಕರನ್ನು ಕೇಳಿದರು.

ಈಗಾಗಲೇ ನಮ್ಮ ಪಕ್ಷ ಪ್ರತೀ ಮನೆಗೆ 200 ಯುನಿಟ್‌ ಉಚಿತವಾಗಿ ವಿದ್ಯುತ್‌ ನೀಡುವುದಾಗಿ ಘೊಷಿಸಿದರೆ, ನಿನ್ನೆ ಪ್ರಿಯಾಂಕ ಗಾಂಧಿ ಅವರು ರಾಜ್ಯದ ಪ್ರತೀ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನು ಕೇಳಿದ ಬಸವರಾಜ ಬೊಮ್ಮಾಯಿಗೆ ನಡುಕ ಶುರುವಾಗಿದೆ. ಇಷ್ಟುದಿನ ಮಲಗಿದ್ದ ಸರ್ಕಾರ ಈಗ ಎಚ್ಚರಗೊಂಡು ನಾವು ಮುಂದಿನ ಬಜೆಟ್‌ ನಲ್ಲಿ ಮಹಿಳೆಯರಿಗಾಗಿ ಕಾರ್ಯಕ್ರಮ ನೀಡುತ್ತೇವೆ ಎಂದು ಜಾಹಿರಾತು ನೀಡಲು ನಾಚಿಕೆಯಾಗಲ್ವಾ? 2018ರ ಚುನಾವಣೆ ವೇಳೆ ಮಹಿಳೆಯರಿಗಾಗಿ ಬಿಜೆಪಿ 21 ಭರವಸೆಗಳನ್ನು ನೀಡಿತ್ತು, ಇದರಲ್ಲಿ ಒಂದನ್ನೂ ಈಡೇರಿಸಿಲ್ಲ. ಬಿಜೆಪಿ ಅವರು ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟುಕೊಂಡವರು, ನಾವು ಅಂಬೇಡ್ಕರರ ಸಂವಿಧಾನದಲ್ಲಿ ನಂಬಿಕೆ ಇಟ್ಟುಕೊಂಡವರು ಎಂದರು.

ನಾವು 5 ವರ್ಷಗಳಲ್ಲಿ ಸೂರಿಲ್ಲದವರಿಗೆ 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದೆವು. ಬಿಜೆಪಿ ಸರ್ಕಾರ ಹೊಸಪೇಟೆಯಲ್ಲಿ ಒಂದು ಮನೆ ನಿರ್ಮಾಣ ಮಾಡಿ ಕೊಟ್ಟಿದೆಯೇನಪ್ಪಾ ಆನಂದ್‌ ಸಿಂಗ್? ಹೊಸಪೇಟೆಯಲ್ಲಿ 28,000 ಜನರಿಗೆ ಹಕ್ಕುಪತ್ರ ನೀಡುವುದಾಗಿ ಆನಂದ್‌ ಸಿಂಗ್‌ ಹೇಳಿ 10 ವರ್ಷ ಆಗಿದೆ, ಕೊಟ್ಟಿದ್ದಾರ? ಇಂಥವರು ಗೆಲ್ಲಬೇಕ? ಎಂದು ಪ್ರಶ್ನಿಸಿದರು.

ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ಮುಗಿಲುಮುಟ್ಟಿದೆ. ವಿಧಾನಸೌಧದ ಗೋಡೆಗಳು ಕೂಡ ಲಂಚ, ಲಂಚ ಎಂದು ಪಿಸುಗುಟ್ಟುತ್ತವೆ. ಮೊದಲು ಬಾರಿಗೆ ಬೊಮ್ಮಾಯಿ ಸರ್ಕಾರಕ್ಕೆ 40% ಕಮಿಷನ್‌ ಸರ್ಕಾರ ಎಂಬ ಹೆಸರು ಬಂದಿದೆ. ಸಂತೋಷ್‌ ಪಾಟೀಲ್‌, ಪ್ರಸಾದ್‌ ಎಂಬ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು. ಶಿವಕುಮಾರ್‌ ಎಂಬ ಗುತ್ತಿಗೆದಾರ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದರು. ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ 90 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆಡಿಯೋ ಅನ್ನು ನಿನ್ನೆ ಮಂಜುನಾಥ್‌ ಎಂಬ ಗುತ್ತಿಗೆದಾರ ಬಿಡುಗಡೆ ಮಾಡಿದ್ದಾರೆ. ಕಮಿಷನ್‌ ಆರೋಪಗಳ ಬಗ್ಗೆ ತನಿಖೆ ಮಾಡಿಸಲು ಸಾಕ್ಷಿ ಕೊಡಿ ಎಂದು ಬೊಮ್ಮಾಯಿ ಕೇಳುತ್ತಿದ್ದರು, ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು ಬೊಮ್ಮಾಯಿ? ಎಂದು ಪ್ರಶ್ನಿಸಿದರು.

ಇಂದಿರಾ ಕ್ಯಾಂಟೀನ್‌ ಮುಚ್ಚುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದ ಮೇಲೆ ಈಗ ಬಂದ್‌ ಆಗಿರುವ ಎಲ್ಲಾ ಇಂದಿರಾ ಕ್ಯಾಂಟೀನ್‌ ಗಳನ್ನು ತೆರೆಯುವ ಕೆಲಸ ಮಾಡುತ್ತೇವೆ. ಹೊಸಪೇಟೆಯಲ್ಲಿ ಕುಡಿಯುವ ನೀರಿನ ಪೈಪ್‌ ಒಡೆದು ಅದಕ್ಕೆ ಕೊಳಚೆ ನೀರು ಸೇರಿ 200 ಜನ ಅಸ್ವಸ್ಥರಾಗಿದ್ದಾರೆ, ಒಬ್ಬ ಮಹಿಳೆ ಮೃತಪಟ್ಟಿದ್ದಾಳೆ. ಇದನ್ನು ಸಚಿವ ಆನಂದ್‌ ಸಿಂಗ್‌ ಕೂಡ ಒಪ್ಪಿಕೊಂಡಿದ್ದಾರೆ. ನಿಮಗೆ ಮಾನ ಮರ್ಯಾದಿ ಇದ್ದರೆ ಪ್ರಕರಣದ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಆನಂದ್‌ ಸಿಂಗ್‌ ಅವರನ್ನು ಒತ್ತಾಯಿಸಿದರು.

ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆದು ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು ಎಂದು ತಮ್ಮಲ್ಲಿ ಕೈಮುಗಿದು ಮನವಿ ಮಾಡುತ್ತೇನೆ ಎಂದರು.

Leave a Reply