ಇಂಗ್ಲಿಷ್ ಮೂಲ: ರಾಮ್ ಪುನಿಯಾನಿ
ಕನ್ನಡಕ್ಕೆ: ಡಾ.ಪ್ರದೀಪ್ ಮಾಲ್ಗುಡಿ
ಬ್ರಿಟಿಷರ ವಿರುದ್ಧದ ಜನಸಾಮಾನ್ಯರ ಹೋರಾಟದ ಮಹತ್ವದ ಸಾಧನೆಯೇ ನಮ್ಮ ಸ್ವಾತಂತ್ರ್ಯ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲಾ ಧರ್ಮಗಳು, ಜಾತಿಗಳು, ಲಿಂಗಗಳು, ಭಾಷೆಗಳು ಮತ್ತು ಜನಾಂಗಗಳ ಜನರು ಭಾಗವಹಿಸಿದ್ದರು. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯ ನಮ್ಮ ಚಳವಳಿಗೆ ಮಾರ್ಗದರ್ಶಕ ಸೂತ್ರಗಳಾಗಿದ್ದವು. ಭಗತ್ ಸಿಂಗ್ ಅವರಂತಹ ನಾಯಕರು ವರ್ಗ ಮತ್ತು ಜಾತಿಯ ಬೇಧವಿಲ್ಲದೆ ಸಮಾಜದ ಎಲ್ಲಾ ವರ್ಗದ ಜನರಿಗೆ ಹಕ್ಕುಗಳು ಮತ್ತು ಸ್ವಾತಂತ್ರ್ಯವಿರಬೇಕು ಎಂದು ಒತ್ತಿಹೇಳಿದರು. ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆಯ ಬೇತಾಳವನ್ನು ಮುರಿಯುತ್ತಾ, ಎಲ್ಲಾ ಜನರಿಗೆ ಸಮಾನತೆ (ಸಾಮಾಜಿಕ ನ್ಯಾಯ) ಸಿಗುವಂತೆ ಶ್ರಮಿಸಿದರು. ಸ್ವಾತಂತ್ರ್ಯ ಚಳವಳಿಯ ಮುಂಚೂಣಿ ನಾಯಕರಾಗಿದ್ದ ಗಾಂಧೀಜಿಯವರು ಭ್ರಾತೃತ್ವಕ್ಕೆ (ಸಹೋದರತ್ವ) ಹೆಚ್ಚಿನ ಪ್ರಾಮುಖ್ಯತೆ ಕೊಟ್ಟರು. ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು, ಕಾರ್ಮಿಕರು, ಮಹಿಳೆಯರು ಮತ್ತು ಮೂಲನಿವಾಸಿಗಳು ಈ ನಾಯಕರನ್ನು ಬೆಂಬಸಿದರು. ಆಧುನಿಕ ರಾಷ್ಟ್ರದ ಈ ಮೂರು ಪ್ರಮುಖ ಸ್ತಂಭಗಳು (ಗಾಂಧಿ, ಅಂಬೇಡ್ಕರ್, ಭಗತ್ ಸಿಂಗ್) ಸ್ವತಂತ್ರ ಭಾರತದ ಮೇಲೆ ಅಚ್ಚಳಿಯದ ಮುದ್ರೆ ಒತ್ತಿದವು. ಸ್ವಾತಂತ್ರ್ಯ ಚಳವಳಿಯ ಈ ಮೌಲ್ಯಗಳೇ ಭಾರತೀಯ ಸಂವಿಧಾನದ ಮೂಲಾಧಾರವಾಗಿವೆ.
- 79ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನೋಟ: ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ?
- ವಿಧಾನಸಭೆಯ ಸಭಾಧ್ಯಕ್ಷರ ಚುನಾವಣೆಗೆ ಬಹಿಷ್ಕಾರ: ಆರ್.ಅಶೋಕ
- ಮಂಗಳೂರಿನಲ್ಲಿ ಸೊಳ್ಳೆ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಲಿ: ಸಿಪಿಐ(ಎಂ)
- ಕಲಾಗ್ರಾಮದಲ್ಲಿ ಸ್ಪರ್ಶ ಮಕ್ಕಳ ನಾಟಕೋತ್ಸವ
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
ಕೈಗಾರೀಕರಣ, ಸಂವಹನ ಮತ್ತು ಆಧುನಿಕ ಶಿಕ್ಷಣದಿಂದಾಗಿ ರೂಪುಗೊಂಡ ಈ ಹೊಸ ವರ್ಗದ ಜನ, ಎಲ್ಲರನ್ನೂ ಒಳಗೊಂಡ ರಾಷ್ಟ್ರೀಯತೆಯು ದೇಶದ ಶಾಂತಿ ಮತ್ತು ಪ್ರಗತಿಯನ್ನು ಖಾತ್ರಿಪಡಿಸುವಂತಹ ದೇಶ ಕಟ್ಟುವ ಕನಸನ್ನು ಕಂಡರು. ಆದರೆ ಇದರ ವಿರುದ್ಧ, ಹಳೆಯ ಕಾಲದ ರಾಜರು ಮತ್ತು ಸಮಾಜದ ಪ್ರಭಾವಿ ವರ್ಗದವರು, ಅಂದರೆ ಜಾತಿ ಮತ್ತು ಲಿಂಗ ತಾರತಮ್ಯದ ಜೀತಪದ್ಧತಿ ಹಾಗೂ ಹಳೆಯ ಸಂಪ್ರದಾಯಗಳನ್ನು ನಂಬಿದ ಕೆಲವರು ಈ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದರು. ಇವರು ಪಿತೃಪ್ರಧಾನ ಮೌಲ್ಯಗಳಲ್ಲಿ ಬೇರೂರಿದ್ದು, ರಾಜಪ್ರಭುತ್ವದ ಕಾಲವನ್ನು ವೈಭವೀಕರಿಸುತ್ತಿದ್ದರು. ಇವರು ಬಹುತೇಕವಾಗಿ ಸ್ವಾತಂತ್ರ್ಯ ಚಳವಳಿಯನ್ನು ವಿರೋಧಿಸಿ, ‘ಪುರಾತನ ವೈಭವ’ದ ಕಾಲವೇ ಶ್ರೇಷ್ಠವೆಂದು ವಾದಗಳನ್ನು ಮಂಡಿಸುತ್ತಿದ್ದರು. ಮುಂದಡಿ ಇಡುತ್ತಲೇ ಹಿಂದಕ್ಕೆ ನೋಡುವ ಸಿದ್ಧಾಂತವನ್ನು ಇವರು ಹೇರಿದರು. ಜಮೀನ್ದಾರರು ಮತ್ತು ರಾಜಮಹಾರಾಜರಗಳು ಕಾರ್ಮಿಕರು, ದಲಿತರು, ಮಹಿಳೆಯರು ಹಾಗೂ ಆದಿವಾಸಿಗಳು ಜಾಗೃತರಾಗುವುದನ್ನು ಕಂಡು ಹೆದರಿದ್ದರು. ಅವರು ತಮ್ಮದೇ ಧರ್ಮದ ರಾಜರನ್ನು ಮತ್ತು ಅಂದಿನ ಸಾಮಾಜಿಕ ಮೌಲ್ಯಗಳನ್ನು ವೈಭವೀಕರಿಸುತ್ತಿದ್ದರು. ಮುಸ್ಲಿಂ ಲೀಗ್ ಮುಖ್ಯವಾಗಿ ನವಾಬರು ಮತ್ತು ಜಮೀನ್ದಾರರ ಬೆಂಬಲ ಪಡೆದಿದ್ದರೆ, ಹಿಂದೂ ಮಹಾಸಭಾ-ಆರ್‌ಎಸ್‌ಎಸ್ ಸಂಘಟನೆಗಳು ರಾಜರು, ಜಮೀನ್ದಾರರು ಮತ್ತು ಕೆಲ ಧರ್ಮಗುರುಗಳ ಬೆಂಬಲ ಹೊಂದಿದ್ದವು. ಇವರು ಪ್ರಜಾಸತ್ತಾತ್ಮಕ ಸಮಾಜದ ಮೌಲ್ಯಗಳನ್ನು, ಎಲ್ಲರಿಗೂ ಆಧುನಿಕ ಶಿಕ್ಷಣ ನೀಡುವುದನ್ನು ಮತ್ತು ಬ್ರಿಟಿಷರ ವಿರುದ್ಧದ ಹೋರಾಟವನ್ನು ವಿರೋಧಿಸಿದರು. ಸಾವರ್ಕರ್ ಅವರು ತಮ್ಮ ‘ಹಿಂದುತ್ವ ಅಥವಾ ಹಿಂದೂ ಎಂದರೇನು’ (Hindutva or ‘Who is a Hindu’) ಪುಸ್ತಕದಲ್ಲಿ ಸ್ಪಷ್ಟಪಡಿಸಿದಂತೆ, ಈ ಗುಂಪುಗಳು ಧರ್ಮವನ್ನೇ ರಾಷ್ಟ್ರದ ಆಧಾರವೆಂದು ಪರಿಗಣಿಸಿದವು. ಇದು ಬ್ರಿಟಿಷ್ ವಿರೋಧಿ ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿಗೆ ಎಸೆದ ದೊಡ್ಡ ಗಾಯವಾಗಿತ್ತು. ಧರ್ಮದ ಆಧಾರದ ಮೇಲೆ ದೇಶ ವಿಭಜನೆಯಾಗಿದ್ದು ಭಾರತೀಯ ರಾಷ್ಟ್ರೀಯತೆಗೆ ಆದ ಅತಿ ದೊಡ್ಡ ಹೊಡೆತ.
ಸಂವಿಧಾನ ಸಭೆಯು ದೇಶದ ನಾನಾ ಪ್ರಕಾರದ ವೈವಿಧ್ಯತೆಯನ್ನು ಅತ್ಯುತ್ತಮವಾಗಿ ಪ್ರತಿನಿಧಿಸಿತ್ತು. ಮನುಸ್ಮೃತಿಯನ್ನು ಸುಟ್ಟುಹಾಕಿದ್ದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಅತ್ಯಂತ ಪ್ರಮುಖವಾದ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಸಂವಿಧಾನ ರಚನೆಯಾದ ತಕ್ಷಣವೇ, ಆರ್‌ಎಸ್‌ಎಸ್ ಮುಖವಾಣಿಯಾದ ‘ಆರ್ಗನೈಸರ್’ (Organiser) ಪತ್ರಿಕೆ, ಈ ಸಂವಿಧಾನದಲ್ಲಿ ಮನುಸ್ಮೃತಿಯ ಪ್ರಾಚೀನ ಮೌಲ್ಯಗಳಿಲ್ಲ ಎಂದು ತೀವ್ರವಾಗಿ ಟೀಕಿಸಿತು. ಇಂತಹ ಶಕ್ತಿಗಳು ಅಂಬೇಡ್ಕರ್ ಮತ್ತು ನೆಹರೂ ಅವರ ಪ್ರತಿಕೃತಿಗಳನ್ನು ಸುಟ್ಟುಹಾಕಿದವು.
ಸ್ವತಂತ್ರ ಭಾರತಕ್ಕೆ ಗಾಂಧೀಜಿಯವರ ಕಟ್ಟಾ ಅನುಯಾಯಿಗಳಾದ ನೆಹರೂ ಮತ್ತು ಪಟೇಲ್ ಅವರ ಅವಳಿ ನಾಯಕತ್ವ ಸಿಕ್ಕಿತು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಹೆಚ್ಚಿನ ಸಂಸ್ಥಾನಗಳನ್ನು ಯಶಸ್ವಿಯಾಗಿ ಭಾರತದ ಒಕ್ಕೂಟಕ್ಕೆ ವಿಲೀನಗೊಳಿಸಿದರೆ, ಜವಹರಲಾಲ್ ನೆಹರೂ ಅವರು ಸಂವಿಧಾನವನ್ನು ಅಕ್ಷರಶಃ ಜಾರಿಗೆ ತರುವ ಮೂಲಕ ಆಧುನಿಕ ಭಾರತದ ಕನಸನ್ನು ಸಾಕಾರಗೊಳಿಸಿದರು. ‘ಒಬ್ಬ ವ್ಯಕ್ತಿಗೆ ಒಂದು ಮತ’ ಎಂಬ ತತ್ವವನ್ನು ಯಶಸ್ವಿಯಾಗಿ ಜಾರಿಗೆ ತರಲಾಯಿತು. ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯ ಮೇಲೆ ನೆಹರೂ ಹೊಂದಿದ್ದ ಅಚಲ ನಂಬಿಕೆಯಿಂದಾಗಿ ಪ್ರಜಾಪ್ರಭುತ್ವದ ಬೇರುಗಳು ಆಳವಾಗಿ ನೆಲೆಸಿದವು. ಐಐಟಿ (IIT), ಐಐಎಂ (IIM), ಏಮ್ಸ್ (AIIMS) ನಂತಹ ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಸಾರ್ವಜನಿಕ ರಂಗದ ಬಲವರ್ದನೆ, ನೀರಾವರಿಗೆ ಒತ್ತು ಮತ್ತು ಮೀಸಲಾತಿ ನೀತಿಯ ಅನುಷ್ಠಾನ ದೇಶವನ್ನು ಸಮಾನತೆಯ ಕಡೆಗೆ ಕೊಂಡೊಯ್ಯಲು ಕಾರಣವಾಯಿತು. ದಶಕಗಳ ಹಿಂದೆ ಭಾರತ ಮತ್ತು ಪಾಕಿಸ್ತಾನದ ಪರಿಸ್ಥಿತಿಯನ್ನು ತುಲನೆ ಮಾಡುವ ಕೆಲವು ವಿಶ್ಲೇಷಕರು, ಭಾರತದ ಸಾಧನೆ ಮತ್ತು ಪಾಕಿಸ್ತಾನದ ಹಿನ್ನಡೆಗೆ (ಶಿಕ್ಷಣ ಮತ್ತು ಕೈಗಾರಿಕರಣದಲ್ಲಿ) ಹಲವು ಕಾರಣಗಳಿದ್ದರೂ, ಭಾರತದಲ್ಲಿ ಜವಹರಲಾಲ್ ನೆಹರೂ ಅವರಂತಹ ನಾಯಕನಿದ್ದುದೇ ಪ್ರಮುಖ ಕಾರಣ ಎಂದು ಅಭಿಪ್ರಾಯಪಡುತ್ತಾರೆ.
ಆದರೆ ಕಳೆದ ಕೆಲವು ದಶಕಗಳಿಂದ ಹಿಂದೂ ಬಲಪಂಥೀಯರು, ಆರ್‌ಎಸ್‌ಎಸ್ ಮತ್ತು ಅದರ ಅಂಗಸಂಸ್ಥೆಗಳ ವೃದ್ಧಿ ನಮ್ಮ ರಾಷ್ಟ್ರೀಯ ಗುರಿಗಳು ಮತ್ತು ವಿಚಾರಗಳ ದಿಕ್ಕನ್ನೇ ಬದಲಿಸಿದೆ. ಇಂದು ಹಿಂದೂ ಧರ್ಮದ ಹೆಸರಿನಲ್ಲಿ ಅಧಿಕಾರ ರಾಜಕಾರಣ ಮುಂಚೂಣಿಗೆ ಬಂದಿದ್ದು, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ರೂಪುಗೊಂಡಿದ್ದ ‘ಭಾರತದ ಕಲ್ಪನೆ’ಯನ್ನೇ ಬುಡಮೇಲು ಮಾಡುತ್ತಿದೆ. ಹಿಂದೆ ಸ್ವಾತಂತ್ರ್ಯ ಚಳವಳಿಯ ಅಂಚಿನಲ್ಲಿ ನಿಂತು, ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ಸಮಾನತೆಯ ಮೌಲ್ಯಗಳನ್ನು ವಿರೋಧಿಸುತ್ತಿದ್ದವರೇ ಇಂದು ಅಧಿಕಾರದಲ್ಲಿದ್ದಾರೆ; ಇದರಿಂದ ದೇಶದ ಅಭಿವೃದ್ಧಿ ಕುಂಠಿತವಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಸೃಷ್ಟಿಸಲಾಗುತ್ತಿರುವ ದ್ವೇಷದ ಗೋಡೆಗಳು ನಮ್ಮ ಸಮಾಜದ ಭ್ರಾತೃತ್ವದ ಮೌಲ್ಯಗಳನ್ನು ನಾಶಮಾಡಲು ಹೊರಟಿವೆ. ಇತ್ತೀಚೆಗೆ ಪರೀಕ್ಷಾ ವ್ಯವಸ್ಥೆಯ ವೈಫಲ್ಯದ ವಿರುದ್ಧ ನಡೆದ ಜನಪರ ಚಳವಳಿ ಈ ಸರ್ಕಾರದ ದುರಂಹಕಾರಕ್ಕೆ ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಿದೆ. ನಿಜ, ಆದರೆ ಹಿಂದೂ ರಾಷ್ಟ್ರೀಯತೆಯ ಗುರಿಗಳು ಮತ್ತು ಉದ್ದೇಶಗಳು ಮಾತ್ರ ಹಾಗೆಯೇ ಉಳಿದುಕೊಂಡಿವೆ. ನಮ್ಮ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮತ್ತು ಸಂವಿಧಾನದ ಆಶಯಗಳನ್ನು ಮರಳಿ ಪಡೆಯಲು ಸುದೀರ್ಘ ಹೋರಾಟದ ಅಗತ್ಯವಿದೆ.
ಆರ್‌ಎಸ್‌ಎಸ್ ಸಂಘಟನೆಯು ಸಮಾಜದ ಆಳದಲ್ಲಿ ದ್ವೇಷದ ಬೀಜಗಳನ್ನು ಬಿತ್ತಿದೆ ಮತ್ತು ಸರ್ಕಾರದ ಎಲ್ಲಾ ವ್ಯವಸ್ಥೆಗಳನ್ನೂ ವ್ಯಾಪಿಸಿದೆ. ಇದರ ನೀತಿಗಳಿಂದ ಜನಸಾಮಾನ್ಯರಲ್ಲಿ ಉಂಟಾದ ಅಸಮಾಧಾನ ‘ಕಾಕ್ರೋಚ್ ಚಳವಳಿ’ಯ (Cockroach movement) ಮೂಲಕ ತೀವ್ರವಾಗಿ ಹೊರಬಂದಿದೆ. ‘ಚುನಾಯಿತ ಸರ್ವಾಧಿಕಾರಿ’ ಧೋರಣೆ ಹೊಂದಿದ್ದ ಈ ಸರ್ಕಾರ ಸದ್ಯಕ್ಕೆ ಸ್ವಲ್ಪ ಮೃದುವಾಗುವಂತೆ ಇದು ಮಾಡಿದೆ. ಆದರೆ ಆರ್‌ಎಸ್‌ಎಸ್ ಮಾಡಿರುವ ಆಳವಾದ ಗಾಯಗಳು ಅಷ್ಟು ಸುಲಭವಾಗಿ ಮಾಯುವಂತಿಲ್ಲ. ಇದು ನಮ್ಮ ರಾಜಕೀಯ ವ್ಯವಸ್ಥೆಯನ್ನು ತೀವ್ರವಾಗಿ ಹಾಳುಮಾಡಿದೆ. ಹಿಂದೂ ರಾಷ್ಟ್ರೀಯತೆಗೆ ಬದ್ಧವಾಗಿರುವ ಆಡಳಿತದಿಂದ ಮುಕ್ತಿಪಡೆದು, ಭಾರತೀಯ ಸಂವಿಧಾನಕ್ಕೆ ಬದ್ಧವಾಗಿರುವ ಆಡಳಿತವನ್ನು ತರುವುದು ಇಂದಿನ ತುರ್ತು ಅಗತ್ಯವಾಗಿದೆ. ಜನಸಾಮಾನ್ಯರ ಮನಸ್ಸಿನಲ್ಲಿ ಸುಳ್ಳು ಸುದ್ದಿಗಳ ಮೂಲಕ ಬಿತ್ತಿರುವ ಕಥೆಗಳನ್ನು ಹೋಗಲಾಡಿಸಿ, ನೂರಾರು ವರ್ಷಗಳಿಂದ ಭಾರತೀಯರ ನಡುವೆ ಇರುವ ಪ್ರೀತಿ ಮತ್ತು ಸೌಹಾರ್ದತೆಯ ಸಂದೇಶಗಳನ್ನು ಮರುಸ್ಥಾಪಿಸಬೇಕಿದೆ. ಬೋಸ್, ಗಾಂಧಿ, ಪಟೇಲ್ ಮತ್ತು ನೆಹರೂ ಅವರು ಭಾರತೀಯರಲ್ಲಿ ಬಿತ್ತಲು ಶ್ರಮಿಸಿದ ಮೌಲ್ಯಗಳನ್ನು ಮತ್ತೆ ಮುನ್ನಡೆಸಬೇಕಿದೆ. ಜಂತರ್ ಮಂತರ್‌ನಲ್ಲಿ ನಡೆದಂತಹ ಪ್ರತಿಭಟನೆಗಳು, ಜಗತ್ತಿನಲ್ಲಿ ತನ್ನದೇ ಆದ ಗೌರವಾನ್ವಿತ ಸ್ಥಾನ ಪಡೆಯಲು ಹೆಣಗಾಡುತ್ತಿರುವ ನಮ್ಮ ಪ್ರಾಚೀನ ನಾಗರಿಕತೆಯನ್ನು ಮರಳಿ ಪಡೆಯುವ ಮೊದಲ ಹೆಜ್ಜೆಯಾಗಿದೆ.
ಅಲ್ಪಸಂಖ್ಯಾತರ ಪರಿಸ್ಥಿತಿಯನ್ನು ‘ಸಮಾನ ನಾಗರಿಕತೆ’ಯ ಹಂತಕ್ಕೆ ತರಬೇಕಿದೆ. ಸರ್ಕಾರದ ಸರ್ವಾಧಿಕಾರ ಧೋರಣೆಯನ್ನು ಕೊನೆಗೊಳಿಸಿ, ತಾರ್ಕಿಕ ಮತ್ತು ವೈಜ್ಞಾನಿಕ ನೆಲೆಯಲ್ಲಿ ರಾಷ್ಟ್ರ ನಿರ್ಮಾಣವನ್ನು ಮುಂದುವರಿಸಬೇಕಿದೆ. ಜಂತರ್ ಮಂತರ್‌ನ ಈ ಹೋರಾಟವು ಕೇವಲ ಒಂದು ಆರಂಭವಷ್ಟೇ; ಗಾಂಧಿ, ಅಂಬೇಡ್ಕರ್, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಮೌಲಾನಾ ಆಜಾದ್ ಮತ್ತು ಸರ್ದಾರ್ ಪಟೇಲ್ ಅವರ ಕನಸನ್ನು ನನಸಾಗಿಸಲು ನಾವು ಇನ್ನೂ ಬಹಳ ದೂರ ಸಾಗಬೇಕಿದೆ. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.




