ಗಡಿನಾಡಲ್ಲಿ ಅವರೊಬ್ಬ ಜನನಾಯಕ, ಒಂದು ಬದಿಯಲ್ಲಿ ಮಹಾರಾಷ್ಟ್ರ, ಮತ್ತೊಂದು ಬದಿಯಲ್ಲಿ ತೆಲುಗು ನಾಡು, ಕನ್ನಡಿಗರ ರಾಜಧಾನಿಯಿಂದ ದೂರ, ಬಲುದೂರ. ಆದರೂ ಅವರು ಅಲ್ಲಿ ಕನ್ನಡ ಕಟ್ಟಿದರು, ತೆಲಗು- ಮರಾಠಿ- ಕನ್ನಡವನ್ನು ಮಿಶ್ರಣ ಮಾಡಿದ ಹೊಸಗನ್ನಡ! ಅದೇ ಬೀದರ್ ಕನ್ನಡ, ಅದು ಅವರ ಮನೆ ಭಾಷೆ. ಅದನ್ನು ಖಂಡ್ರೇ ಸಾಹೇಬರು ಮಾತಾಡುತ್ತಿದ್ದರು. ಅವರಿಗೆ ಮಾತ್ರ ಅದು ತಿಳಿಯುತ್ತಿತ್ತು. ನಮಗಾರಿಗೂ ತಿಳಿಯುತ್ತಿರಲಿಲ್ಲ.
- ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಫೇಕುಗಳ ಕಾಟ!
- ಇತಿಹಾಸದಲ್ಲೇ ದಾಖಲೆ ಬರೆಯುವಂತೆ ಬಸ್ ಟಿಕೆಟ್ ದರ ಏರಿಕೆ: ಆರ್ ಅಶೋಕ್
- ನವೆಂಬರ್ 07 ರಿಂದ ಎರಡನೇ ಹಂತದ ‘ವಾರ್ಡ್ ಒನ್’ ಅಭಿಯಾನ
- ಆ್ಯಕ್ಸಿಡೆಂಟಲ್ ಸಿಎಂ ಬೊಮ್ಮಾಯಿ ಅವರೇ ಹಾವೇರಿ ಕ್ಷೇತ್ರದ ಬಗ್ಗೆ ಗಮನ ಕೊಡಿ: ಬಿ ಕೆ ಹರಿಪ್ರಸಾದ್
- 40 ದಾಟಿದ ಪುರುಷರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ?
ದೇವರಾಜ ಅರಸರ ಕಾಲದಲ್ಲಿ ಅವರು ಶಾಸಕ, ಬರೀ ಶಾಸಕ ಅಲ್ಲ, ಫೈರ್ ಬ್ರ್ಯಾಂಡ್ ಶಾಸಕ. ಶಾಸಕ ಭವನದಲ್ಲಿ ಅವರು ನಡೆದು ಬರುತ್ತಿದ್ದರೆ ಯಾರೋ ಕಪ್ಪು ಬಣ್ಣದ ಬ್ರಿಟಿಷ್ ಅಧಿಕಾರಿಯಂತೆ ಕಾಣುತ್ತಿದ್ದರು. ಯಾವಾಗಲು ಸೂಟು ಬೂಟಿನಲ್ಲಿ ಇರುತ್ತಿದ್ದ ಅವರು ಇತರ ರಾಜಕಾರಣಿಗಳಿಗಿಂತ ಭಿನ್ನ, ವಿಭಿನ್ನ.
ಯಾರಿವರು? ಎಂದು ಕೇಳಿದ್ದೆ ಅವರ ಕೋಣೆಯಲ್ಲಿ ಇರುತ್ತಿದ್ದ ಅವರ ಸಂಬಂಧಿ ಸುರೇಶನಲ್ಲಿ. ‘ಇವರು ಖಂಡ್ರೇ ಸಾಹೇಬರು, ಪ್ರಸಿದ್ಧ ವಕೀಲರು’ ರೆಂದು ಹೇಳಿ ನನ್ನ ಹುಬ್ಬೇರಿಸುವಂತೆ ಮಾಡಿದ್ದ.
ಅವರದು ಹೊಸ ಶಾಸಕರ ಭವನದ ಮೇಲ್ ಅಂತಸ್ತಿನ ಕೊಠಡಿ. ನನ್ನ ಸ್ನೇಹಿತ ದಿ. ಮೊಹನ್ ಸಾಸನೂರ ಅವರ ರೂಮಿಗೆ ಓದಲು ಬರುವ ಖಾಯಂ ಗಿರಾಕಿ. ಆದರೆ ಅಸಲಿ ಕಾರಣ ಶಾಸಕ ಭವನದಲ್ಲಿ ಫ್ರೀ ಫೋನ್ ಗಾಗಿ ಅವನು ಬರುತ್ತಿದ್ದ ಎಂಬ ಸಂಗತಿಯು ಅವನು ಕೆ.ಎ.ಎಸ್. ಅಧಿಕಾರಿಯಾದ ನಂತರ ತಿಳಿಯುತು. ಚಾಲಾಕಿಗಳಾದ ಅವರು ಲೋಕಲ್ ಕಾಲುಗಳನ್ನು STD ಕಾಲುಗಳಾಗಿ ಪರಿವರ್ತಿಸುವ ಕಲೆ ಕಂಡು ಕೊಂಡಿದ್ದರು. ಇರಲಿ.
ಸಾಮಾಜಿಕ ನ್ಯಾಯದ ದಿನಗಳ ಕಾಲ ಅದು. “ಉಳುವವನೆ ಭೂಮಿ ಒಡೆಯ” ಎಂದಿತ್ತು ದೇವರಾಜ ಅರಸ್ ಸರ್ಕಾರ. ಅರಸ್ ಹಾವನೂರ ಆಯೋಗ ರಚಿಸಿದರು. ಇದು ವಿಧಾನ ಸೌಧದಲ್ಲಿ ಚರ್ಚೆಗೆ ಬಂತು. ಏಕಾಏಕಿ ಹಾವನೂರು ವರದಿಗೆ ಸದನದಲ್ಲಿ ಬೆಂಕಿ ಬಿತ್ತು. ಆಗ ಖಂಡ್ರೆಯವರು ನಾಡಿನ ಕಣ್ಣಿಗೆ ಬಿದ್ದರು. ಲಿಂಗಾಯತ ನಾಯಕನಾಗಿ ಹೊರಹೊಮ್ಮಿದರು.
ಅವರ ಫೈರ್ ಬ್ರ್ಯಾಂಡ್ ಕಡಿಮೆಯಾಗುವ ದಿನಗಳಲ್ಲಿ ನಾನು ಅವರನ್ನು ಮತ್ತೆಮತ್ತೆ ಕಾಣುವ ಅವಕಾಶಗಳು ಸಿಗುತ್ತಿದ್ದವು. ಬಸವಣ್ಣನವರ ಕಟ್ಟಾ ಅಭಿಮಾನಯಾದ ಅವರು ನಂತರ ಪಥ ಬದಲಿಸಿದರು. ವೀರಶೈವ ಮಹಾಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿ ‘ವೀರಶೈವರು ಲಿಂಗಾಯತರು ಒಂದೇ’ ಎಂದರು. ಬಸವಾಭಿಮಾನಿಗಳು ಕೆರಳಿದರು. ಆಗ ವೀರಶೈವ ಭವನಕ್ಕೆ ‘ವೀರಶೈವ ಲಿಂಗಾಯತ ಭವನ’ ಎಂದು ಹೆಸರು ಬದಲಾಯಿಸಿದರು.
ಇಂದು ಅವರು ನಮ್ಮನ್ನಗಲಿದ್ದಾರೆ, ಅಸಂಖ್ಯಾತ ಅಭಿಮಾನಿಗಳನ್ನು ಅಗಲಿದ್ದಾರೆ. ತುಂಬು ಜೀವನ ನಡೆಸಿ ಲಿಂಗದಲ್ಲಿ ಲೀನವಾಗಿದ್ದಾರೆ. ಅವರಿಗೆ ಶರಣಾಂಜಲಿ, ಬಸವಾಂಜಲಿ.
– ಜಿ.ಬಿ.ಪಾಟೀಲ್, ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ




