ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿ ನಾನಿಲ್ಲ: ಆರ್‌.ವಿ.ದೇಶಪಾಂಡೆ

8 months ago

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿ ನಾನಿಲ್ಲ ಎಂದು  ಮಾಜಿ ಸಚಿವ ಹಾಗೂ ಶಾಸಕ ಆರ್‌.ವಿ.ದೇಶಪಾಂಡೆ ವಿಧಾನಸಭೆಗೆ ತಿಳಿಸಿದ್ದಾರೆ.

ಸದನ ಸಮಾವೇಶಗೊಂಡಾಗ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಮುಖ್ಯಮಂತ್ರಿಯಾಗಿ 5 ವರ್ಷ ಪೂರ್ಣಗೊಳಿಸಿದ್ದಾರೆ. ಎರಡನೇ ಬಾರಿಗೆ ಮತ್ತೆ ಐದು ವರ್ಷ ಪೂರ್ಣಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಆಗ ಬಿಜೆಪಿಯ ಶಾಸಕರು ಇನ್ನೊಮ್ಮೆ ಹೇಳಿ ಎಂದು ಆಗ್ರಹಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ದೇಶಪಾಂಡೆ ಅವರು, ನಾನು ಮುಖ್ಯಮಂತ್ರಿ ಸ್ಪರ್ಧಿ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗ ಎಂದರು.

ಜಾತಿ ಬಲವಿಲ್ಲದಿದ್ದರೂ ಒಂಭತ್ತು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ಹತ್ತು ಬಾರಿ ಸ್ಪರ್ಧೆ ಮಾಡಿದ್ದು ಒಮ್ಮೆ 2008ರಲ್ಲಿ ಮಾತ್ರ ಸೋತಿದ್ದೇನೆ. ಎಸ್‌‍.ಎಂ. ಕೃಷ್ಣ, ಧರ್ಮಸಿಂಗ್‌, ಹೆಚ್‌.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಎಂಟು ಮುಖ್ಯಮಂತ್ರಿಗಳ ಸಂಪುಟದಲ್ಲಿ ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯಅವರು ಸದನದಲ್ಲಿ ಮಾತನಾಡಿದಾಗ ನಾನು ಇರಲಿಲ್ಲ. ಯುವ ಶಾಸಕರಿಗೆ ಉತ್ತೇಜನ ನೀಡಬೇಕು. ಅವರಿಗೆ ಮಾರ್ಗದರ್ಶನ ನೀಡಬೇಕು. ಹಾಗಾಗಿ ಈ ಮಾಹಿತಿ ನೀಡುತ್ತಿದ್ದೇನೆ ಎಂದರು.

ಯುವ ಜನತೆ ರಾಜಕಾರಣಕ್ಕೆ ಬರಲು ಹೆದರುತ್ತಿದ್ದಾರೆ. ಒಳ್ಳೆಯವರು ರಾಜಕೀಯಕ್ಕೆ ಬರಬೇಕು, ಜನರ ಪ್ರೀತಿ- ವಿಶ್ವಾಸ ಗಳಿಸಬೇಕು. ಕ್ಷೇತ್ರ ಅಭಿವೃದ್ದಿಯಾಗಬೇಕು ಎಂದರು.

ನನ್ನ ಹಳಿಯಾಳ ಕ್ಷೇತ್ರಕ್ಕೆ ಮೂರು ತಾಲ್ಲೂಕುಗಳು ಬರಲಿದ್ದು, ಅದರಲ್ಲಿ ಜೊಯಿಡಾ ಹಿಂದುಳಿದಿದೆ. ದಾಂಡೇಲಿ ಪ್ರವಾಸೋದ್ಯಮ ಕೇಂದ್ರವಾಗಿದ್ದರಿಂದ ಅದು ಅಭಿವೃದ್ಧಿಯಾಗುತ್ತಿದೆ ಎಂದರು.

ಮಧ್ಯಪ್ರವೇಶಿಸಿದ ಬಿಜೆಪಿಯ ಹಿರಿಯ ಶಾಸಕ ಎಸ್‌‍, ಸುರೇಶ್‌ಕುಮಾರ್‌, ದೇಶಪಾಂಡೆ ಅವರು ಸದನದ ಹಿರಿಯ ಶಾಸಕರು, 9 ಬಾರಿ ಗೆಲುವು ಸಾಧಿಸಿದ್ದಾರೆ. ಜನತಾ  ಪಕ್ಷ, ಜನತಾದಳ,  ಕಾಂಗ್ರೆಸ್‌‍ ಪಕ್ಷದ ಮುಖ್ಯಮಂತ್ರಿಗಳಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದೀರಿ. ಇದರ ಗುಟ್ಟೇನು ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌‍-ಜನತಾದಳ ಉತ್ತರ -ದಕ್ಷಿಣ ಧ್ರುವಗಳಿದ್ದಂತೆ. ನಿಮಗೆ ಆ ಆತ್ಮೀಯತೆ ಬೆಳೆಯಲು ಹೇಗೆ  ಸಾಧ್ಯವಾಯಿತು ಎಂದು ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ದೇಶಪಾಂಡೆ, ಗುಟ್ಟೇನೂ ಇಲ್ಲ ಎಲ್ಲರೊಂದಿಗೆ ಸಂಬಂಧ ಚೆನ್ನಾಗಿದೆ. ರಾಜಕೀಯ ಪಕ್ಷಗಳ ಸಿದ್ಧಾಂತದ ಆಧಾರದ ಮೇಲೆ ರಾಜಕಾರಣ ಮಾಡುತ್ತೇವೆ. ಆದರೆ ಪರಸ್ಪರ ಗೌರವ ವಿಶ್ವಾಸದಿಂದ ಕೂಡಿರುತ್ತದೆ. ಮುಖ್ಯಮಂತ್ರಿಗಳೊಂದಿಗಿನ ಆತ್ಮೀಯತೆಯ ವಿಚಾರವನ್ನು ಹೇಳಲಾಗದು ಎಂದರು.

Leave a Reply