ಶಿವಾನಂದ ಪಾಟೀಲ್ ಸವಾಲು ಸ್ವೀಕರಿಸುವರೇ ಹಿಂದೂ ಹುಲಿ ಬಸನಗೌಡ ಪಾಟೀಲ್ ಯತ್ನಾಳ್?

12 months ago

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸವಾಲ್ ಜವಾಬ್ ರಾಜಕಾರಣ ಆರಂಭಗೊಂಡಿದೆ. ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಕಿರುವ ಸವಾಲು ಸ್ವೀಕರಿಸಿರುವ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತಮ್ಮ ವಿರುದ್ಧ ಚುನಾವಣೆಗೆ ಸ್ಪರ್ಧಿಸುವಂತೆ ಯತ್ನಾಳ್ ಅವರಿಗೆ ಸವಾಲೊಡ್ಡಿದ್ದಾರೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರವಾದಿ ಮಹಮ್ಮದ್ ಪೈಗಂಬರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಅವರ ವಿರುದ್ಧ ವಿಜಯಪುರದಲ್ಲಿ ಭಾರಿ ಪ್ರತಿಭಟನೆ ನಡೆದಿತ್ತು.

ಇದಕ್ಕೆ ತಿರುಗೇಟು ನೀಡಿದ್ದ ಯತ್ನಾಳ್ ಅವರು ತಮ್ಮ ರಾಜಕೀಯ ಎದುರಾಳಿ ಸಚಿವ ಶಿವಾನಂದ ಪಾಟೀಲ್ ಅವರಿಗೆ ಸವಾಲು ಹಾಕಿದ್ದರು. ಅವರಪ್ಪನಿಗೆ ಹುಟ್ಟಿದ್ದರೆ ಸಚಿವ ಶಿವಾನಂದ ಪಾಟೀಲ್ ನನ್ನ ವಿರುದ್ಧ ಸ್ಪರ್ಧೆ ಮಾಡಿ ಗೆಲ್ಲಲಿ‌ ಎಂದು ಸವಾಲೆಸೆದಿದ್ದರು.

ಸಚಿವ ಶಿವಾನಂದ ಪಾಟೀಲ್ ಅವರ ಮನೆತನದ ಹೆಸರು ಪಾಟೀಲ ಅಲ್ಲ, ಹಚಡದ ಅಂತ ಇತ್ತು. ರಾಜಕೀಯ ಲಾಭಕ್ಕಾಗಿ ಅವರು ಪಾಟೀಲ್ ಎಂದು ಬದಲಾಯಿಸಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಇದಕ್ಕೂ ಮೊದಲು ಹೇಳಿಕೆ ನೀಡಿದ್ದ ಶಿವಾನಂದ ಪಾಟೀಲ್, ಯತ್ನಾಳ್ ವಿರುದ್ಧ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಆಸೆ ಇದೆ ಎಂದಿದ್ದರು. ಹೀಗಾಗಿ ಯತ್ನಾಳ್ ಸವಾಲು ಹಾಕಿದ್ದರು. ಇದೀಗ ಪಾಟೀಲ್ ಕೂಡ ಸವಾಲು ಸ್ವೀಕರಿಸಿ ರಾಜೀನಾಮೆ ನೀಡಿದ್ದಾರೆ.

ವಿಜಯಪುರದಲ್ಲಿ ಇದ್ದ ಶಿವಾನಂದ ಪಾಟೀಲ್ ದಿಡೀರ್ ಬೆಂಗಳೂರಿಗೆ ದೌಡಾಯಿಸಿ ವಿಧಾನಸಭೆಯ ಅಧ್ಯಕ್ಷ ಯುಟಿ ಖಾದರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ನೀಡಿದರು. ಇದರಲ್ಲಿ ತಾವು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ಬಯಸಿ ರಾಜೀನಾಮೆ ನೀಡಿದ್ದೇನೆ. ಅವರು ತಮಗೆ ಹಾಕಿದ ಸವಾಲಿನಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಬೇಕು ಯತ್ನಾಳ್ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದರೆ, ತಮ್ಮ ಈ ರಾಜೀನಾಮೆ ಪತ್ರವನ್ನು ಅಂಗಿಕರಿಸುವಂತೆ ಕೋರಿದ್ದಾರೆ

ಇದಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಾನಂದ ಪಾಟೀಲ್, ಅಪ್ಪನಿಗೆ ಹುಟ್ಟಿದ್ದರೆ ಶುಕ್ರವಾರದೊಳಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸವಾಲು ಹಾಕಿದ್ದರು. ಅದನ್ನು ಸ್ವೀಕರಿಸಿ ರಾಜೀನಾಮೆಪತ್ರ ಸಲ್ಲಿಸಿದ್ದೇನೆ. ಯತ್ನಾಳ್ ಕೂಡ ರಾಜೀನಾಮೆ ಸಲ್ಲಿಸಿ, ಹಿರೇಬಾಗೆವಾಡಿ ಅಥವಾ ವಿಜಯಪುರ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ಧ ಎಂದು ಘೋಷಿಸಿದರು.

ಕ್ಷೇತ್ರದ ಆಯ್ಕೆ ಅವರ ಇಚ್ಛೆಗೆ ಬಿಟ್ಟಂತೆ ಅವರ ರಾಜೀನಾಮೆಗೂ ಗಡುವು ನೀಡುವುದಿಲ್ಲ. ಅವರ ವಿವೇಚನೆಯಂತೆ ಬೇಕಿದ್ದ ದಿನ ರಾಜೀನಾಮೆ ನೀಡಲಿ. ಯತ್ನಾಳ್ ರ ಸವಾಲು ಸ್ವೀಕರಿಸಿದ್ದೇನೆ ಎನ್ನುವುದಕ್ಕೆ ಈ ನಿರ್ಧಾರ ಕೈಗೊಂಡಿರುವೆ ಎಂದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಷಯವನ್ನು ಮುಖ್ಯಮಂತ್ರಿ ಗಮನಕ್ಕೆ ತಂದಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರ. ಶಾಸಕ ಸ್ಥಾನಕ್ಕೆ ರಾಜೀನಾಮೆ ಅಂಗೀಕಾರವಾದರೆ ಸಚಿವ ಸ್ಥಾನ ಹೋಗುತ್ತದೆ, ಇದು ಸಹಜ. ವೈಯಕ್ತಿಕ ಘನತೆ-ಗೌರವಕ್ಕಿಂತ ಅಧಿಕಾರ ಮುಖ್ಯವಲ್ಲ ಎಂದರು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಮಾತನಾಡಿ, ವೈಯುಕ್ತಿಕ ನೆಲೆಗಟ್ಟು ಹಾಗೂ ಸ್ವಾಭಿಮಾನ ಹಿನ್ನೆಲೆಯಲ್ಲಿ ಶಿವಾನಂದ ಪಾಟೀಲ್‌ ರಾಜೀನಾಮೆ ಸಲ್ಲಿಸಿದ್ದಾರೆ. ಶಾಸಕರು ಮತ್ತು ಸಚಿವರು ತಮ್ಮತಮ್ಮ ಗೌರವದ ವಿಷಯದ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದರು.

ಶಿವಾನಂದ ಪಾಟೀಲ್‌ ಅವರು ರಾಜೀನಾಮೆ ಕೊಟ್ಟಿದ್ದಾರೆ. ನಾನು ಅದನ್ನು ಪಡೆದುಕೊಂಡಿದ್ದೇನೆ. ಕಾನೂನಾತ್ಮಕವಾಗಿ ಹೇಗೆ ಇದನ್ನು ನೋಡಬೇಕು ಅನ್ನೋದನ್ನು ಪರಿಶೀಲಿಸುತ್ತೇನೆ ಎಂದರು.

Leave a Reply