ಮಾವು ಬೆಳೆಗಾರರು ಕೈಗೊಳ್ಳಬೇಕಾಗಿರುವ ಸಸ್ಯ ಸಂರಕ್ಷಣಾ ಮತ್ತು ಪೂರಕ ಕ್ರಮಗಳು

4 months ago

ಧಾರವಾಡ: ಮಾವಿನಲ್ಲಿ ಹೂ ಬಿಡುವ ಪ್ರಕ್ರಿಯೆ ಡಿಸೆಂಬರ್ ತಿಂಗಳಿಂದ ಪ್ರಾರಂಭವಾಗಿ ಫೆಬ್ರವರಿ ಅಂತ್ಯದವರೆಗೂ ಸಹ ವಿವಿಧ ಪ್ರದೇಶಗಳಲ್ಲಿ ಕಾಣಬರುತ್ತದೆ. ಕೆಲವು ಬಾರಿ ನವೆಂಬರ್ ಮಧ್ಯಭಾಗದಿಂದಲೂ ಸಹ ಹೂ ಬಿಡುತ್ತದೆ. ಹೂ ಬಿಟ್ಟ ನಂತರ ಉಪದ್ರವಿ ಕೀಟಗಳಾದ ಜಿಗಿಹುಳು, ಹೂತೆನೆ, ಕುಡಿ ಕೊರಕ, ಥ್ರಿಪ್ಸ್, ನುಸಿ, ಹಿಟ್ಟು ತಿಗಣೆ, ಒಟೆ ಕೊರಕ ಹಾಗೂ ರೋಗಗಳಾದ ಹೂತೆನೆ ಕಪ್ಪಾಗುವ ರೋಗ, ಬೂರಿ ರೋಗ, ಕಾಡಿಗೆ ರೋಗ, ಎಲೆಚಿಬ್ಬು ರೋಗಗಳು ಹೆಚ್ಚಿನ ಹಾನಿ ಉಂಟು ಮಾಡುತ್ತದೆ.

ಅಗತ್ಯ ಪೂರಕ ಕ್ರಮಗಳು: ಸಿಂಪರಣಾ ದ್ರಾವಣಗಳನ್ನು ಮಾವಿನ ಮರದ ಕಾಂಡ ಮತ್ತು ಎಲ್ಲಾ ರೆಂಬೆ ಕೊಂಬೆಗಳಿಗೆ ತಲುಪುವಂತೆ ಪ್ರಕಾಶಮಾನವಾದ ಬೆಳಕಿನಲ್ಲಿ ಸಿಂಪಡಿಸುವುದು. ಹೂ ಬಿಟ್ಟಾಗ ಮತ್ತು ಪರಾಗ ಸ್ಪರ್ಶ ಆಗುತ್ತಿರುವ ಸಮಯದಲ್ಲಿ ಗಂಧಕವನ್ನು ಸಿಂಪಡಿಸಬಾರದು. ಏಕೆಂದರೆ, ಗಂಧಕವು ಪರಾಗ ಸ್ಪರ್ಶ ಕ್ರಿಯೆಗೆ ಸಹಕರಿಸುವ ಕೀಟಗಳಿಗೆ, ಅರಳಿದ ಹೂಗಳು ಮತ್ತು ಎಳೆಯ ಕಚ್ಚಿದ ಕಾಯಿಗಳಿಗೆ ಹಾನಿಯುಂಟು ಮಾಡುತ್ತದೆ.

ಪರಾಗ ಸ್ಪರ್ಶ ಆಗುತ್ತಿರುವ  ಸಮಯದಲ್ಲಿ ಯಾವುದೇ ಕಾರಣಕ್ಕೂ ಗಿಡಿಗಳಿಗೆ ನೀರುಣಿಸಬಾರದು. ಪರಾಗ ಸ್ಪರ್ಶ ಪೂರ್ಣಗೊಂಡ ನಂತರ ಕಾಯಿಯು ಬಟಾಣಿಯಿಂದ ಗೋಲಿ ಗಾತ್ರದ ಹಂತದಲ್ಲಿ ನೀರು ಕೊಡಲು ಪ್ರಾರಂಭಿಸಬಹುದು. ಎರಡು ಮತ್ತು ಮೂರು ರಕ್ಷಣಾತ್ಮಕ/ಪೂರಕ ನೀರಾವರಿ ಕೈಗೊಳ್ಳಬಹುದು. ಚಿಕ್ಕ ಕಾಯಿಗಳು ಉದುರದಂತೆ ನೋಡಿಕೊಳ್ಳಲು ಅವುಗಳಿಗೆ ಸಸ್ಯ ಬೆಳವಣಿಗೆ ಜೋಧಕ ಸಿಂಪಡಿಸಬೇಕು.

ಚಿಕ್ಕ ಕಾಯಿಗಳು ಬೆಳೆಯುತ್ತಿರುವ ಹಂತದಲ್ಲಿ ಅವುಗಳಿಗೆ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹೊರತಂದಿರುವ ಮ್ಯಾಂಗೋ ಸ್ಪೇಷಲ್ ಅನ್ನು ಪ್ರತಿ 10 ಲೀಟರ್ ನೀರಿನಲ್ಲಿ 50 ಗ್ರಾಂ ಪ್ರಮಾಣದಲ್ಲಿ ಕರಗಿಸಿ ಸಿಂಪಡಿಸುವುದು. ಈ ಸಿಂಪರಣಾ ದ್ರಾವಣಕ್ಕೆ ಸೋಪು ದ್ರಾವಣವನ್ನು (0.5 ಮೀ.ಲೀ.ಲೀ.) ಮತ್ತು ಅರ್ಧ ಹೋಳು ನಿಂಬೆರಸ ಬೆರಸಿ ಸಿಂಪಡಿಸಿದರೆ, ಅದು ಪರಿಣಾಮಕಾರಿಯಾಗಿ ಕಾಯಿಗಳಿಗೆ ಅಂಟಿಕೊಳ್ಳುವುದು. ಕೈಗೆಟುವ ಹಂತದ ಸಣ್ಣ ಕಾಯಿಗಳಿಗೆ ಪೇಪರ್ ಕವರ್ ಹೊದಿಕೆ ಅಳವಡಿಸಿದಲ್ಲಿ ಊಜಿ ಬಾದೆ ನಿಯಂತ್ರಣವಾಗುವುದರ ಜೊತೆಗೆ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಪಡೆಯಬಹುದಾಗಿದೆ.

ಕೀಟ ಮತ್ತು ರೋಗಗಳು ಬಂದಲ್ಲಿ ಸಸ್ಯ ಸಂರಕ್ಷಣೆಯ ಕ್ರಮಕೈಗೊಂಡು ನಿಯಂತ್ರಿಸುವುದು  ಹೂ ತೆನೆ ಹೊರಹೊಮ್ಮುವ ಹಂತದಲ್ಲಿ  ಜಿಗಿಹುಳು, ಥ್ರಿಪ್ಸ್, ಬೂದಿ ರೋಗ, ಹೂತೆನೆ ಒಣಗುವ ರೋಗ ಬಂದಲ್ಲಿ ಸಸ್ಯ ಸಂರಕ್ಷಣಾ ಔಷಧಿಗಳನ್ನು ಸಿಂಪಡಿಸುವುದು.

ಸಿಂಪರಣಾ ಔಷಧಿ: ಡೆಲ್ಟಾಮೆಥ್ರಿನ್  2.8 ಮಿಲಿ: 1.0 ಮಿ.ಲಿ./ಲೀ., ಹೆಕ್ಸಕೊನಜೋಲ್ 5% ಮಿಲಿ : 1.0 ಮಿ.ಲಿ./ಲೀ. ಅಥವಾ ಡಯಾಫಂತಿಯುರಾನ್  75 WP : 1.0 ಗ್ರಾಂ/ಲೀ. ಡೈಫೆಂಕೊನಜಾಲ್ ಮಿಲಿ : 0.5 ಮಿ.ಲಿ./ಲೀ.

ಹೂ ಸಂಪೂರ್ಣ ಅರಳಿದ ಮತ್ತು ಪರಾಗ ಸ್ಪರ್ಶ ಹಂತ, ಕಾಯಿ ಕಚ್ಚುವ ಹಂತದಲ್ಲಿ ಕೆಳಗಿನ ರೋಗಗಳು ಹೂ ಗೂಡುಕಟ್ಟುವ ಹುಳು, ಜಿಗಿಹುಳು, ಹೂ ಒಣಗುವ ರೋಗ, ಚಿಬ್ಬು ರೋಗ, ಬೂದಿ ರೋಗ, ಕಾಡಿಗೆ ರೋಗ ಬಂದಲ್ಲಿ  ಈ ಕೆಳಗೆ ನಮೂದಿಸಿದ ಸಸ್ಯ ಸಂರಕ್ಷಣಾ ಔಷಧಿಗಳನ್ನು ಸಿಂಪಡಿಸುವುದು.

ಇಂಡಾಕ್ಸಕಾರ್ಬ  14.8 ಮಿಲಿ: 1.0 ಮಿ.ಲಿ./ಲೀ., ಡೈಥೆನ್ ಎಂ 45:2.5 ಗ್ರಾಂ/ಲೀ. ಅಥವಾ ಡೆಲ್ಟಾಮೆಥ್ರಿನ್  2.8 ಮಿಲಿ: 1.0 ಮಿ.ಲಿ/ಲೀ. (ಟೆಬೂಕೋನಜಾಲ್ 50% + ಟ್ರೈಫ್ಲಾಕ್ಸಿಸ್ಟ್ರೋಬಿನ್ 25%) : 0.5 ಮಿ.ಲಿ/ಲೀ. ಸಿಂಪಡಿಸಬೇಕೆಂದು ತೋಟಗಾರಿಕೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply